ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಲ್ವೇಸೀ

ವಿಕಿಸೋರ್ಸ್ದಿಂದ

ಮಾಲ್ವೇಸೀ ದ್ವಿದಳ ಸಸ್ಯವರ್ಗಕ್ಕೆ ಸೇರಿದ ಒಂದು ಕುಟುಂಬ. ಆರ್ಥಿಕ ಮಹತ್ತ್ವವುಳ್ಳ ಅನೇಕ ಸಸ್ಯಗಳನ್ನೊಳಗೊಂಡಿದೆ. ಇದು ಮಾಲ್‍ವೇಲೀಸ್ ಗಣಕ್ಕೆ ಸೇರಿದ್ದು, ಇದರಲ್ಲಿ ಸುಮಾರು 82 ಜಾತಿಗಳೂ 1500 ಪ್ರಭೇದಗಳೂ ಉಂಟು. ಇವುಗಳ ಪೈಕಿ ಹೆಚ್ಚಿನವು ಉಷ್ಣವಲಯಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತವೆ. ಶೀತವಲಯಕ್ಕಿಂತಲೂ ಉಷ್ಣವಲಯಗಳಲ್ಲಿ ಪ್ರಭೇದಗಳ ಸಂಖ್ಯೆ ಹೆಚ್ಚು. ಈ ಕುಟುಂಬದ ಅತ್ಯಂತ ಉಪಯುಕ್ತ ಸಸ್ಯ ಹತ್ತಿ. ಇದು ಗಾಸಿಪಿಯಮ್ ಜಾತಿಗೆ ಸೇರಿದೆ. ಬ್ರಿಟನ್ನಿನಲ್ಲಿ 3 ಜಾತಿಯ ಹತ್ತಿ ಗಿಡಗಳು ಬೆಳೆಯುತ್ತವೆ. ಮಾಲ್ವ (ಮ್ಯಾಲೋ) ಆಲ್ತಿಯ (ಮಾರ್ಶ್‍ಮ್ಯಾಲೋ) ಮತ್ತು ಲ್ಯಾವೆಟರ (ಟ್ರೀಮ್ಯಾಲೋ). ಸಂಯುಕ್ತಸಂಸ್ಥಾನಗಳಲ್ಲಿ ಸುಮಾರು 20 ಜಾತಿಯ ಹತ್ತಿಯ ಗಿಡಗಳುಂಟು. ಕುಟುಂಬದ ಬಹುಪಾಲು ಗಿಡಗಳು ಮರಗಳು; ಕೆಲವು ಮಾತ್ರ ಮೂಲಿಕೆಗಳು; ಉಷ್ಣವಲಯಗಳಲ್ಲಿ ಬೆಳೆಯುವಂಥವು ಪೊದೆಸಸ್ಯಗಳೊ ಮರಗಳೊ ಆಗಿರುವುವು. ಎಲೆಗಳು ಸರಳರೀತಿಯವು. ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ವೃಂತಪತ್ರಕಯುಕ್ತ. ಹೆಚ್ಚಾಗಿ ಹಸ್ತಾಕಾರದ ಎಲೆಗಳಾಗಿದ್ದು ಹಾಲೆಗಳನ್ನೊಳಗೊಂಡಿರಬಹುದು ಇಲ್ಲವೆ ವಿಭಜಿತವಾಗಿರಬಹುದು. ಸಾಮಾನ್ಯವಾಗಿ ವೃಂತಪತ್ರಕಗಳು ಬಹುಬೇಗ ಬಿದ್ದುಹೋಗುತ್ತವೆ. ಕಾಂಡ ನೇರವಾಗಿ ಬೆಳೆಯುವಂಥದು. ತೆಳು ಮತ್ತು ಮೃದು, ದಾರುಮಯ.

