ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಡಿವಾಳ ಹಕ್ಕಿ

ವಿಕಿಸೋರ್ಸ್ದಿಂದ

ಮಡಿವಾಳ ಹಕ್ಕಿ ಪ್ಯಾಸರಿಫಾರ್ಮೀಸ್ ಗಣ. ಕ್ಯಾಂಪಿಫ್ಯಾಜಿಡೀ ಕುಟುಂಬ, ಟರ್ಡಿನೀ ಉಪಕುಟುಂಬಕ್ಕೆ ಸೇರಿದ ಹಕ್ಕಿ (ಮ್ಯಾಗ್‍ಪೈ ರಾಬಿನ್). ಕಾಪ್ಸಿಕಸ್ ಸೌಲಾರಿಸ್ ಇದರ ಶಾಸ್ತ್ರೀಯ ನಾಮ. ಹಳ್ಳಿ, ಊರುಗಳ ಸುತ್ತಮುತ್ತಲಿನ ಪೊದೆ ಕಾಡುಗಳಲ್ಲಿ ವಾಸಿಸುತ್ತದೆ. ನಗರಗಳ ಉದ್ಯಾನವನಗಳಲ್ಲೂ ಇದನ್ನು ನೋಡಬಹುದು. ಭಾರತಾದ್ಯಂತ ಇದರ ವ್ಯಾಪ್ತಿಯುಂಟು. ಸುಮಾರು 20 ಸೆಂಮೀ ಉದ್ದದ ಹಕ್ಕಿಯಿದು. ಗಂಡಿಗೂ ಹೆಣ್ಣಿಗೂ ಬಣ್ಣದಲ್ಲಿ ವ್ಯತ್ಯಾಸವಿದೆ. ಗಂಡಿನ ತಲೆ, ಬೆನ್ನು, ರೆಕ್ಕೆ, ಬಾಲದ ಮೇಲ್ಭಾಗ ಹಾಗೂ ಎದೆ ಮಿರುಗುವ ಕಪ್ಪು ಬಣ್ಣದವಾದರೆ ಹೆಣ್ಣಿನವು ಕಂದು ಇಲ್ಲವೆ ಬೂದಿ. ಎರಡರ ಉದರ ಭಾಗ ಮಾತ್ರ ಬಿಳಿ. ರೆಕ್ಕೆಗಳ ಮೇಲೆ ಬಿಳಿಬಣ್ಣದ ಗುರುತುಂಟು. ಬಾಲವನ್ನು ಮೇಲಕ್ಕೆತ್ತಿಕೊಂಡಿರುವುದು ಇದರ ಸ್ವಭಾವ. ಒಂಟೊಂಟಿಯಾಗಿ ಇಲ್ಲವೆ ಗಂಡು ಹೆಣ್ಣು ಜೋಡಿಗಳಲ್ಲಿ ಓಡಾಡಿಕೊಂಡಿರುತ್ತವೆ. ಮಣ್ಣಿನಲ್ಲಿ ಸಿಕ್ಕುವ ಕೀಟಗಳೇ ಇದರ ಪ್ರಧಾನ ಆಹಾರ. ಬೂರುಗ, ಹಾಲುವಾಣ ಮುಂತಾದ ವೃಕ್ಷಗಳ ಮಕರಂದವನ್ನೂ ತಿನ್ನುತ್ತದೆ. ಇದರ ಸಂತಾನವೃದ್ಧಿಯ ಹಂಗಾಮು ಏಪ್ರಿಲಿನಿಂದ ಜುಲೈ. ಆ ಕಾಲದಲ್ಲಿ ಗಂಡು ಹಕ್ಕಿ ಮರಗಳ ಇಲ್ಲವೆ ಕಂಬಗಳ ತುದಿ ಕುಳಿತು ಬಾಲವನ್ನು ಆಗಾಗ್ಗೆ ಮೇಲಕ್ಕೆ ಹಾರಿಸುತ್ತ ಇಂಪಾಗಿ ಗಟ್ಟಿಯಾಗಿ ಹಾಡುತ್ತದೆ. ಕೆಲವು ಸಲ ಬೇರೆ ಹಕ್ಕಿಗಳ ಕೂಗನ್ನು ಅನುಕರಿಸುವುದುಂಟು. ತನ್ನ ಕ್ಷೇತ್ರದೊಳಗೆ ಬೇರೆ ಗಂಡುಗಳಾವುವನ್ನೂ ಬಿಡದೆ ಕಾಯ್ದುಕೊಳ್ಳುತ್ತದೆ.

ರೆಂಬೆಕವಲು, ಪೊಟರೆ ಅಥವಾ ಗೋಡೆಗಳ ಬಿರುಕುಗಳಲ್ಲಿ ಹುಲ್ಲು ಬೇರುನಾರುಗಳನ್ನು ಬಳಸಿ ಗೂಡು ರಚಿಸಿ ಮೂರು ನಾಲ್ಕು ಹಸುರು ಬಣ್ಣದ ಮೊಟ್ಟೆಗಳನ್ನಿಡುವುದು. ಕಾವುಕೊಡುವ ಕಾರ್ಯ ಹೆಣ್ಣಿನದು. ಗಂಡು ಕೂಡ ಅಲ್ಲೇ ಇದ್ದು ಗೃಹಪಾಲನೆಯ ಇನ್ನಿತರ ಕಾರ್ಯಗಳನ್ನು ನಿರ್ವಹಿಸುತ್ತದೆ. (ಎಂ.ಎಸ್.ಎಲ್.)