ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಸೂರ ಬೇಳೆ

ವಿಕಿಸೋರ್ಸ್ದಿಂದ

ಮಸೂರ ಬೇಳೆ ಫ್ಯಾಬೇಸೀ ಕುಟುಂಬದ ಪ್ಯಾಪಿಲಿಯೊನಾಯ್ಡೀ ಉಪಕುಟುಂಬಕ್ಕೆ ಸೇರಿದ ದ್ವಿದಳಧಾನ್ಯ ಸಸ್ಯ (ಲೆಂಟಲ್). ಲೆನ್ಸ್ ಎಸ್ಕ್ಯುಲೆಂಟ ಸಸ್ಯವೈಜ್ಞಾನಿಕ ಹೆಸರು. ಆಹಾರ ಬೆಳೆಯಾಗಿ ಪ್ರಸಿದ್ಧವಾಗಿದೆ. ಚನ್ನಂಗಿ ಬೇಳೆ ಪರ್ಯಾಯ ನಾಮ. ಇದರ ಮೂಲಸ್ಥಾನ ದಕ್ಷಿಣ ಮತ್ತು ಪಶ್ಚಿಮ ಏಷ್ಯ ಎನ್ನಲಾಗಿದೆ. ಗ್ರೀಸ್ ಮತ್ತು ಈಜಿಪ್ಟ್ ದೇಶಗಳಲ್ಲೂ ಈ ಬೆಳೆ ಬಳಕೆಯಲ್ಲಿದೆ. ಲೆಂಟಲ್ ಎನ್ನುವ ಪದ ಬೈಬಲ್‍ನಲ್ಲೂ ಉಲ್ಲೇಖಿತವಾಗಿದೆ. ಇದರ ಕಾಳುಗಳನ್ನು ಮಾಂಸಾಹಾರದ ಬದಲಾಗಿ ಕ್ಯಾಥೊಲಿಕ್ ದೇಶಗಳಲ್ಲಿ ಲೆಂಟ್ ಅವಧಿಯಲ್ಲಿ ಉಪಯೋಗಿಸುತ್ತಾರೆ.

ಭಾರತಕ್ಕೂ ಇದು ಹೊಸದಲ್ಲ. ಉತ್ತರ ಭಾರತದಲ್ಲಿ ಇದು ಹೆಚ್ಚು ಪ್ರಸಿದ್ಧ. ಇದರ ಕಾಳಿನ ಸಾರು ಬಲುರುಚಿ ಎನ್ನಲಾಗಿದೆ. ಹಿಟ್ಟಿನ ಜೊತೆ ಅಥವಾ ರೊಟ್ಟಿಯ ಜೊತೆ ಉಪಯೋಗಿಸುತ್ತಾರೆ. ಮಸೂರಬೇಳೆ ಚಳಿಗಾಲದ ಬೆಳೆ. ಮೂರು ತಿಂಗಳೊಳಗೆ ಫಲ ಕೊಡುತ್ತದೆ. ಇದರಲ್ಲಿ 58% ಪಿಷ್ಠ 25% ಪ್ರೋಟೀನ್, 1-5% ಕೊಬ್ಬು, ಮತ್ತು ಜೀವಸತ್ತ್ವ ಇವೆ. ಅಲ್ಲದೇ ಇದು ಜೀರ್ಣಕಾರಿ ಕೂಡ. ಹೀಗಾಗಿ ಇದರ ಬಳಕೆ ಹೆಚ್ಚು. ಮೊಳಕೆಯೊಡೆದಿರುವ ಕಾಳುಗಳಲ್ಲಿ ಜೀವಸತ್ತ್ವಗಳ ಮೊತ್ತ ಇನ್ನೂ ಅಧಿಕ.

ಇದು ಜಾನುವಾರುಗಳಿಗೆ ಒಳ್ಳೆಯ ಮೇವು. ಗಿಡದ ಬೇರಿನ ಗಂಟುಗಳಲ್ಲಿ ಬ್ಯಾಕ್ಟೀರಿಯಗಳು ಇದ್ದು ವಾತಾವರಣದ ನೈಟ್ರೊಜನ್ನನ್ನು ಹಿಡಿದು ಸ್ಥಿರೀಕರಿಸುವ ಸಾಮಥ್ರ್ಯ ಒದಗಿಸಿವೆ. ಇದರಿಂದ ಇತದ ಬೆಳೆಗಳನ್ನು ಸಾಗುವಳಿ ಮಾಡುವ ಹೊಲಗಳಲ್ಲಿ ಮಧ್ಯೆ ಮಧ್ಯೆ ಇದನ್ನು ಬೆಳೆಸುವುದಿದೆ.

ಒಂದು ಹೆಕ್ಟೇರಿಗೆ ಸಾಧಾರಣವಾಗಿ 450-900 ಕೆಜಿ. ಇಳುವರಿ ಪಡೆಯಬಹುದು. (ಟಿ. ಎಸ್ ಎ.) (ಪರಿಷ್ಕರಣೆ : ಕೆ ಬಿ ಸದಾನಂದ)