ಹೂಗಳು ಸಾಮಾನ್ಯವಾಗಿ ದ್ವಿಲಿಂಗಿಗಳು ಹಾಗೂ ಕ್ರಮಬದ್ಧವಾದುವು; ಪುಷ್ಪವೃಂತಪತ್ರಕಯುಕ್ತವಾಗಿದ್ದು ಎಲೆಯ ಕಕ್ಷಗಳಲ್ಲಿ ಒಂಟೊಂಟಿಯಾಗಿ ಅಥವಾ ಸಂಕೀರ್ಣರೂಪದ ಸೀಮಾಕ್ಷಿ ಮಾದರಿಯ ಗೊಂಚಲುಗಳಲ್ಲಿ ಸ್ಥಿತವಾಗಿರುವುವು. ಹೂ ಆರೀಯ ಸಮಾಂಗತೆ ಉಳ್ಳದ್ದು. ಪುಷ್ಪಪಾತ್ರೆಯ ಕೆಳಭಾಗದಲ್ಲಿ ಮೂರು ಅಥವಾ ಹೆಚ್ಚಿನ ಪುಷ್ಪವೃಂತಪತ್ರಕಗಳಿಂದ ರೂಪುಗೊಂಡಿರುವ ಅಧಿನಿದಳ ಪುಂಜ ಇರುತ್ತದೆ. ಪ್ರತಿಹೂವಿನಲ್ಲಿ 5 ನಿದಳಗಳು, 5 ದಳಗಳು, ಅಸಂಖ್ಯ ಪುಂಕೇಸರಗಳು ಒಂದರಿಂದ ಅನೇಕ ಕಾರ್ಪೆಲುಗಳು ಕೂಡಿ ಆಗಿರುವ ಉಚ್ಚಸ್ಥಾನದ ಅಂಡಾಶಯ ಇವೆ. ದಳಗಳು ದೊಡ್ಡ ಗಾತ್ರದವು, ಆಕರ್ಷಕ ಹಾಗೂ ಬಿಡಿಬಿಡಿಯಾಗಿರುವಂಥವು. ಪುಂಕೇಸರಗಳೂ ಏಕಸಂಲಗ್ನರೀತಿಯಲ್ಲಿ ಕೂಡಿಕೊಂಡಿವೆ. ಪುಂಕೇಸರಕೊಳವೆ ಬಹು ಉದ್ದವಾಗಿದ್ದು ಶಲಾಕೆಯನ್ನು ಸಂಪೂರ್ಣ ಸುತ್ತುವರಿದಿದೆ. ಪರಾಗಕೋಶ ಮೂತ್ರಪಿಂಡದಾಕಾರದ್ದು. ಕಾರ್ಪೆಲ್‍ಗಳ ಸಂಖ್ಯೆ 5. ಅವು ಸಂಯುಕ್ತ ಬಗೆಯವು. ಎಷ್ಟು ಕಾರ್ಪೆಲುಗಳಿವೆಯೋ ಅಷ್ಟೇ ಸಂಖ್ಯೆಯ ಕೋಣೆಗಳಿವೆ. ಅಂಡಕಗಳು ಅನೇಕ. ಅಂಡಕಧರ ಅಕ್ಷಸ್ಥಮಾದರಿಯದು. ಶಲಾಕೆ ಉದ್ದವಾಗಿದೆ. ಶಲಾಕಾಗ್ರ ಕಾರ್ಪೆಲ್‍ಗಳೆಷ್ಟಿವೆಯೋ ಅಷ್ಟೇ ಭಾಗಗಳಾಗಿ ವಿಭಾಗಗೊಂಡಿದೆ. ಫಲ ಸಾಮಾನ್ಯವಾಗಿ ಸಂಪುಟ ಮಾದರಿಯದು. ಇಲ್ಲವೆ ಹಲವಾರು ಏಕಬೀಜೀಯ ಭಾಗಗಳಾಗಿ ವಿಂಗಡಗೊಳ್ಳುವ ಸ್ಕೀಜೋಕಾರ್ಪ್ ಬಗೆಯದು, ಮಾಲ್ವ ಎಂಬ ಪ್ರಭೇದಗಳಲ್ಲಿ ಮಾತ್ರ ಬೇರೆ ಮಾದರಿಯದಾಗಿದೆ. ಸ್ಕೀಜೋಕಾರ್ಪ್ ರೀತಿಯ ಫಲಗಳ ಮೇಲಿನ ಭಿತ್ತಿಯಲ್ಲಿ ಕೊಕ್ಕೆಯಂಥ ಹೊರಬೆಳೆವಣಿಗೆಗಳಿರುವುದುಂಟು. ಅಥವಾ ಬೀಜಗಳನ್ನು ರೋಮದಂಥ ರಚನೆಗಳು ಆವರಿಸಿರುವುದುಂಟು. ಬೀಜಪ್ರಸಾರ ನಡೆಯುವುದು ಇವುಗಳ ಸಹಾಯದಿಂದ. ಉದಾಹರಣೆಗೆ ಹತ್ತಿಯ ಬೀಜ.

ಮಾಲ್ವೇಸೀ ಅನೇಕ ಉಪಯುಕ್ತ ಸಸ್ಯಗಳನ್ನು ಒಳಗೊಂಡಿದೆ. ಉದಾಹರಣೆಗಳು: 1 ಪುಂಡಿ ಅಥವಾ ಪುಂಡ್ರಿಕೆ (ಡೆಕನ್‍ಹೆಂಪ್)-ಇದನ್ನು ಡೆಕನ್ ಸೆಣಬು ಎಂದು ಕರೆಯುತ್ತಾರೆ. ಮದ್ರಾಸ್ ಸೆಣಬು (ಹೈಬಿಸ್ಕಸ್ ಕ್ಯಾನಬಿನಸ್). 2 ಹತ್ತಿ (ಗಾಸಿಪಿಯಮ್ ಹರ್ಬೇಸಿಯಮ್, ಗಾಸಿಪಿಯಮ್ ಹಿರ್ಸುಟಮ್) 3 ಬೆಂಡೆಕಾಯಿ (ಹೈಬಿಸ್ಕಸ್ ಎಸ್ಕುಲೆಂಟಸ್). 4 ಹೂವರಸಿ (ಥೆಸ್‍ಪೆಸಿಯ ಪಾಪುಲ್ನಿಯ). 5 ದಾಸವಾಳ (ಹೈಬಿಸ್ಕಸ್ ರೋಸಾ ಸೈನೆನ್‍ಸಿಸ್). 6 ದೊಡ್ಡಬಿಂದಿಗೆ (ಆಲ್ತಿಯ ರೋಸಿಯ), 7 ಸೈಡ ಜಾತಿಯ ಅಕ್ಯೂಟ ಕಾರ್ಡಿಫೋಲಿಯ, ರಾಂಬಿಫೋಲಿಯ ಪ್ರಭೇದಗಳು, 8 ಅಬ್ಯೂಟಿಲಾನ್ ಇಂಡಿಕಮ್, (ತುತ್ತಿ) 9 ಕಾಡುಬೆಂಡೆ (ಕೈಡಿಯ ಕ್ಯಲಿಸಿನ) ಮುಂತಾದವು. (ಎಂ.ಜೆ.)

(ಪರಿಷ್ಕರಣೆ : ಕೆ ಬಿ ಸದಾನಂದ)