ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಳೆಮರ

ವಿಕಿಸೋರ್ಸ್ದಿಂದ

ಮಳೆಮರ ರಸ್ತೆಬದಿಗಳಲ್ಲಿ ಅಲಂಕಾರಕ್ಕಾಗಿಯೂ ನೆರಳಿಗಾಗಿಯೂ ಬೆಳಸಲಾಗುವ ಮರ (ರೇನ್ ಟ್ರೀ). ಮೈಮಸೇಸೀ ಕುಟುಂಬಕ್ಕೆ ಸೇರಿದೆ. ಸಾಮಾನಿಯ ಸಾಮಾನ್ ಅಥವಾ ಎಂಟರೊಲೋಬಿಯಮ್ ಸಾಮಾನ್ ಇದರ ವೈಜ್ಞಾನಿಕ ಹೆಸರು, ಛತ್ರಿಮರವೆಂಬ ಹೆಸರೂ ಇದಕ್ಕಿದೆ. ಜಾಲಿ, ಚುಜ್ಜಲು, ಬಾಗೆ, ಬಿಲ್ವಾರ ಮುಂತಾದವುಗಳ ಹತ್ತಿರ ಸಂಬಂಧಿಯಾದ ಇದು ಅವುಗಳಂತೆಯೇ ಉಷ್ಣವಲಯದ ಹಲವಡೆಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.

20-30 ಮೀ ಎತ್ತರಕ್ಕೆ ಬೆಳೆಯುವ ಪರ್ಣಪಾತಿಮರ. ಒಟ್ಟು ಗಾತ್ರಕ್ಕೆ ಹೋಲಿಸಿದರೆ ಕೊಂಚ ಚಿಕ್ಕದಾಗಿ ಕಾಣುವ ಬೊಡ್ಡೆ ಮತ್ತು ವಿಶಾಲವಾಗಿ ಹರಡಿ ಕೊಂಡಿರುವ ಹಂದದಿಂದಾಗಿ ಮರ ಚೆಲುವಾಗಿ ಕಾಣುತ್ತದೆ. ಎಲೆಗಳು ದ್ವಿಪಿಚ್ಛಕ ಸಂಯುಕ್ತ ಬಗೆಯವು. ಒಂದೊಂದು ಎಲೆಯಲ್ಲೂ ಅಂಡಾಕಾರದ ಅನೇಕ ಕಿರು ಎಲೆಗಳುಂಟು, ಕಿರುಎಲೆಗಳ ಮೇಲ್ಮೈ ನಯಹೊಳಪಿನಿಂದ ಕೂಡಿದೆಯಾದರೆ, ತಳಭಾಗ ನವುರಿನಿಂದ ಕೂಡಿದೆ. ರಾತ್ರಿ ವೇಳೆಯಲ್ಲೂ ಮಳೆಬೀಳುವ ಸೂಚನೆ ಕಂಡುಬಂದಾಗಲೂ ಕಿರುಎಲೆಗಳು ಮಡಿಚಿಕೊಂಡು ಬಾಗುತ್ತವೆ. ಇವುಗಳ ಬಣ್ಣ ನಸುಗೆಂಪು ಮಿಶ್ರಿತ ಹಸುರು. ಕಾಯಿಗಳು 15-20 ಸೆಂಮೀ ಉದ್ದದ ಮತ್ತು 2 ಸೆಂಮೀ ಅಗಲದ ಹಲ್ಲೆಗಳಂತಿವೆ. ಒಳಗೆ ಸಿಹಿಯಾದ ತಿರುಳೂ ಅದರೊಳಗೆ ಹುದುಗಿರುವ 10-12 ಬೀಜಗಳೂ ಉಂಟು.

