ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾರ್ಮಸೆಟ್

ವಿಕಿಸೋರ್ಸ್ದಿಂದ

ಮಾರ್ಮಸೆಟ್ ಪ್ರೈಮೇಟ್ ಗಣದ ಕ್ಯಾಲಿತ್ರೈsಸಿಡೀ ಕುಟುಂಬಕ್ಕೆ ಸೇರಿದ, ಚಿಕ್ಕಗಾತ್ರದ ಹಾಗೂ ಉದ್ದಬಾಲ ಇರುವ ಹಲವಾರು ಬಗೆಯ ಕೋತಿಗಳಿಗೆ ಅನ್ವಯವಾಗುವ ಹೆಸರು. ಇವುಗಳ ತವರು ದಕ್ಷಿಣ ಹಾಗೂ ಮಧ್ಯ ಅಮೆರಿಕ. ಅಳಿಲಿನಂತೆ ಕಾಣುವ ವೃಕ್ಷವಾಸಿ ಪ್ರಾಣಿಗಳಿವು. ಮರಗಳಲ್ಲಿ ಚುರುಕಾದ ವಿಚಿತ್ರ ನುಲಿಚಲನೆಯಿಂದ ಓಡಾಡಿಕೊಂಡಿರುವುವು. ಹಗಲಿನಲ್ಲಿ ಚಟುವಟಿಕೆ ಹೆಚ್ಚು, ವೃಕ್ಷ ವಾಸಿಗಳಾದ್ದರಿಂದ ರೆಂಬೆಗಳನ್ನು ಹಿಡಿದು ಹತ್ತಲು ಅನುಕೂಲವಾಗುವಂತೆ ಕೈಕಾಲುಗಳ ಬೆರಳುಗಳಲ್ಲಿ (ಹೆಬ್ಬೆರಳು ವಿನಾ) ಉಗುರಿಗೆ ಬದಲಾಗಿ ಮೊನೆಯುಗುರುಗಳಿವೆ.

ಇವು ಮುಖ್ಯವಾಗಿ ಕೀಟಭಕ್ಷಿಗಳು. ಹಣ್ಣುಗಳನ್ನೂ ಇನ್ನಿತರ ಪ್ರಾಣಿಗಳನ್ನೂ ತಿನ್ನವುದುಂಟು. ಮಾರ್ಮಸೆಟ್ ಕೋತಿಗಳಲ್ಲಿ ಹಲವಾರು ಬಗೆಗಳಿವೆಯೆಂದು ಮೇಲೆ ಸೂಚಿಸಲಾಗಿದೆ. ಮುಖ್ಯವಾದವು ಇಂತಿವೆ: 1 ಕ್ಯಾಲಿತ್ರಿಕ್ಸ್ ಜಾತಿಯ ಪೆನಿಸಿಲೇಟ, ಕ್ರೈಸೊಲ್ಯೂಕ, ಅರ್ಜೆಂಟೇಟ, ಜ್ಯಾಕಸ್ ಪ್ರಭೇಧಗಳು. ಇವು ಬ್ರಜಿಲ್ ಹಾಗೂ ಬೊಲೀವಿಯಗಳ ಕಾಡುಗಳಲ್ಲಿ ಕಾಣದೊರೆಯುವುವು. 15-25 ಸೆಂಮೀ ಉದ್ದದ ಪ್ರಾಣಿಗಳಿವು; 25-40 ಸೆಂಮೀ ಉದ್ದದ ಬಾಲ ಉಂಟು. ಮೈಬಣ್ಣ ಬಿಳಿಯಿಂದ ಕಗ್ಗೆಂಪಿನವರೆಗೆ ವ್ಯತ್ಯಸ್ತ. ಕೆಲವಲ್ಲಿ ಬಾಲದ ಮೇಲೆ ಅಡ್ಡಪಟ್ಟೆಗಳಿರುವುದುಂಟು. ತುಪ್ಪುಳು ರೇಷ್ಮೆಯಂತೆ ಬಲುಮೃದು. ಕಿವಿಗಳ ತುದಿಯಲ್ಲಿ ರೋಮಗುಚ್ಛಗಳಿವೆ.

2 ಸೆಬುಯೆಲ ಪಿಗ್ಮಿಯ (ಪಿಗ್ಮಿ ಮಾರ್ಮಸೆಟ್): ಪೆರು ಹಾಗೂ ಎಕ್ವಡಾರುಗಳಲ್ಲಿ ಸಿಕ್ಕುತ್ತದೆ. ಬಲುಚಿಕ್ಕಗಾತ್ರದ್ದು, ಉದ್ದ ಕೇವಲ 14 ಸೆಂಮೀ. ವಯಸ್ಕ ಪ್ರಾಣಿ 90 ಗ್ರಾಮಿಗೂ ಹೆಚ್ಚು ಭಾರವಿರದು. ದೇಹದ ಬಣ್ಣ ಕಗ್ಗಂದು ಇಲ್ಲವೆ ಬೂದು.

ಮಾರ್ಮಸೆಟ್ಟುಗಳನ್ನು ಸಾಕುವುದು ಸುಲಭ. (ಬಿ.ಎಚ್.ಎಂ.) v