ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮರಬಾಳೆ

ವಿಕಿಸೋರ್ಸ್ದಿಂದ

ಮರಬಾಳೆ ಸೈಟಾಮಿನೇ ಗುಂಪಿನ ಮ್ಯೂಸೇಸೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಬಾಳೆ. ಬಾಳೆಯೂ ಇದೂ ಹತ್ತಿರ ಸಂಬಂಧಿಗಳು; ಮ್ಯೂಸಜಾತಿಯ ಎರಡು ಪ್ರಭೇಧಗಳಿವು ಆದರೆ ಬಾಳೆ ಫಲಸಸ್ಯವಾಗಿ ಪ್ರಸಿದ್ಧವಾಗಿದೆ, ಮರಬಾಳೆ ನಾರುಸಸ್ಯ (ಇದರ ಹಣ್ಣುಗಳು ಖಾದ್ಯ ಯೋಗ್ಯವಲ್ಲ). ವಾಣಿಜ್ಯ ಕ್ಷೇತ್ರದಲ್ಲಿ ಇದಕ್ಕೆ ಮನಿಲ ಸೆಣಬು (ಮನಿಲ ಹೆಂಪ್) ಮತ್ತು ಅಬಕಾ ಎಂಬ ಹೆಸರುಗಳುಂಟು. ಸಸ್ಯವೈಜ್ಞಾನಿಕವಾಗಿ ಮರಬಾಳೆ ಮ್ಯೂಸ ಜಾತಿಯ ಆಸ್ಟ್ರೇಲಿಮ್ಯೂಸ ಪಂಗಡಕ್ಕೆ ಸೇರಿದ್ದು ಇದನ್ನು ಮ್ಯೂಸ ಟೆಕ್ಸ್‍ಟೈಲಿಸ್ ಎಂದು ಕರೆಯಲಾಗುತ್ತದೆ.

ಫಿಲಿಪೀನ್ಸ್ ಇದರ ತವರು. ಭಾರತದ ಪಶ್ಚಿಮಬಂಗಾಳ, ತಮಿಳುನಾಡು ಹಾಗೂ ಅಂಡಮಾನ್‍ಗಳಲ್ಲಿ ಬೆಳೆಸುವ ಪ್ರಯತ್ನಗಳು ನಡೆದಿವೆ. ಅಂಡಮಾನ್ ದ್ವೀಪಗಳನ್ನು ಬಿಟ್ಟರೆ ಭಾರತದ ಉಳಿದೆಡೆಗಳಲ್ಲಿ ಇದರ ಕೃಷಿ ಲಾಭದಾಯಕವಾಗಿಲ್ಲ. ಇಳುವರಿಯ ಮೊತ್ತ ಮತ್ತು ನಾರಿನ ಗುಣಮಟ್ಟಗಳ ದೃಷ್ಟಿಯಿಂದ ಭಾರತದ ಮರಬಾಳೆ ಫಿಲಿಪೀನ್ಸಿನದಕ್ಕಿಂತ ಮತ್ತು ಭಾರತದಲ್ಲೇ ಬೆಳೆಯುವ ಇತರ ನಾರುಬೆಳೆಗಳಿಗಿಂತ ಕಡಿಮೆ ದರ್ಜೆಯದಾಗಿದೆ.

ಇದು 2.5-4 ಮೀ ಎತ್ತರಕ್ಕೆ ಬೆಳೆಯುವ ದೃಢಕಾಂಡದ ಸಸ್ಯ. ಎಲೆಗಳು ಬಾಳೆ ಎಲೆಗಳಂತೆಯೇ ಉದ್ದುದ್ದವೂ ಹಸುರುಬಣ್ಣದವೂ ಒರಟು ರಚನೆಯುಳ್ಳವೂ ಆಗಿವೆ. ಎಲೆಗಳ ಬುಡ ಕವಚರೂಪದಲ್ಲಿ ದಿಂಡನ್ನು ಸುತ್ತುವರಿದಿದೆ. ನಾರನ್ನು ಪಡೆಯುವುದು ಇವುಗಳಿಂದಲೇ. ಮರಬಾಳೆಯ ಹಣ್ಣು ನೋಡಲು ಬಾಳೆಹಣ್ಣಿನಂತೆಯೇ ಇದೆ. ಆದರೆ ಮೇಲೆ ಹೇಳಿದಂತೆ ತಿನ್ನಲು ಬಾರದು.

