ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮರಕುಟಿಗ

ವಿಕಿಸೋರ್ಸ್ದಿಂದ

ಮರಕುಟಿಗ ಪೈಸಿಫಾರ್ಮೀಸ್ ಗಣ ಪೈಸಿಡೀ ಭಾರತದಲ್ಲಿ 32 ಪ್ರಭೇದದ ಮರಕುಟಿಗಗಳು ಕಂಡುಬರುತ್ತದೆ. ಕುಟುಂಬ ಪೈಸಿನೀ ಉಪಕುಟುಂಬಕ್ಕೆ ಸೇರಿದ ವೃಕ್ಷವಾಸಿ ಹಕ್ಕಿ (ವುಡ್ ಪೆಕರ್). ಇದರಲ್ಲಿ ಸುಮಾರು 180 ವಿವಿಧ ಪ್ರಭೇದಗಳುಂಟು. ಇವುಗಳ ಹೆಸರೇ ಹೇಳುವಂತೆ ಮರುಕುಟಿಗಗಳು ಮರಗಳ ಕಾಂಡ, ರಂಬೆಗಳನ್ನು ಕುಟ್ಟಿ ತೊಗಟೆಯಡಿ ಅವಿತಿರಬಹುದುದಾದ ಕೀಟಗಳನ್ನೂ ಕ್ರಿಮಿಗಳನ್ನೂ ಪತ್ತೆ ಹಚ್ಚಿ ಹೆಕ್ಕಿ ತೆಗೆದು ಕಬಳಿಸುತ್ತವೆ; ಬೇರಾವ ಹಕ್ಕಿಗಳಿಗೂ ಪ್ರವೇಶವಿರದಂಥ ವೃಕ್ಷಕಾಂಡಗಳ ಕ್ಷೇತ್ರ ಇವುಗಳ ಆಡುಂಬೊಲವಾಗಿವೆ. ಅಂತೆಯೇ ಇಂಥ ಸನ್ನಿವೇಶಕ್ಕೆ ತಕ್ಕುದಾಗಿ ಬಾಳಲು ಇವುಗಳ ಅಂಗಚರನೆಯಲ್ಲಿ ಕೆಲವೊಂದು ಯುಕ್ತ ಮಾರ್ಪಾಡುಗಳನ್ನೂ ಕಾಣಬಹುದು. ಮರಗಳ ಕಾಂಡಗಳಿಗೆ ಆತುಕೊಂಡು ಕೀಟಗಳನ್ನು ಹುಡುಕಬೇಕಾಗುವುದರಿಂದ ಅದಕ್ಕೆ ತಕ್ಕಂತೆ ಕಾಲುಗಳು ಮೋಟಾಗಿವೆ, ಬೆರಳುಗಳು ಉದ್ದವಾಗಿವೆ. ಇರುವ ನಾಲ್ಕು ಬೆರಳುಗಳ ಪೈಕಿ ಎರಡು ಮುಂದಕ್ಕೆ ಚಾಚಿಕೊಂಡಿದ್ದರೆ ಇನ್ನೆರಡು ಹಿಂದಕ್ಕೆ ಚಾಚಿವೆ. ಉಗುರುಗಳು ಮೊನಚಾಗಿರುವುವಲ್ಲದೆ ಬಾಗಿಕೊಂಡಿವೆ ಕೂಡ. ಇದರಿಂದ ತೊಗಟೆಗೆ ಅಂಟಿಕೊಳ್ಳಲು ಅನುಕೂಲ. ಕಾಂಡಗಳ ಮೇಲೆ ಊರಿಕೊಂಡು ಲಂಬವಾಗಿ ನಿಲ್ಲಲು ಬೇಕಾಗುವ ಆಸರೆಯನ್ನು ದೃಢವಾದ ಗರಿಗಳಿಂದ ರಚಿತವಾದ ಇವುಗಳ ತೋಕೆ ಒದಗಿಸುತ್ತದೆ. ಇವುಗಳ ಕೊಕ್ಕು ಕೂಡ ನೀಳ, ಗಡಸು ಹಾಗೂ ಚೂಪಾಗಿದ್ದು ತೊಗಟೆಯನ್ನು ಕುಟ್ಟಲು ಯುಕ್ತವಾದ ಉಳಿಯಂತಿದೆ. ಮರಕುಟಿಗ ತನ್ನ ಕುತ್ತಿಗೆಯಲ್ಲಿರುವ ಬಲಯುತ ಸ್ನಾಯುಗಳ ಸಹಾಯದಿಂದ ಅತ್ಯಂತ ಚಟುಲಗತಿಯಲ್ಲಿ ಕೊಕ್ಕನ್ನು ಕಾಂಡಕ್ಕೆ ಘಟ್ಟಿಸಬಲ್ಲುದೆನ್ನಲಾಗಿದೆ (ಮಿನಿಟಿಗೆ 120 ಬಾರಿ). ಇಷ್ಟು ವೇಗದ ಘಟ್ಟಣೆಯ ಧಕ್ಕೆಯನ್ನು ತಡೆದುಕೊಳ್ಳಲು ಗಟ್ಟಿಯಾದ ತಲೆಬುರುಡೆ ಹಾಗೂ ಧಕ್ಕೆಯನ್ನು ಕಡಿಮೆ ಮಾಡುವ ಮಾಂಸಖಂಡಗಳಿವೆ. ಈ ಹಕ್ಕಿಯ ನಾಲಗೆ ಬಲು ಉದ್ದವಾಗಿದ್ದು ಸಾಮಾನ್ಯವಾಗಿ ತಲೆಬುರುಡೆಯ ವಿಶೇಷ ಕುಳಿಯಲ್ಲಿ ಸುರುಳಿ ಸುತ್ತಿರಿತ್ತದೆ; ಅಗತ್ಯ ಬಿದ್ದಾಗ ಕೊಕ್ಕಿನಿಂದ ಸುಮಾರು ದೂರಕ್ಕೆ ಹೊರಚಾಚಬಲ್ಲದು. ನಾಲಗೆಯ ತುದಿಯಲ್ಲಿ ಹಿಮ್ಮುಖವಾಗಿ ಬಾಗಿರುವ ಕೊಕ್ಕೆಗಳುಂಟು; ಅಲ್ಲದೆ ಲಾಲಾಗ್ರಂಥಿಗಳಿಂದ ಉತ್ಪತ್ತಿಯಾಗುವ ಒಂದು ವಿಧದ ಅಂಟುದ್ರವ ಇದರ ಮೇಲೆ ಲೇಪನಗೊಂಡಿರುತ್ತದೆ. ಮರಕುಟಿಗ ಕೀಟಡಿಂಬಗಳಿರುವ ತಾಣಗಳನ್ನು ಕೊಕ್ಕಿನಿಂದ ತೆರೆದಾಗ ನಾಲಿಗೆಯನ್ನು ಹಾವಿನಂತೆ ಒಳಗೆ ಚಾಚಿ ಎರೆಗಳನ್ನು ಹಿಡಿಯಬಲ್ಲದು. ಮರಗಳ ಬುಡದಿಂದ ತೊಡಗಿ ವಂಕಿವಂಕಿಯಾಗಿ ಮೇಲಿನ ರೆಂಬೆಗಳಿಗೆ ಏರುವುದೂ ಮಧ್ಯೆ ಮಧ್ಯೆ ಕೀಟಗಳಿರಬಹುದಾದ ಡೊಗರುಗಳಿಗಾಗಿ ತಡಕುವುದೂ ಒಂದು ಮರದ ತುದಿಯನ್ನು ತಲಪಿದಮೇಲೆ ಸರ್ರನೆ ಬಿಟ್ಟು ಬಿಟ್ಟು ರೆಕ್ಕೆ ಬಡಿಯುತ್ತ ತರಂಗಗತಿಯಲ್ಲಿ ಮತ್ತೊಂದು ಮರದ ಬುಡಕ್ಕೆ ಹಾರುವುದೂ ಇದರ ಸ್ವಭಾವ.

