ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಂಬಹಾವು

ವಿಕಿಸೋರ್ಸ್ದಿಂದ

ಮಾಂಬಹಾವು ಎಲಾಪಿಡೀ ಕುಟುಂಬಕ್ಕೆ ಸೇರಿದ ಆಫ್ರಿಕದ ವಿಷಸರ್ಪ. ಇದರಲ್ಲಿ ಡೆಂಡ್ರಾಸ್ಪಸ್ ಪಾಲಿಲೆಪಿಸ್ (ಕರಿಯ ಮಾಂಬ) ಮತ್ತು ಡೆಂ.ಆಗಸ್ಟಿಸೆಪ್ಸ್ (ಹಸುರು ಮಾಂಬ) ಎಂಬ ಎರಡು ಪ್ರಭೇದಗಳಿವೆ. ಮೊದಲನೆಯದು ಸುಮಾರು ನಾಲ್ಕು ಮೀಟರುಗಳಷ್ಟು ಉದ್ದ ಬೆಳೆಯುವುದು. ಇದು ಆಫ್ರಿಕದ ವಿಷಸರ್ಪಗಳ ಪೈಕಿ ಅತ್ಯಂತ ದೊಡ್ಡದು. ತೆಳ್ಳಗೆ ಉದ್ದವಾಗಿರುವ ಇದಕ್ಕೆ ಕಿರಿದಾದ ತಲೆ, ನಯವಾದ ಫಲಕಗಳು ಇವೆ. ಕಣ್ಣುಗಳು ದೊಡ್ಡವು. ಪಾಪೆ ಗುಂಡಗಿದೆ. ಪಕ್ಷಿಗಳು, ಮರದಮೇಲೆ ವಾಸಿಸುವ ಹಲ್ಲಿಗಳು, ಅಳಿಲು ಮತ್ತು ಮರಗಪ್ಪೆಗಳು ಇದರ ಪ್ರಧಾನ ಆಹಾರ. ಇದರ ಹೆಸರು ಕರಿಯ ಮಾಂಬ ಎಂದಿದ್ದರೂ ವಾಸ್ತವವಾಗಿ ಇದು ಕಂದು ಇಲ್ಲವೆ ಬೂದು ಬಣ್ಣವಿರುತ್ತವೆ. ಹೆಣ್ಣು ಮಾಂಬ ಹತ್ತರಿಂದ ಹದಿನೈದು ಅಂಡಾಕಾರದ ಮತ್ತು ಬಿಳಿಬಣ್ಣದ ಮೊಟ್ಟೆಗಳನ್ನು ನೆಲದ ಗುಳಿಗಳಲ್ಲಿ ಅಥವಾ ಮರದ ಪೊಟರೆಗಳಲ್ಲಿ ಇಡುತ್ತದೆ. ಮೊಟ್ಟೆಗಳು ನೂರಿಪ್ಪತ್ತರಿಂದ ನೂರಮೂವತ್ತು ದಿನಗಳಲ್ಲಿ ಒಡೆಯುತ್ತವೆ.

ಸಹಾರ ಮರುಭೂಮಿಯ ದಕ್ಷಿಣಕ್ಕೆ ಆಫ್ರಿಕಾದ್ಯಂತ ಇವು ವ್ಯಾಪಕವಾಗಿ ಕಾಣಬರುತ್ತವೆ. ತ್ವರಿತಗತಿಯ ಚಲನೆ, ಕ್ಷಣಾರ್ಧದಲ್ಲಿ ಎರಗಿ ಕಚ್ಚುವ ಸ್ವಭಾವ, ತುಂಬ ತೀಕ್ಷ್ಣವಾದ ವಿಷ-ಇವುಗಳಿಂದಾಗಿ ಕರಿಯ ಮಾಂಬ ಬಲು ಅಪಾಯಕಾರಿ. ಜೊತೆಗೆ ಕೆಣಕಿದಾಗ ಆಕ್ರಮಣ ಮಾಡುತ್ತದೆ. ಇದಕ್ಕೆ ನಾಗರಹಾವಿಗಿರುವಂಥ ಹೆಡೆಯಿಲ್ಲವಾದರೂ ಕೋಪಬಂದಾಗ ಕತ್ತನ್ನು ಗಾಳಿಯಿಂದ ಹಿಗ್ಗಿಸಬಲ್ಲುದು. ಕಲ್ಲು ಪೊಟರೆಗಳಲ್ಲಿ ಇದರ ವಾಸ.

ಹಸುರು ಮಾಂಬ ಗಾತ್ರದಲ್ಲಿ ಕರಿಯದಕ್ಕಿಂತ ಚಿಕ್ಕದು. ಸಾಧಾರಣವಾಗಿ ಒಂದು ಮೀಟರ್ ಉದ್ದ ಇರುತ್ತದೆ. ಇದರ ಮೈಬಣ್ಣ ಉಜ್ವಲ ಹಸುರು. ಇದು ಸಾಮಾನ್ಯವಾಗಿ ಮರಗಿಡಗಳಲ್ಲಿ ವಾಸಿಸುತ್ತದೆ. ರೆಂಬೆಕೊಂಬೆಗಳನ್ನು ಹತ್ತಲು ಸಹಾಯಕವಾಗುವಂತೆ ಇದರ ಬಾಲಕ್ಕೆ ಸುರುಳಿಸುತ್ತಿಕೊಳ್ಳುವ ಸಾಮಥ್ರ್ಯ ಉಂಟು. ಕರಿಯ ಮಾಂಬಕ್ಕೆ ಹೋಲಿಸಿದರೆ ಇದು ಕಡಿಮೆ ಉಗ್ರ ಸ್ವಭಾವದ್ದು. (ಜಿ.ಕೆ.ಯು.) ಪರಿಷ್ಕರಣೆ ಡಿ.ಆರ್. ಪ್ರಹ್ಲಾದ್