ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೀನುಗಾರಿಕೆ

ವಿಕಿಸೋರ್ಸ್ದಿಂದ

ಮೀನುಗಾರಿಕೆ ಆಹಾರದ ಒಂದು ಘಟಕವಾಗಿ ಮೀನುಗಳನ್ನು ಹಿಡಿಯುವುದು, ಸಾಕುವುದು, ಸಂಸ್ಕರಿಸುವುದು, ಬಳಸುವುದು (ಫಿಶರೀಸ್, ಪಿಸಿಕಲ್ಚರ್). ಜಲಜೀವಿಗಳನ್ನಾಧರಿಸಿದ ಉದ್ಯಮ.

ಶೇಕಡಾ 60ರಿಂದ 82ರವರೆಗೆ ತೇವಾಂಶ ಶೇಕಡಾ 13ರಿಂದ 20ರ ವರೆಗೆ ಪ್ರೋಟೀನ್ ಹಾಗೂ ಕೊಂಚ ಪರಿಮಾಣದಲ್ಲಿ ಕೊಬ್ಬನ್ನುಳ್ಳ ಮೀನಿನ ಮಾಂಸ ಒಂದು ಉತ್ಕøಷ್ಟ ಆಹಾರ. ಜೊತೆಗೆ ಮೀನಿನ ಮಾಂಸದಲ್ಲಿ ಗಣನೀಯ ಪರಿಮಾಣದಲ್ಲಿ ಯಥೋಚಿತ ಮತ್ತು ಯೋಗ್ಯ ರೂಪದಲ್ಲಿ ಆಹಾರದ ಅತ್ಯವಶ್ಯ ವಸ್ತುಗಳಾದ ವಿಟಮಿನ್‍ಗಳು ಅಡಕಗೊಂಡಿವೆ.

ಬಹುಶಃ ಈ ಕಾರಣದಿಂದಲೇ ಇಂಥ ಸಂಪೂರ್ಣ ಸತ್ತ್ವಶಾಲಿ ಆಹಾರವಾದ ಮೀನನ್ನು ಪ್ರಾಚೀನ ಮಾನವ ತನ್ನ ಆಹಾರದಲ್ಲಿ ಬಳಸಲು ಪ್ರಾರಂಭಿಸಿದ. ಮೊದಮೊದಲು ಆದಿಮಾನವ ಬರಿಗೈಗಳಿಂದ ಇಲ್ಲವೆ ಒರಟು ಭರ್ಜಿಗಳ ಬಳಕೆಯಿಂದ ಮೀನನ್ನು ಹಿಡಿಯುತ್ತಿದ್ದ. ಪ್ರಪಂಚದ ಅನೇಕ ಕಡೆಗಳಲ್ಲಿ ಇಂದಿಗೂ ಈ ವಿಧಾನಗಳನ್ನೇ ಅನುಸಿರಿಸುವು ದುಂಟು. ಅನಂತರದಲ್ಲಿ ಮೀನು ಹಿಡಿಯಲು ಬಲೆಗಳ ಬಳಕೆ ರೂಢಿಗೆ ಬಂತು. ಆಳವಿಲ್ಲದ ಕೊಳಗಳ ಅಥವಾ ಮಡುಗಳ ಪ್ರವೇಶ ದ್ವಾರಗಳಲ್ಲಿ ಅಡ್ಡಲಾಗಿ ಸಾಮಾನ್ಯವಾಗಿ ಕಲ್ಲುಗಳ ಮತ್ತು ಕಡ್ಡಿಗಳ ಇಲ್ಲವೆ ಜೇಡಿಮಣ್ಣಿನ ಅಣೆಕಟ್ಟುಗಳನ್ನು ಈ ಕಾರಣಕ್ಕಾಗಿಯೇ ಕಟ್ಟುತ್ತಿದ್ದರು. ಮೀನುಗಳು ಬರತಗಳ ಕಾಲದಲ್ಲಿ ಹಾಗೂ ನದಿಗಳು ಮಳೆಯಿಂದ ಉಬ್ಬಿದ ಸಮಯಗಳಲ್ಲಿ ಈ ಅಣೆಕಟ್ಟಿನ ಮೇಲೆ ಈಜುತ್ತಿದ್ದು ನೀರು ಕಡಿಮೆಯದಾಗ ತಡೆಯಿಂದಾಗಿ ಹಿಂತಿರುಗಿ ಈಜಲು ಸಾಧ್ಯವಾಗದೆ ಉಳಿಯುತ್ತಿದ್ದುವು. ಆಗ ಅವುಗಳನ್ನು ಸುಲಭವಾಗಿ ಹಿಡಿಯಲಾಗುತ್ತಿತ್ತು. ಮೀನನ್ನು ದೊಡ್ಡ ಪರಿಮಾಣದಲ್ಲಿ ಹಿಡಿಯಲು ಮಾಡಿದ ಪ್ರಥಮ ಹಾಗೂ ಅಂತ್ಯದ ಸರಳ ಪ್ರಯತ್ನ ಇದು ಎಂದು ಹೇಳಬಹುದು. ಜೀವನೋಪಾಯಕ್ಕಾಗಿ ಮೀನನ್ನು ಹಿಡಿಯುವ ಉದ್ಯೋಗ ಹಾಗೂ ವಾಣಿಜ್ಯ ಮೀನುಗಾರಿಕೆಗಳು ಸಹ ಬಹಳ ಹಿಂದಿನಿಂದ ರೂಢಿಯಲ್ಲಿವೆ.

ಗ್ರೀಸ್, ಸಿಸಿಲಿ, ಸ್ಪೇನ್, ಭಾರತ, ಚೀನಗಳನ್ನೊಳಗೊಂಡಂತೆ ಪ್ರಪಂಚದ ಅನೇಕ ದೇಶಗಳಲ್ಲಿ ಮೀನುಗಾರಿಕೆ ಅತ್ಯಂತ ಹಿಂದಿನ ಕಾಲದಿಂದಲೂ ಅಸ್ತಿತ್ವದಲ್ಲಿದೆ.

ಹೆಚ್ಚು ಕಡಿಮೆ ಸಮುದ್ರದ ಎಲ್ಲ ಭಾಗಗಳಲ್ಲಿಯೂ ಮೀನುಗಳು ವಾಸಿಸುತ್ತವೆ. ಆದರೆ ಕೆಲವು ನಿರ್ದಿಷ್ಟ ನೆಲೆಗಳನ್ನು ಬಿಟ್ಟರೆ ಉಳಿದೆಡೆಗಳಲ್ಲಿ ಅವು ಚದುರಿ ಹೋಗುವುವಲ್ಲದೆ ಸಂಖ್ಯೆಯಲ್ಲಿ ಸಹ ಕಡಿಮೆ ಇರುತ್ತವೆ. ಹೆಚ್ಚಿನ ಮೊತ್ತದಲ್ಲಿ ಮೀನುಗಳಿರುವ ಇಂಥ ನಿರ್ದಿಷ್ಟ ನೆಲೆಗಳನ್ನೇ ಮೀನುಗಾರಿಕೆ ನೆಲೆಗಳೆಂದು (ಫಿಶಿಂಗ್ ಗ್ರೌಂಡ್) ಕರೆಯಲಾಗುತ್ತದೆ. ಮೀನುಗಾರಿಕೆ ನೆಲೆಗಳು ಸಾಮಾನ್ಯವಾಗಿ ತೀರ ಪ್ರದೇಶದಿಂದಾಚೆಗೆ ಸ್ವಲ್ಪ ದೂರದವರೆಗೆ ಸುಮಾರು 200 ಮೀಟರ್ ಆಳದವರೆಗಿನ ನೀರಿನಲ್ಲಿ ಇರುತ್ತವೆ. ಭೂಖಂಡದ ಸಮತಟ್ಟಿನ (ಕಾಂಟಿನೆಂಟಲ್ ಶೆಲ್ಫ್) ಈ ಭಾಗಗಳಲ್ಲಿ ಮೀನುಗಳು ಆಹಾರವನ್ನು ಪಡೆಯುವುವಲ್ಲದೇ ಮೊಟ್ಟೆಗಳನ್ನಿಟ್ಟು ಮರಿಗಳನ್ನೂ ಮಾಡುತ್ತವೆ. ಇಂಥ ಸ್ಥಳಗಳಲ್ಲಿಯೇ ಮೀನುಗಳನ್ನು ಸಮೃದ್ಧವಾಗಿ ಹಿಡಿಯಲಾಗುತ್ತದೆ. ಮೀನು ಹಿಡಿಯುವ ಪ್ರದೇಶಗಳ ಪೈಕಿ ಅತ್ಯುತ್ತಮವಾದ್ದು ನ್ಯೂಫೌಂಡ್‍ಲ್ಯಾಂಡ್ ತೀರಪ್ರದೇಶ. ಈ ಪ್ರದೇಶದಲ್ಲಿ ಅಪರಿಮಿತ ಮೊತ್ತದಲ್ಲಿ ಕಾಡ್, ಹ್ಯಾಲಿಬಟ್, ಹೆರಿಂಗ್ ಹಾಗೂ ಉತ್ತರ ಸಮುದ್ರಗಳಲ್ಲಿ ಸಿಕ್ಕುವ ಪ್ರಾಯಶಃ ಎಲ್ಲ ತೆರನ ಮೀನುಗಳನ್ನು ಪ್ರತಿವರ್ಷವೂ ಹಿಡಿಯಲಾಗುತ್ತಿದೆ. ಈ ಕಾರಣದಿಂದಲೇ ಅಮೆರಿಕ, ಕೆನಡ, ರಷ್ಯ ಫ್ರಾನ್ಸ್. ಇಂಗ್ಲೆಂಡ್ ಮುಂತಾದ ದೇಶಗಳಿಂದ ಮೀನು ಹಿಡಿಯುವ ಹಡಗುಗಳು ಈ ಪ್ರದೇಶಕ್ಕೆ ಯಾವಾಗಲೂ ಬರುತ್ತಿರುತ್ತವೆ. ನಾರ್ವೆಯ ತೀರ ಪ್ರದೇಶದಲ್ಲಿ ಕೂಡ ಮುಖ್ಯವಾದ ಮೀನುಗಾರಿಕೆ ಕಂಡುಬರುತ್ತದೆ. ಪೆಸಿಫಿಕ್ ಸಾಗರದಲ್ಲಿ ಜಪಾನ್ ವಿಪುಲವಾದ ಮೀನುಗಾರಿಕೆಯ ಕಾರ್ಯ ನಡೆಸುತ್ತದೆ. ಪೋರ್ಚುಗಲ್ ಹಾಗೂ ಸ್ಪೇನ್‍ಗಳಲ್ಲಿ ಬೂತಾಯ ಮೀನಿನ ಮೀನುಗಾರಿಕೆ ಅಧಿಕವಾಗಿದೆ. ಉತ್ತರ ಅಮೆರಿಕದ ಉತ್ತರ ಪೆಸಿಫಿಕ್ ತೀರದಲಿ ಸ್ಯಾಲ್ಮನ್ ಮತ್ತು ಕ್ಯಾಲಿಪೋರ್ನಿಯಾದಲ್ಲಿ ಟ್ಯೂನ ಮೀನುಗಾರಿಕೆಗಳು ಅತ್ಯಂತ ಹೆಸರುವಾಸಿಯಾದವು. ಖಾರಿ (ಆಖಾತ) ತೀರಗಳ ಉದ್ದಕ್ಕೂ ಪ್ರಖ್ಯಾತ ಸೀಗಡಿ ಮೀನುಗಾರಿಕೆ ಕಂಡುಬರುತ್ತದೆ.

