ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಿಲ್ಟನ್, ಡ್ರೈಡನ್

ವಿಕಿಸೋರ್ಸ್ದಿಂದ

17ನೆಯ ಶತಮಾನದ ಪ್ರಮುಖ ಕವಿಗಳು ಜಾನ್ ಮಿಲ್ಟನ್ ಮತ್ತು ಜಾನ್ ಡ್ರೈಡನ್. ಮಿಲ್ಟನ್ ಇಂಗ್ಲಿಷಿನ ಪ್ರಸಿದ್ಧ ಮಹಾಕಾವ್ಯಗಳಾದ ಪ್ಯಾರಡೈಸ್ ಲಾಸ್ಟ್ ಮತ್ತು ಪ್ಯಾರಡೈಸ್ ರೀಗೇನ್ಡ್ ಕೃತಿಗಳ ಕರ್ತೃ. ಇವಲ್ಲದೆ ಲಿಸಿಡಾಸ್, ಕೋಮಸ್ ಮುಂತಾದ ಕವನಗಳೂ ಸ್ಯಾಮ್ಸನ್ ಆಗೊನಿಸ್ಟಿಸ್ ಎಂಬ ನಾಟಕವೂ ಅವನವೇ. ಸಾನೆಟ್ ಜಾತಿಯ ಕವಿತೆಗಳಿಗೂ ಮಿಲ್ಟನ್ ಪ್ರಸಿದ್ಧನಾಗಿದ್ದಾನೆ. ಕಾವ್ಯದ ವಿಷಯ, ರೂಪ ಯಾವುದೇ ಆಗಿರಲಿ ಮಿಲ್ಟನ್ ತನ್ನ ಕೃತಿಯಲ್ಲಿ ಔನ್ನತ್ಯ, ಭವ್ಯತೆಗಳನ್ನು ಮೂಡಿಸಿದ್ದಾನೆ. ಅವನ ಹಾಗೆ ಇಂಗ್ಲಿಷ್ ಸರಳ ರಗಳೆಯನ್ನು ಬಳಸಿರುವ ಕವಿ ಬೇರೆ ಯಾರೂ ಇಲ್ಲ. ಅವನ ಕೃತಿಗಳೆಲ್ಲ ಪ್ಯೂರಿಟನ್ ಪಂಥದ ಆದರ್ಶಗಳನ್ನೂ ರೀತಿನೀತಿಗಳನ್ನೂ ವ್ಯಕ್ತಪಡಿಸುತ್ತವೆ. ಡ್ರೈಡನ್ ವಿಡಂಬನೆಯ ಕವಿ. ತನ್ನ ಕಾಲದ ರಾಜಕೀಯ ಮತ್ತು ಧಾರ್ಮಿಕ ಹೋರಾಟಗಳಿಗೆ ಸಂಬಂಧಿಸಿದ ಖ್ಯಾತ ವಿಡಂಬನೆಗಳನ್ನು ಬರೆದಿದ್ದಾನೆ. ಅಬ್ಸಲಾಮ್ ಅಂಡ್ ಅಕಿಟೋಫೆಲ್, ದಿ ಮೆಡಲ್, ಮ್ಯಾಕ್ ಫ್ಲೆಕ್ನೊ, ದಿ ಹ್ಯೆಂಡ್ ಅಂಡ್ ದಿ ಪ್ಯಾಂತರ್-ಅವನ ಉತ್ತಮ ವಿಡಂಬನೆಗಳು. ಮೊದಲನೆಯ ಎರಡು ರಾಜಕೀಯ ಪ್ರಸಂಗಗಳಿಗೂ ಮೂರನೆಯದು ಸಾಹಿತ್ಯಕ್ಕೂ ನಾಲ್ಕನೆಯದು ಧಾರ್ಮಿಕ ವಿವಾದಕ್ಕೂ ಸಂಬಂಧಪಟ್ಟಿವೆ. ಒಂದೊಂದು ವರ್ಗದಲ್ಲೂ ಮೇಲ್ಮಟ್ಟದ ವಿಡಂಬನೆ ಹೇಗಿರಬೇಕೆಂದು ಕವಿ ತೋರಿಸಿಕೊಟ್ಟಿದ್ದಾನೆ.