ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೀಂಚುಳ್ಳಿ

ವಿಕಿಸೋರ್ಸ್ದಿಂದ

ಮೀಂಚುಳ್ಳಿ ಕಾರಸೈಯಿಫಾರ್ಮೀಸ್ ಗಣದ ಆಲ್‍ಸೆಡಿನಿಡೀ ಕುಟುಂಬಕ್ಕೆ ಸೇರಿದ ಸುಮಾರು 85 ಬಗೆಯ ಹಕ್ಕಿಗಳಿರುವ ಸಾಮಾನ್ಯ ಹೆಸರು (ಕಿಂಗ್‍ಫಿಶರ್). ಪ್ರಾಚೀನ ಪ್ರಪಂಚ ಮುಖ್ಯವಾಗಿ ಆಗ್ನೇಯ ಏಷ್ಯ ಹಾಗೂ ಈಸ್ಟ್ ಇಂಡೀಸ್‍ಗಳು ಮೀಂಚುಳ್ಳಿಗಳ ಸಂಖ್ಯಾಬಾಹುಳ್ಯಕ್ಕೂ ವೈವಿಧ್ಯಕ್ಕೂ ಹೆಸರಾಂತಿದ್ದು ಮೀಂಚುಳ್ಳಿಗಳ ಒಟ್ಟು ಪ್ರಭೇದಗಳ ಪೈಕಿ ಮುಕ್ಕಾಲುಪಾಲು ಇಲ್ಲಿಯೆ ಕಾಣಸಿಕ್ಕುತ್ತವೆ. ನವಪ್ರಪಂಚದಲ್ಲಾದರೋ ಕೇವಲ 6 ಪ್ರಭೇದಗಳು ಮಾತ್ರ ಇವೆ. ಅಫ್ರಿಕದಲ್ಲಿ 15 ಪ್ರಭೇದಗಳುಂಟು.

ಮೀಂಚುಳ್ಳಿಗಳು ಕುಳ್ಳಾದರೂ ಬಲಯುತವಾದ ಮೈಯುಳ್ಳವು. ಮೋಟುಕತ್ತು, ಚೋಟುಬಾಲ, ದೇಹದ ಗಾತ್ರಕ್ಕೆ ಹೋಲಿಸಿದರೆ ಕೊಂಚ ದೊಡ್ಡದೆನ್ನಬಹುದಾದ ತಲೆ. ಉದ್ದವಾದ ಬಲವಾದ ಮತ್ತು ಚೂಪಾದ ಕೊಕ್ಕು, ಕುಳ್ಳುಕಾಲು, ಚಿಕ್ಕ ಹಾಗೂ ದುರ್ಬಲವಾದ ಪಾದಗಳು ಈ ಹಕ್ಕಿಗಳ ಲಕ್ಷಣಗಳ ಪೈಕಿ ಕೆಲವು. ಎಲ್ಲ ಮೀಂಚುಳ್ಳಿಗಳಲ್ಲೂ ಕಾಣಬರುವ ಮತ್ತು ಇಡೀ ಕುಟುಂಬದ ವಿಶಿಷ್ಟ ಲಕ್ಷಣವೆಂದರೆ ಇವುಗಳ ಕಾಲ್ಬೆರಳುಗಳು ಬುಡದಿಂದ ಕೊಂಚ ಉದ್ದದವರೆಗೆ ಕೂಡಿಕೊಂಡಿರುವುದು. ಬಹುಪಾಲು ಮೀಂಚುಳ್ಳಿಗಳು ಉಜ್ಜ್ವಲ ವರ್ಣದವು. ಹಸುರು, ನೀಲಿಗಳೇ ಇವುಗಳ ಪ್ರಧಾನ ವರ್ಣಗಳಾಗಿದ್ದು ಕೆಲವೊಮ್ಮೆ ಬಿಳಿ ಹಾಗೂ ಮಾಸಲು ಕೆಂಪುಬಣ್ಣಗಳು ಮಿಳಿತವಾಗಿ ಹಕ್ಕಿಗಳು ತುಂಬ ಸುಂದರವಾಗಿ ಕಾಣುವುವು. ಕೊಕ್ಕು ಕೂಡ ಕೆಂಪು ಅಥವಾ ಹಳದಿ ಬಣ್ಣದ್ದಾಗಿದೆ. ಮತ್ತೆ ಕೆಲವು ಮೀಂಚುಳ್ಳಿಗಳು ಬಿಳಿ ಕಪ್ಪುಬಣ್ಣಗಳ ಹಂಡಬಂಡ ಮಿಶ್ರಣದಿಂದ ಕೂಡಿವೆ. ಗಂಡು ಹೆಣ್ಣುಗಳ ನಡುವೆ ಸಾಮಾನ್ಯವಾಗಿ ವರ್ಣವ್ಯತ್ಯಾಸವಿಲ್ಲ.

