ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಕಾಕ್ ಕೋತಿ

ವಿಕಿಸೋರ್ಸ್ದಿಂದ

ಮಕಾಕ್ ಕೋತಿ - ಸ್ತನಿ ವರ್ಗದ ಪ್ರೈಮೇಟ್ ಗಣದ ಸರ್ಕೋಪಿತಿಸಿಡೀ ಕುಟುಂಬಕ್ಕೆ ಸೇರಿದ ಮಕಾಕ ಜಾತಿಯ ಕೋತಿ. ಇದರಲ್ಲಿ ಸುಮಾರು 12 ಪ್ರಭೇದಗಳುಂಟು. ದÀಕ್ಷಿಣ ಏಷ್ಯದಿಂದ ತೊಡಗಿ ಇಂಡೊನೇಷ್ಯ, ಫಿಲಿಪೀನ್ಸ್, ಹೈನಾನ್, ಫಾರ್ಮೋಸ, ಜಪಾನ್ ವರೆಗಿನ ವಿವಿಧ ದೇಶಗಳಲ್ಲಿ ಸುಮಾರು 11 ಪ್ರಭೇದಗಳೂ ಆಫ್ರಿಕದ ಆಲ್ಜೀರಿಯಾ, ಮೊರಾಕೊಗಳಲ್ಲಿ ಹಾಗೂ ಜಿಬ್ರಾಲ್ಟರಿನಲ್ಲಿ ತಲಾ ಒಂದು ಪ್ರಭೇದವೂ ಕಾಣದೊರೆಯುವುವು. ಇವುಗಳ ಪೈಕಿ ಬಲು ಪ್ರಸಿದ್ಧವಾದುವು ಇಂತಿವೆ : ಭಾರತದಲ್ಲಿ ಸಿಕ್ಕುವ ಮಕಾಕ ರೇಡಿಯೇಟ (ಬಾನೆಟ್ ಕೋತಿ) ; ಮಕಾಕ ಮುಲೆಟ (ರೀಸಸ್ ಕೋತಿ) ; ಮಕಾಕ ಸೈಲಿನಸ್ (ಲಯನ್ ಟೇಲ್ಡ್ ಮಕಾಕ್-ಸಿಂಗಳೀಕ) ; ಜಪಾನಿನಲ್ಲಿ ವಾಸಿಸುವ ಮಕಾಕ ಫಸ್ಕೇಟ ; ಫಿಲಿಪೀನ್ಸ್ ವಾಸಿಯಾದ ಮಕಾಕ ಐರಸ್ (ಏಡಿಭಕ್ಷಕ ಮಕಾಕ್) ; ಆಲ್ಜೀರಿಯ, ಮೊರಾಕೊಗಳಲ್ಲಿ ಕಾಣಸಿಕ್ಕುವ ಮಕಾಕ ಸಿಲ್ವೇನಸ್ (ಬಾರ್ಬರಿ ಕೋತಿ).

ಮಕಾಕ್ ಕೋತಿಗಳೆಲ್ಲವೂ ಮಧ್ಯಮಗಾತ್ರದವು ; ದೇಹದಉದ್ದ 35-75 ಸೆಂಮೀ. ತೂಕ 5-15 ಕೆಜಿ. ಗಂಡು ಹೆಣ್ಣಿಗಿಂತ ದೊಡ್ಡದು. ಬಾರ್ಬರಿ ಕೋತಿಯನ್ನುಳಿದು ಎಲ್ಲವುಗಳಿಗೂ ಬಾಲವುಂಟು. ಬಾಲದ ಉದ್ದ ಕೆಲವು ಸೆಂಟಿಮೀಟರುಗಳಿಂದ ಹಿಡಿದು ಸುಮಾರು 60 ಸೆಂಮೀ ವರೆಗೆ ಇರುವುದುಂಟು. ಮುಖವನ್ನು ಬಿಟ್ಟು ಇಡೀ ದೇಹ ರೋಮಾವೃತವಾಗಿದೆ. ಕೆಲವು ಪ್ರಭೇದಗಳಲ್ಲಿ ತಲೆಯ ಮೇಲೆ ಉದ್ದ ಕೂದಲುಗಳು `ಟೋಪಿಯುಂಟು. ಸಿಂಗಳೀಕದ ಮುಖದ ಸುತ್ತ ಜೂಲು ಇದೆ. ಜಪಾನಿನ ಮಕಾಕ್ ಕೋತಿಗೆ ಉದ್ದಮೀಸೆ, ಗಡ್ಡಗಳಿವೆ. ಎಲ್ಲ ಕೋತಿಗಳ ಮೈಬಣ್ಣ ಕಂದು ಇಲ್ಲವೇ ಹಸುರುಮಿಶ್ರಿತ ಕಪ್ಪು. ಮೂತಿ ಸ್ವಲ್ಪ ಮುಂಚಾಚಿದೆ. ಮೂಗಿನ ಹೊಳ್ಳೆಗಳು ಮೂತಿಯ ತುದಿಯಲ್ಲಿರದೆ ಕೋಚ ಮೇಲ್ಭಾಗದಲ್ಲಿ ಸ್ಥಿತವಾಗಿವೆ. ಮಕಾಕ್ ಕೋತಿಗಳು ಭಾರಿಗಾತ್ರದವಲ್ಲವಾದರೂ ಸದೃಢ ಮೈಕಟ್ಟು, ಪುಷ್ಪವಾದ ಕೈಕಾಲುಗಳನ್ನು ಪಡೆದಿರುವ ಬಲಶಾಲಿ ಕೋತಿಗಳೆನಿಸಿವೆ. ಧೈರ್ಯಶಾಲಿಗಳೂ ಹೌದು.

