ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಲಬಾರ್ ಅಳಿಲು

ವಿಕಿಸೋರ್ಸ್ದಿಂದ

ಮಲಬಾರ್ ಅಳಿಲು ರೊಡೆಂಷಿಯ ಗಣದ ಸ್ಕಯೂರಿಡೀ ಕುಟುಂಬಕ್ಕೆ ಸೇರಿದ ದಂಶಕ. ಕೇಶಳಿಲು ಪರ್ಯಾಯ ನಾಮ. ಇಂಡಿಯನ್ ಜಯಂಟ್ ಸ್ಕ್ವಿರಲ್ ಎಂಬ ಹೆಸರಿನಿಂದಲೂ ಪ್ರಸಿದ್ದವಾಗಿದೆ. ರಟೂಫ ಇಂಡಿಕ ವೈಜ್ಞಾನಿಕ ಹೆಸರು. ವ್ಯಾಪ್ತಿಯಲ್ಲಿ ಭಾರತಕ್ಕೆ ಮಾತ್ರ ಸೀಮಿತವಾಗಿರುವ ಇದು ಗಂಗಾನದಿಯ ದಕ್ಷಿಣಕ್ಕಿರುವ ಪರ್ಣಪಾತಿ, ಮಿಶ್ರಪರ್ಣಪಾತಿ ಹಾಗೂ ಆದ್ರ್ರನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಾಣಬಹುದು. ಹೆಚ್ಚುಕಡಿಮೆ ಎಲ್ಲ ವೇಳೆಯನ್ನು ಎತ್ತರವಾದ ಮರಗಳ ನೆತ್ತಿಯ ಮೇಲೆ ಕಳೆಯುವ ಇದು ಬಲು ಅಪೂರ್ವವಾಗಿ ನೆಲಕ್ಕೆ ಬರುವುದುಂಟು. ಮರಗಳ ಮೇಲ್ಭಾಗದಲ್ಲಿ ಅಲ್ಲಿಂದಿಲ್ಲಿಗೆ ಚುರುಕಾಗಿ ಜಿಗಿದಾಡುತ್ತ (ಒಂದು ಜಿಗಿತಕ್ಕೆ ಸುಮಾರು 6 ಮೀ ದೂರವನ್ನು ಕ್ರಮಿಸಬಲ್ಲದು) ಆಹಾರ ಸೇವನೆಯಲ್ಲಿ ತೊಡಗಿರುತ್ತದೆ; ಇದರ ಚಟುವಟಿಕೆ ನಸುಕಿನಲ್ಲಿ ಹಾಗೂ ಮುಸ್ಸಂಜೆಯಲ್ಲಿ ಹೆಚ್ಚು. ವಿಶ್ರಾಂತಿಯ ಕಾಲ ನಡುಹಗಲು. ಮಧ್ಯಾಹ್ನದ ಹೊತ್ತಿನಲ್ಲಿ ರೆಂಬೆಗಳ ಮೇಲೆ ಆಚೀಚೆ ಕಾಲುಗಳನ್ನು ಚಾಚಿಕೂಂಡು ಮಲಗಿರುತ್ತದೆ. ಚಳಿ ಮಳೆ ಇದ್ದರೆ ಮರಗಳ ಪೂಟರೆಗಳಲ್ಲಿ ವಿಶ್ರಮಿಸಿಕೂಳ್ಳುತ್ತದೆ.

ಮಲಬಾರ್ ಅಳಿಲು ಪುಕ್ಕಲು ಸ್ವಭಾವದ ಪ್ರಾಣಿ. ಕಣ್ಣಿಗೆ ಬೀಳುವುದು ಅಪರೂಪ. ಕಣ್ಣಿನಿಂದ ಪತ್ತೆಹಚ್ಚುವುದಕ್ಕಿಂತ ಮೊದಲೇ ಇದು ಹೊರಡಿಸುವ ವಿಚಿತ್ರ ಕೂಗಿನಿಂದ (ಬುಡುಬುಡುಕೆಯ ಸದ್ದನ್ನು ಹೋಲುವ) ಇದರ ಇರವನ್ನು ಗುರುತಿಸಬಹುದು. ತನಗೆ ಅಪರಿಚಿತವಾದ ಸದ್ದು ಕೇಳಿದಾಗ ಇಲ್ಲವೆ ಅಪಾಯ ಸನಿಹದಲ್ಲಿದೆಯೆಂದು ಬಗೆದಾಗ ಓಡಿಹೋಗುವುದಕ್ಕಿಂತ ಹೆಚ್ಚಾಗಿ ಕೊಂಬೆಗಳ ಅಡಿಯಲ್ಲಿ ಹುದುಗಿಕೊಳ್ಳುವುದು ಅಥವಾ ರೆಂಬೆಗಳಿಗೆ ದೇಹವನ್ನು ಚಪ್ಪಟೆ ಮಾಡಿಕೊಂಡು ಆತುಕೊಳ್ಳುವುದು ಇದರ ಸ್ವಾಭಾವ. ಇದು ಸಾಮಾನ್ಯವಾಗಿ ಒಂಟಿಯಾಗಿ ಇಲ್ಲವೆ ಜೋಡಿಯಾಗಿ ಬಾಳುತ್ತದೆ. ಎಲೆಗಳನ್ನು ಬಳಸಿ ಟೊಂಗೆಟಿಸಿಲುಗಳ ನಡುವೆ ದೊಡ್ಡ ಗೋಲಾಕಾರದ ಗೂಡುಗಳನ್ನು ಕಟ್ಟುತ್ತದೆ. ಒಂದು ಅಳಿಲು ಹಲವಾರು ಗೂಡುಗಳನ್ನು ನಿರ್ಮಿಸುವುದುಂಟು. ಇವುಗಳ ಪೈಕಿ ಹಲವನ್ನು ವಿಶ್ರಾಂತಿ ನೆಲೆಗಳಾಗಿಯೂ ಯಾವುದೋ ಒಂದನ್ನು ಮರಿಗಳನ್ನು ಈಯುವ ತಾಣವಾಗಿಯೂ ಬಳಸುತ್ತದೆ. ಇದರ ಸಂತಾನವೃದ್ಧಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಬಹುಶಃ ಫೆಬ್ರುವರಿ-ಮಾರ್ಚ್ ತಿಂಗಳುಗಳಲ್ಲಿ ಮರಿಗಳನ್ನು ಹಾಕುತ್ತದೆ. (ಎಸ್.ಎನ್.ಎಚ್.)