ಬಹುಪಾಲು ದೇಶಗಳಲ್ಲಿ ವಿಶೇಷವಾಗಿ ಉಷ್ಣವಲಯಗಳಲ್ಲಿ ವಾಸಿಸುವ ಸಿಹಿ ನೀರಿನ ಮೀನುಗಳು ಆಹಾರ ಸಂಗ್ರಹದ ಅಮೂಲ್ಯವಾದ ಮೂಲವನ್ನು ಒದಗಿಸಿದರೂ ಮಾನವ ಜನಾಂಗದ ಆಹಾರದ ಮುಖ್ಯಪಾಲು ಸಮುದ್ರದ ಮೀನುಗಳು. ಪ್ರಪಂಚದ ಒಟ್ಟು ಮೀನುಗಾರಿಕೆ ಉತ್ಪಾದನೆಯಲ್ಲಿ ಕಡಲ ಮೀನು ಉತ್ಪಾದನೆ ಶೇಕಡ 74 ರಷ್ಟಿದೆ. 2003 ನೇ ವರ್ಷದಲ್ಲಿ ಒಟ್ಟು 132.2 ದಶ ಲಕ್ ಟನ್ ಮೀನು ಉತ್ಪಾದಿಸಲಾಗಿದ್ದು ಅದರಲ್ಲಿ 98.00 ದಶ ಲಕ್ಷ ಟನ್ ಕಡಲಿನಿಂದ ಹಾಗೂ 34.20 ಲಕ್ಷ ಟನ್ ಒಳನಾಡಿನಿಂದ ಉತ್ಪಾದಿಸಲಾಗಿದೆ.(ನೋಡಿ ಕೋಷ್ಟಕ 1) ಸಮುದ್ರ ಮೀನುಗಾರಿಕೆ ಇತಿಹಾಸ ಕಾಲದಿಂದಲೂ ತಮ್ಮ ವಾಣಿಜ್ಯದ ಉಪಯುಕ್ತತೆಯಿಂದ ಪ್ರತ್ಯೇಕವಾಗಿಯೂ ರಾಷ್ಟ್ರಗಳ ಹಣೆಬರಹಗಳಲ್ಲಿ ಮಹತ್ತ್ವದ ಪಾತ್ರವನ್ನು ವಹಿಸಿರುವುದು ಸೋಜಿಗವೇ ಸರಿ. ಮೀನು ಹಿಡಿಯುವುದು ಪ್ರಪಂಚದಲ್ಲಿ ಬೇಟೆಯ ಅತ್ಯಂತ ಆದಿರೂಪಗಳಲ್ಲೊಂದು ಎಂದು ಭಾವಿಸಲಾಗಿದೆ. ಮಾನವರು ಕೃಷಿಕರಾಗುವುದಕ್ಕಿಂತ ಮೊದಲೇ ಬಹಳ ಮಟ್ಟಿಗೆ ಬೇಟೆಗಾರರೇ ಆಗಿದ್ದರು. ಈ ಕಾರಣದಿಂದ ಮೀನು ಹಿಡಿಯುವುದು ಪ್ರಪಂಚದ ಅತಿ ಪುರಾತನವಾದ ಉದ್ಯಮವೆಂದೇ ಹೇಳಬಹುದು. ಹೀಗೆ ಪ್ರಾಚೀನಕಾಲದಿಂದಲೂ ಸಮುದ್ರ ವ್ಯಾಪಾರದ ಬೆಳೆವಣಿಗೆಯಲ್ಲಿ ಮೀನುಗಾರಿಕೆ ಹೆಚ್ಚು ಪ್ರಮುಖ ಪಾತ್ರವನ್ನು ಪಡೆದು ಹಡಗುಗಳ ನಿರ್ಮಾಣಕ್ಕೂ ಮೀನುಗಳನ್ನು ಹುಡುಕುತ್ತ ಅಜ್ಞಾತ ದೇಶಗಳನ್ನು ಆವಿಷ್ಕರಿಸಲು ಪ್ರೇರಣೆಯನ್ನೂ ಒದಗಿಸಿದೆ. ಯಾವುದಾದರೊಂದು ಪಟ್ಟಣ ಅಥವಾ ಬಂದರಿನ ನೆಲೆಯನ್ನು ಗುರುತಿಸುವುದಕ್ಕೆ ಮೀನುಗಾರಿಕೆಯ ಉದ್ಯಮದೊಂದಿಗೆ ಅದು ಪಡೆದಿರುವ ಸಂಬಂಧವನ್ನು ಉಲ್ಲೇಖಿಸದೆ ಇರಲು ಸಾಧ್ಯವಿಲ್ಲ. ಕೋಷ್ಟಕ 1 ಪ್ರಪಂಚದ ಮೀನು ಉತ್ಪಾದನೆ ಮತ್ತು ಬಳಕೆಯ ಪ್ರಮಾಣ

  1998 1999 2000 2001 2002 20031

ಉತ್ಪಾದನೆ  (ದಶ ಲಕ್ಷ ಟನ್)

ಒಳನಾಡು            

ಹಿಡಿವಳಿ 8.1 8.5 8.7 8.7 8.7 9.0

ಮೀನುಕೃಷಿ 18.5 20.2 21.3 22.5 23.9 25.2

ಒಟ್ಟು ಒಳನಾಡು 26.6 28.7 30.0 31.2 32.6 34.2

ಕಡಲು            

ಹಿಡುವಳಿ 79.6 85.2 86.8 84.2 84.5 81.3

ಮೀನುಕೃಷಿ 12.0 13.3 14.2 15.2 15.9 16.7

ಒಟ್ಟು ಕಡಲು 91.6 98.5 101.0 99.4 100.4 98.0

ಹಿಡುವಳಿಯಿಂದ ಒಟ್ಟು 87.7 93.8 95.5 92.9 93.2 90.3

ಮೀನುಕೃಷಿಯಿಂದ ಒಟ್ಟು 30.6 33.4 35.5 37.8 39.8 41.9

ಒಟ್ಟು ಉತ್ಪಾದನೆ 118.2 127.2 131.0 130.7 133.0 132.2

ಬಳಕೆ            

ಆಹಾರದ ಬಳಕೆಗೆ 93.6 95.4 96.8 99.5 100.7 103.0

ಆಹಾರೇತರ ಬಳಕೆಗೆ 24.6 31.8 34.2 31.1 32.2 29.2

ಜನ ಸಂಖ್ಯೆ (100 ಕೋಟಿ) 5.9 6.0 6.1 6.1 6.2 6.3

ಪ್ರತಿ ವ್ಯಕ್ತಿಗೆ ಮೀನು ಸರಬರಾಜು (ಕೆಜಿ/ವರ್ಷಕ್ಕೆ) 15.8 15.9 15.9 16.2 16.2 16.3

ವಿ.ಸೂ: ಜಲ ಸಸ್ಯಗಳನ್ನು ಹೊರತುಪಡಿಸಿ 1 ಅಂದಾಜು. (ಆಧಾರ: ಆಹಾರ ಮತ್ತು ಕೃಷಿ ಸಂಸ್ಥೆಯ ವರದಿ)


ಕಡಲ ಉತ್ಪಾದನೆ ಕ್ರಮೇಣ ಸ್ಥಿರಗೊಳ್ಳುತ್ತಿದ್ದು ಬಹುತೇಕ ದೇಶಗಳಲ್ಲಿನ ಉತ್ಪಾದನೆ ಸ್ಥಿರವಾಗಿದೆ. ಆದರೆ ಒಳನಾಡು ಉತ್ಪಾದನೆಗೆ ವಿಫುಲ ಅವಕಾಶಗಳಿದ್ದು ಮೀನುಕೃಷಿಯಿಂದ ಉತ್ಪಾದನೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. 2002-03 ರ ಅಂಕಿ-ಅಂಶಗಳ ಪ್ರಕಾರ ಚೀನಾ ಮೀನುಉತ್ಪಾದನೆಯಲ್ಲಿ ಅತ್ಯಂತ ಮುಂದುವರೆದ ದೇಶವಾಗಿದೆ. ಚೀನಾದಲ್ಲಿ 2002 ವರ್ಷವೊಂದರಲ್ಲಿ 44.3 ದಶ ಲಕ್ಷ ಟನ್ ಗಳ ಮೀನು ಉತ್ಪಾದನೆಯಾಗಿದೆ. ಕಡಲ ಹಾಗೂ ಒಳನಾಡು ಒಟ್ಟು ಮೀನು ಹಿಡುವಳಿಯಲ್ಲಿ ಭಾರತ ಪ್ರಪಂಚದಲ್ಲಿ ಏಳನೇ ಅತಿ ಹೆಚ್ಚು ಮೀನು ಉತ್ಪಾದಿಸುವ ರಾಷ್ಟ್ರವಾಗಿದೆ. ಒಳನಾಡು ಮೀನು ಉತ್ಪಾದನೆಯಲ್ಲಿ ಚೀನಾ ದೇಶ ಪ್ರಥಮ ಸ್ಥಾನದಲ್ಲಿದ್ದರೆ ಭಾರತ ಎರಡನೆಯದು. ಒಳನಾಡು ಹಿಡುವಳಿಯಲ್ಲಿ ಶೇ.68 ರಷ್ಟು ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಆಗುತ್ತಿದೆ. ಮೀನುಗಾರಿಕೆ ಅನೇಕ ದೇಶಗಳ ಆರ್ಥಿಕ ವ್ಯವಸ್ಥೆಯ ಜೀವಾಳವಾಗಿದೆ.

ಜಲ ಸಂಪನ್ಮೂಲದ ಆಧಾರದಲ್ಲಿ ಎರಡು ವಿಧದ ಮೀನುಗಾರಿಕೆ ಅಸ್ತಿತ್ವದಲ್ಲಿದೆ: ಒಂದು ಕಡಲ ಮೀನುಗಾರಿಕೆ. ಇನ್ನೊಂದು ಒಳನಾಡಿನ ಮೀನುಗಾರಿಕೆ. ಮೀನುಗಾರಿಕೆ ವಿಧಾನದ ಮೇಲೆ ಮತ್ತೆ ಎರಡು ವಿಧಗಳಿವೆ.: ಒಂದು ಹಿಡಿವಳಿ ಆಧರಿಸಿದ ಮೀನುಗಾರಿಕೆ (ಕ್ಯಾಪ್ಚರ್ ಫಿಶರೀಸ್), ಮತ್ತೊಂದು ಜಲಕೃಷಿ (ಅಕ್ವಾಕಲ್ಚರ್) ಅಥವಾ ಮೀನುಕೃಷಿ.

