ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಲ್ಲಿಗೆ

ವಿಕಿಸೋರ್ಸ್ದಿಂದ

ಮಲ್ಲಿಗೆ ಸುವಾಸನಾಯುಕ್ತ ಹೂಗಳಿಗಾಗಿ ಪ್ರಸಿದ್ಧವೂ ಬಹುಜನಪ್ರಿಯವೂ ಆಗಿರುವ ಅಲಂಕಾರ ಸಸ್ಯಜಾತಿ (ಜಾಸ್ಮಿನ್). ಜಾಸ್ಮಿನಮ್ ಎಂಬ ಸಸ್ಯವೈಜ್ಞಾನಿಕ ಹೆಸರಿನಿಂದ ಪರಿಚಿತವಾಗಿರುವ ಇದು ಓಲಿಯೇಸೀ ಕುಟುಂಬಕ್ಕೆ ಸೇರಿದೆ. ಪ್ರಪಂಚದ ಉಷ್ಣದೇಶಗಳಲ್ಲೆಲ್ಲ ಇದರ ವ್ಯಾಪ್ತಿಯಿರುವುದಾದರೂ ಬಹುಪಾಲು ಪ್ರಭೇದಗಳ ಕಾಣದೊರೆಯುವುದು ಪ್ರಮುಖವಾಗಿ ಹಿಮಾಲಯ, ಚೀನ ಮತ್ತು ಮಲೇಷ್ಯಗಳನ್ನು ಒಳಗೊಂಡಿರುವ ಮಧ್ಯ ಏಷ್ಯ ಪ್ರದೇಶ. ಹೀಗಾಗಿ ಈ ಪ್ರದೇಶವೇ ಮಲ್ಲಿಗೆಯ ಉಗಮಸ್ಥಾನವಾಗಿರಬೇಕೆಂದು ನಂಬಲಾಗಿದೆ. ಪ್ರಪಂಚಾದ್ಯಂತ ಮಲ್ಲಿಗೆಯ ಸುಮಾರು 200 ಪ್ರಭೇದಗಳಿವೆ. ಭಾರತದಲ್ಲಿ ಸುಮಾರು 40 ಪ್ರಭೇದಗಳಿವೆ ಎನ್ನಲಾಗಿದೆ. ಇವುಗಳ ಪೈಕಿ ಹೆಚ್ಚಿನವು ಸುಗಂಧಪೂರಿತ ಹೂಗಳ ಸಲುವಾಗಿ ಆಯ್ದು ಬೆಳೆಸಿದಂಥವು. ಇವುಗಳ ಗುಣ ಲಕ್ಷಣಗಳಲ್ಲಿ ಹಲವು ವೇಳೆ ಪ್ರಮುಖ ವ್ಯತ್ಯಾಸಗಳೇನೂ ಕಂಡುಬರದಿರುವುದರಿಂದ ಪ್ರಭೇದಗಳ ಸಂಖ್ಯೆ ಇಷ್ಟೇ ಎಂದು ನಿರ್ದಿಷ್ಟವಾಗಿ ಹೇಳುವಂತಿಲ್ಲ. ಅನೇಕವು ಪ್ರತ್ಯೇಕ ಪ್ರಭೇದಗಳಾಗಿರದೆ ಹೂವಿನ ಗಾತ್ರ, ಸುವಾಸನೆ ಇತ್ಯಾದಿ ಗುಣಗಳಲ್ಲಿ ಕಂಡುಬರುವ ಸೂಕ್ಷ್ಮ ವ್ಯತ್ಯಾಸಗಳ ಆಧಾರದ ಮೇಲೆ ಹೆಸರಿಸಲಾಗಿರುವ ಸುಪರಿಚಿತ ಪ್ರಭೇದಗಳ ವಿಭಿನ್ನರೂಪಗಳಾಗಿರುವುದುಂಟು.

ಮಲ್ಲಿಗೆ ಕುರಿತು ಒಂದು ಅಂಶವಂತೂ ಖಚಿತ. ಭಾರತದಲ್ಲಿ ಇದು ಬಲು ಪ್ರಾಚೀನ ಕಾಲದಿಂದ ಕೃಷಿಯಲ್ಲಿರುವ ಸಸ್ಯ. ಇದರ ವಿವಿಧ ಬಗೆಗಳನ್ನು ನಿರ್ದೇಶಿಸುವ ಸುಮಾರು 140 ಸಂಸ್ಕøತ ಹೆಸರುಗಳಿರುವುದೂ ಅಮರಕೋಶದಲ್ಲಿ 6 ಬಗೆಯ ಮಲ್ಲಿಗೆಗಳ 16 ಹೆಸರುಗಳ ಉಲ್ಲೇಖವಿರುವುದೂ ಈ ಅಭಿಪ್ರಾಯಕ್ಕೆ ಪುಷ್ಟಿ ಕೊಡುತ್ತವೆ.

ಮಲ್ಲಿಗೆಯ ವಿವಿಧ ಬಗೆಗಳು ಶುಷ್ಕತಾನಿರೋಧಿ ಗುಣವುಳ್ಳ ಗಟ್ಟಿಮುಟ್ಟಾದ ಗಿಡಗಳು. ಉಷ್ಣ ಹಾಗೂ ಸಮಶೀತೋಷ್ಣ ಪ್ರದೇಶಗಳೆರಡರ ಪರಿಸ್ಥಿತಿಗಳಿಗೆ ಒಗ್ಗಿಕೊಂಡು ಬೆಳೆಯಬಲ್ಲವು ಕೆಲವು ಬಗೆಗಳನ್ನು ಯೂರೋಪಿನ ಕೆಲವು ಪ್ರದೇಶಗಳಲ್ಲಿ ಬೆಳೆಸಲಾಗಿದ್ದು ಇಂಥವು 100 ಸೆ. ನಷ್ಟು ಕಡಿಮೆ ಉಷ್ಣತೆಯನ್ನು ಕೂಡ ಸಹಿಸಬಲ್ಲವೆನ್ನಲಾಗಿದೆ. ಭಾರತದಲ್ಲಿ ಎಲ್ಲ ಕಡೆಯೂ ಮಲ್ಲಿಗೆಗಳ ಕೃಷಿಯಿದೆ. ಮೈದಾನ ಸೀಮೆ ಮಾತ್ರವಲ್ಲದೆ 3000 ಮೀ ವರೆಗಿನ ಬೆಟ್ಟ ಪ್ರದೇಶಗಳಲ್ಲೂ ಇವನ್ನು ಬೆಳೆಸಲಾಗುತ್ತಿದೆ. ಸಾಧಾರಣವಾಗಿ ಯಾವುದೇ ತೆರನ ಮಣ್ಣಿನಲ್ಲಿ ಬೆಳೆಸಬಹುದಾದರೂ ಗೋಡುಭೂಮಿ ಇಲ್ಲವೆ ನೀರಾವರಿ ಸೌಲಭ್ಯವಿರುವ ಒಣಮರಳು ಭೂಮಿಯಲ್ಲಿ ಇವುಗಳ ಬೆಳೆವಣಿಗೆ ಹೆಚ್ಚು ಸಮೃದ್ಧ. ಜೇಡಿಮಣ್ಣಿನ ಭೂಮಿಯಲ್ಲಿ ಕಾಂಡ ಎಲೆಗಳ ಬೆಳವಣಿಗೆ ಹುಲುಸಾಗಿರುವುದಾದರೂ ಹೂಗಳ ಇಳುವರಿ ಕಡಿಮೆ ಇರುತ್ತದೆ. ಅಂತೆಯೇ ಭೂಮಿ ಕಂಕರುಮಣ್ಣಿನಿಂದ ಕೂಡಿದ್ದರೆ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ.

ಮಲ್ಲಿಗೆಯ ತಾಜಾಹೂವಿಗೆ ಅಧಿಕ ಬೇಡಿಕೆ ಇರುವುದರಿಂದ ಇದನ್ನು ಸಾಮಾನ್ಯವಾಗಿ ಊರು, ನಗರಗಳ ಹೊರವಲಯಗಳಲ್ಲಿ ಸಣ್ಣ ಹಿಡುವಳಿ ಜಮೀನುಗಳಲ್ಲಿ ಬೆಳೆಯುವುದು ರೂಢಿ. ಮನೆಗಳ ಕೈತೋಟಗಳಲ್ಲೂ ಉದ್ಯಾನಗಳಲ್ಲೂ ಅಲಂಕಾರಕ್ಕಾಗಿ ಬೆಳೆಸುವುದಿದೆ.

