ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮರುಗ

ವಿಕಿಸೋರ್ಸ್ದಿಂದ

ಮರುಗ ಲ್ಯಾಮಿಯೇಸೀ(ಲೇಬಿಯೇಟೀ) ಕುಟುಂಬಕ್ಕೆ ಸೇರಿದ ಸುವಾಸನಾ ಯುಕ್ತ ಸಸ್ಯ(ಮಾರ್ಜೊರಮ್). ಇದರ ವೈಜ್ಞಾನಿಕ ಹೆಸರು ಓರಿಗಾನಮ್ ವಲ್ಗೇರ್. ಪುದೀನ, ದವನಗಳ ಹತ್ತಿರ ಸಂಬಂಧಿ.

ಇದು ಹಿಮಾಲಯದ ಸಮಶೀತೋಷ್ಣ ಪ್ರದೇಶಗಳಲ್ಲಿ, ಕಾಶ್ಮೀರದಿಂದ ಸಿಕ್ಕಿಮ್‍ವರೆಗೆ 1.500-3.600 ಮೀ ಎತ್ತರದ ಪರ್ವತಗಳಲ್ಲಿ ಬೆಳೆಯುತ್ತದೆ. ಯೂರೋಪ್ ಉತ್ತರ ಆಫ್ರಿಕ, ಉತ್ತರ ಮತ್ತು ಪಶ್ಚಿಮ ಏಷ್ಯಗಳಲ್ಲೂ ಉಂಟು. ಭಾರತದಲ್ಲಿ ಇದನ್ನು ಹೂತೋಟಗಳಲ್ಲಿ ಬೆಳೆಸುವುದಿದೆ.

ಇದು ಬಹುವಾರ್ಷಿಕ ಮೂಲಿಕೆ ಸಸ್ಯ. ಇದರ ಸಾಮಾನ್ಯ ಎತ್ತರ 20-90 ಸೆಂಮೀ. ಎಲೆಗಳು ಸರಳ; 1.5 ಸೆಂಮೀ ಉದ್ದ, 0.6 ಸೆಂಮೀ ಅಗಲ ಇದ್ದು ಅಂಡಾಕಾರದವಾಗಿವೆ. ಎಲೆಯಲಗಿನ ಮೇಲೆಲ್ಲ ನವುರಾದ ರೋಮಗಳುಂಟು. ಇಡೀ ಗಿಡ, ಪ್ರಧಾನವಾಗಿ ಎಲೆಗಳು, ಸುವಾಸನಾಯುಕ್ತ. ಹೂಗಳು ಊದಾ ಇಲ್ಲವೆ ನಸುಗೆಂಪು ಬಣ್ಣದವು; ಸೀಮಾಕ್ಷಿ ಮಾದರಿಯ ಗೊಂಚಲುಗಳಲ್ಲಿ ಸಮಾವೇಶ ಗೊಂಡಿವೆ. ಸಿಮ್ಲಾ ಮತ್ತು ಕಾಶ್ಮೀರಗಳಲ್ಲಿ ಇದನ್ನು ವ್ಯಾಪಕವಾಗಿ ಬೆಳೆಸಲಾಗುತ್ತದೆ. ಬೀಜಗಳಿಂದ ಕಾಂಡ ಮತ್ತು ಬೇರು ತುಂಡುಗಳಿಂದ ವೃದ್ಧಿ. ಗಿಡ ನೆಡುವ ಕಾಲ ಮೈದಾನಗಳಲ್ಲಿ ಅಕ್ಟೋಬರ್, ಬೆಟ್ಟ ಸೀಮೆಗಳಲ್ಲಿ ಮಾರ್ಚಿ-ಏಪ್ರಿಲ್.

ಈ ಸಸ್ಯದಿಂದ ಪಡೆಯಲಾಗುವ ಪರಿಮಳಯುಕ್ತ ಚಂಚಲತೈಲ ಉದರಶೂಲೆ, ಅತಿಸಾರ ಮತ್ತು ಉನ್ಮಾದಗಳಲ್ಲಿ ಉತ್ತೇಜನಕವಾಗಿ ಉಪಯುಕ್ತವೆನಿಸಿದೆ. ಸಂಧಿವಾತ ಸಂದರ್ಭಗಳಲ್ಲಿ ಇದನ್ನು ನೋವಿರುವ ಗಂಟುಗಳಿಗೆ ಹಚ್ಚುವುದುಂಟು. ಹಲ್ಲುನೋವನ್ನು ಇದು ಶಮನ ಮಾಡುವುದೆನ್ನಲಾಗಿದೆ. ಈ ತೈಲವನ್ನು ಕಿವಿನೋವಿದ್ದಾಗ ಹಾಕಿದರೆ ನೋವು ವಾಸಿಯಾಗುತ್ತದೆ. ಕೂದಲ ಬೆಳೆವಣಿಗೆಗೆ ಉತ್ತೇಜನಕಾರಿ. ಹಿತವಾದ ಪರಿಮಳದಿಂದಾಗಿ ಇದರ ಎಲೆಗಳನ್ನು ಮಲ್ಲಿಗೆ ಮುಂತಾದ ಹೂಗಳ ಮಾಲೆಯಲ್ಲಿ ಹೂಗಳ ಮಧ್ಯೆ ಇಟ್ಟು ಕಟ್ಟುವುದುಂಟು. ಕೇಶಲಂಕಾರಕ್ಕಾಗಿ ಕೂಡ ಉಪಯೋಗಿಸುತ್ತಾರೆ. ದೇವತಾರ್ಚನೆಗೂ ಇದು ಪವಿತ್ರ ಎಂಬ ಭಾವನೆ ಹಿಂದುಗಳಲ್ಲಿದೆ. ಮರುಗದ ಎಲೆಗಳು ಖಾದ್ಯ ಯೋಗ. ಇವುಗಳ ಚಟ್ನಿ ಬಲು ರುಚಿಕರ ಎಂದು ಹೆಸರಾಗಿದೆ.

(ಯು.ಎನ್.)