ಕಡಲ ಮೀನುಗಾರಿಕೆ:

ಹಿಡುವಳಿಯನ್ನಾಧರಿಸಿದ ಕಡಲ ಮೀನುಗಾರಿಕೆ ಪ್ರಮುಖವಾದುದು. ಕಡಲ ಮೀನುಗಾರಿಕೆಯನ್ನು ಸ್ಥೂಲವಾಗಿ ಆಳ ಸಮುದ್ರದ ಮೀನುಗಾರಿಕೆ ಮತ್ತು ಕರಾವಳಿ ಮೀನುಗಾರಿಕೆಯೆಂದು ವರ್ಗೀಕರಿಸಬಹುದು. ಭೂಖಂಡದ ನೀರಿನೊಳಗಿನ ಮರಳು ದಂಡೆಗಳ ಹಾಗೂ ಮಹಾಸಮುದ್ರಗಳ ದಂಡೆಗಳ ಆಳ ಸಮುದ್ರದ ಮೀನುಗಾರೆಕೆಗಳು ಹೆಚ್ಚು ಕಡಿಮೆ ಸಂಪೂರ್ಣವಗಿ ಇನ್ನೂರು ಮಾರು ಆಳದ ಮಿತಿಯೊಳಗೇ ನೆಲಸಿರುವುದು ಕಂಡುಬರುತ್ತದೆ. ಆದರೆ ಬಹಳಷ್ಟು ಮೀನುಗಾರಿಕೆಗಳು 100 ಮಾರಿನ ಆಳಕ್ಕೆ ಮಾತ್ರ ಸೀಮಿತವಾಗಿವೆ. ಪ್ರಪಂಚದ ಪ್ರಮುಖ ಮೀನುಗಾರಿಕೆ ನೆಲೆಗಳು ಉತ್ತರ ಸಮಶೀತೋಷ್ಟ ವಲಯದಲ್ಲಿ. ಅದರಲ್ಲಿಯೂ ಹೆಚ್ಚಾಗಿ ಉತ್ತರ ಅಕ್ಷಾಂಶ 40º ಯಿಂದ 70º ವರೆಗಿನ ನಡುವಣ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿವೆ. ಈ ಪ್ರದೇಶಗಳಲ್ಲಿ ಸಾಮನ್ಯವಾಗಿ ಇನ್ನೂರು ಮಾರಿಗಿಂತ ಕಡಿಮೆ ಆಳವಿರುವ ಅನೇಕ ವಿಸ್ತಾರ ಕ್ಷೇತ್ರಗಳಿದ್ದು ಅಮೂಲ್ಯವಾದ ನೀರಿನ ತಳದ ವಾಸಿಗಳಾದ ಅಥವಾ ನೀರಿನ ಕೆಳಸ್ತರಗಳಲ್ಲಿ ಜೀವಿಸುವ ಮೀನುಗಳಿಗೆ ಆಶ್ರಯವಿತ್ತಿರುವ ನೆಲೆಗಳಾಗಿವೆ. ಇಂಥ ಮೀನುಗಳನ್ನೇ ಅವಲಂಬಿಸಿರುವ ಅಸಂಖ್ಯಾತ ಎಳೆಬಲೆಯಿಂದ (ಟ್ರಾಲ್) ಮೀನು ಹಿಡಿಯುವ ಕೈಗಾರಿಕೆಗಳಿವೆ. ಉತ್ತರದ ಸಮುದ್ರಗಳಲ್ಲಿ ಮೀನುಗಾರಿಕೆಗಳ ಕೇಂದ್ರೀಕರಣ ಯಾವ ರೀತಿ ಇದೆ ಎನ್ನುವುದು ಪ್ರಪಂಚದ ಒಟ್ಟು ಉತ್ಪನ್ನದ ಶೇಕಡಾ 70 ರಷ್ಟಕ್ಕೆ ಕಡಿಮೆ ಇಲ್ಲದಷ್ಟನ್ನು ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡ, ಜಪಾನ್ ಗ್ರೇಟ್‍ಬ್ರಿಟನ್, ಫ್ರಾನ್ಸ, ಸ್ಪೇನ್ ನಾರ್ವೆ,ಚೀನಾ ಹಾಗೂ ರಷ್ಯದಂಥ ರಾಷ್ಟ್ರಗಳು ಒಟ್ಟುಗೂಡಿ ಪ್ರತಿನಿಧಿಸುವುದರಿಂದಲೇ ಅದು ಗೊತ್ತಾಗುತ್ತದೆ. ಇತ್ತೀಚೆಗೆ ಭಾರತದಲ್ಲಿ ಸಮುದ್ರ ಮೀನುಗಾರಿಕೆಯನ್ನು ಚುರುಕಾಗಿ ಅಭಿವೃದ್ಧಿಗೊಳಿಸಲಾಗಿದೆ. ಇದೇ ರೀತಿ ಶ್ರೀಲಂಕಾ, ತೈಲಾಂಡ್,ಇಂಡೋನೆಶಿಯಾ, ಕಾಂಬೋಡಿಯಾ, ಬಾಂಗ್ಲಾದೇಶ ಹಾಗೂ ಮಲಯಗಳಲ್ಲಿ ಸಮುದ್ರ ಮೀನುಗಾರಿಕೆಯ ಅಭಿವೃದ್ಧಿಯಾಗಿದ್ದರೂ ಒಳನಾಡಿನ ಮೀನುಗಾರಿಕೆಯೇ ಅತ್ಯಂತ ವಾಣಿಜ್ಯ ಪ್ರಾಮುಖ್ಯವನ್ನು ಪಡೆದಿದೆ.

ಮೀನು ಹಿಡಿಯುವ ಅನೇಕ ಹಾಗೂ ವೈವಿಧ್ಯಮಯ ವಿಧಾನಗಳ ಬಗ್ಗೆ ಮಾಹಿತಿ ವಿಪುಲವಾಗಿದೆ. ಮೀನು ಹಿಡಿಯುವ ವಿಧಾನಗಳ ವಿಕಾಸ ಪುರಾತನ ಕಾಲದಲ್ಲಿ ಪೌರುಸ್ತ್ಯ ದೇಶಗಳಲ್ಲಿ ಪಳಗಿಸಿದ ನೀರು ನಾಯಿ, ರೆಮೋರ ಅಥವಾ ಹೀರುಮೀನು ಹಾಗೂ ಕಾವ್ರ್ರೆರೆಂಟ್ ಪಕ್ಷಿ ಮುಂತಾದವುಗಳ ಸಹಾಯದಿಂದ ಮೀನು ಹಿಡಿಯುವ ಪದ್ಧತಿಯಿಂದ ಮೊದಲುಗೊಂಡು ಇತ್ತೀಚಿನ ಆಧುನಿಕ ರೀತಿಯ ವೈವಿಧ್ಯಮಯ ಸಲಕರಣೆಗಳ ಬಳಕೆಯ ಕ್ರಮದ ತನಕ ಸಾಗಿದೆ. ಮೀನುಗಳನ್ನು ಮುಖ್ಯವಾಗಿ ನಾಲ್ಕು ರೀತಿಯಲ್ಲಿ ಹಿಡಿಯಬಹುದು. ಅವೆಂದರೆ ಈಟಿ, ಬೋನು, ಒಲೆ ಮತ್ತು ಗಾಳಗಳು. ಅತ್ಯಂತ ಪ್ರಾಚೀನ ಮೀನು ಹಿಡಿಯುವ ಸಲಕರಣೆಗಳು ನಿಶ್ಚಯವಾಗಿಯೂ ಈಟಿ ಮತ್ತು ಬೋನುಗಳೇ ಆಗಿದ್ದುವು. ಈಗಲೂ ಇವನ್ನು ಪ್ರಪಂಚದ ಅನೇಕ ಭಾಗಗಳಲ್ಲಿ ಉಪಯೋಗಿಸುವುದುಂಟು. ಇಂಥ ಪುರಾತನ ಬೋನುಗಳಿಂದ ಇತ್ತೀಚಿನ ಹೆಚ್ಚು ಸಮರ್ಥವಾದ ಮೀನು ಅಣೆಕಟ್ಟು ಅಥವಾ ಒಡ್ಡುಗಳವರೆಗೆ (ಫಿಶ್ ವಿಯರ್) ಇಂಥ ಮೀನುಗಾರಿಕೆ ವಿಕಸಿಸಿದೆ. ಈ ಮೀನುಅಣೆಕಟ್ಟಿನಲ್ಲಿ ಅನುಸಿರಿಸುವ ಸಾಮನ್ಯ ನಿಯಮವೆಂದರೆ ಮೀನುಗಳನ್ನು ಪ್ರವಾಹಭರತಕ್ಕೆ ಪ್ರವೇಶಿಸುವಂತೆ ಮಾಡಿ ಉಬ್ಬರದ ನೀರಿನ ಇಳಿತದ ಮೇಲೆ ಉಳಿಸಿಕೊಂಡು ಅನಂತರ ಅವುಗಳನ್ನು ಹಿಡಿಯುವುದು. ಈಗಲೂ ಈ ಪದ್ಧತಿ ಅನೇಕ ಕಡೆಗಳಲ್ಲಿ ರೂಢಿಯಲ್ಲಿದೆ. ಸರಳ ಮೀನು ಅಣೆಕಟ್ಟುಗಳಿಂದ ಮುಂದಕ್ಕೆ ವಿಶದವಾದ ಸರಳು ಹಾಗೂ ಕೊಂಬೆಗಳಿಂದ ಒಂದಕ್ಕೊಂದು ಹೆಣೆದು ಮಾಡಿದ ಬೇಲಿಯ ರಚನೆಯವರೆಗೆ ಅಭಿವೃದ್ಧಿಗೊಂಡಿತು. ಇವುಗಳಿಂದ ಕ್ರಮೇಣ ಸ್ಥಿರವಾಗಿ ನೆಲೆಗೊಳಿಸುವ ಬಲೆಗಳು ವಿಕಾಸಗೊಂಡವು. ಬಹುಶಃ ಗಾಳಗಳು ಸಹ ಮಾನವನ ಇತಿಹಾಸದ ಆದಿಯ ಮಜಲಲ್ಲಿಯೇ ಉಪಯೋಗ ದಲ್ಲಿದ್ದುವು. ಅಂತಿಮವಾಗಿ ಅಣೆಕಟ್ಟನ್ನು ಮೀನು ಪ್ರವೇಶಿಸುವುದನ್ನೇ ಕಾಯುತ್ತಾ ಇರುವುದಕ್ಕೆ ಬದಲು ಮೀನಿಗೇ ಬಲೆಯನ್ನು ತರುವ ಪ್ರಯತ್ನಗಳನ್ನು ಮಾಡಲಾಯಿತು. ಈ ಪ್ರಯತ್ನಗಳೇ ಪ್ರಥಮ ಎಳೆಬಲೆ ದೋಣಿಗಳು ಅಥವಾ ದೋಣಿಗಳಿಂದಾಗಲೀ ತೀರದಿಂದಾಗಲೀ ಬಳಕೆಯಾಗುವ ಸೀನ್ ಬಲೆಗಳ ಶೋಧನೆಗೆ ನಾಂದಿಯಾದವು.