ಮಲ್ಲಿಗೆಯನ್ನು ಲಿಂಗರೀತಿ (ಬೀಜಗಳಿಂದ) ಮತ್ತು ನಿರ್ಲಿಂಗರೀತಿಗಳೆಡರಿಂದ ಅಭಿವೃದ್ಧಿ ಮಾಡಬಹುದಾದರೂ ಎರಡನೆಯ ಮಾರ್ಗವೇ ಹೆಚ್ಚು ಪ್ರಚಲಿತವಿದೆ. ಹದವಾಗಿ ಬಲಿತ ಕಾಂಡ ಕಡ್ಡಿಗಳು (ಕಟಿಂಗ್ಸ್), ಕಂದು ಸಸಿಗಳು (ಸಕರ್ಸ್), ಕಸಿ ಕಡ್ಡಿಗಳು (ಲೇಯರ್ರ್) ಮುಂತಾದವುಗಳ ಮೂಲಕ ವೃದ್ಧಿಸುವುದೇ ಈ ಮಾರ್ಗ. ಜನವರಿ - ಫೆಬ್ರುವರಿ ತಿಂಗಳುಗಳಲ್ಲಿ ತಾಯಿಗಿಡಗಳಿಂದ ಆಯ್ದ ತುಂಡುಗಳನ್ನು ಸು. 0.3 ಮೀ ಉದ್ದಕ್ಕೆ ಕತ್ತರಿಸಿ ತೆಗೆದು ನೆರಳಿರುವ ಕಡೆಗಳಲ್ಲಿ ಮರಳು ಪಾತಿ ಮಾಡಿ, ಸ್ವಲ್ಪ ಓರೆಯಾಗಿ ನೆಡಲಾಗುತ್ತದೆ. ತಪ್ಪದೆ ದಿನನಿತ್ಯ ನೀರು ಹಾಯಿಸಿ, ಗೆದ್ದಲು ಇರುವೆ ಬಾರದಂತೆ ಕೀಟನಾಶಕಗಳನ್ನು ಸಿಂಪಡಿಸುತ್ತ ಕಾಪಾಡಲಾಗುತ್ತದೆ. ಕಡ್ಡಿಗಳು ನೆಟ್ಟ 40-45 ದಿನಗಳ ತರುವಾಯ ಬೇರೊಡೆಯುವುವು. ಅನಂತರ ಕಿತ್ತು ಬೇಕೆನಿಸಿದ ಕಡೆ ಇವನ್ನು ಬೆಳೆಸುವುದುಂಟು. ತಾಯಿ ಗಿಡದ ಬುಡದಲ್ಲಿ ಹುಟ್ಟುವ ಕಂದುಸಸಿಗಳನ್ನು ಬೇರು ಹರಿಯದಂತೆ ಎಚ್ಚರಿಕೆಯಿಂದ ಕಿತ್ತು ನೆಡುವ ಕ್ರಮ ಸುಲಭವಾದುದು ಹಾಗೂ ರೂಢಿಯಲ್ಲಿರುವಂಥದು. ಕಸಿತುಂಡುಗಳನ್ನು ಪಡೆಯಲು ಹೆಚ್ಚುವೇಳೆ ಹಿಡಿಯುವುದರಿಂದ ಮತ್ತು ಇಂಥ ತುಂಡುಗಳನ್ನು ಹೆಚ್ಚು ಸಂಖ್ಯೆಯಲ್ಲಿ ಪಡೆಯಲಾಗುವುದಿಲ್ಲವಾದ್ದರಿಂದ ಈ ವಿಧಾನ ಹೆಚ್ಚು ಬಳಕೆಯಲ್ಲಿಲ್ಲ.

ಬೀಜಗಳ ಮೂಲಕ ವೃದ್ಧಿಸುವುದು ಇನ್ನೂ ಶ್ರಮದಾಯಕವಾದ್ದರಿಂದ ಈ ವಿಧಾನ ಇನ್ನೂ ವಿರಳ.

ದೊಡ್ಡ ಪ್ರಮಾಣದಲ್ಲಿ ಬೇಸಾಯ ಮಾಡಬೇಕೆಂದರೆ ಮಲ್ಲಿಗೆ ಪೊದೆಜಾತಿಯದಾದರೆ ಎಕರೆಗೆ 722 ಸಸಿಗಳೂ (ಗಿಡಗಳ ನಡುವಣ ಅಂತರ ಸುಮಾರು 1.4 ಮೀ) ಹಂಬಿನ ಬಗೆಯದಾದರೆ 302 ಸಸಿಗಳೂ ಬೇಕಾಗುವುವು (ಗಿಡಗಳ ನಡುವಣ ಅಂತರ ಸು. 4 ಮೀ ನಾಟಿ ಮಾಡುವ ಮೊದಲು ನೆಲವನ್ನು ಚೆನ್ನಾಗಿ ಉತ್ತು ಹದಗೊಳಿಸಿ ಮೇಲೆ ಹೇಳಿದ ಅಂತರ ಬಿಟ್ಟು ಗುಂಡಿತೋಡಿ, ಕೊಳೆತ ಕಾಂಪೋಸ್ಟ್, ಇಲ್ಲವೆ ದನದ ಸಗಣಿ ಗೊಬ್ಬರ ಹಾಗೂ ಕೆಮ್ಮಣ್ಣುಗಳ ಮಿಶ್ರಣ (ಒಂದು ಎಕರೆಗೆ 15-20 ಗಾಡಿ ಗೊಬ್ಬರ 5-6 ಗಾಡಿ ಕೆಮ್ಮಣ್ಣು ಇರುವಂತೆ) ಹಾಕಲಾಗುತ್ತದೆ. ನಾಟಿ ಮಾಡುವ ಕಾಲ ಮುಂಗಾರು, ಒಂದು ಸಲ ಕಡ್ಡಿಗಳು ಭೂಮಿಯಲ್ಲಿ ಕೂತು ಬೆಳೆಯತೊಡಗಿದ ಮೇಲೆ ಹೆಚ್ಚಿನ ಆರೈಕೆ ಬೇಕಾಗಿಲ್ಲ. ಚಳಿಗಾಲದಲ್ಲಿ (ಅಂದರೆ ಜನವರಿ-ಫೆಬ್ರುವರಿ ವೇಳೆಯಲ್ಲಿ) ಗಿಡದ ಪಾತಿಯನ್ನು ಅಗೆದು ಬೇರುಗಳನ್ನು ಕೆಲವು ದಿನ ಬಿಸಿಲಿಗೆ ಒಡ್ಡುವಂತೆ ಮಾಡಿದರೆ ಹೂ ಕಚ್ಚುವುದಕ್ಕೆ ಅನುಕೂಲವಾಗುತ್ತದೆ. ಅನಂತರ ಗಿಡ ಒಂದಕ್ಕೆ 8-10 ಕೆಜಿ ಕಾಂಪೋಸ್ಟ್ ಇಲ್ಲವೆ ಕೊಳೆತ ಎಲೆ ಗೊಬ್ಬರ ಸಗಣಿಗೊಬ್ಬರ ಹಾಕಿ ಹದವರಿತು ನೀರು ಹಾಯಿಸಲಾಗುತ್ತದೆ. ಮುಂಗಾರಿಗೆ ಮೊದಲು ಗಿಡಗಳಿಗೆ ನೀರು ನಿಲ್ಲಿಸಿ, ಎಲೆಗಳನ್ನೆಲ್ಲ ಕೈಯಿಂದ ಕಿತ್ತು ಹಾಕುವುದುಂಟು. ಹೆಚ್ಚಿನ ಸಂಖ್ಯೆಯಲ್ಲಿ ಮೊಗ್ಗು ಕಚ್ಚಲು ಇದು ಸಹಾಯಕ. ಮಲ್ಲಿಗೆಗೆ ಭಾರತದಲ್ಲಿ ರಸಗೊಬ್ಬರ ಊಡುವ ಪದ್ಧತಿ ಹೆಚ್ಚಾಗಿಲ್ಲ. ಆದರೆ ಫ್ರಾನ್ಸ್ ಮುಂತಾದ ಅನ್ಯದೇಶಗಳಲ್ಲಿ ಅಮೋನಿಯಮ್ ಸಲ್ಫೇಟನ್ನು ಲಘುಮೊತ್ತದಲ್ಲಿ ಹಾಕುವುದಿದೆ.