ಮೀಂಚುಳ್ಳಿಗಳನ್ನು ಎರಡು ಪ್ರಧಾನ ಉಪಪಂಗಡಗಳಾಗಿ ವಿಂಗಡಿಸುವುದುಂಟು. ಮೊದಲನೆಯದಾದ ಆಲ್‍ಸೆಡಿನಿನೀ ಮೀನುಗಳನ್ನೇ ಪ್ರಧಾನ ಆಹಾರವನ್ನಾಗಿ ತಿನ್ನುವ ಮೀಂಚುಳ್ಳಿಗಳನ್ನು ಒಳಗೊಂಡಿದೆ. ಎರಡನೆಯ ಉಪಪಂಗಡ ಡ್ಯಾಸಿಲೋನಿನೀಯಲ್ಲಿ ಸೇರಿರುವಂಥವು ಕಾಡಿನ ಮೀಂಚುಳ್ಳಿಗಳು ಇವುಗಳ ಮೆಚ್ಚಿನ ಅಹಾರ ಕೀಟಗಳು, ಕಪ್ಪೆ, ಓತಿ, ಕೆಲವೊಮ್ಮೆ ಸಣ್ಣಪುಟ್ಟ ಸ್ತನಿ ಹಾಗೂ ಹಕ್ಕಿಗಳು. ಇವುಗಳ ಪೈಕಿ ಕೆಲವು ಮೀಂಚುಳ್ಳಿಗಳು ನೀರಿನ ಬಳಿಗೆ ಹೋಗುವುದೇ ಇಲ್ಲ.

ಮತ್ಸ್ಯಾಹಾರಿ ಮೀಂಚುಳ್ಳಿಗಳು ಸಾಮಾನ್ಯವಾಗಿ ಹಳ್ಳ ತೊರೆ ಕೆರೆಗಳ ಬಳಿಯೇ ವಾಸಿಸುತ್ತಿದ್ದು. ನೀರಹಾಳೆಯ ಮೇಲೆ ಚಾಚಿರುವಂಥ ರಂಬೆಗಳ ಮೇಲೆ ನಿಶ್ಚಲವಾಗಿ, ನೀರೊಳಗೆ ಈಜುವ ಮೀನುಗಳನ್ನು ನಿರೀಕ್ಷಿಸುತ್ತ ಹೊಂಚು ಹಾಕಿ ಕುಳಿತಿರುವುವು. ಎರೆ ಕಣ್ಣಿಗೆ ಬಿದ್ದ ತತ್‍ಕ್ಷಣ ಶರವೇಗದಲ್ಲಿ ಅದರ ಮೇಲೆ ಎರಗಿ ಹಿಡಿದು, ರಂಬೆಗೆ ಮರಳಿ ಎರೆಯನ್ನು ತಲೆ ಮುಂದಾಗುವಂತೆ ಬಾಯೊಳಕ್ಕೆ ಎಸೆದು ನುಂಗುತ್ತವೆ. ಮತ್ತೆ ಕೆಲವು ಮೀಂಚುಳ್ಳಿಗಳು (ಉದಾಹರಣೆಗೆ ಭಾರತದಲ್ಲಿ ಕಾಣದೊರೆಯುವ ಹಂಡಬಂಡ ಮೀಂಚುಳ್ಳಿ-ಪೈಡ್ ಕಿಂಗ್‍ಫಿಶರ್) ಕೆರೆ ನದಿ ಮುಂತಾದವುಗಳ ನೀರ ಪಾತಳಿಗಳ ಮೇಲೆ 8-10 ಮೀಟರುಗಳ ಎತ್ತರದಲ್ಲಿ ಹೆಲಿ ಕಾಷ್ಟರಿನ ರೀತಿ ನಿಂತಲ್ಲೇ ಹಾರುತ್ತಿದ್ದು ಮೀನುಗಳನ್ನು ನಿರೀಕ್ಷಿಸುತ್ತ ಅವು ಸುಳಿದಾಗ ಎರಗಿ ಹಿಡಿಯುತ್ತವೆ.

