ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಿಣುಕು ಹುಳು

ವಿಕಿಸೋರ್ಸ್ದಿಂದ

ಮಿಣುಕು ಹುಳು - ಕೋಲಿಯಾಪ್ಟರ ಗಣದ ಲ್ಯಾಂಪೈರಿಡೀ ಮತ್ತು ಇಲ್ಯಾಟರಿಡೀ ಕುಟುಂಬಕ್ಕೆ ಸೇರಿದ ಸುಮಾರು 1000ಕ್ಕೂ ಹೆಚ್ಚು ಬಗೆಯ ಕೀಟಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು (ಫೈರ್ ಫ್ಲ್ಯ). ಮಿಂಚುಹುಳು ಅಥವಾ ಮಿಂಚುದುಂಬಿ ಪರ್ಯಾಯನಾಮಗಳು. ರಾತ್ರಿಯ ವೇಳೆಗಳಲ್ಲಿ ವಿಶಿಷ್ಟ ತೆರನಾದ ಬೆಳಕನ್ನು ಸೂಸುತ್ತ ಮಿನುಗುವುದರಿಂದ ಇವಕ್ಕೆ ಈ ಹೆಸರು. ದುಂಬಿಗಳ (ಬೀಟಲ್ಸ್) ಹತ್ತಿರ ಸಂಬಂಧಿಗಳಿವು. ಪ್ರಪಂಚದ ಉಷ್ಣ ಹಾಗೂ ಉಪೋಷ್ಣ ವಲಯಗಳಲ್ಲಿ ಹೇರಳ ಸಂಖ್ಯೆಯಲ್ಲಿ ಕಾಣದೊರೆಯುತ್ತವೆ.

ಚಿಕ್ಕಗಾತ್ರದ ಇಲ್ಲವೆ ಮಧ್ಯಮ ಗಾತ್ರದ (ದೇಹದ ಉದ್ದ 10-18 ಮಿಮೀ) ನಿಶಾಚರಿ ಕೀಟಗಳಿವು. ದೇಹ ಚಪ್ಪಟೆಯಾಗಿದೆ. ಹೊರ ರೆಕ್ಕೆಗಳು (ಎಲಿಟ್ರ) ಕೊಂಚ ಮಿದುವಾಗಿರುವುವು. ಮೈ ಕಪ್ಪು, ಕಂದು, ಹಳದಿ, ಕೆಂಪು-ಹೀಗೆ ವಿಭಿನ್ನ ವರ್ಣದ್ದಾಗಿದೆ. ಉದರಭಾಗದಲ್ಲಿ ಬೆಳಕನ್ನು ಸೂಸುವ ಅಂಗಗಳುಂಟು. ಬಹುಪಾಲು ಪ್ರಭೇದಗಳಲ್ಲಿ ಹೆಣ್ಣುಗಂಡು ಕೀಟಗಳೆರಡರಲ್ಲೂ ರೆಕ್ಕೆಗಳಿವೆಯಾದರೆ ಇನ್ನು ಕೆಲವಲ್ಲಿ ಹೆಣ್ಣುಗಳು ರೆಕ್ಕೆರಹಿತವಾಗಿವೆ. ಇಂಥವು ಕೆಲವೊಮ್ಮೆ ಡಿಂಬಗಳಂತೆ (ಲಾರ್ವ) ಕಾಣುತ್ತವೆ.

ಮಿಣುಕು ಹುಳುಗಳ ಆಹಾರ ಎರೆಹುಳು, ಬಸವನಹುಳು, ಇನ್ನಿತರ ಕೀಟಗಳು ಇತ್ಯಾದಿ. ಆಹಾರಜೀವಿ ಜೀವಂತವಾಗಿರುವಾಗಲೇ ವಿಷ ದ್ರವವನ್ನು ಅದರೊಳಕ್ಕೆ ಚುಚ್ಚಿ ಸೇರಿಸಿ ಅದರಿಂದ ಅರೆಜೀರ್ಣವಾಗುವ ಆಹಾರವನ್ನು ಹೀರಿ ಸೇವಿಸುವುದು ಇವುಗಳ ಆಹಾರಸೇವನೆಯ ಕ್ರಮ. ಇವು ಸಾಮಾನ್ಯವಾಗಿ ಹಳ್ಳ, ನದಿ, ಚೌಗು ಮುಂತಾದ ತೇವಪೂರಿತ ನೆಲೆಗಳಲ್ಲಿ ವಾಸಿಸುವುವು. ಕೆಲವು ಬಗೆಗಳು ಸಸ್ಯಾಹಾರಿಗಳಾಗಿದ್ದು ಪರಾಗ ಇಲ್ಲವೆ ಮಧುವನ್ನು ಸೇವಿಸಿ ಬದುಕುವುವು.