ಜನವರಿ-ಫೆಬ್ರುವರಿಯಲ್ಲೊಮ್ಮೆ ಜುಲೈಯಲ್ಲೊಮ್ಮೆ ಹೀಗೆ ವರ್ಷದಲ್ಲಿ ಎರಡು ಬಾರಿ ಗಿಡಗಳನ್ನು ಕತ್ತರಿಯಿಂದ ಸವರಲಾಗುತ್ತದೆ. (ಪ್ರೂನಿಂಗ್), ಹೀಗೆ ಮಾಡುವುದು ಗಿಡವನ್ನು ಅಪೇಕ್ಷಿತ ಎತ್ತರಕ್ಕೆ ಇರಿಸುವುದಕ್ಕೂ ಯಥೇಚ್ಛವಾಗಿ ಮೊಗ್ಗು ಕಚ್ಚುವಂತೆ ಮಾಡುವುದಕ್ಕೂ ಅನುಕೂಲವಾಗುತ್ತದೆ.

ಪೊದೆ ಜಾತಿಯ ಮಲ್ಲಿಗೆಗಳು (ಉದಾ, ಏಳುಸುತ್ತಿನ ಮಲ್ಲಿಗೆ, ಕೋಲು ಮಲ್ಲಿಗೆ, ದುಂಡು ಮಲ್ಲಿಗೆ) ವರ್ಷಕ್ಕೆ ಒಂದು ಸಲ ಬೇಸಗೆಯ ಆರಂಭದಿಂದ ಮೊದಲುಗೊಂಡು ಮಳೆಗಾಲ ಮುಗಿಯುವತನಕ ಚೆನ್ನಾಗಿ ಹೂಕೊಡುವುವು. ಸಾಮಾನ್ಯವಾಗಿ ಒಂದು ಗಿಡ ಸುಮಾರು 15-20 ದಿನಗಳ ಕಾಲ ಹೂ ಕೊಡುತ್ತದೆ. ಇಳುವರಿ ಹೆಕ್ಟೇರಿಗೆ ಸು. 2000-2500 ಕೆಜಿ. ಕಡ್ಡಿ ನೆಟ್ಟ ಆರಂಭದ ವರ್ಷಗಳಲ್ಲಿ ಇಳುವರಿ ಕಡಿಮೆಯಿದ್ದು ವರ್ಷ ಕಳೆದಂತೆ ಹೆಚ್ಚುತ್ತ ಹೋಗಿ 4-5 ವರ್ಷಗಳ ತರುವಾಯ ಗರಿಷ್ಟ ಮೊತ್ತದಲ್ಲಿ ಹೂಬಿಡುವುವು. ಬಳ್ಳಿ ಜಾತಿಯ ಮಲ್ಲಿಗೆಗಳು ವರ್ಷವಿಡೀ ಇಲ್ಲವೆ ವರ್ಷದ ಹೆಚ್ಚು ಅವಧಿ ಹೂ ಬಿಡುವುವು. ಒಳ್ಳೆಯ ಭೂಮಿ, ಉತ್ತಮ ಆರೈಕೆ ಇದ್ದಲ್ಲಿ 8-10 ವರ್ಷಕಾಲ ಒಳ್ಳೆಯ ಫಸಲು ಪಡೆಯಬಹುದು. ಭಾರತಕ್ಕೆ ಹೋಲಿಸಿದರೆ ಪಾಶ್ಚಿಮಾತ್ಯ ಇಳುವರಿಯ ಮೊತ್ತ ಅಧಿಕ. ಭಾರತದಲ್ಲಿ ಮಲ್ಲಿಗೆಯನ್ನು ಗಿಡದಿಂದ ಬಿಡಿಸುವುದು ಸಾಮಾನ್ಯವಾಗಿ ಅಪರಾಹ್ನ. ಚೆನ್ನಾಗಿ ಬಲಿತ ಮೊಗ್ಗುಗಳು ಹೂವಾಗಿ ಅರಳುವ ಮುಂಚೆಯೇ ಕೈಯಿಂದ ಬಿಡಿಸಿ ತಂಪು ಸ್ಥಳಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಇಲ್ಲವೆ ಮೊಗ್ಗಾಗಿರುವಾಗಲೇ ಮಾರುಕಟ್ಟೆಗೆ ತರುವುದುಂಟು. ಮಾರನೆಯ ಬೆಳಗಿನ ವೇಳೆಗೆ ಹೂಗಳು ಅರಳಿ ಸುವಾಸನೆ ಬೀರಲಾರಂಭಿಸುವುವು. ಮಲ್ಲಿಗೆ ತೈಲವನ್ನು ಪಡೆಯುವ ಉದ್ದೇಶವಿದ್ದರೆ ಹೂಗಳನ್ನು ಬೆಳಗಿನ ಜಾವ ಸೂರ್ಯೋದಯಕ್ಕೆ ಮುನ್ನ ಬಿಡಿಸುವುದು ವಾಡಿಕೆ. ಪಾಶ್ಚಿಮಾತ್ಯ ದೇಶದಲ್ಲಿ ಹೂ ಮೊಗ್ಗುಗಳನ್ನು ಯಂತ್ರಗಳ ಸಹಾಯದಿಂದ ಬಿಡಿಸುವರು.

ಭಾರತದಲ್ಲಿ ಬೆಳೆಯುವ ಬಹುಪಾಲು ಮಲ್ಲಿಗೆ ಹಾರ, ಹೂಗುಚ್ಛ, ದಂಡೆ ಮುಂತಾಗಿ ಅಲಂಕಾರ ವಸ್ತುಗಳ ತಯಾರಿಕೆಗೂ ದೇವರ ಪೂಜೆಗೂ ಬಳಕೆಯಾಗುತ್ತದೆ. ಕೊಂಚ ಪ್ರಮಾಣದಲ್ಲಿ ಕೇಶತೈಲ ಮತ್ತು ಅತ್ತರುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಯೂರೊಪ್ ಮತ್ತು ಮೆಡಿಟರೇನಿಯನ್ ವಲಯದ ಹಲವಾರು ದೇಶಗಳಲ್ಲಿ ಮಲ್ಲಿಗೆ ಹೂವಿನಿಂದ (ಪ್ರಮುಖವಾಗಿ ಜಾಜಿಮಲ್ಲಿಗೆ) ದೊಡ್ಡ ಮೊತ್ತದಲ್ಲಿ ಮಲ್ಲಿಗೆ ಎಣ್ಣೆ ತಯಾರಿಸಲಾಗುತ್ತದೆ. ಮಲ್ಲಿಗೆಯ ಸುವಾಸನೆ ವಿಶಿಷ್ಟ ರೀತಿಯದು. ಬೇರಾವುದೇ ನೈಸರ್ಗಿಕ ಸುಗಂಧವಾಗಲೀ ಸಂಶ್ಲೇಷಿತ ರಾಸಾಯನಿಕವಾಗಲೀ ಇದನ್ನು ಸರಿಗಟ್ಟಲಾರದು.