ಇತ್ತೀಚಿನ ವಾಣಿಜ್ಯದ ಮೀನುಗಾರಿಕೆಯಲ್ಲಿ ಬಹುತೇಕವಾಗಿ ಉಪಯೋಗಿಸುವ ನಾಲ್ಕು ಪ್ರಧಾನ ವಿಧಾನಗಳೆಂದರೆ ಎಳೆಬಲೆಯಿಂದ ಮೀನು ಹಿಡಿಯುವುದು (ಟ್ರಾಲ್ ಬಲೆಗಳು), ಮೇಲು ಅಂಚಿನಲ್ಲಿ ತೇಲು ಬೆಂಡುಗಳನ್ನು ಕೆಳಂಚಿನಲ್ಲಿ ಭಾರಗಳನ್ನು ಕಟ್ಟಿ ಮೀನುಗಳನ್ನು ಸುತ್ತುವರಿದು ದಡಕ್ಕೆ ಎಳೆಯಬಹುದಾದ ಬಲೆಗಳಿಂದ ಹಿಡಿಯುವುದು (ಪರ್ಸ್ ಸೀನ್ ಬಲೆಗಳು), ಗಾಳಿಯ ಹರವಿನಲ್ಲಿ ಹೊಡೆದುಕೊಂಡು ಹೋಗುತ್ತಿರುವಾಗ ಕೊಚ್ಚು ಬಲೆ ಹಾಕಿ ಮೀನುಹಿಡಿಯುವುದು (ಗಿಲ್ ನೆಟ್) ಹಾಗೂ ಗಾಳದ ಹುರಿಯಿಂದ ಮೀನು ಹಿಡಿಯುವುದು (ಲಾಂಗ್ ಲೈನ್) . ಪ್ರತಿಯೊಂದು ವಿಧಾನ ಒಂದು ವಿಶಿಷ್ಟ ಬಗೆಯ ಸಾಧನದ ಉಪಯೋಗದಿಂದೊಡಗೂಡಿ ನಿರ್ದಿಷ್ಟ ಜಾತಿಯ ಮೀನುಗಳನ್ನು ಹಿಡಿಯುವುದಕ್ಕೆ ಯೋಜಿತವಾಗಿದೆ. ಎಳೆಬಲೆ ದೋಣಿಗಳು. ಸೀನ್ ಬಲೆ ದೋಣಿಗಳು ಹಾಗೂ ಗಾಳದ ಹುರಿಯದೋಣಿಗಳು ವಿಶೇಷವಾಗಿ ಕಾಡ್, ಹ್ಯಾಡಕ್, ಹೇಕ್, ಹ್ಯಾಲಿಬಟ್, ಪ್ಲೇಸ್ ಮತ್ತು ಚಪ್ಪಟೆ ಮೀನುಗಳಂಥ ನೀರಿನ ತಳದಲ್ಲಿ ವಾಸಿಸುವ ಮೀನುಗಳನ್ನು ಹಿಡಿಯಲು ಉಪಯುಕ್ತವಾದರೆ ಹೆರ್ರಿಂಗ್, ಪಿಲ್‍ಚಾರ್ಡ್ ಮತ್ತು ಬಂಗುಡೆ ಮುಂತಾದ ವಿಸ್ತಾರಸಮುದ್ರದ ಮೇಲಿನ ಮೀನುಗಳನ್ನು ಹಿಡಿಯಲು ಕೊಚ್ಚುಬಲೆ ದೋಣಿ ಸಹಾಯಕ.

ಸಮತಲವಾಗಿದ್ದು ಶಂಕ್ವಾಕೃತಿಯುಳ್ಳ ಬಲೆಯೇ ಎಳೆಬಲೆ. ಇದರ ಒಂದುತುದಿಯಲ್ಲಿ ಅಗಲವಾದ ಬಾಯಿಯಿದೆ. ಇನ್ನೊಂದು ತುದಿ ಚೂಪಾಗಿ ಹೋಗುತ್ತ ಕಟ್ಟಕಡೆಯಲ್ಲಿ ಚೀಲ ಅಥವಾ ಸಂದಿಯಲ್ಲಿ (ಕಾಡ್ ಎಂಡ್) ಅಂತ್ಯಗೊಳ್ಳುತ್ತದೆ. ಈ ಬಲೆಯ ಉದ್ದ ಸುಮಾರು 30 ಮೀ. ವಿಸ್ತಾರವಾದ ಈ ಚೀಲ ಹಡಗಿನ ಮೇಲಿರುವ ಒಂದು ಬಲಿಷ್ಠ ಎತ್ತುಗೆಯಂತ್ರಕ್ಕೆ ಜೋಡಣೆಗೊಂಡಿದ್ದು ಹಡಗಿನ ಹಗ್ಗಗಳ ಸಹಾಯದಿಂದ ಸಮುದ್ರ ತಳದ ಉದ್ದಕ್ಕೂ ನಿಧಾನವಾಗಿ ಎಳೆಯಲ್ಪಡುತ್ತದೆ. ಮೀನುಗಳು ಒಂದು ಸಲ ಬಲೆಯೊಳಕ್ಕೆ ಬಂದರೆ ಬಲೆಯಿಂದ ಹೊರಕ್ಕೆ ಈಜಿಕೊಂಡು ಹೋಗದಂತೆ ಕವಾಟದಂತಿರುವ ವಿಶೇಷ ಸಾಧನಗಳು ತಡೆಯುತ್ತವೆ. ಬಲೆಯ ಕೆಳಗಿನ ಅಂಚಾಗಿ ರೂಪುಗೊಂಡಿರುವ ಪಾದಹಗ್ಗ ಮುಖ್ಯವಾಗಿ ಮರಳಿನಲ್ಲಿ ಹುಗಿದು ನೆಲಸಿರುವ ಚಪ್ಪಟೆಮೀನುಗಳಂಥ ಮೀನುಗಳನ್ನು ಎಬ್ಬಿಸಲು ನೆರವಾಗುತ್ತದೆ. ಸುಮಾರು 12-15 ಮೀ ಉದ್ದದ ದಪ್ಪ ಮರದ ತೊಲೆಯನ್ನು ಬಾಯಿಯ ಮೇಲಿನ ಅಂಚಿನಲ್ಲಿ ಜೋಡಿಸಲಾಗಿರುವ ತೊಲೆ ಎಳೆಬಲೆಯನ್ನು (ಬೀಮ್ ಟ್ರಾಲ್) ಸಂಶೋಧನೆಯ ಉದ್ದೇಶಗಳಿಗಾಗಿ ಉಪಯೋಗಿಸುವುದುಂಟು. ಆದರೆ ವಿಶೇಷವಾಗಿ ಅತ್ಯಂತ ವ್ಯಾಪಕವಾಗಿ ಉಪಯೋಗಿಸುವ ಬಲೆ ಎಂದರೆ ಅಟ್ಟರ್ ಎಳೆಬಲೆ. ಇದರಲ್ಲಿ ಬಾಯಿಯ ಸುತ್ತ ಮರದ ತೊಲೆಯ ರಚನೆಯಿಲ್ಲ. ಬಲೆಯ ಬಾಯಿ 2-8 ಮೀ ಉದ್ದದ ಹಾಗೂ 1-2 ಮೀ ಎತ್ತರದ ಭಾರವುಳ್ಳ ಕಬ್ಬಿಣದಿಂದ ಕೂಡಿದ ಮರದಿಂದ ರಚಿತವಾದ ಎರಡು ದೊಡ್ಡ ಬಾಗಿಲುಗಳು ಅಥವಾ ಅಟ್ಟರ್ ಹಲಗೆಗಳ ಸಹಾಯದಿಂದ ತೆರೆದಿರುತ್ತದೆ. ಸಮುದ್ರತಳದ ಉದ್ದಕ್ಕೂ ಈ ಬಲೆಯನ್ನು ನಿಧಾನವಾಗಿ ಎಳೆದಾಗ ನೀರಿನ ಪ್ರತಿರೋಧ ಶಕ್ತಿ ಎರಡು ಬಾಗಿಲುಗಳನ್ನು ದೂರಕ್ಕೆ ತಳ್ಳುವುದರಿಂದ ಬಲೆಯ ಬಾಯಿ ಹೆಚ್ಚು ತೆರೆಯುತ್ತದೆ.

ಅನೇಕ ರಾಷ್ಟ್ರಗಳಲ್ಲಿ ವಿವಿಧ ರೀತಿಯ ಸೀನ್ ಬಲೆಗಳ ಉಪಯೋಗ ಉಂಟು. ಸೀನ್ ಬಲೆ ಉದ್ದವಾಗಿದ್ದು ಇದರ ಮೇಲಿನ ಅಂಚಿನಲ್ಲಿ ತೇಲುಬೆಂಡುಗಳನ್ನು ಕೆಳಗಿನ ಅಂಚಿನಲ್ಲಿ ಭಾರಗಳನ್ನು ಕಟ್ಟಲಾಗಿರುತ್ತದೆ. ಈ ಬಲೆಯನ್ನು ಮೀನಿನ ಒಂದು ಹಿಂಡು ಕಂಡುಬಂದಾಗ ಅದನ್ನು ಸುತ್ತುವರಿಯುವಂತೆ ಮಾಡಿ ಮೀನುಗಳನ್ನು ಬಲೆಯಲ್ಲಿ ಬಂಧಿಸಲಾಗುತ್ತದೆ. ಅನಂತರ ಸುಲಭವಾಗಿ ಹಿಡಿದು ತೆಗೆದುಕೊಳ್ಳಲು ಸಾಧ್ಯವಾಗುವಂತೆ ಕ್ರಮಕ್ರಮವಾಗಿ ದೋಣಿಯ ಹತ್ತಿರಕ್ಕೆ ಬಲೆಯನ್ನು ಎಳೆಯುತ್ತಾರೆ. ಈ ಬಲೆ ಸಾಮಾನ್ಯವಾಗಿ ಚಲಿಸುತ್ತಿರುವ ಒಂದು ದೋಣಿಯಿಂದ ಬಿಡಲ್ಪಡುವುದು ಅಥವಾ ಮೀನುಹಿಂಡನ್ನು ಒಂದು ವೃತ್ತ ಅಥವಾ ಅರ್ಧ ವೃತ್ತದಲ್ಲಿ ಸುತ್ತುವರಿಯುವಂತೆ ದೋಣಿಯಿಂದ ಹಾಯಿಸಲ್ಪಡುವುದು. ಕೊನೆಯಲ್ಲಿ ವಿಶೇಷ ಎತ್ತುಗೆ ಯಂತ್ರದ ಸಹಾಯದಿಂದ ದೋಣಿಯೊಳಕ್ಕೆ ಇಲ್ಲವೆ ಹಗ್ಗದ ಸಹಾಯದಿಂದ ದಡದ ಮೇಲಕ್ಕೆ ಎಳೆಯಲಾಗುತ್ತದೆ.