ಮರಬಾಳೆಯನ್ನು ಫಿಲಿಪೀನ್ಸಿನಲ್ಲಿ ಬೃಹತ್ಪ್ರಮಾಣದಲ್ಲಿ ಬೆಳೆಸಲಾಗುತ್ತದೆ. 60-150ಮೀ ಎತ್ತರದ ಮತ್ತು ಮಳೆಯ ವಾರ್ಷಿಕಮೊತ್ತ 250-275 ಸೆಂಮೀ ಇರುವಂಥ ಪ್ರದೇಶಗಳಲ್ಲಿ ಇದರ ಬೆಳವಣಿಗೆ ಹುಲುಸು. ಗೋಡುಮಣ್ಣಿನ ನೆಲ ಇದರ ಕೃಷಿಗೆ ಅತ್ಯುತ್ತಮ. ಇದನ್ನು ಬೀಜಗಳಿಂದ ವೃದ್ಧಿಸಬಹುದಾದರೂ ಬೀಜ ಮೊಳೆಯುವಿಕೆ ನಿಧಾನವಾದ್ದರಿಂದಲೂ ಇಳುವರಿ ಕಡಿಮೆಯಾಗುವುದರಿಂದಲೂ ಇದನ್ನು ಕಂದುಗಳಿಂದ ವೃದ್ಧಿಸುವುದೇ ರೂಢಿಯಲ್ಲಿರುವ ಕ್ರಮ.

ಮರಬಾಳೆಯಿಂದ ನಾರನ್ನು ತೆಗೆಯುವುದು ದಿಂಡಿನ ಸುತ್ತ ಇರುವ ಎಲೆಬುಡಗಳ ಕವಚಗಳಿಂದ ಪ್ರತಿಯೊಂದು ಕವಚವೂ ಮೂರು ಪದರಗಳಿಂದ ಕೂಡಿದೆ. ಇವುಗಳ ಪೈಕಿ ನಾರು ಲಭಿಸುವುದು ಹೊರ ಹಾಗೂ ನಡುಪದರಗಳಿಂದ. ದಿಂಡಿನ ಒಳಭಾಗದೆಡೆಗೆ ಇರುವ ಕವಚಗಳಲ್ಲಿ ಮೃದುವಾದ ಮತ್ತು ಬಿಳಿಬಣ್ಣದನಾರು ಎಳೆಗಳೂ ಹೊರಭಾಗದೆಡೆಗೆ ಇರುವವುಗಳಲ್ಲಿ ಗಟ್ಟಿಯಾದ ಮತ್ತು ಕಂದು ಬಣ್ಣದ ನಾರು ಎಳೆಗಳೂ ಇರುವುವು. ಎಲ್ಲಿಯದೇ ಆಗಲಿ ಒಂದೊಂದು ಎಳೆಯ ಉದ್ದ 0.9-2.7 ಮೀ ಉಂಟು. ಎಲೆಗಳು ಹೊಳಪಿನಿಂದ ಕೂಡಿದ್ದು ಗಾಂಜಾ (ಕ್ಯಾನಬಿಸ್ ಸೇಟಿವ-ಹೆಂಪ್) ಮತ್ತು ಅಪಸಣಬು (ಕ್ರೋಟಲೇರಿಯ ಜನ್ಸಿಯ-ಸನ್ ಹೆಂಪ್ ನಾರುಗಳಿಗಿಂತ ಗಟ್ಟಿಯಾಗಿವೆ. ಮರಬಾಳೆಯ ನಾರಿನಲ್ಲಿ ಶೇಕಡಾ 60-70 ಸೆಲ್ಯುಲೋಸ್ ಅಂಶ ಉಂಟು, ರಾಸಾಯನಿಕವಾಗಿ ಇದು ಸೆಣಬನ್ನು (ಕಾರ್ಕೋರಸ್ ಕ್ಯಾಪ್ಸು ಲ್ಯಾರಿಸ್-ಜೂಟ್) ಹೋಲುತ್ತದೆ. ಅಲ್ಲದೆ ಇದು ಕ್ರಿಮಿಗಳಿಗಾಗಲೀ ಸೂಕ್ಷ್ಮಜೀವಿಗಳಿಗಾಗಲೀ ಬಲಿಯಾಗದು. ಇದನ್ನು ಮುಖ್ಯವಾಗಿ ಹಲವು ತೆರನ ದಾರ, ಹಗ್ಗಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಮೃದು ಬಗೆಯ ನಾರಿನಿಂದ ತಯಾರಿಸಿದ ದಾರದಿಂದ ದಪ್ಪಬಟ್ಟೆಯನ್ನು ತಯಾರಿಸಿವುದೂ ಉಂಟು. ಜಪಾನಿನಲ್ಲಿ ಇದರಿಂದ ಕಾಗದ ತಯಾರಿಸುತ್ತಾರೆ.

ಭಾರತ ಫಿಲಿಪೀನ್ಸಿನಿಂದ ವರ್ಷಕ್ಕೆ ಸುಮಾರು 1500ಟನ್ ಮರಬಾಳೆನಾರನ್ನು ಆಮದು ಮಾಡಿಕೊಳ್ಳುತ್ತಿದೆ (1981) (ಡಿ.ಜಿ.ಎಸ್.)