ಮಲ್ಲಿಗೆ ಎಣ್ಣೆ ಸುಗಂಧಪೂರಿತ ಚಂಚಲ ತೈಲ: ದಳ ಹಾಗೂ ನಿದಳಗಳೆರಡರ ಹೊರ ಮತ್ತು ಒಳ ಮೇಲ್ಮೈಗಳ ಎಪಿಡರ್ಮಿಸಿನ ಕೋಶಗಳಲ್ಲಿ ಇರುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಇದು ತಯಾರಾಗತೊಡಗಿ ಸೂರ್ಯೋದಯವಾದ ಕೆಲವು ಗಂಟೆಗಳ ತರುವಾಯ ಇದರ ಸಂಶ್ಲೇಷಣೆ ನಿಲ್ಲುತ್ತದೆ. ಸುವಾಸನೆ ಮಾತ್ರ ಅನೇಕ ಗಂಟೆಗಳ ಕಾಲ ಉಳಿದಿರುತ್ತದೆ. ತೈಲವನ್ನು ಹೊರತೆಗೆಯಲು ಎರಡು ವಿಧಾನಗಳುಂಟು; ಒಂದನೆಯದು ಅವಶೋಷಕಗಳನ್ನು ಬಳಸುವ ಎನ್‍ಫ್ಲೂರೆಜ್ ವಿಧಾನ, ಎರಡನೆಯದು ಪೆಟ್ರೊಲಿಯಮ್ ಈಥರ್ ಅಥವಾ ಬೆಂಜೀನ್ ಲೀನಕಾರಿಗಳ ಬಳಕೆಯ ಸಾಲ್ವೆಂಟ್ ಎಕ್ಸ್‍ಟ್ರಾಕ್ಷನ್ ವಿಧಾನ, ಮೊದಲನೆಯ ವಿಧಾನದಿಂದ ಹೆಚ್ಚು ಮೊತ್ತದ ತೈಲವನ್ನು ಪಡೆಯಬಹುದು. ಆದರೆ ಎರಡನೆಯದು ಕಡಿಮೆ ವೆಚ್ಚದ್ದು. ಭಾರತದಲ್ಲೂ ಇತ್ತೀಚಿನ ತನಕ ಫ್ರಾನ್ಸಿನಲ್ಲೂ ಮೊದಲಿನ ವಿಧಾನವೇ ಹೆಚ್ಚು ಬಳಕೆಯಲ್ಲಿದ್ದ ವಿಧಾನ. ಇದರಲ್ಲಿ ಅವಶೋಷಣೆಗೆ ವಿವಿಧ ತೆರನ ಕೊಬ್ಬನ್ನು (ಫ್ರಾನ್ಸಿನಲ್ಲಿ ದನದ ಅಥವಾ ಹಂದಿಯ ಕೊಬ್ಬು) ಗಾಜಿನ ತಟ್ಟೆಗಳಿಗೆ ಸವರಿ ಅದರ ಮೇಲೆ ಹೂಗಳನ್ನು ಪೇರಿಸಿ ಉನಿಸಲಾಗುತ್ತದೆ. ಹೂ ದಳಗಳಿಂದ ಕೊಬ್ಬಿಗೆ ಸುಗಂಧ ವರ್ಗಾವಣೆಯಾಗುತ್ತದೆ. ಪ್ರತಿದಿನ ಹೊಸ ಹೂಗಳನ್ನು ಸೇರಿಸುತ್ತಿದ್ದು ಕೆಲವು ದಿನಗಳ ತರುವಾಯ ಕೊಬ್ಬು ಸುಗಂಧದಿಂದ ಪೂರಣಗೊಂಡಮೇಲೆ ಅದನ್ನು ತೆಗೆದು ಆಲ್ಕೊಹಾಲ್ ಅಥವಾ ಅಸಿಟೋನಿನಲ್ಲಿ ವಿಲೀನಗೊಳಿಸಿ, ಬಟ್ಟೆ ಇಳಿಸಿ ತೈಲವನ್ನು ಪ್ರತ್ಯೇಕಿಸಲಾಗುತ್ತದೆ. ಭಾರತದಲ್ಲಿ ಕೊಬ್ಬಿಗೆ ಬದಲಾಗಿ ಶುದ್ಧೀಕರಿಸಿದ ಬಿಳಿ ಎಳ್ಳನ್ನು ಬಳಸುವುದಿದೆ ; ತಾಜಾ ಹೂಗಳನ್ನು ಬಿಳಿ ಎಳ್ಳನ್ನೂ ಏಕಾಂತರ ಪದರಗಳಾಗಿ ಸಿಮೆಂಟ್ ಗುಣಿಗಳಲ್ಲಿ ಹರಡಲಾಗುತ್ತದೆ. ಪ್ರತಿ 10-12 ಗಂಟೆಗಳಿಗೊಮ್ಮೆ ಹಳೆ ಹೂಗಳನ್ನು ತೆಗೆದು ಹೊಸ ಹೂ ಸೇರಿಸುತ್ತಿದ್ದು ಎಳ್ಳಿನ ಕಾಳುಗಳನ್ನೆಲ್ಲ ಸಂಪೂರ್ಣವಾಗಿ ಊರಿಸಲಾಗುತ್ತದೆ. ಅನಂತರ ಎಳ್ಳನ್ನು ಗಾಣಕ್ಕೆ ಒಡ್ಡಿ ಮಲ್ಲಿಗೆ ಸುಗಂಧಪೂರಿತ ಎಣ್ಣೆಯನ್ನು ಪಡೆಯುವುದಿದೆ. ಹೀಗೆ ತಾಜಾ ಹೂಗಳಿಂದ ಪಡೆಯುವ ಎಣ್ಣೆ ಮೊದಲ ದರ್ಜೆಯದು. ಇದಕ್ಕೆ ಸಿರಾ ಎಂದು ಹೆಸರು. ಆಗಿಂದಾಗ್ಗೆ ತೆಗೆದು ಹಾಕುವ ಹಳೆಯ ಹೂಗಳಲ್ಲೂ ಕೊಂಚ ಮೊತ್ತದ ಸುಗಂಧ ಉಳಿದಿರುತ್ತದೆ. ಇದರಿಂದ ಪಡೆಯುವ ಎಣ್ಣೆ ಕೆಳದರ್ಜೆಯದಾಗಿದ್ದು ಬಾಜು ಮತ್ತು ರದ್ದಿ ಎಂಬ ಹೆಸರಿನಿಂದ ನಿರ್ದೇಶಿತವಾಗುತ್ತದೆ.

ಅತ್ತರುಗಳ ತಯಾರಿಕೆ ಕೊಂಚ ಭಿನ್ನ ರೀತಿಯದು. ಮಲ್ಲಿಗೆ ಹೂಗಳನ್ನು ಮಣ್ಣಿನ ಪಾತ್ರೆಗಳಲ್ಲಿರಿಸಿ ಕಾಯಿಸಿ ಬಟ್ಟಿಯಿಳಿಸಲಾಗುತ್ತದೆ. ಆಗ ಹೊರಸೂಸುವ ಸುಗಂಧಪೂರಿತ ಹಬೆಯನ್ನು ಗಂಧದ ಎಣ್ಣೆಯಲ್ಲಿ ಅವಶೋಷಿಸಿ ತೆಗೆದು 3-4 ವರ್ಷಕಾಲ ಸಂಗ್ರಹಿಸಿಡಲಾಗುತ್ತದೆ. ಸಂಗ್ರಹಣ ಕಾಲದಲ್ಲಿ ವರ್ಷಂಪ್ರತಿ ಇದಕ್ಕೆ ತಾಜಾ ಮಲ್ಲಿಗೆ ಸಾರವನ್ನು ಸೇರಿಸಲಾಗುತ್ತದೆ. ಇದರಿಂದ ಲಭಿಸುವ ಸುಗಂಧವೇ ಶ್ರೇಷ್ಠ ದರ್ಜೆಯ ಅತ್ತರು.

ಮಲ್ಲಿಗೆ ತೈಲದ ಮೊತ್ತ ಹಾಗೂ ಗುಣಮಟ್ಟದಲ್ಲಿ ವ್ಯತ್ಯಾಸಗಳುಂಟು. ಇದಕ್ಕೆ ಅನೇಕ ಕಾರಣಗಳಿವೆ. ಸಾಮಾನ್ಯವಾಗಿ ಉನ್ನತ ಪ್ರದೇಶಗಳಲ್ಲಿ ಬೆಳೆಯುವ ಮಲ್ಲಿಗೆ ಉಚ್ಚದರ್ಜೆಯ ಎಣ್ಣೆಯನ್ನು ಕೊಡುತ್ತದೆ. ಅಂತೆಯೇ ಮುಂಜಾನೆಯ ನಸುಕಿನಲ್ಲಿ ಸಂಗ್ರಹಿಸಲಾಗುವ ಮಲ್ಲಿಗೆ ಮಧ್ಯಾಹ್ನ ಸಂಗ್ರಹಿಸಲಾಗುವುದಕ್ಕಿಂತಲೂ ಬಿಸಿಲಿರುವ ವೇಳೆ ಸಂಗ್ರಹ ಮಾಡಿದುದು ಮೋಡ ಮುಸುಕಿದಾಗ ಮಾಡಿದ್ದಕ್ಕಿಂತಲೂ ಉತ್ತಮವೆನ್ನಲಾಗಿದೆ.