ಪರ್ಸ್ ಸೀನ್ ಎಂಬುದು ಚೀಲ ಬಲೆಗಳ ಪೈಕಿ ವಿಶೇಷ ತೆರನಾದ್ದು. ಇದರಿಂದ ಬಂಗುಡೆ. ಟ್ಯೂನ ಹೆರ್ರಿಂಗ್ ಹಾಗು ಮೆನ್‍ಹ್ಯಾಡೆನ್‍ನಂಥ ಗುಂಪುಗುಂಪಾಗಿ ಈಜುವ ಮೇಲಿನ ಸ್ತರದಲ್ಲಿರುವ ಮೀನುಗಳನ್ನು ಹಿಡಿಯಲು ಸಾಧ್ಯವಾಗುತ್ತದೆ. ಈ ಬಲೆಯನ್ನು ಕೊಂಡೊಯ್ಯುವ ದೋಣಿಗಳಿಗೆ ಪರ್ಸ್‍ಸೀನ್ ದೋಣಿಗಳೆಂದು ಕರೆಯುತ್ತಾರೆ. ಇದರೊಂದಿಗೆ ಒಂದು ಚಿಕ್ಕ ದೋಣಿಯಿದ್ದು ಇದನ್ನು ಡಿಂಗಿ ಎಂದು ಕರೆಯುತ್ತಾರೆ. ಮೀನಿನ ಹಿಂಡು ಕಾಣಿಸಿಕೊಂಡಾಗ ಅದನ್ನು ಸುತ್ತುವರಿದು ಬಂಧಿಸುವಂತೆ ಈ ಬಲೆಯನ್ನು ಹೂಡುತ್ತಾರೆ. ತರುವಾಯ ಬಲೆಯನ್ನು ಒಂದು ರೀತಿಯ ಚೀಲ ಅಥವಾ ಕೋಶದೊಳಕ್ಕೆ ಒಟ್ಟಿಗೆ ತಳದಲ್ಲಿ ಉಂಗುರಗಳ ಮೇಲೆ ಚಲಿಸುವ ಹಗ್ಗದ ಸಹಾಯದಿಂದ ಎಳೆಯುತ್ತಾರೆ. ಬಿರಟೆಯಿಂದ ರಚಿತವಾದ ತೇಲುವ ಚೆಂಡುಗಳಿಂದ ಬಲೆಯ ಶಿಖರ ನೆಟ್ಟಗೆ ನಿಲ್ಲುವಂತೆ ಮಾಡಲಾಗುವುದು.

ಇತ್ತೀಚೆಗೆ ಬ್ರಿಟಿಷ್ ಮೀನುಗಾರಿಕೆಯಲ್ಲಿ ಡೇನಿಷ್ ಸೀನ್ ಅಥವಾ ಸ್ನರ್‍ವಾಡ್ ಎಂಬ ಬಲೆಯನ್ನು ಬಳಸಲಾಗುತ್ತದೆ. ಈ ಬಲೆ ಅನೇಕ ಅಂಶಗಳಲ್ಲಿ ಟ್ರೌಲ್ ಹಾಗೂ ಸೀನ್‍ಗಳ ಮಧ್ಯಮ ರೀತಿಯದು. 50 ಮೀಟರಿಗಿಂತಲೂ ಉದ್ದವಿರುವ ಈ ಬಲೆಯ ಪ್ರತಿಯೊಂದು ಪಾಶ್ರ್ವಕ್ಕೂ ಸುಮಾರು ಒಂದು ಕಿಮೀಗೂ ಮೀರಿದ ಹಡಗಿನ ಎಳೆಯುವ ಹಗ್ಗವನ್ನೂ ಕಟ್ಟಲಾಗಿರುತ್ತದೆ. ಬಲೆಗೆ ಹೊಂದಿಕೊಂಡಂತೆ 15-20 ಮೀ ಉದ್ದದ ಒಂದು ದೊಡ್ಡ ಚೀಲ ಇರುತ್ತದೆ. ದಡದಮೇಲೆ ಎಳೆದು ತರಲಾಗದ ಈ ಬಲೆಯನ್ನು ತೀರದಾಚೆಯ ನೀರಿನಲ್ಲಿರುವ ಒಂದು ದೋಣಿಯಿಂದ ಕಾರ್ಯಾಚರಣೆಗೊಳಿಸುತ್ತಾರೆ.

ಕೊಚ್ಚುಬಲೆಗಳ (ಗಿಲ್ ನೆಟ್) ಕಾರ್ಯವಿಧಾನದ ಮೂಲತತ್ತ್ವ ಎಳೆಬಲೆ ಹಾಗೂ ಸೀನ್ ಬಲೆಗಳಿದ್ದಕ್ಕಿಂತ ಭಿನ್ನ ರೀತಿಯದು. ಕಾರ್ಯನಿರ್ವಹಣೆಯಲ್ಲಿ ಇದು ನಿಜವಾಗಿಯೂ ಮೀನುಗಳನ್ನು ಸಮೀಪಿಸುವುದಿಲ್ಲ. ಆದರೆ ಈ ಬಲೆಯನ್ನು ಸ್ಥಿರವಾಗಿ ನೆಲೆಗೊಂಡಿರುವ ಬಲೆ ಮತ್ತು ಬೋನುಗಳಂತಲ್ಲದೆ ನಿಧಾನವಾಗಿ ಚಲಿಸುತ್ತಿರುವ ಹಡಗಿಗೊ ಇಲ್ಲವೆ ತೇಲುತ್ತಿರುವ ಈಜುಬುರುಡೆಗೂ ಕಟ್ಟಲಾಗಿರುತ್ತದೆ. ಈ ಬಲೆ ಭಾರ ಹಾಗೂ ಗಾಳಿಯ ಪ್ರಭಾವದಿಂದಾಗಿ ಹಡಗಿನ ಅಥವಾ ತೇಲುಬುರುಡೆಯ ಜೊತೆಗೇ ಚಲಿಸುತ್ತದೆ. ಕೊಚ್ಚುಬಲೆಯಲ್ಲಿ ಹಿಡಿಯುವಂಥ ಮೀನುಗಳೆಂದರೆ ಸಮುದ್ರತಳದ ಮೇಲೆ ನೀರಿನ ಸ್ತರಗಳಲ್ಲಿ ಈಜುತ್ತ ತಮ್ಮ ಕಾಲವನ್ನು ಕಳೆಯುವ, ಆದರೆ ಹಗಲಿನಲ್ಲಿ ಸಂಪೂರ್ಣವಾಗಿ ಬಹಳ ಆಳಕ್ಕೆ ಇಳಿದು ರಾತ್ರಿಯಲ್ಲಿ ನೀರಿನ ಮೇಲ್ಮೈಯನ್ನು ಸಮೀಪಿಸುವ ಸ್ವಭಾವದ ಮೀನುಗಳು. ರಚನೆಯಲ್ಲಿ ಪ್ರತಿಯೊಂದು ಬಲೆಯೂ ಸುಮಾರು 12 ಮೀ ಆಳವುಳ್ಳ ಬಲಯುತವಾದ ಜಾಲದ ಒಂದು ಸರಳ ಹರವು. ಅದರ ಮೇಲಿನ ಅಂಚು ಬಿರಟೆಗಳಿಂದ ತೇಲುವಂತಿದ್ದರೆ ಕೆಳಗಿನ ಅಂಚು ಸೀಸದಗುಂಡುಗಳಿಂದ ಕೆಳಕ್ಕೆ ಜಗ್ಗುವಂತಿರುತ್ತದೆ. ರಾತ್ರಿ ಸಮೀಪಿಸಿದಂತೆ ಭರತದೊಂದಿಗೆ ಈ ಬಲೆಗಳನ್ನು ಬೀಸುತ್ತಾರೆ. ಒಂದೇ ಹಡಗಿನಿಂದ ಸುಮಾರು ಎಂಬತ್ತೈದು ಬಲೆಗಳನ್ನು ಒಂದೇ ಕಾಲದಲ್ಲಿ ಉಪಯೋಗಿಸುತ್ತಾರೆ. ಆಗ ನೀರಿನ ಮೇಲ್ಮೈಯಲ್ಲಿ ಅಥವಾ ಕೆಲವು ಮೀಟರು ಆಳದಲ್ಲಿ ಸುಮಾರು 5 ಕಿಮೀ ಉದ್ದದವರೆಗೆ ನೆಟ್ಟಗೆ ನಿಂತು ನೇತಾಡುತ್ತಿರುವ ಜಾಲದ ಒಂದು ಸಂಪೂರ್ಣ ಭಿತ್ತಿಯಂತೆಯೇ ಇವು ತೋರಿ ಬರುತ್ತವೆ. ಜಾಲದ ಭಿತ್ತಿಯ ಒಂದು ಕೊನೆಯಿಂದ ಕಟ್ಟಿರುವ ಹಡಗು ಭರತದೊಂದಿಗೆ ಅನೇಕ ಗಂಟೆಗಳ ತನಕ ಚಲಿಸುತತಿರುತ್ತದೆ. ಈ ಬಲೆಯ ಜಾಲರಂಧ್ರಗಳು ಮೀನುಗಳ ತಲೆಯನ್ನು ನೂಕಲು ಮಾತ್ರ. ಆದರೆ ದೇಹವನ್ನು ಹೊರಕ್ಕೆ ತಳ್ಳಲು ಸಾಧ್ಯವಾಗದಷ್ಟು ಚಿಕ್ಕವಾಗಿರುತ್ತವೆ. ಈ ಜಾಲರಂಧ್ರದೊಳಗೆ ಒಂದು ಸಲ ಮೀನಿನ ಕಿವಿರುಮುಚ್ಚಳಗಳು ಹೊಕ್ಕರೆ ಮೀನಿಗೆ ತನ್ನ ತಲೆಯನ್ನು ಅದರಿಂದ ಬಿಡಿಸಿಕೊಳ್ಳಲು ಅಸಾಧ್ಯವಾಗುತ್ತದೆ. ಹೀಗೆ ಕತ್ತಲೆಯಲ್ಲಿ ಅಸಂಖ್ಯಾತ ಮೀನುಗಳು ಬಲೆಯೊಳಕ್ಕೆ ಈಜಿಕೊಂಡು ಬಂದು ಅದಕ್ಕೆ ಸಿಕ್ಕಿಕೊಳ್ಳುತ್ತವೆ. ಬೆಳಗಾದಾಗ ಹಡಗಿಗೆ ಈ ಬಲೆಗಳೆಲ್ಲವನ್ನೂ ಎಳೆದುಕೊಂಡು ಬಂದು ಬಲೆಯಿಂದ ಮೀನುಗಳನ್ನು ಬಿಡಿಸಿ ಸಂಗ್ರಹಿಸುತ್ತಾರೆ.