ಮಳೆಮರವನ್ನು ಬೀಜ ಇಲ್ಲವೆ ಗೆಲ್ಲುಗಳ ಮೂಲಕ, ವೃದ್ಧಿಸಲಾಗುತ್ತದೆ. ಉಷ್ಣತೆ ಮತ್ತು ಆದ್ರ್ರತೆ ಹೆಚ್ಚಾಗಿರುವ ತಾಣಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕತ್ತರಿಸಿದರೆ ಹುಲುಸಾಗಿ ಚಿಗುರೊಡೆಯುವ ಸ್ವಭಾವ ಇದರದು. ಇದರ ಸೊಪ್ಪು ಮತ್ತು ಕಾಯಿಗಳಲ್ಲಿ ಹೆಚ್ಚು ಮೊತ್ತದ ಪೌಷ್ಟಿಕಾಂಶಗಳೂ ಅಪೇಕ್ಷಣೀಯ ರುಚಿಯೂ ಇದೆಯಾಗಿ ದನಗಳಿಗೆ ಕುದುರೆಗಳಿಗೆ ಇವು ಒಳ್ಳೆಯ ಮೇವು ಎನಿಸಿವೆ. ಕರಾವಿನ ದನಗಳಿಗೆ ಕಾಯಿಗಳನ್ನು ತಿನಿಸಿದರೆ ಹಾಲಿನ ಮೊತ್ತ ಹೆಚ್ಚುವುದೆಂದು ಹೇಳಲಾಗಿದೆ. ತಾಜಾ ಮಾತ್ರವಾಗಿ ಅಲ್ಲದೆ ಕಾಯಿಗಳನ್ನು ಒಣಗಿಸಿ ಹಲವುಕಾಲ ಸಂಗ್ರಹಿಸಿಟ್ಟು ದನಗಳಿಗೆ ಕೊಡಬಹುದು. ಕಾಯಿಯ ತಿರುಳಿನಿಂದ ಆಲ್ಕೊಹಾಲನ್ನು ತಯಾರಿಸಬಹುದು. ಮಳೆಮರದ ಕಾಂಡದಿಂದ ಕೆಳದರ್ಜೆಯ ಗೋಂದನ್ನು ತಯಾರಿಸುವುದಿದೆ. ಇದರ ಚೌಬೀನೆ ಹಗುರ ಮತ್ತು ಮೆತು ತೆರನಾದುದು ಇದರಿಂದ ಪೀಠೋಪಕರಣಗಳನ್ನು ತಯಾರಿಸಬಹುದಾದರೂ ಈ ತೆರನ ಬಳಕೆ ಕಡಿಮೆ. ಉರುವಲಾಗಿ ಕೂಡ ಬಳಕೆಯಲ್ಲಿಲ್ಲ. ದಕ್ಷಿಣ ಭಾರತ ಹಾಗೂ ಬರ್ಮದ ಹಲವೆಡೆಗಳಲ್ಲಿ ಅರಗು ಕೀಟಗಳಿಗೆ ಆಶ್ರಯದಾತವಾಗಿದೆಯಾದರೂ ಇದರಿಂದ ಲಭಿಸುವ ಅರಗು ಉತ್ತಮ ಬಗೆಯದಲ್ಲ.

ಮ್ಯಾಲಗ್ಯಾಸೀ, ಉಗಾಂಡ, ಇಂಡೋನೇಷ್ಯ ಮುಂತಾದಡೆಗಳಲ್ಲಿ ಕಾಫಿ, ಕೊಕೊ, ವ್ಯಾನಿಲ, ಪಚೌಲಿ ಮುಂತಾದ ವಾಣಿಜ್ಯ ಬೆಳೆಗಳ ತೋಟಗಳಲ್ಲಿ ನೆರಳು ನೀಡುವ ಮರವಾಗಿ ಮಳೆಮರವನ್ನು ಬೆಳಸಲಾಗುತ್ತದೆ.

(ಡಿ.ಜಿ.ಎಸ್.)

(ಪರಿಷ್ಕರಣೆ : ಕೆ ಬಿ ಸದಾನಂದ)