ಲೀನಕಾರಿಗಳ ಸಹಾಯದಿಂದ ಪಡೆಯಲಾಗುವ ಮಲ್ಲಿಗೆ ಸಾರ ಮೇಣದಂಥ ವಸ್ತುವಾಗಿದ್ದು ಇದಕ್ಕೆ ಕಾಂಕ್ರೀಟ್ ಎಂಬ ಹೆಸರಿದೆ. ಇದು ಕೆಂಗಂದು ಬಣ್ಣದ ವಸ್ತು. ಇದನ್ನು ಸಂಸ್ಕರಿಸಿ ಪಡೆಯುವ ದ್ರವವಸ್ತುವೇ ಆಬ್ಸೊಲ್ಯೂರ್ಟ. ಇದು ಸ್ವಚ್ಛ ಹಾಗೂ ಹಳದಿ-ಕಂದು ಬಣ್ಣದ ಸ್ನಿಗ್ಧದ್ರವ. ದಿನಕಳೆದಂತೆ ಗಾಢಕೆಂಪು ಬಣ್ಣಕ್ಕೆ ತಿರುಗುತ್ತದೆ. ಅವಶೋಷಕಗಳ ಬಳಕೆಯಿಂದ ಪಡೆಯಲಾಗುವ ಅಬ್ಸೊಲ್ಯೂರ್ಟ ಕೆಂಪು-ಕಂದು ಬಣ್ಣಗಳ ಸ್ನಿಗ್ಧ ತೈಲ. ಮಲ್ಲಿಗೆ ತೈಲದ ಪ್ರಧಾನ ಘಟಕ ಬೆಂಜೈಲ್ ಅಸಿಟೇಟ್ ಜೊತೆಗೆ ಲಿನಲೇಟ್ ಅಸಿಟೇಟ್, ಬೆಂಜೈಲ್ ಬೆಜೊಯೇಟ್, ಬೆಂಜೈಲ್ ಆಲ್ಕೊಹಾಲ್, ಜಿರಾನಿಯಾಲ್, ಯೂಜಿನಾಲ್, ಕ್ರಿಯೊಸೋಲ್, ಜಾಸ್ಮೋನ್ ಮುಂತಾದ ಅನೇಕ ರಾಸಾಯನಿಕಗಳಿವೆ.

ಮಲ್ಲಿಗೆ ಎಣ್ಣೆಯ ಪ್ರಧಾನ ಬಳಕೆ ಉನ್ನತದರ್ಜೆಯ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ, ಮೈಸಾಬೂನು, ಪ್ರಸಾಧನ ಸಾಮಗ್ರಿಗಳು, ಸುಗಂಧ ಸಂಚಿಗಳು, ಬಾಯದುರ್ಗಂಧ ನಾಶಕಗಳು, ಊದುಬತ್ತಿ ಇತ್ಯಾದಿ ಹತ್ತಾರು ತೆರನ ಸಾಮಗ್ರಿಗಳ ತಯಾರಿಕೆಯಲ್ಲೂ ಇದರ ಉಪಯೋಗ ಉಂಟು.

ಮಲ್ಲಿಗೆಗೆ ಬೇರೆ ತೆರನ ಉಪಯೋಗಗಳೂ ಇವೆ. ಎಲೆಯ ರಸವನ್ನು ಹಲ್ಲು ನೋವಿಗೆ ಮದ್ದಾಗಿ ಬಳಸುವುದಿದೆ. ಮಲ್ಲಿಗೆ ಎಣ್ಣೆ ಮೊಳೆರೋಗ ನಿವಾರಕ ವೆನ್ನಲಾಗಿದೆ. ವನಮಲ್ಲಿಗೆಯ (ಜಾಸ್ಮಿನಂ) (ಆಂಗಸ್ಟಿಫೋಲಿಯಮ್) ಎಲೆ ಕಜ್ಜಿ, ತುರಿ, ಇಸಬು ಮುಂತಾದ ಚರ್ಮ ರೋಗಗಳಿಗೆ ಔಷಧಿ ಎನಿಸಿದೆ.

ಮಲ್ಲಿಗೆ ಬಹುವಾರ್ಷಿಕ ಸಸ್ಯ. ಇದರಲ್ಲಿ ಪೊದೆರೂಪದಲ್ಲಿ ಬೆಳೆಯುವಂಥ ಬಗೆಗಗಳೂ ಆಸರೆಗಳನ್ನು ಆಶ್ರಯಿಸಿ ಬಳ್ಳಿಗಳಾಗಿ ಬೆಳೆಯುವಂಥವೂ ಇವೆ. ಎಲೆಗಳು ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿರುವುವು; ಇವು ಸರಳ ಇಲ್ಲವೆ ಏಕಪಿಚ್ಛಕ ರೀತಿಯ ಸಂಯುಕ್ತ ಬಗೆಯವಾಗಿರಬಹುದು. ಹೂಗಳು ಮೂರರ ಅಥವಾ ಹೆಚ್ಚು ಸಂಖ್ಯೆಯ ಮಂಜರಿಗಳಲ್ಲಿ ಅರಳುವುವು. ಹೂಗಳ ಬಣ್ಣ ಸಾಮಾನ್ಯವಾಗಿ ಬಿಳಿ. ಕೆಲವು ಪ್ರಭೇದಗಳಲ್ಲಿ ಹಳದಿ ಬಣ್ಣದ ಹೂಗಳಿರುವುದುಂಟು (ಉದಾ: ಜಾಸ್ಮಿನಮ್) ಹ್ಯೂಮೈಲ್-ಹಸುರುಮಲ್ಲಿಗೆ, ಅಥವಾ ಹಳದಿ ಜಾಜಿ). ಪ್ರತಿ ಹೂವಿನಲ್ಲಿ 4-9 ನಿದಳಗಳೂ 5-15 ದಳಗಳೂ ಇವೆ. ದಳಗಳ ಬುಡಭಾಗ ಕೊಳವೆಯಂತಿದೆ. ಇದರ ಕಂಠಭಾಗದಲ್ಲಿ ಎರಡು ಪುಂಕೇಸರಗಳಿರುವುವು. ಜಾಯಾಂಗ ಒಂದು ಇಲ್ಲವೆ ಎರಡು ಸ್ತ್ರೀಕೇಸರಗಳಿಂದ ರಚಿತವಾಗಿದೆ.

ಮಲ್ಲಿಗೆಯಲ್ಲಿ ಅನೇಕ ಪ್ರಭೇದಗಳಿವೆಯೆಂದು ಮೊದಲೇ ಹೇಳಿದೆ. ಇವುಗಳ ರೂಪ, ಬೆಳೆವಣಿಗೆಯ ಕ್ರಮ, ಎಲೆಗಳ ಆಕಾರ, ಪ್ರರೂಪ, ಹೂಗಳ ಆಕಾರ, ವಾಸನೆ, ಇತ್ಯಾದಿಗಳಲ್ಲಿ ವ್ಯತ್ಯಾಸಗಳನ್ನು ಗಮನಿಸಬಹುದು. ಕೆಲವು ಮುಖ್ಯ ಪ್ರಭೇದಗಳನ್ನು ಈ ಮುಂದೆ ಸ್ಥೂಲವಾಗಿ ವಿವರಿಸಲಾಗಿದೆ.

1. ಸಣ್ಣ ಜಾಜಿ (ಜಾಸ್ಮಿನಮ್ ಅಫಿಸಿನೇಲ್): ಇದು ಹಬ್ಬಿ ಬೆಳೆಯುವ ಪೊದೆ ಬಗೆಯದು. ಗಟ್ಟಿಮುಟ್ಟಾಗಿ ಬೆಳೆಯುತ್ತದೆ. ಅಭಿಮುಖ ರೀತಿಯ ಏಕ ಪಿಚ್ಛಕ ಸಂಯುಕ್ತ ಎಲೆಗಳನ್ನು ಪಡೆದಿದೆ. ಪ್ರತಿ ಎಲೆಯಲ್ಲಿ 3-7 ಪತ್ರಕಗಳುಂಟು. ತುದಿಯ ಪತ್ರಕ ಉಳಿದವಕ್ಕಿಂತ ದೊಡ್ಡದು. ರೆಂಬೆಗಳ ಅಗ್ರಭಾಗದಲ್ಲಿ ಲಘು ಸಂಖ್ಯೆಯ ಹೂಗಳುಳ್ಳ ಸೀಮಾಕ್ಷಿ ಮಂಜರಿಗಳು ಮೂಡುವುವು. ಒಮ್ಮೊಮ್ಮೆ ಮಂಜರಿಯಲ್ಲಿ ಒಂದೇ ಹೂವಿರುವುದುಂಟು. ಹೂಗಳ ಬಣ್ಣ ಬಿಳಿ. ಪ್ರತಿ ಹೂವಿನಲ್ಲಿ 4-5 ದಳ ಅಷ್ಟೇ ಸಂಖ್ಯೆಯ ನಿದಳಗಳಿವೆ. ಹೂ ಅರಳುವ ಕಾಲ ಜುಲೈ-ಅಕ್ಟೋಬರ್, ಪರ್ಷಿಯ ಅಥವಾ ಕಾಶ್ಮೀರ ಇದರ ತವರು ಎನ್ನಲಾಗಿದೆ.