ಮರಕುಟಿಗದ ಕೂಗು ಕರ್ಕಶ. ಬೇಟೆಯ ಕಾಲದಲ್ಲಿ ಇದೇ ಕೂಗನ್ನು ಪದೇ ಪದೇ ಮಾಡುತ್ತದೆಯೇ ವಿನಾ ಬೇರಾವ ವಿಶೇಷರೀತಿಯ ಕೂಗನ್ನು ಇದರಲ್ಲಿ ಕೇಳಲಾಗದು. ಆದರೆ ಸತ್ತು ಒಣಗಿಹೋದ ರೆಂಬೆಯ ಮೇಲೊ ತಗಡಿನ ಚಾವಣಿಯ ಮೇಲೊ ಕೊಕ್ಕನ್ನು ಗಟ್ಟಿಯಾಗಿ ಬಡಿದು ತನ್ನ ಇರವನ್ನು, ಕಾಮನೆಯನ್ನು, ಉದ್ದೇಶವನ್ನು ಜಾಹೀರುಪಡಿಸುತ್ತದೆ.

ಎಲ್ಲ ಮರಕುಟಿಗಗಳೂ ಮರಗಳ ಕಾಂಡವನ್ನು ಕೊರೆದು ಒರಟುಗೂಡು ರಚಿಸುವುವು. ಮೆತ್ತೆಗಳನ್ನು ರೂಪಿಸುವ ಪರಿಪಾಟಿ ಇಲ್ಲ. ಸಾಮಾನ್ಯವಾಗಿ ಒಂದು ಸಲಕ್ಕೆ ಮೂರು ಅಚ್ಚ ಬಿಳಿಬಣ್ಣದ ಮೊಟ್ಟೆಗಳನ್ನಿಡುವುದು. ಗಂಡು ಹೆಣ್ಣುಗಳೆರಡೂ ಕಾವುಕೊಟ್ಟು ಮರಿಮಾಡಿ ಮರಿಗಳನ್ನು ಪೋಷಿಸುತ್ತವೆ.

ಪಶ್ಚಿಮ ಘಟ್ಟಗಳಲ್ಲಿ ಡೆಂಡ್ರೂಕೋಪಸ್ ಮರಾಟೆನ್ಸಿಸ್ (ಹಳದಿಹಣೆ ಮರಕುಟಿಗ), ಡೈನೋಪಿಯಮ್ ಬೆಂಗಾಲೆನ್ಸ್ (ಚಿನ್ನದ ಬೆನ್ನಿನ ಮರಕುಟಿಗ) ಮತ್ತು ಸಿಲೆಯಸ್ ಬ್ರಾಕಿಯೂರಸ್ (ಕೆಂಗೆಂಡು ಮರಕುಟಿಗ), ಡೈನೊಪಿಯಮ್ ಜಾವನೀಸ್, ಡ್ರೈಕೋಪಸ್ ಜಾವೆನ್ಸಸ್ (ಹೆಮ್ಮರ ಕುಟುಕ), ಕ್ರೈಸೊಕೊಲಾಟ್ಟಿಸ್ ಲುಸಿಡಸ್, ಹೆಮಸಿರ್‍ಕಸ್ ಕ್ಯಾವಂಟೇ (ಹೃದಯಚುಕ್ಕಿ ಮರಕುಟಿಗ)ಗಳು ಪ್ರಧಾನವಾಗಿ ಕಂಡುಬರುತ್ತದೆ.

ಇವುಗಳಲ್ಲಿ ವಿಶೇಷ ಉಲ್ಲೇಖಕ್ಕೆ ಅರ್ಹವಾದದ್ದು ಕೆಂಗೆಂಡು ಮರಕುಟಿಗ(ಸಿಲೆಯಸ್ ಬ್ರಾಕಿಯೂರಸ್)ಪ್ರಭೇದ. ಇವು ಚೊಗಳಿ ಇರುವೆ (ಪಿರಮಿಡ್ ಇರುವೆ) ಗಳ ಗೂಡಿನಲ್ಲಿ ರಂಧ್ರ ಮಾಡಿ ಅಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಯಾವುದೇ ಕಾರಣದಿಂದ ಗೂಡು ಸ್ವಲ್ಪವೇ ಕದಲಿದರೂ ತಂಡೋಪ ತಂಡವಾಗಿ ಹೊರಬಂದು ಶತ್ರುಗಳ ಮೇಲೆ ದಾಳಿ ನಡೆಸುವ ಈ ಇರುವೆಗಳು ಈ ಮರಕುಟಿಗ ಹಾಗೂ ಅವುಗಳ ಮರಿಗಳನ್ನು ಏನೂ ಮಾಡದಿರುವುದು ಇಂದಗೂ ಬಿಡಿಸಲಾಗದಿರುವ ರಹಸ್ಯ. (ಎಂ.ಡಿ.ಪಿ.) (ಪರಿಷ್ಕರಣೆ : ಕೆ ಎಸ್ ನವೀನ್)