ಕಾಡ್ ಹಾಗು ಹ್ಯಾಲಿಬಟ್‍ಗಳಂಥ ನೀರಿನ ತಳವಾಸಿ ಮೀನುಗಳನ್ನು ಹಿಡಿಯುವ ಪದ್ಧತಿಯೆ ಗಾಳದ ಹುರಿಯಿಂದ ಮೀನು ಹಿಡಿಯುವ ಪದ್ಧತಿಯೆನಿಸುತ್ತದೆ (ಲಾಂಗ್ ಲೈನಿಂಗ್). ನ್ಯೂ ಫೌಂಡ್‍ಲೆಂಡ್ ತೀರಗಳಲ್ಲಿ ಈ ವಿಧಾನದಿಂದ ಕಾರ್ಯಾಚರಣೆಯಲ್ಲಿದ್ದ ಕಾಡ್ ಮೀನುಗಾರಿಕೆ ಪ್ರಪಂಚದಲ್ಲಿಯೇ ಪ್ರಖ್ಯಾತವಾಗಿತ್ತು. ಹಳೆಯ ಕೈಗಾಳದ ಹುರಿಯ ಬಳಕೆ ಈಗ ಬಹು ವಿರಳ. ಬದಲಿಗೆ ಉದ್ದಗಾಳದ ಹುರಿಯ ಉಪಯೋಗ ರೂಢಿಗೆ ಬಂದಿದೆ. ಇದು ಸುಮಾರು 4000 ಮೀ ಗಿಂತ ಹೆಚ್ಚು ಉದ್ದವಿದ್ದು 0.75-2 ಮೀ ಉದ್ದದ ಗಿಡ್ಡಕೊಕ್ಕೆ ಹುರಿಗಳಿಗೆ (ಸ್ನೂಡ್ಸ್) ನಿಯಮಿತವಾದ ಅಂತರಗಳಲ್ಲಿ ಕಟ್ಟಿರುವ ಕೊಕ್ಕೆಗಳನ್ನು ಹೊಂದಿರುತ್ತದೆ. ಬಲೆಯಿರುವ ಸ್ಥಳವನ್ನು ಪತ್ತೆಮಾಡಲು ಅನುಕೂಲವಾಗುವಂತೆ ಒಂದು ತೇಲು ಬುರುಡೆ ಅಥವಾ ತೇಲುಚೆಂಡನ್ನು ಪ್ರತಿಯೊಂದು ದಾರಕ್ಕೂ ಕಟ್ಟಲಾಗಿರುತ್ತದೆ.

ಒಂದು ದೊಡ್ಡ ಮೋಟಾರ್ ಲೈನರಿನ ಒಂದು ಏಕೈಕ ಗಾಳದ ಹುರಿಯಮೇಲೆ ಕೊಕ್ಕೆಗಳ ಸಂಖ್ಯೆ 1000-5000 ರಷ್ಟಿರಬಹುದು. ಈ ಕೊಕ್ಕೆಗಳಿಗೆ ಸಿಕ್ಕಿಸುವ ಪ್ರಾಣಿಗಳೆಂದರೆ ಎರೆಗಳು. ಶಂಖ ಮೀನು, ಜೋಡು ಚಿಪ್ಪಿನ ಪ್ರಾಣಿಗಳು. ಕಟಲ್ ಮೀನುಗಳು ಹಾಗೂ ಹೆರ್ರಿಂಗ್‍ಗಳನ್ನೊಳಗೊಂಡಂತೆ ವಿವಿಧ ಬಗೆಯ ಮೀನುಗಳು. ಗಾಳದ ಹುರಿಗಳನ್ನು ಬೆಳಿಗ್ಗೆ ಇಲ್ಲವೆ ಮಧ್ಯಾಹ್ನ ಕಾಲಗಳಲ್ಲಿ ಹೂಡುತ್ತಾರೆ. ಈಚೆಗೆ ಸಾಮಾನ್ಯವಾಗಿ ಗಾಳದ ಹುರಿಯಿಂದ ಸ್ಯಾಲ್ಮನ್, ಕೆಂಪು ಸ್ನಾಪರ್, ಟ್ಯೂನ, ಹಾಲು ಹೆಂಚು, ಶಾರ್ಕ್ ಮೀನುಗಳನ್ನು ಹಿಡಿಯುವುದುಂಟು.

ಮೀನುಗಾರಿಕೆಯಲ್ಲಿ ಮೀನುಗಳ ಪಾತ್ರ ಹಿರಿದಾದರೂ ಸೀಗಡಿಗಳು (ಪ್ರಾನ್ಸ್) ಸಿಂಪಿಗಳು (ಆಯಿಸ್ಟರ್ಸ್). ಮರುವಾಯಿಗಳು. (ಕ್ಲ್ಯಾಮ್ಸ್). ಸಮುದ್ರನಳ್ಳಿಗಳು (ಲಾಬ್‍ಸ್ಟರ್ಸ್). ಏಡಿಗಳು (ಕ್ರ್ಯಾಬ್ಸ್) ಮುಂತಾದವು ಅನಂತರದ ಸ್ಥಾನವನ್ನು ಆಕ್ರಮಿಸುತ್ತವೆ. ಇವು ಕೂಡ ಈಗ ವಾಣಿಜ್ಯದ ಮೀನುಗಾರಿಕೆಯ ಮುಖ್ಯ ಅಂಗವೇ ಆಗಿದ್ದು ಭಾರತವನ್ನು ಒಳಗೊಂಡಂತೆ ಅನೇಕ ರಾಷ್ಟ್ರಗಳಲ್ಲಿ ಸೀಗಡಿ ಮೀನುಗಾರಿಕೆ ಇತ್ತೀಚೆಗೆ ವಿದೇಶಿ ವಿನಿಮಯಗಳಿಸುವಂಥ ಉದ್ಯಮವಾಗಿ ರೂಪುಗೊಂಡಿದೆ. ಅಳಿವೆಗಳಲ್ಲಿ, ತೀರಪ್ರದೇಶಗಳಲ್ಲಿ ಹಾಗೂ ಆಳಸಮುದ್ರಗಳಲ್ಲಿ ವಾಸಮಾಡುವ ಸೀಗಡಿಗಳನ್ನು ಸಾಮಾನ್ಯವಾಗಿ ಯಾಂತ್ರೀಕೃತ ದೋಣಿಗಳ ಎಳೆ ಬಲೆಗಳಿಂದ ಹಿಡಿಯುತ್ತಾರೆ. ಜಪಾನ್ ಹಾಗೂ ಇತರ ಕೆಲವು ರಾಷ್ಟ್ರಗಳು ಈಚೆಗೆ ಚೌಳು ನೀರಿನಲ್ಲಿ ಸೀಗಡಿಕೃಷಿಯನ್ನು ಕೈಗೊಂಡಿವೆ. ಸಿಂಪಿಗಳು ಹಾಗೂ ಮರುವಾಯಿಗಳು ನೀರಿನ ಅಲ್ಪ ಸೆಳೆತವಿರುವ ಆಳವಿಲ್ಲದ ನೀರಿನಲ್ಲಿ ವಾಸಿಸುತ್ತಿದ್ದು. ಇಂಥವು ಕೂಡ ನದಿ. ಸಮುದ್ರಗಳ ಮೀನುಗಾರಿಕೆಯಲ್ಲಿ ಮುಖ್ಯವೆನಿಸಿವೆ. ಈಗ ನದಿಗಳಲ್ಲಿ ಸಿಂಪಿ ಮತ್ತು ಮರುವಾಯಿಗಳನ್ನು ಕೃಷಿಮಾಡುವ ಮೂಲಕ ವಿಸ್ತಾರವಾದ ಒಂದು ಉದ್ಯೋಗವೇ ಸ್ಥಾಪಿತವಾಗಿದೆ. ಇಂಥಲ್ಲಿ ಸಿಂಪಿಗಳು ಹಾಗೂ ಮರುವಾಯಿಗಳಿಗೆ ರಕ್ಷಣೆಯನ್ನು ಕೊಡಲು ಬೇಲಿಯನ್ನು ಕಟ್ಟಿ ಅವನ್ನು ನಾಟಿ ಮಾಡಿ ಬೆಳೆಸಲಾಗುತ್ತದೆ. ಯುಕ್ತಕಾಲದಲ್ಲಿ ಅವನ್ನು ಇತರ ಬೆಳೆಗಳಂತೆಯೇ ಸಿಂಪಿಗಳನ್ನು ಕಬ್ಬಿಣದಿಂದ ಮಾಡಿದ ಉದ್ದವಾದ ಹಿಡಿಗಳುಳ್ಳ ಸಿಂಪಿ ಇಕ್ಕಳಗಳಿಂದ ಮರುವಾಯಿಗಳನ್ನು ವಿಶಿಷ್ಟ ಬಗೆಯ ಹಲುಬೆಗಳಿಂದ ಸಂಗ್ರಹಿಸಲಾಗುತ್ತದೆ. ಸಮುದ್ರ ನಳ್ಳಿಗಳನ್ನು ಹಾಗೂ ಏಡಿಗಳನ್ನು ಮರದ ಅಥವಾ ತಂತಿಯ ಬೋನುಗಳಿಂದ ಹಿಡಿಯಲಾಗುತ್ತದೆ. ಸರ್ವೋತ್ಕøಷ್ಟವಾದ ಸಮುದ್ರ ನಳ್ಳಿಗಳು ಮತ್ತು ಮರುಪಾಯಿಗಳು ಕೆನಡದಿಂದ ; ಸಿಂಪಿಗಳು ಅಮೆರಿಕ ಸಂಯುಕ್ತ ಸಂಸ್ಥಾನ. ರೋಡ್ ದ್ವೀಪಗಳು, ಕನ್ನೆಕ್ಟಿಕಟ್, ಲಾಂಗ್ ಐಲೆಂಡ್‍ಗಳು, ಚೆಸಾಪೀಕ್ ಕೊಲ್ಲಿ, ಭಾರತ ಮತ್ತು ಇತರ ರಾಷ್ಟ್ರಗಳಿಂದ ದೊರಕುತ್ತವೆ. ನ್ಯೂ ಇಂಗ್ಲೆಂಡ್‍ನ ತೀರ ಇಚ್ಚಿಪ್ಪು ಮೀನುಗಾರಿಕೆಗೆ ಹೆಸರಾಂತಿದೆ.