2 ಜಾಜಿ (ಸ್ಟ್ಯಾನಿಷ್ ಜಾಸ್ಮಿನ್, ಕಾಮನ್ ಜಾಸ್ಮಿನ್; ಜಾಸ್ಮಿನಮ್ ಗ್ರಾಂಡಿಫ್ಲೋರಮ್ : ಇದು ಕೂಡ ಆಸರೆಗಳನ್ನು ಅವಲಂಬಿಸಿ ಸುತ್ತಿಕೊಂಡು ಬೆಳೆಯುವ ದೊಡ್ಡ ಪೊದೆ ಜಾತಿ. ಅಜ್ಜಿಗೆ, ಜಾತಿಮಲ್ಲಿಗೆ ಪರ್ಯಾಯ ನಾಮಗಳು. ವಾಯವ್ಯ ಹಿಮಾಲಯ ಇದರ ಮೂಲನೆಲೆ. ಭಾರತದ ವಿವಿಧ ಭಾಗಗಳಲ್ಲೂ ಯೂರೊಪ್ ಮತ್ತು ಮೆಡಿಟರೇನಿಯನ್ ಪ್ರದೇಶದ ವಿವಿಧ ದೇಶಗಳಲ್ಲೂ ಇದನ್ನು ವ್ಯಾಪಕವಾಗಿ ಕೃಷಿ ಮಾಡಲಾಗಿದೆ. ಉತ್ತರ ಪ್ರದೇಶದ ಘಾಜಿಪುರ, ಫರೂಕಾಬಾದ್, ಬಲಿಯ ಜಿಲ್ಲೆಯ ಸಿಕಂದರ್‍ಪುರ, ಜೋನ್‍ಪುರ ಇದರ ಬೇಸಾಯಕ್ಕೆ ಹೆಸರುವಾಸಿಯಾಗಿವೆ. ಫ್ರಾನ್ಸಿನ ಗ್ರಾಸ್, ಇಟಲಿಯ ಸಿಸಿಲಿ ಹಾಗೂ ಕೆಲಬ್ರಿಯಗಳಲ್ಲಿ ಬೇಸಾಯದಲ್ಲಿರುವ ಮಲ್ಲಿಗೆಗಳ ಪೈಕಿ ಇದೇ ಮುಖ್ಯವಾದ್ದು. ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್, ಸಿರಿಯ, ಆಲ್ಜೀರಿಯ ಮತ್ತು ಮೊರಕೊಗಳಲ್ಲಿ ಜಾಜಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲಾಗುತ್ತಿದೆ. ಇದು ನೋಡಲು ಸಣ್ಣ ಜಾಜಿ ಗಿಡದಂತೆಯೇ ಇದೆಯಾಗಿ ಕೆಲವರು ಜಾಜಿಯನ್ನು ಜಾಸ್ಮಿನಮ್ ಅಫಿಸಿನೇಲ್ ಪ್ರಭೇದದ ಒಂದು ರೂಪ ಎಂದು ಅಭಿಪ್ರಾಯಪಡುತ್ತಾರೆ. ಆದರೆ ಹೆಚ್ಚು ಸುಪುಷ್ಟ ಬೆಳವಣಿಗೆ, ಎಲೆಯಲ್ಲಿ ಹೆಚ್ಚು ಸಂಖ್ಯೆಯ ಪತ್ರಕಗಳನ್ನು (7-11) ಪಡೆದಿರುವುದು, ಹೂಮಂಜರಿಯ ಆಕಾರ ಹಾಗೂ ಗಾತ್ರ ಭಿನ್ನತೆ ಮುಂತಾದ ಲಕ್ಷಣಗಳಿಂದ ಇದು ಸಣ್ಣ ಜಾಜಿಗಿಂತ ಬೇರೆಯಾಗಿದೆ. ಅಂತೆಯೇ ಇದರ ಹೂವಿನಲ್ಲಿ ದಳ ಹಾಗೂ ನಿದಳ ಪುಂಜಗಳು ತಲಾ ಐದು ಹಾಳೆಗಳನ್ನು ಪಡೆದಿವೆ.

ಜಾಜಿಗೆ ಔಷಧೀಯ ಗುಣಗಳೂ ಉಂಟು. ಇದರ ಎಲೆಗಳಿಗೆ ಪ್ರತಿಬಂಧಕ ಗುಣ ಇದೆ. ಬೇರನ್ನು ಗಜಕರ್ಣದ ಚಿಕಿತ್ಸೆಯಲ್ಲಿ ಬಳಸುವರೆನ್ನಲಾಗಿದೆ. ಬಾಯ ವ್ರಣಗಳ ನಿವಾರಣೆಗೆ ಎಲೆಗಳನ್ನು ಅಗಿಯುವುದಿದೆ. ಎಲೆಗಳ ತಾಜಾರಸ ಕಾಲಿನ ಆಣಿಗಳಿಗೆ ಒಳ್ಳೆಯ ಮದ್ದು. ಇಡೀ ಗಿಡ ಜಂತು ನಿವಾರಕ, ಮೂತ್ರೋತ್ತೇಜಕ ಎಂದು ಹೇಳಲಾಗಿದೆ. ಇದರ ಎಣ್ಣೆ ಹಾಗೂ ಅತ್ತರುಗಳು ಚರ್ಮರೋಗಗಳಿಗೂ ತಲೆನೋವು ಮತ್ತು ಕಣ್ಣು ಬೇನಿಗಳಿಗೂ ತಂಪುಕಾರಕವೆನಿಸಿವೆ.

3 ದುಂಡುಮಲ್ಲಿಗೆ (ಅರೇಬಿಯನ್ ಜಾಸ್ಮಿನ್, ಟಸ್ಕನ್ ಜಾಸ್ಮಿನ್, ಜಾಸ್ಮಿನಮ್ ಸಾಂಬಾಕ್): ಹೆಚ್ಚು ಕಡಿಮೆ ಕೃಷಿಯಲ್ಲಿ ಮಾತ್ರ ಕಾಣದೊರೆಯುವ ಪೊದೆ ಜಾತಿಯ ಮಲ್ಲಿಗೆ. ಭಾರತಾದ್ಯಂತ ಇದರ ಬೇಸಾಯ ಉಂಟು. ಎಲೆಗಳು ದೀರ್ಘವತ್ತಾಕಾರ ಇಲ್ಲವೆ ಅಂಡಾಕಾರದವು. ನುಣುಪಾದ ಅಲಗುಳ್ಳವು, ಅಭಿಮುಖ ಅಥವಾ ಸುತ್ತು ಮಾದರಿಯಲ್ಲಿ ಜೋಡಣಿಗೊಂಡಿವೆ. ಹೂಗಳು ಬಿಳಿ ಬಣ್ಣದವೂ ತುಂಬ ಪರಿಮಳ ಭರಿತವಾದವು ಆಗಿವೆ; ಒಂಟಿಯಾಗಿ ಇಲ್ಲವೆ ತಲಾ ಮೂರು ಹೂಗಳ ಸೀಮಾಕ್ಷಿ ಗೊಂಚಲುಗಳಾಗಿ ಅರಳುವುವು. ದಳಗಳು ಒಂಟಿ ಸುತ್ತಿನಲ್ಲಿರಬಹುದು ಅಥವಾ ಅನೇಕ ಸುತ್ತುಗಳಲ್ಲಿರಬಹುದು. 
	ಇದು ಬಲುಹಿಂದಿನಿಂದ ಕೃಷಿಯಲ್ಲಿದ್ದು ಹಲವಾರು ಬಗೆಗಳನ್ನು ಒಳಗೊಂಡಿದೆ. ಉದಾಹರಣೆಗೆ ಇರುವಂತಿಗೆ, ಸೂಜಿಮಲ್ಲಿಗೆ, ಏಳು ಸುತ್ತು ಮಲ್ಲಿಗೆ ಎಂಬ ಪ್ರಸಿದ್ಧ ಬಗೆಗಳೂ ದುಂಡುಮಲ್ಲಿಗೆಯ ವಿಭಿನ್ನರೂಪಗಳಾಗಿವೆ. ದುಂಡುಮಲ್ಲಿಗೆಯ ಬೆಳೆವಣಿಗೆಗೆ ಒಣಭೂಮಿ ಹಾಗೂ ನೇರ ಬಿಸಿಲು ಬಲು ಅನುಕೂಲ. ಬೇಸಿಗೆ ಮತ್ತು ಮಳೆಗಾಲದಲ್ಲಿ ಹೂ ಬಿಡುತ್ತದೆ. ಹೆಚ್ಚು ಹೂಬಿಡುವಂತೆ ಮಾಡಲು ಮೊಗ್ಗು ಕಚ್ಚುವುದಕ್ಕೆ ಮುನ್ನ ಎಲೆಗಳನ್ನೆಲ್ಲ ತೆಗೆದುಹಾಕುವುದು ಅಪೇಕ್ಷಣೀಯ. ಉತ್ತರಪ್ರದೇಶದ ಕನ್ರಜ್, ಜೋನ್‍ಪುರ, ಘಾಜಿಪುರ ಮತ್ತು ಸಿಕಂದರ್‍ಪುರಗಳಲ್ಲಿ ಇದನ್ನು ಬೃಹತ್ ಪ್ರಮಾಣದಲ್ಲಿ ಕೃಷಿಮಾಡಲಾಗುತ್ತದೆ. 

