ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಿರಡಿ

ವಿಕಿಸೋರ್ಸ್ದಿಂದ

ಮಿರಡಿ - ಫ್ಲಕೂರ್ಶಿಯೇಸೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಪೊದೆ ಸಸ್ಯ. ಗೊರಜಿ, ಹಣ್ಣುಸಂಪಿಗೆ, ಉಬ್ಬು, ಹತ್ತರಿ ಮುಳ್ಳು ಮುಂತಾದವುಗಳಿಗೆ ಹತ್ತಿರ ಸಂಬಂಧಿಯಾದ ಇದು ಅವುಗಳಂತೆಯೇ ಖಾದ್ಯಯೋಗ್ಯ ಹಣ್ಣುಗಳನ್ನು ನೀಡುತ್ತದೆ. ಆದರೆ ಇದರ ಹಣ್ಣು ಅವುಗಳ ಹಣ್ಣಿನಷ್ಟು ರುಚಿಕರವಲ್ಲ. ಫ್ಲಕೂರ್ಶಿಯ ಸೆಪಿಯೇರಿಯ ಇದರ ಸಸ್ಯವೈಜ್ಞಾನಿಕ ಹೆಸರು. ಕುಮಾಂವ್, ಬಂಗಾಲ, ಬಿಹಾರ, ಒರಿಸ್ಸ ಹಾಗೂ ದಕ್ಷಿಣ ಭಾರತದ ಒಣಕಾಡುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತದೆ.

ಇದು ಹೆಚ್ಚು ಎತ್ತರಕ್ಕೆ ಬೆಳೆಯದ ದೃಢಕಾಯದ ಪೊದೆ. ಕಾಂಡದ ಮೇಲೆಲ್ಲ ಚೂಪಾದ ಬಿರುಸಾದ ಮುಳ್ಳುಗಳುಂಟು. ಮುಳ್ಳುಗಳು ಕೂಡ ಮಾರ್ಪಾಟುಗೊಂಡ ರೆಂಬೆಗಳಾಗಿದ್ದು ಇವುಗಳ ಮೇಲೆ ಎಲೆಗಳೂ ಹೂಗಳೂ ಗೊಂಚಲು ಗೊಂಚಲಾಗಿ ರೂಪುಗೊಳ್ಳುವುವು. ಹಣ್ಣುಗಳು ಗುಂಡಗೆ ಬಟಾಣಿಕಾಳಿನ ಗಾತ್ರಕ್ಕಿವೆ. ಇವು ಮಾಗಿದಾಗ ಕೆಂಪುಬಣ್ಣಕ್ಕೆ ತಿರುಗುವುವು.

ಮಿರಡಿ ಹಣ್ಣನ್ನು ತಿನ್ನುವುದಲ್ಲದೆ, ಸೊಪ್ಪನ್ನು ದನಕರುಗಳ ಮೇವಾಗಿ ಬಳಸುವುದಿದೆ. ಬೇಲಿಗಿಡವಾಗಿ ಕೂಡ ಬೆಳೆಸಲಾಗುತ್ತದೆ. ಇದರ ಚೌಬೀನೆ ಗಟ್ಟಿಯಾದುದೂ ಒತ್ತುಕಟ್ಟಾದ ರಚನೆಯುಳ್ಳದ್ದೂ ಆಗಿರುವುದರಿಂದ ಕೃಷಿ ಉಪಕರಣ, ತೊಲೆಗಳು, ಆಧಾರಕಂಬಗಳು, ಇದ್ದಿಲು ಮುಂತಾದ ಸಾಮಗ್ರಿಗಳ ತಯಾರಿಕೆಗೆ ಉಪಯುಕ್ತವೆನಿಸಿದೆ. ಇದರ ತೊಗಟೆಯನ್ನು ಎಳ್ಳೆಣ್ಣೆಯೊಂದಿಗೆ ಅರೆದು ಮಿಶ್ರಿಸಿ ತಯಾರಿಸಿದ ಲೇಪ ಸಂಧಿವಾತ ಮತ್ತು ಗಂಡಮಾಲೆಗೆ ಒಳ್ಳೆಯ ಔಷಧಿ ಎನ್ನಲಾಗಿದೆ.

(ಎಸ್‍ಐ.ಎಚ್.)