ಮಿಣುಕು ಹುಳುಗಳು ಪ್ರಸಿದ್ಧವಾಗಿರುವುದು ತಾವು ಪ್ರದರ್ಶಿಸುವ ಜೈವಿಕ ಸ್ಫುರಸಂದೀಪ್ತಿಯಿಂದ (ಬಯೊಲೂಮಿನಿಸೆನ್ಸ್). ಇದೊಂದು ವಿಶೇಷ ಬಗೆಯ ಉತ್ಕರ್ಷಣಪೂರ್ಣ ರಾಸಾಯನಿಕ ಚತುವಟಿಕೆಯಾಗಿದ್ದು ಉದರ ಭಾಗದಲ್ಲಿ ಸ್ಥಿತವಾಗಿರುವ ಕೆಲವು ವಿಶೇಷ ಕೋಶಗಳಿಂದ ನಡೆಯುತ್ತದೆ. ಇವು ಮಾರ್ಪಾಟುಗೊಂಡ ಮೇದಸ್ಸು ಕೋಶಗಳು. ಇವುಗಳಲ್ಲಿ ಕೆಲವು ತೆರನ ಕಿಣ್ವಗಳಿದ್ದು ಇವು ಸಂದೀಪ್ತ ಕ್ರಿಯೆಯನ್ನು ವೇಗೋತ್ಕರ್ಷಗೊಳಿಸುವುವು. ಈ ಕೋಶಗಳಿಗೆ ಆಕ್ಸಿಜನ್ ಪೂರೈಸಲು ವಿಶೇಷ ಗಾಳಿ ಕೊಳವೆಗಳುಂಟು. ಇಡೀ ವಿದ್ಯಮಾನ ಮಿದುಳಿನ ನಿಯಂತ್ರಣಕ್ಕೊಳಪಟ್ಟಿದೆ. ಕಾಡಿನಲ್ಲೂ, ಗದ್ದೆ ಬಯಲಿನಲ್ಲೂ, ಚೌಗು ಪ್ರದೇಶಗಳಲ್ಲೂ ಒಂದು ನೆಲೆಯಲ್ಲಿ ವಾಸಿಸುವ ಮಿಣುಕುಹುಳುಗಳೆಲ್ಲ ಲಯಬದ್ಧವಾಗಿ ಒಟ್ಟಿಗೆ ಪ್ರದರ್ಶಿಸುವ ಈ ಸ್ಫುರಸಂದೀಪ್ತಿ ಅತ್ಯಂತ ಮನೋಹರವಾದ ನೈಸರ್ಗಿಕ ವಿದ್ಯಮಾನಗಳ ಪೈಕಿ ಒಂದೆನಿಸಿದ್ದು, ಇದರ ಬಗ್ಗೆ ಹಲವಾರು ಕಲ್ಪನೆಗಳು ಕತೆಗಳು ಮೂಡಲು ಕಾರಣವೆನಿಸಿದೆ.

ಮಿಣುಕುಹುಳುಗಳ ಪೈಕಿ ಅತ್ಯಂತ ಪ್ರಸಿದ್ಧವಾದ ಪ್ರಭೇದಗಳೆಂದರೆ ಲ್ಯಾಂಪೈರಿಡೀ ಕುಟುಂಬದ ಲ್ಯಾಂಪೈರಿಸ್ ನಾಕ್ಟಲ್ಯೂಕ, ಫಾಸ್ಫೀನಸ್, ಹೆಮಿಪ್ಟರಸ್, ಪೋಟಿನಸ್, ಪೋಟ್ಯೂರಿಸ್, ಫಾಸಿಸ್ ಸ್ಪೆಂಡಿಡ್ಯುಲ, ಲ್ಯಾಂಪ್ರೋಪೋರಸ್ ಟೆನಿಬ್ರೋಸಸ್ (ಇದು ಭಾರತ ಹಾಗೂ ಶ್ರೀಲಂಕಾಗಳಲ್ಲಿ ಕಾಣದೊರೆಯುತ್ತದೆ) ಹಾಗೂ ಇಲ್ಯಾಟರಿಡೀ ಕುಟುಂಬಕ್ಕೆ ಸೇರಿದ ಪೈರೊಪೋರಸ್ ಜಾತಿಯ ಪೆಲ್ಯೂಸೆನ್ಸ್, ಲೂಮಿನೋಸ, ನಾಕ್ಟಿಲ್ಯೂಕಸ್ ಮತ್ತು ಫಾಸ್ಫಾರೆಸೆನ್ಸ್ ಪ್ರಭೇದಗಳು. (ಎಸ್.ಎನ್.ಎಚ್.)