ಹಾರತುರಾಯಿಗಳಿಗೂ ಮುಡಿಯುವುದಕ್ಕೂ ಪೂಜೆಗೂ ಇದನ್ನು ಬಳಸುವರಲ್ಲದೆ ಸುಗಂಧದ್ರವ್ಯ ತಯಾರಿಕೆಗೂ ಇದು ಉಪಯೋಗವಾಗುತ್ತದೆ. ಚೀನಾದಲ್ಲಿ ಚಹಾ ಪಾನೀಯಕ್ಕೆ ಪರಿಮಳ ಊಡಲು ದುಂಡುಮಲ್ಲಿಗೆಯನ್ನು ಬಳಸುವರೆನ್ನಲಾಗಿದೆ. ಮಲಯದಲ್ಲಿ ಇದರ ಹೂವಿನ ಲೇಪವನ್ನು ತಲೆನೋವು ನಿವಾರಣೆಗೆ ಉಪಯೋಗಿಸುವರು. ಮುಖ ಹಾಗೂ ಕಣ್ಣುಗಳನ್ನು ತೊಳೆಯಲು ಇದರ ಹೂವಿನ ರಸ ಉತ್ತಮ. ಎಲೆಗಳ ಕಷಾಯ ಜ್ವರ, ಚರ್ಮಬೇನೆ, ವ್ರಣ ಚಿಕಿತ್ಸೆಗೆ ಬರುತ್ತದೆ.

4. ಸಣ್ಣ ಮೊಲ್ಲೆ (ಜಾಸ್ಮಿನಮ್ ಆರಿಕ್ಯುಲೇಟಮ್) : ವಸಂತ ಮೊಲ್ಲೆ, ಮಧ್ಯಾಹ್ನ ಮಲ್ಲಿಗೆ, ಕಾಡರಮಲ್ಲಿಗೆ ಎಂಬ ಹೆಸರುಗಳಿಂದ ಸಹ ಪ್ರಸಿದ್ಧವಾಗಿರುವ ಇದು ಅಗಲವಾಗಿ ಹರಡಿಕೊಂಡು ಬೆಳೆಯುವ ಪೊದೆ ಸಸ್ಯ.ದಕ್ಷಿಣ ಭಾರತದಲ್ಲೆಲ್ಲ ಕಾಣದೊರೆಯುವ ಇದನ್ನು ಉತ್ತರಪ್ರದೇಶ, ಬಿಹಾರ ಹಾಗೂ ಬಂಗಾಲಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೃಷಿಮಾಡಲಾಗುತ್ತದೆ. ಇದರ ಎಲೆಗಳು ಸರಳ ಬಗೆಯವು; ಬಲು ಅಪೂರ್ವವಾಗಿ ಮೂರು ಪತ್ರಕಗಳನ್ನು ಒಳಗೊಂಡ ಸಂಯುಕ್ತ ಬಗೆಯವಾಗಿರುವುದುಂಟು. ಆಗಲೂ ಮಧ್ಯದ ಪತ್ರವೇ ಪ್ರಧಾನವಾಗಿರುತ್ತದೆ. ಹೂಗಳು ಬಿಳಿಬಣ್ಣದವು; ಹಲವಾರು ಹೂಗಳ ಸೀಮಾಕ್ಷಿ ಮಂಜರಿಗಳಲ್ಲಿ ಜೋಡಣೆಗೊಂಡಿವೆ.

5. ಹಳದಿಮಲ್ಲಿಗೆ (ಯೆಲ್ಲೋ ಜಾಸ್ಮಿನ್,ಇಟಾಲಿಯನ್ ಜಾಸ್ಮಿನ್ ನೇಪಾಳ ಜಾಸ್ಮಿನ್, ಜಾಸ್ಮಿನಮ್ ಹ್ಯೂಮೈಲ್) : ಕಾಶ್ಮೀರದಿಂದ ನೇಪಾಳದವರೆಗೆ 3000 ಮೀ ಎತ್ತರದ ಹಿಮಾಲಯ ಪರ್ವತಶ್ರೇಣೆಯಲ್ಲೆಲ್ಲ ಕಾಣದೊರೆಯುತ್ತದೆ. ರಾಜಸ್ಥಾನದ ಆಬು ಬೆಟ್ಟ ಹಾಗೂ ದಕ್ಷಿಣ ಭಾರತದ ಬೆಟ್ಟಸೀಮೆಗಳಲ್ಲೂ ಉಂಟು. ಮೇಲ್ಮುಖವಾಗಿ ಹಬ್ಬಿ ಬೆಳೆಯುವ ಪೊದೆ ಜಾತಿ ಇದು. ಹೂಗಳು ಹಳದಿಬಣ್ಣದವು; ರೆಂಬೆಗಳು ತುದಿಯಲ್ಲಿ ಸ್ಥಿರವಾಗಿರುವ ಸೀಮಾಕ್ಷಿ ಮಂಜರಿಗಳಲ್ಲಿ ಅರಳುವುವು. ಡಾರ್ಜಿಲಿಂಗ್ ಸುತ್ತಣ ಪ್ರದೇಶಗಳಲ್ಲಿ ಈ ಜಾತಿಯದು ಹೆಚ್ಚು ಹುಲುಸಾಗಿ ಬೆಳೆಯುತ್ತಿದ್ದು ದೀರ್ಘಕಾಲ ಹೂ ಬಿಡುವುದಲ್ಲದೆ ಬೀಜಗಳನ್ನೂ ಉತ್ಪಾದಿಸುತ್ತದೆ. ಇದನ್ನು ಬೀಜ ಇಲ್ಲವೆ ಕಡ್ಡಿಗಳ ಮೂಲಕ ವೃದ್ಧಿಸಲಾಗುತ್ತದೆ. ಇದರ ಬೇರಿನಿಂದ ಹಳದಿ ರಂಗನ್ನು ತಯಾರಿಸುವುದಿದೆ. ಬೇರು ಗಜಕರ್ಣದ ಚಿಕಿತ್ಸೆಗೆ ಒಳ್ಳೆಯದೆನ್ನಲಾಗಿದೆ. ತೊಗಟೆಯ ರಸ ಮೊಳೆರೋಗದ ನಿವಾರಣೆಗೆ ಬಳಕೆಯಾಗುತ್ತದೆ.

ಕಾಡುಮಲ್ಲಿಗೆ ( ವೈಲ್ಡ್ ಜಾಸ್ಮಿನ್; ಜಾಸ್ಮಿನಮ್ ಆಂಗಸ್ಟಿಫೋಲಿಯಮ್) : ವನಮಲ್ಲಿಗೆ ಪರ್ಯಾಯನಾಮ.