ಸಾಮಾನ್ಯವಾಗಿ ವಿವಿಧ ವಯಸ್ಸಿನ ಎರಡೂ ಲಿಂಗಗಳ ಸದಸ್ಯಗಳುಳ್ಳ ಸಣ್ಣ ಹಿಂಡುಗಳಲ್ಲಿ ಇವು ವಾಸಿಸುವವು. ಒಂದೊಂದು ಹಿಂಡಿನಲ್ಲಿ ಸುಮಾರು 24 ಸದಸ್ಯಗಳಿರುವುದುಂಟು. ಗುಂಪಿಗೆ ಬಲಯುತ ಗಂಡುಕೋತಿ ನಾಯಕ. ಇವು ನೆಲದ ಮೇಲೆ ಹೇಗೋಹಾಗೆ ಮರದ ಮೇಲೂ ಚುರುಕಾಗಿ ಸಾಗುವುವು. ಚೆನ್ನಾಗಿ ಈಜಲೂ ಬಲ್ಲವು. ಇವುಗಳ ಚಟುವಟಿಕೆಗಳೆಲ್ಲ ಹಗಲಿನಲ್ಲಿ. ವಿವಿಧ ಬಗೆಯ ಸಸ್ಯ ಸಾಮಾಗ್ರಿಗಳೂ ಕೀಟ, ಮೊಟ್ಟೆ ಮುಂತಾದ ಪ್ರಾಣಿವಸ್ತುಗಳೂ ಇವುಗಳÀ ಆಹಾರ. ಮಕಾಕ್ ಕೋತಿಗಳಲ್ಲಿ ಸಂತಾನವೃದ್ಧಿಯ ನಿರ್ದಿಷ್ಟ ಶ್ರಾಯವಿಲ್ಲ. ಗರ್ಭಾವಧಿಯ ಕಾಲ 5-7 ತಿಂಗಳುಗಳು. ಸಾಮಾನ್ಯವಾಗಿ ಒಂದು ಸಲಕ್ಕೆ ಒಂದೇಒಂದು ಮರಿ, ಅಪೂರ್ವವಾಗಿ ಅವಳಿ ಮರಿಗಳು ಹುಟ್ಟುವವು. ಮರಿಗಳು ಸುಮಾರು ಒಂದು ವರ್ಷ ಕಾಲ ತಾಯಿಯೊಂದಿಗೆ ಇದ್ದು ನಾಲ್ಕು ವರ್ಷ ವಯಸ್ಸಾಗುವ ವೇಳೆಗೆ ಬೇರೆಯಾಗುವುವು. ಇವುಗಳ ಸರಾಸರಿ ಜೀವಿತಕಾಲ 30 ವರ್ಷಗಳು.

ರೀಸಸ್ ಹಾಗೂ ಬಾನೆಟ್ ಕೋತಿಗಳನ್ನು ಭಾರತದ ಪೂಜ್ಯಭಾವನೆಯಿಂದ ಕಾಣಲಾಗುತ್ತದೆ. ಇವನ್ನು ಸಾಕುವುದೂ ಉಂಟು. ಪಳಗಿಸಿ ಹಲವಾರು ಆಟಗಳನ್ನು ಕಲಿಸಿ ಸರ್ಕಸ್ ಮುಂತಾಗಿ ಮನರಂಜನೆಗೆ ಬಳಸಲಾಗುತ್ತದೆ. ಹಲವಾರು ರೀತಿಯ ವೈದ್ಯಕೀಯ, ಬಾಹ್ಯಾಕಾಶ ಪ್ರಯೋಗಗಳಲ್ಲೂ ಇವನ್ನು ಉಪಯೋಗಿಸಿದೆ. ರಕ್ತದ ರೀಸಸ್ ಗಟಕ ಮೊತ್ತ ಮೊದಲು ಪತ್ತೆಯಾದದ್ದು ರೀಸಸ್ ಕೋತಿಗಳಲ್ಲಿ. ಅಂತೆಯೇ ಫಿಲಿಫೀನ್ಸ್ ದ್ವೀಪಗಳ ಏಡಿಭಕ್ಷಕ ಕೋತಿಯನ್ನು ಪೋಲಿಯೋ ಲಸಿಕೆ ಸಿದ್ಧಪಡಿಸುವ ಪ್ರಯೋಗಗಳಲ್ಲಿ ಬಳಸಲಾಯಿತು. (ಎಸ್.ಎನ್.ಎಚ್.)