ಮೀಂಚುಳ್ಳಿಗಳು ನೀರನೆಲೆಗಳ ದಡಗಳಲ್ಲಿ ಮಣ್ಣು ಕೊರೆದು ಬಿಲದ ರೀತಿಯ ಗೂಡುಗಳನ್ನು ನಿರ್ಮಿಸುವುವು. ಗೂಡುಗಳಲ್ಲಿ ಯಾವುದೇ ತೆರನ ಮೆತ್ತೆ ವಸ್ತುಗಳನ್ನು ಉಪಯೋಗಿಸುವುದಿಲ್ಲ ಒಂದು ಸಲಕ್ಕೆ 5-8 ಮೊಟ್ಟೆಗಳನ್ನಿಡುವುವು. ಗಂಡು ಹೆಣ್ನುಗಳೆರಡೂ ಮೊಟ್ಟೆಗಳಿಗೆ ಕಾವುಕೊಟ್ಟು ಮರಿಗಳು ಹುಟ್ಟಿದಮೇಲೆ ಅವನ್ನು ಪೋಷಿಸುವುವು. ಮೊಟ್ಟೆಯೊಡೆದು ಮರಿಗಳಾಗುವುದಕ್ಕೆ ಹಿಡಿಯುವ ಅವಧಿ 18-24 ದಿನಗಳು. ಮರಿಗಳು ಹುಟ್ಟಿದಾಗ ಕಣ್ಣು ತೆರೆದಿರುವುದಿಲ್ಲ ಮತ್ತು ಪುಕ್ಕಗಳ ಹೊದಿಕೆ ಪಡೆದಿರುವುದಿಲ್ಲ. 3 ಅಥವಾ 4 ವಾರಗಳ ಕಾಲ ಗೂಡಿನಲ್ಲಿದ್ದು ಅನಂತರ ಮರಿಗಳು ಹೊರಹೋಗುವುವು. ಆದರೆ ತಂದೆತಾಯಿ ಹಕ್ಕಿಗಳು ಹಲವಾರು ದಿನಗಳ ಕಾಲ ಮರಿಗಳೊಡನೆಯೇ ಇದ್ದು ಅವು ಮೀನು ಹಿಡಿಯಲು ಸಮರ್ಥವಾಗುವ ತನಕ ಉಣಿಸು ಕೊಟ್ಟು ನೋಡಿಕೊಳ್ಳುವುವು.

ಭಾರತದಲ್ಲಿ ಸಾಮಾನ್ಯವಾಗಿ ಕಾಣಸಿಕ್ಕುವ ಮೀಂಚುಳ್ಳಿಗಳೆಂದರೆ: ನೀಲಿ ಮೀಂಚುಳ್ಳಿ (ಕಾಮನ್ ಅಥವಾ ಸ್ಮಾಲ್ ಬ್ಲೂ ಕಿಂಗ್‍ಫಿಶರ್) 2 ಬಿಳಿಯೆದೆಯ ಮೀಂಚುಳ್ಳಿ (ಹ್ವೈಟ್ ಬ್ರೆಸ್ಟೆಡ್ ಕಿಂಗ್ ಫಿಶರ್). 3 ಹಂಡಬಂಡ ಮೀಂಚುಳ್ಳಿ (ಪೈಡ್ ಕಿಂಗ್‍ಫಿಶರ್) 4 ಮೂರು ಬೆರಳಿನ ಮೀಂಚುಳ್ಳಿ (ತ್ರೀಟೋಡ್ ಕಿಂಗ್‍ಫಿಶರ್) ಮತ್ತು ದೊಡ್ಡ ನೀಲಿ ಮೀಂಚುಳ್ಳಿ (ಗ್ರೇಟ್ ಬ್ಲೂ ಕಿಂಗ್‍ಫಿಶರ್). (ಎಂ.ಡಿ.ಪಿ.)