ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಿರ್ಟೇಸೀ

ವಿಕಿಸೋರ್ಸ್ದಿಂದ

ಮಿರ್ಟೇಸೀ - ಆರ್ಕಿಕ್ಲಾಮಿಡೀ ಗುಂಪಿನ ಮಿರ್ಟಿಫ್ಲೋರೀ ಗಣಕ್ಕೆ ಸೇರಿದ ದ್ವಿದಳ ಸಸ್ಯ ಕುಟುಂಬ. ನೇರಳೆ, ಸೀಬೆ, ಲವಂಗ, ನೀಲಗಿರಿತೈಲದ ಮರ ಮುಂತಾದ ಹಲವಾರು ಆರ್ಥಿಕಪ್ರಾಮುಖ್ಯದ ಉಪಯುಕ್ತ ಸಸ್ಯಗಳನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಈ ಕುಟುಂಬದಲ್ಲಿ 90 ಜಾತಿಗಳೂ 2,800 ಪ್ರಭೇದಗಳೂ ಉಂಟು. ಎಲ್ಲವೂ ಉಷ್ಣಪ್ರದೇಶ ವಾಸಿಗಳು. ಆಸ್ಟ್ರೇಲಿಯ ಮತ್ತು ಅಮೆರಿಕದ ಉಷ್ಣವಲಯ ಇವುಗಳ ವ್ಯಾಪ್ತಿಯ ಮುಖ್ಯ ಕೇಂದ್ರಗಳೆನಿಸಿವೆ. ಈ ಕುಟುಂಬಕ್ಕೆ ಸೇರಿದ ಸಸ್ಯಗಳಲ್ಲಿ ಬಹುಪಾಲು ಮರಗಳು ಮತ್ತು ಪೊದೆಗಳು, ಹೆಚ್ಚಿನ ಗಿಡಗಳಲ್ಲಿ ಎಲೆಗಳು ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ (ನೀಲಗಿರಿ ತೈಲದ ಮರದಲ್ಲಿ ಮಾತ್ರ ಪರ್ಯಾಯ ರೀತಿಯ ಜೋಡಣೆಯುಂಟು). ಎಲೆಗಳು ಸರಳ ಹಾಗೂ ನಿತ್ಯಹಸುರಾಗಿರುವುವು, ಎಲೆಯಂಚು ಏಕತ್ರ. ಎಲೆಗಳಲ್ಲಿ ತೈಲಗ್ರಂಥಿಗಳುಂಟು. ಕಾಂಡದ ತೊಗಟೆ ಪದರ ಪದರಗಳಾಗಿ ಸುಲಿದು ಬೀಳುತ್ತದೆ. ಹೂಗಳು ಉಭಯ ಲಿಂಗಿಗಳು. ಸೈಮ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪುಷ್ಪಪೀಠ ಹೆಚ್ಚು ಕಡಿಮೆ ಅಂಡಾಶಯದೊಂದಿಗೆ ಸೇರಿಕೊಂಡಿದೆ. ಪ್ರತಿಯೊಂದು ಹೂವಿನಲ್ಲಿ 4-5 ಪುಷ್ಪಪತ್ರಗಳೂ 4-5ದಳಗಳೂ ಅಸಂಖ್ಯ ಕೇಸರಗಳೂ ನೀಚಸ್ಥಾನದ ಅಂಡಾಶಯವೂ ಉಂಟು. ನೀಲಗಿರಿತೈಲದ ಮರದಲ್ಲಿ ಪುಷ್ಪಪತ್ರ ಒಂದು ತೆರನ ಟೊಪ್ಪಿಯಂತಿದ್ದು ಹೂ ಅರಳುವಾಗ ಬಿದ್ದು ಹೋಗುತ್ತದೆ. ಕೇಸರಗಳು ಬಿಡಿ ಬಿಡಿಯಾಗಿರಬಹುದು ಇಲ್ಲವೆ ಅನೇಕ ಕಟ್ಟುಗಳಾಗಿ ವಿಭಾಗವಾಗಿರಬಹುದು. ಫಲ ಬೆರಿ, ಸಂಪುಟ, ಅಷ್ಟಿಫಲ ಹೀಗೆ ವಿಭಿನ್ನ ತೆರನಾಗಿದೆ.

ಈ ಕುಟುಂಬ ಹಲವಾರು ಉಪಯುಕ್ತ ಸಸ್ಯಗಳನ್ನು ಒಳಗೊಂಡಿದೆ ಎಂದು ಮೇಲೆ ಹೇಳಿದೆ. ಉದಾಹರಣೆಗೆ ನೇರಳೆ (ಸಿಜಿಜಿಯಮ್ ಕ್ಯೂಮಿನಿ). ಸೀಬೆ (ಸೀಡಿಯಮ್ ಜಾತಿ) ಮೊದಲಾದವು ಖಾದ್ಯಯೋಗ್ಯ ಫಲಗಳನ್ನು ನೀಡುವುವಾದರೆ, ನೀಲಗಿರಿ ತೈಲದ ಮರ (ಯೂಕಲಿಪ್ಟಸ್) ಎಣ್ಣೆಗೆ ಪ್ರಸಿದ್ಧ. ಅಂತೆಯೇ ಲವಂಗ (ಸಿಜಿûಜಿಯಮ್ ಆರೋಮ್ಯಾಟಿಕಮ್) ಔಷಧಿಯಾಗಿ, ಸಂಬಾರ ಜಿನಸಾಗಿ ಹೆಸರುವಾಸಿ. ಮಿರ್ಟಸ್ ಕಮ್ಯೂನಿಸ್ ಮತ್ತು ಕ್ಯಾಲಿಸ್ಟೀಮಾನ್ ಲ್ಯಾನ್ಸಿಯೊಲೇಟಸ್ ಪ್ರಭೇದಗಳು ಅಲಂಕಾರ ಸಸ್ಯಗಳಾಗಿ ಜನಪ್ರಿಯ. (ಪಿ.ಕೆ.ಆರ್.ಜಿ.)