ದಕ್ಷಿಣಭಾರತದ ಕೆಳಎತ್ತರದ ಗುಡ್ಡ ಪ್ರದೇಶಗಳಲ್ಲೆಲ್ಲ ಬೆಳೆಯುವ ಕಾಡುಜಾತಿ ಮಲ್ಲಿಗೆ. ಕೃಷಿ ಮಾಡಿ ಕೂಡ ಬೆಳೆಸಬಹುದು. ಎಂಥ ಮಣ್ಣಿನಲ್ಲಾದರೂ ಬೆಳೆಯುತ್ತದೆ. ಹಚ್ಚ ಹಸುರಾದ ಎಲೆಗಳು ಸಮೃದ್ಧವಾಗಿ ಅರಳುವ ಹೂಗಳಿಂದಾಗಿ ಇದು ಕಿಟಕಿ, ಚೌಕಟ್ಟು ಮುಂತಾದೆಡೆ ಹಬ್ಬಿಸಿ ಬೆಳೆಸಲು ಉತ್ತಮ ಬಗೆಯದೆನಿಸಿದೆ ಎಲೆಗಳು ಸರಳರೀತಿಯವು. ಹೂಬಿಳಿ ಬಣ್ಣದವು, ನಕ್ಷತ್ರದಾಕಾರವುಳ್ಳವು. ಒಂಟಿಯಾಗಿ ಅಥವಾ ತಲಾ ಮೂರು ಹೂವುಳ್ಳ ಮಂಜರಿಗಳಲ್ಲಿ ಅರಳುವುವು. ಹಂಬು ಮಲ್ಲಿಗೆ (ಟ್ರೀ ಜಾಸ್ಮಿನ್ ; ಜಾಸ್ಮಿನಮ್ ಆರ್ಬಾರೆಸೆನ್ಸ್) ; ಸುಮಾರು 1400 ಮೀ. ಎತ್ತರದ ವರೆಗಿನ ಬೆಟ್ಟಪ್ರದೇಶಗಳಲ್ಲಿ ಬೆಳೆಯುವ ಇದು ಉಪಹಿಮಾಲಯ ಶ್ರೇಣಿ, ಬಂಗಾಲ, ಒರಿಸ್ಸ, ಆಂಧ್ರದ ವಿಶಾಖಪಟ್ಟಣ ಜಿಲ್ಲೆ ಮುಂತಾದೆಡೆಗಳಲ್ಲಿ ಸಾಮಾನ್ಯ, ಎಲೆಗಳು ಸರಳರೀತಿಯವು, ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿವೆ. ಹೂಮಂಜರಿ ಸೀಮಾಕ್ಷಿ ಮಾದರಿಯದು, ಒಂದೊಂದು ಮಂಜರಿಯಲ್ಲಿ 15-20 ಅಚ್ಚಬಿಳಿಯ ಹಾಗೂ ಅತ್ಯಂತ್ಯ ಸುವಾಸನೆಯುಳ್ಳ ಹೂಗಳಿರುವುವು.

ಇದರ ಎಲೆಯ ರಸವನ್ನು ಬೆಳ್ಳುಳ್ಳಿ, ಮೆಣಸು ಮುಂತಾದವುಗಳೊಂದಿಗೆ ಸೇರಿಸಿ ವಮನಕಾರಿಯಾಗಿ ಬಳಸುವುದಿದೆ. ಎಲೆಗಳು ಪ್ರತಿಬಂಧಕ ಹಾಗೂ ರೋಚಕವೆಂದು ಹೆಸರಾಗಿವೆ. ಬರಗಾಲದಲ್ಲಿ ಇದರ ಬೀಜಗಳನ್ನು ತಿನ್ನುವುದಿದೆ.

ಕಾಕಡ (ಡೌನಿಜಾಸ್ಮಿನ್, ಜಾಸ್ಮಿನಮ್ ಮಲ್ಟಿಫ್ಲೋರಮ್ ಅಥವಾ ಜಾ.ಪ್ಯೂಬೆಸೆನ್ಸ್): ಭಾರತಾದ್ಯಂತ ಕಾಣದೊರೆಯುವ ಮಲ್ಲಿಗೆ ಜಾತಿ ಇದು. ಕುರುಚು ಪೊದೆಯ ರೂಪದಲ್ಲಿ ಹರಡಿಕೊಂಡು ಬೆಳೆಯುತ್ತದೆ. ವರ್ಷವಿಡೀ ಇದರಲ್ಲಿ ಹೂವಿರುವುದಾದರೂ ಚಳಿಗಾಲದಲ್ಲಿ ಹೆಚ್ಚು ಹೂಬಿಡುತ್ತದೆ. ಹೂಗಳ ಬಣ್ಣ ಅಚ್ಚ ಬಿಳಿ. ಆದರೆ ಸುವಾಸನೆ ಇಲ್ಲ. ಅಲಂಕಾರಕ್ಕಾಗಿ ಬೆಳೆಸಲು ಈ ಜಾತಿ ಉತ್ತಮವೆನಿಸುತ್ತದೆ.

ನಿತ್ಯಮಲ್ಲಿಗೆ (ಜಾಸ್ಮಿನಮ್ ಫ್ಲೆಕ್ಸ್ಲೆಲ್) : ಅಸ್ಸಾಮಿನ ಹಾಗೂ ದಕ್ಷಿಣ ಭಾರತದ ಮೆೃದಾನದಿಂದ ಹಿಡಿದು ಸು.1500 ಮೀ ಎತ್ತರದ ಪ್ರದೇಶಗಳಲ್ಲಿ ಸಾಮಾನ್ಯ .ಹಂಬಿನ ರೂಪದಲ್ಲಿ ಬೆಳೆಯುತ್ತದೆ. ಎಲೆಗಳು ಸಂಯುಕ್ತ ರೀತಿಯವು; ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿವೆ. ಒಂದೊಂದರಲ್ಲೂ 3 ಪತ್ರಕಗಳಿದ್ದು ತುದಿಯಲ್ಲಿರುವ ಪತ್ರಕ ಉಳಿದವಕ್ಕಿಂತ ದೊಡ್ಡದಾಗಿರುತ್ತದೆ. ಹೂಗಳು ಸೀಮಾಕ್ಷಿ ರೀತಿಯ ಮಂಜರಿಗಳಲ್ಲಿ ಅರಳುವುವು. ದಳಗಳು ಚೂಪು ತುದಿಯುಳ್ಳವು. ಇದು ಸಹ ವರ್ಷವಿಡೀ ಹೂಬಿಡುವುದಾದರೂ ಚಳಿಗಾಲದಲ್ಲಿ ಹೂಗಳ ಸಮೃದ್ಧಿ ಹೆಚ್ಚು.

ಮೇಲೆ ಹೇಳಿದ ಮುಖ್ಯ ಬಗೆಗಳಲ್ಲದೇ ಜಾ. ರಾಟ್ಲೆರಿಯಾನಂ (ವನ ಮಲ್ಲಿಗೆ) , ಜಾ. ನ್ಯೂಡಿಫ್ಲೋರಮ್ .ಜಾ. ಓರೇಟಿಸಿಮ, ಜಾ. ಮೆಸ್ನಿನಿಯೆ (ಪ್ರಿಮ್‍ರೋಸ್ ಮಲ್ಲಿಗೆ) ಜಾ. ಮಲಬಾರಿಕಮ್. ಜಾ ಪ್ಯಾನಿಕ್ಯುಲೇಟಮ್, ಜಾ. ರಿಚಿಯೆ, ಜಾ. ಸ್ಕಾಂಡೆನ್ಸ್ ಎಂದು ಮುಂತಾಗಿ ಇನ್ನೂ ಹಲವಾರು ಜಾತಿ ಮಲ್ಲಿಗೆಗಳುಂಟು. ಇವುಗಳ ಶಾಸ್ತ್ರೀಯ ಅಧ್ಯಯನ ಇನ್ನೂ ಆಗಬೇಕಾಗಿದೆ. (ಎಂ.ಎಚ್.ಎಂ;ಎಸ್.ಐ.ಎಚ್.;ಡಿ.ಜಿ.ಎಸ್.) (ಪರಿಷ್ಕರಣೆ : ಕೆ ಬಿ ಸದಾನಂದ)