ಸಮುದ್ರತೀರದಲ್ಲಿ ಕಂಡುಬರುವ ಮೀನು ಹಿಡಿಯುವಿಕೆಗೆ ಕರಾವಳಿ ಮೀನುಗಾರಿಕೆ ಎಂದು ಹೆಸರು. ಇದರಲ್ಲಿ ಮೊದಲನೆಯ ಪದ್ಧತಿಯೆಂದರೆ ವಿವಿಧ ರೀತಿಯ ಬಲೆಗಳಿಂದ ಪರಂಪರಾನುಗತವಾಗಿ ನಡೆದುಬಂದ ಮಾನವಶಕ್ತಿಯಿಂದ ನಡೆಸಲಾಗುವ ಸಾಂಪ್ರದಾಯಿಕ ಮೀನುಗಾರಿಕೆ. ಯಾಂತ್ರೀಕೃತದೋಣಿಗಳಿಂದ ವೈವಿಧ್ಯಮಯ ಬಲೆಗಳನ್ನು ಬಳಸಿ ಮೀನು ಹಿಡಿಯುವ ಮೀನುಗಾರಿಕೆ ಮತ್ತೊಂದು ಹೀಗೆ ಹಿಡಿದ ಮೀನುಗಳನ್ನು. ರಫ್ತಿಗಾಗಿ ಸಂಸ್ಕರಣ ಮಾಡುವುದು ಮೀನುಗಾರಿಕೆಯ ಮೂರನೆಯ ಹಂತ. ರಂಪಣಿ, ಕಿವಿರುಬಲೆ, ಎಸೆಬಲೆ ಮತ್ತು ಇತರ ಬಲೆಗಳಿಂದ ತೀರದದ್ದಕ್ಕೂ ಸಮುದ್ರ ಮೀನುಗಳಾದ ಬಂಗುಡೆ, ಬೂತಾಯಿ ಮುಂತಾದವುಗಳನ್ನು ಹಿಡಿಯುತ್ತಾರೆ. ಯಾಂತ್ರೀಕೃತ ದೋಣಿಗಳಿಂದ ಅಟ್ಟರ್ ಟ್ರಾಲ್ ಎಳೆಬಲೆ, ಸಂಚಿಬಲೆ (ಪರ್ಸ್ ಸೀನ್) ಇತ್ಯಾದಿ ಸಾಧನಗಳನ್ನು ಬಳಸಿ ಹೇರಳ ಮೊತ್ತದಲ್ಲಿ ಮೀನುಗಳನ್ನು ಹಿಡಿಯುವುದುಂಟು. ಇದಕ್ಕೋಸ್ಕರವಾಗಿಯೇ ಸುಧಾರಿತ ಯಾಂತ್ರಿಕ ದೋಣಿಗಳನ್ನು ರಚಿಸುವುದಕ್ಕೆ ದೋಣಿ ನಿರ್ಮಾಣ ಕೇಂದ್ರಗಳು ಸ್ಥಾಪಿತವಾಗಿವೆ. ಅಂತೆಯೇ ಮೀನುಗಾರರ ತರಬೇತಿ ಕೇಂದ್ರಗಳ ಸ್ಥಾಪನೆಯೂ ಆಗಿದೆಯಲ್ಲದೆ ಮೀನುಗಾರಿಕೆ ಬಂದರುಗಳ ಹಾಗೂ ಇಳಿದಾಣಗಳ ನಿರ್ಮಾಣವೂ ನಡೆಯುತ್ತಿದೆ.

ಒಳನಾಡು ಮೀನುಗಾರಿಕೆ: ಸಾಮಾನ್ಯವಾಗಿ ಕೆರೆ ಕೊಳ ನದಿ ಸರೋವರ ಮುಂತಾದ ಸಿಹಿನೀರು ಪ್ರದೇಶಗಳಲ್ಲಿ ಮತ್ತು ಆಳಿವೆಗಳಲ್ಲಿ ಮೀನುಗಳನ್ನು ಹಿಡಿಯುವ ಮತ್ತು ಸಾಕಾಣಿಕೆ ಪದ್ಧತಿಗೆ ಒಳನಾಡು ಮೀನುಗಾರಿಕೆ ಎಂದು ಹೆಸರು. ಸಿಹಿನೀರು ಪ್ರದೇಶಗಳು ವೈವಿಧ್ಯಮಯವಾಗಿರುವಂತೆಯೇ ಇವುಗಳಲ್ಲಿ ಮೀನು ಹಿಡಿಯಲು ವಿವಿಧ ರೀತಿಯ ಯಥೋಚಿತ ಸಾಧನ ಸಲಕರಣೆಗಳೂ ಉಪಯೋಗಿಸಲ್ಪಡುತ್ತವೆ.

ಒಳನಾಡು ಮೀನುಗಾರಿಕೆಯಲ್ಲಿ ಉಪಯುಕ್ತವೆನಿಸುವ ಪ್ರಮುಖ ಸಾಧನಗಳೆಂದರೆ-ತೆಪ್ಪ, ತೋಡು ದೋಣಿ, ಮತ್ತು ಹರಿಗೊಳುಗಳು. ದೋಣಿಗಳಲ್ಲಿ ಹಲಗೆಗಳಿಂದ ನಿರ್ಮಿಸಿದ ದೋಣಿಗಳು ಮತ್ತು ದೊಡ್ಡ ಮೀನು ಹಿಡಿಯುವ ದೋಣಿಗಳು ಬಳಕೆಯಲ್ಲಿವೆ.. ಬಾಳೆಯದಿಂಡು ಮತ್ತು ಶೋಲ ಕಡ್ಡಿಗಳಿಂದ ಕಂತೆಗಳನ್ನು ಒಟ್ಟಿಗೆ ಕಟ್ಟಿ ಅದರಮೇಲೆ ಊದಿ ಉಬ್ಬಿಸಿದ ಚರ್ಮವನ್ನು ಬಿಗಿದು ಒಂದು ಒರಟು ತೆಪ್ಪವನ್ನು ರಚಿಸಿ ತೆಪ್ಪದಮೇಲೆ ಕುಳಿತು ಬಲೆಹಾಕಿ ಮೀನು ಹಿಡಿಯುತ್ತಾರೆ. ಮಗುಚಿಹಾಕಿದ ಮಡಕೆಗಳನ್ನು ಬೊಂಬುಗಳ ಪಟ್ಟಿಯೊಡನೆ ಕೂಡಿಸಿ ಕಟ್ಟಿಹಾಕಿದರೆ ಇನ್ನೊಂದು ರೀತಿಯ ತೆಪ್ಪವಾಗುತ್ತದೆ. ದನ ಹಾಗೂ ಎಮ್ಮೆ ಚರ್ಮವನ್ನು ಉಪಯೋಗಿಸಿ, ಬಿದುರಿನಿಂದ ರಚಿಸಿದ ದುಂಡಗಿನ ಹರಿಗೋಲನ್ನು ರಚಿಸುವುದುಂಟು. ಇತ್ತೀಚೆಗೆ ಫೈಬರ್ ಗ್ಲಾಸ್ ನಿಂದ ತಯಾರಿಸಿದ ಸಿಂಥಟಿಕ್ ಹರಿಗೋಲುಗಳೂ ಬಳಕೆಯಲ್ಲಿವೆ. ತೋಡು ದೋಣಿಗಳಲ್ಲಿ ಮುಖ್ಯವಾದವು ಡೊಂಗ ಮತ್ತು ಏಕ್ಹತಾ. ಡೋಂಗ ಹಲಗೆಗಳಿಂದ ರಚಿತವಾಗಿದೆಯಾದರೆ ಏಕ್ಹತಾ ತಾಳಿಯಮರದ ಕೆಳಗಿನ ತುದಿಗಳಿಂದ ರಚಿತವಾಗಿದೆ. ಡಿಂಗ್ಹಿನ್ ಮತ್ತು ಚಿಪ್ ಎಂಬವನ್ನು ಹಲಗೆಗಳಿಂದ ನಿರ್ಮಿಸಲಾಗುತ್ತದೆ. ನದಿಗಳಲ್ಲಿ ಮೀನುಹಿಡಿಯುವುದಕ್ಕೂ ಅವುಗಳನ್ನು ಸಾಗಿಸುವುದಕ್ಕೂ ಇವು ಉಪಯುಕ್ತ. ದೊಡ್ಡ ಮೀನು ಹಿಡಿಯುವ ದೋಣಿಗಳು ಒಳ್ಳೆಯ ಮರದಿಂದ ರಚಿತವಾಗಿದ್ದು ಗಟ್ಟಿಮುಟ್ಟಾಗಿಯೂ ಬಲಯುತವಾಗಿಯೂ ಇರುವುವು. ಇವನ್ನು ಹುಟ್ಟುಗಳಿಂದಲೊ ಎಣ್ಣೆಯಂತ್ರಗಳಿಂದಲೊ ನಡೆಸಬಹುದು.

ಸಿಹಿನೀರಿನ ಮೀನುಗಳನ್ನು ಹಿಡಿಯುವ ಸಲಕರಣೆಗಳಲ್ಲಿ ವೈವಿಧ್ಯವಿದೆ. ಅವೆಂದರೆ ಗಾಳದ ಹುರಿ, ಕಿವಿರು ಬಲೆ ಎಳೆಯುವ ಬಲೆ, ಸಂಚಿ ಬಲೆ, ಎಸೆಯುವ ಬಲೆ ಬೋನು ಮುಂತಾದವು.

