ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಿಂಕ್

ವಿಕಿಸೋರ್ಸ್ದಿಂದ

ಮಿಂಕ್ - ಕಾರ್ನಿವೊರ ಗಣದ ಮಸ್ಟೆಲಿಡೀ ಕುಟುಂಬಕ್ಕೆ ಸೇರಿದ ಮಾಂಸಾಹಾರಿ ಸ್ತನಿ. ಮಸ್ಟೆಲ ವೈಸನ್ ಮತ್ತು ಮಸ್ಟೆಲ ಊಟ್ಟಿಯೋಲ ಎಂಬ ಎರಡು ಪ್ರಭೇದಗಳಿಗೆ ಈ ಹೆಸರು ಅನ್ವಯವಾಗುತ್ತದೆ. ಮೊದಲನೆಯದು ಉತ್ತರ ಅಮೆರಿಕದ ಕಾಡುಗಳಲ್ಲೂ ಎರಡನೆಯದು ಯೂರೊಪಿನಲ್ಲೂ ಏಷ್ಯದ ಉತ್ತರ ಭಾಗಗಳಲ್ಲೂ ವಾಸಿಸುತ್ತವೆ.

ವೀಸಲ್, ಫೆರೆಟ್, ಸ್ಟೋಟ್, ಪೋಲ್‍ಕ್ಯಾಟ್, ಮಾರ್ಟನ್, ಬ್ಯಾಜರ್ ಮುಂತಾದವುಗಳ ಸಂಬಂಧಿಯಾದ ಇದು ತನ್ನ ರೂಪದಲ್ಲೂ ಸ್ವಭಾವದಲ್ಲೂ ಚಟುವಟಿಕೆಯಲ್ಲೂ ಅವನ್ನೇ ಹೋಲುತ್ತದೆ. ತನ್ನ ಅಚ್ಚುಮೆಚ್ಚಿನ ಆಹಾರವಾದ ಮೀನು, ಏಡಿ, ಕಪ್ಪೆಗಳು ಸುಲಭವಾಗಿ ಸಿಕ್ಕುವಂಥ ನದಿ, ಕೆರೆಕೊಳ್ಳಗಳೇ ಇದರ ವಾಸಸ್ಧಾನ. ನೆಲದ ಮೇಲೆ ಹೇಗೋ ನೀರಿನಲ್ಲೂ ಹಾಗೆ ಚುರುಕಾಗಿ ಓಡಾಡಿಕೊಂಡಿರುತ್ತದೆ. ಅಮೆರಿಕದ ಮಿಂಕ್ 30-50 ಸೆಂಮೀ ಉದ್ದದ ಹಾಗೂ ಸುಮಾರು 1.5 ಕೆಜಿ ತೂಕದ ಪ್ರಾಣಿ ಸುಮಾರು 20 ಸೆಂಮೀ ಉದ್ದದ ಪೊದೆಯಂಥ ಬಾಲವೂ ಉಂಟು. ಯೂರೊಪಿನ ಮಿಂಕ್ ಕೊಂಚ ಚಿಕ್ಕಗಾತ್ರದ್ದು. ಮೋಟು ಕಾಲುಗಳು, ಉದ್ದ ಕತ್ತು, ಅಗಲ ಮೂತಿ, ಚಿಕ್ಕಗುಂಡನೆಯ ಕಿವಿಗಳು ಇತರ ಲಕ್ಷಣಗಳು. ಮೈಬಣ್ಣ ತಿಳಿಗಂದಿನಿಂದ ಗಾಢ ಚಾಕೊಲೆಟ್ ವರೆಗೆ ವ್ಯತ್ಯಾಸವಾಗುತ್ತದೆ. ಮೈಮೇಲೆ ದಟ್ಟ ಮೃದು ತುಪ್ಪಳೂ ಗಾಢವರ್ಣದ ಹೊಳೆಯುವ ಉದ್ದರೋಮಗಳೂ ಇವೆ. ಇದಕ್ಕೆ ಕಟುತೀಕ್ಷ್ಣ ಮತ್ತು ಅಸಹ್ಯ ವಾಸನೆಯುಂಟು.

ಜಲಪ್ರಾಣಿಗಳಲ್ಲದೆ ಇಲಿ, ಹಕ್ಕಿ ಮುಂತಾದ ನೆಲಪ್ರಾಣಿಗಳನ್ನು ಇದು ತಿನ್ನುವುದುಂಟು. ಇದರ ಚಟುವಟಿಕೆಯೆಲ್ಲ ಪ್ರಧಾನವಾಗಿ ರಾತ್ರಿವೇಳೆ.

ಮಿಂಕ್ ಒಂದು ಸೂಲಿಗೆ 4-10 ಮರಿಗಳನ್ನು ಈಯುತ್ತದೆ. ಮರಿಗಳು ಹುಟ್ಟುವ ಕಾಲ ವಸಂತ. ಕಲ್ಲುಪೊಟರೆಗಳಲ್ಲಿ, ಟೊಳ್ಳುದಿಮ್ಮಿಗಳಲ್ಲಿ ಇಲ್ಲವೆ ಬೇರುಗಳ ಸಂದುಗಳಲ್ಲಿ ಮರಿಗಳನ್ನು ಅಡಗಿಸಿಟ್ಟು ಪೋಷಿಸುತ್ತದೆ. ಲಿಂಕ್ಸ್, ಬಾಬ್‍ಕ್ಯಾಟ್, ನರಿ, ಗೂಬೆ ಹಾಗೂ ಮನುಷ್ಯ ಇದರ ಮುಖ್ಯ ಶತ್ರುಗಳು. ಮಿಂಕ್ ತುಪ್ಪಳು ಧರ್ಮ ಅತ್ಯಂತ ಜನಪ್ರಿಯ ಹಾಗೂ ಬೆಲೆಬಾಳುವ ವಸ್ತುವೆನಿಸಿದೆ. ಇದರಿಂದ ಅನೇಕ ತೆರನ ಉಡುಗೆಗಳನ್ನು ತಯಾರಿಸುವುದಿದೆ. ಕಾಡುಮಿಂಕ್‍ಗಳಿಂದ ಲಭಿಸುವ ತುಪ್ಪುಳು ಬೇಡಿಕೆಯನ್ನು ಈಡೇರಿಸಲು ಅಸಮರ್ಥವಾಗಿರುವುದರಿಂದ ಮಿಂಕ್‍ಗಳನ್ನು ಸಾಕುವ ವಿಶೇಷ ರೊಪ್ಪಗಳನ್ನೇ ಅಮೆರಿಕದಲ್ಲಿ ಸ್ಧಾಪಿಸಲಾಗಿದೆ. (ಪಿ.ಎಸ್.ಆರ್.)