ಗಾಳದ ಹುರಿಗಳಿಂದ ಮೀನುಹಿಡಿಯುವ ಕ್ರಮದಲ್ಲಿ ಮೂರು ವಿಧ: ಗಾಳದ ಕೋಲು ಮತ್ತು ಹುರಿ. ಉದ್ದವಾದ ಗಾಳದ ಹುರಿ ಮತ್ತು ಎಸೆಯುವ ಗಾಳದ ಹುರಿ. ಈ ಎಲ್ಲ ಗಾಳದ ಹುರಿಗಳಿಂದ ಹುಳುಗಳನ್ನೊ ಸೀಗಡಿಗಳನ್ನೊ, ಕಳೆಮೀನುಗಳನ್ನೊ ಎರೆಗಳಂತೆ ಉಪಯೋಗಿಸಿ ಮೀಸೆಮೀನು, ಗೆಂಡೆ, ಬಿಳಿಮೀನು (ಮಹಸೀರ್), ಹಾವುಮೀನು, ಕುಚ್ಚುಮೀನು ಮುಂತಾದವನ್ನು ಹಿಡಿಯುತ್ತಾರೆ. ಕಿವಿರು ಬಲೆಗಳು ಹಾಗೂ ಪಾತಾಳಗರಡಿ ಬಲೆಗಳು ಏಕಭಿತ್ತಿಯ ಬಲೆಗಳು. ಮೀನುಗಳು ಇವುಗಳ ಬಲೆಗಳ ಕಣ್ಣುಗಳಲ್ಲಿ ತಮ್ಮ ಕಿವಿರು ಮುಚ್ಚಳದ ಹಿಂದಿನ ಭಾಗದಿಂದ ಸಿಕ್ಕುತ್ತವೆ. ವಿವಿಧ ರೀತಿಯ ಕಿವಿರು ಬಲೆಗಳಿಂದ ವರ್ಷಪೂರ್ತಿ ಗೆಂಡೆಗಳಂಥ ಮೀನುಗಳನ್ನು ಹಿಡಿಯುವುದುಂಟು. ಕೆರೆಗಳಲ್ಲಿ ಸಿಹಿನೀರಿನ ಸರೋವರಗಳಲ್ಲಿ ಸಾಮಾನ್ಯವಾಗಿ ಎಳೆಯುವ ಬಲೆ ಮತ್ತು ತೀರದ ಸೀನ್‍ಬಲೆಗಳಿಂದ ಪರಿಣಾಮಕಾರಿಯಾಗಿ ಮಾಲಾಗಳು. ಗಾರ್‍ಮೀನುಗಳು, ಅರೆಕೊಕ್ಕುಗಳು. ಸಣ್ಣ ಮೀನುಗಳು, ಸೀಗಡಿಗಳು ಮತ್ತು ಏಡಿಗಳನ್ನು ಹಿಡಿಯಲಾಗುತ್ತದೆ. ಸ್ಥಿರವಾದ ನೆಲೆಗೊಳಿಸುವ ಶಂಕ್ವಾಕಾರದ ಸಂಚಿಬಲೆ ಮತ್ತು ಬೆದರು ಗಾಳದ ಹುರಿಗಳಿಂದ ಹೆಚ್ಚಾಗಿ ಮಾಲಾಗಳು, ನೆಮಟೆಲೋಸ್ ನಾಸಸ್, ಕಾಣೆ, ಮಟ್ಟತಲೆಯ ಮೀನು, ಸೀಗಡಿ, ತುರಗಿಮೀನು, ಬಿಳಿಸುರಗಿಮೀನು ಹಾಗೂ ಕೋಬಿಡ್ ಮೀನುಗಳನ್ನು ಹಿಡಿಯುವುದುಂಟು. ಸ್ಥಿರವಾಗಿ ನಿಂತ ಬೋನುಬಲೆಗಳಾದ ಸ್ಟೇಕ್‍ಬಲೆ ಮತ್ತು ಮುಳುಗು ಬಲೆಗಳಿಂದ ಸರೋವರ ಮೀನುಗಳನ್ನೂ ವಿಶೇಷವಾಗಿ ಸೀಗಡಿಗಳನ್ನೂ ಹಿಡಿಯುತ್ತಾರೆ. ಅತ್ಯಂತ ಸಾಮಾನ್ಯವಾಗಿ ಉಪಯೋಗಿಸುವ ಎಸೆ ಬಲೆಯಿಂದ ಅಳಿವೆ ಹಾಗೂ ನದಿಗಳಲ್ಲಿ ವಿವಿಧ ಮೀನುಗಳನ್ನೂ ಸೀಗಡಿಗಳನ್ನೂ ಹಿಡಿಯುವುದುಂಟು. ಮೀನುಗಳು ಸಿಕ್ಕಿ ಹಾಕಿಕೊಳ್ಳಲು ಮೀನು ಬೋನುಗಳೊ ಸಹಾಯಕಾರಿ. ಬೆತ್ತದಿಂದ ಹೆಣೆದು ಮಾಡಿದ ಬೋನುಗಳು ರೂಢಿಯಲ್ಲಿ ಕೊಡಮೆ, ದಂಡಿ, ಆಯಾಕಾರ, ವೃತ್ತಾಕಾರ, ಪಂಜರದ ಬೋನುಗಳೆಂದು ಹೆಸರುವಾಸಿಯಾಗಿದೆ. ಮೀನು ಹಿಡಿಯುವ ಇನ್ನೊಂದು ವಿಶಿಷ್ಟ ವಿಧಾನವೆಂದರೆ ಮೀನುಗಳನ್ನು ನಿಶ್ಚೇತನಗೊಳಿಸಿ ಹಿಡಿಯುವುದು. ಇದರಲ್ಲಿ ಮೂರು ವಿಧಗಳುಂಟು. 1 ಯಾಂತ್ರಿಕ ಜಡಗೊಳಿಸುವಿಕೆ: ಡೈನಾಮೈಟನ್ನು ನೀರಿನಲ್ಲಿ ಆಸ್ಛೋಟಿಸಿ ಮೀನುಗಳನ್ನು ಜಡಗೊಳಿಸಿ ಹಿಡಿಯುವುದಿದೆ. 2 ರಾಸಾಯನಿಕ ಜಡಗೊಳಿಸುವಿಕೆ : ವಿವಿಧ ರೀತಿಯ ವಿಷಗಳಿಂದ ಮೀನುಗಳನ್ನು ಮಂಕುಗೊಳಿಸಿ ಹಿಡಿಯುವು ದುಂಟು. 3 ವಿದ್ಯುತ್ತಿನಿಂದ ಜಡಗೊಳಿಸುವಿಕೆ: ವಿದ್ಯುತ್ ಕ್ಷೇತ್ರವನ್ನು ನಿರ್ಮಿಸಿ ಮೀನುಗಳನ್ನು ಮರವಡಿಸಿ ಹಿಡಿಯುವುದು. ಆದರೆ ಈ ವಿಧಾನಗಳು ಅಪಾಯಕಾರಿಯಾದ್ದರಿಂದ ನಿಷೇಧಕ್ಕೊಳಗಾಗಿವೆ

ಸಂಸ್ಕರಣೆ ಮತ್ತು ಮೀನು ಉತ್ಪನ್ನಗಳು: ಮೀನುಗಾರಿಕೆಯಲ್ಲಿ ಮೀನು ಸೆರೆಹಿಡಿಯುವುದಕ್ಕೆ ಪ್ರಥಮ ಪ್ರಾಶಸ್ತ್ಯ. ಅನಂತರದ ಕ್ರಮಗಳಿಗೂ ಆದ್ಯತೆ ಉಂಟು. ಮೀನು ಹಿಡಿದ ಮೇಲೆ ಅವನ್ನು ಉಪಯೋಗಿಸುವ ತನಕ ಜೋಪಾನಮಾಡಿ ರಕ್ಷಿಸುವುದು ಅತ್ಯಂತ ಆವಶ್ಯಕ. ಮೀನು, ಸಿಗಡಿ, ಸಿಂಪಿಗಳ ಮಾಂಸ ಶೀಘ್ರವಾಗಿ ಕೊಳೆತುಹೋಗುವಂತ ಸರಕು. ಮೀನು ಸತ್ತ ತತ್‍ಕ್ಷಣವೇ ಬ್ಯಾಕ್ಟಿರಿಯಾದಂಥ ಸೂಕ್ಷ್ಮ ಜೀವಿಗಳ ಆಕ್ರಮಣದಿಂದಾಗಿ, ಹಾಗೂ ಅದರ ದೇಹದಲ್ಲಿರುವ ಕಿಣ್ಣಗಳ ಕ್ರಿಯೆಯಿಂದಾಗಿ ಕೆಲವು ಅನಪೇಕ್ಷಣೀಯ ಬದಲಾವಣೆಗಳಿಗೆ ಒಳಗಾಗುವುದರಿಂದ ಅದನ್ನು ಹಾಗೆಯೇ ಬಿಟ್ಟರೆ ಕೊನೆಯಲ್ಲಿ ಅದು ಮಾನವನ ಉಪಯೋಗಕ್ಕೆ ಬಾರದಂತೆ ಅನುಪಯುಕ್ತವಾಗುತ್ತದೆ. ಹಿಡಿದ ಮೀನುಗಳನ್ನು ದೀರ್ಘಕಾಲ ಕೆಡದಂತೆ ಸಂರಕ್ಷಿಸಲು ಆಧುನಿಕ ಸಾಧನಗಳನ್ನು ವಿಧಾನಗಳನ್ನು ರೂಪಿಸಲಾಗಿದೆ. ಆಗತಾನೆ ಹಿಡಿದ ಮೀನುಗಳನ್ನು ದೂರದ ಸ್ಥಳಗಳಿಗೆ ಒಯ್ಯಲು ಮಂಜುಗಡ್ಡೆಯ ಬಳಕೆ ವ್ಯಾಪಕವಾಗಿದೆ. ಅಲ್ಲದೆ ಬಹುಕಾಲ ಕೆಡದಂತೆ ಸಂಗ್ರಹಿಸಲು ಹಲವಾರು ವಿಧಾನಗಳು ಬಳಕೆಯಲ್ಲಿವೆ. ಉದಾ. ಶೀತಘನೀಕರಣ, ಡಬ್ಬೀಕರಣ, ಒಣಗಿಸುವಿಕೆ ಇತ್ಯಾದಿ.

ಉಪಯೋಗದಲ್ಲಿರುವ ಮೀನುಸಂಸ್ಕರಣದ ಮುಖ್ಯ ವಿಧಾನಗಳೆಂದರೆ: 1 ಉಪ್ಪು ಹಾಕುವಿಕೆ ಅಥವಾ ಉಪ್ಪುನೀರಿನಲ್ಲಿ ಉನಿ ಹಾಕುವಿಕೆ 2 ಹೊಗೆ ಹಾಕುವಿಕೆ 3 ಒಣಗಿಸುವಿಕೆ, 4. ಶೀತಘನೀಕರಣ, ಹಾಗೂ 5. ಡಬ್ಬಿಜೋಪಾಸನೆ. ಉಪ್ಪು ಹಾಕುವಿಕೆ ಪ್ರಪಂಚಾದ್ಯಂತ ಬಳಕೆಯಲ್ಲಿರುವ ಒಂದು ಸಾಮಾನ್ಯ ವಿಧಾನ. ಯೂರೋಪ್ ಹಾಗೂ ಅಮೆರಿಕಗಳಲ್ಲಿ ಕಾಡ್‍ಮೀನುಗಳನ್ನು ಹೀಗೆ ಉಪ್ಪು ಹಾಕಿ ಒಣಗಿಸುವುದು ಒಂದು ಪ್ರಮುಖ ಉದ್ಯಮವಾಗಿದೆ. ಈ ವಿಧಾನ ಉಳಿದ ದೇಶಗಳಲ್ಲಿಯೂ ಇತ್ತೀಚೆಗೆ ವ್ಯಾಪಕವಾಗುತ್ತಿದೆ. ಕೆಲವು ವೇಳೆ ಇಡೀ ಕಾರ್ಯವಿಧಾನವನ್ನು ದಡದ ಮೇಲೆಯೇ ನಡೆಸಲಾಗುವುದು. ಮೀನುಗಳನ್ನು ಹಿಡಿದ ತತ್‍ಕ್ಷಣವೇ ಅವುಗಳ ತಲೆತೆಗೆದು ದೇಹವನ್ನು ಸೀಳಿ ಶುಚಿಮಾಡಿ ಉಪ್ಪುಹಾಕಿ ಉಪ್ಪಿನ ಸ್ತರಗಳ ಮಧ್ಯೆ ಇರುವಂತೆ ಮಾಡಿ ಮೀನುಕುಳಿಗಳಲ್ಲಿ ರಾಶಿ ಮಾಡಲಾಗುತ್ತದೆ. ಅನಂತರ ಸಂಸ್ಕರಣಸ್ಥಳಕ್ಕೆ ಉಪ್ಪೂರಿಸಿದ ಮೀನುಗಳನ್ನು ಸಾಗಿಸುತ್ತಾರೆ. ಇಲ್ಲಿಯೇ ಅವುಗಳನ್ನು ಒಣಗಿಸಿ ರಫ್ತುಮಾಡಲು ಪೀಪಾಯಿಗಳಲ್ಲಿ ಕೊನೆಗೆ ಗಂಟುಕಟ್ಟಿ ಇಡುತ್ತಾರೆ. ಅನೇಕ ಶತಮಾನಗಳ ತನಕ ಉಪ್ಪು ಹಾಕಿದ ಮೀನುಗಳು (ಕಾಡ್) ಯೂರೊಪಿನ ವಿವಿಧ ದೇಶಗಳ ಅರ್ಥವ್ಯವಸ್ಥೆಯಲ್ಲಿ ಒಂದು ಪ್ರಮುಖ ಪಾತ್ರವಹಿಸಿದ್ದವೆಂಬುದು ಉಲ್ಲೇಖಾರ್ಹ. ಮೀನಿಗೆ ಹೊಗೆ ಊಡುವುದು ಉಪ್ಪು ಹಾಕುವುದರ ಮತ್ತು ಒಣಗಿಸುವುದರ ವಿಧಾನದಂತೆಯೇ ಇದೆ. ಹೊಗೆ ಹಾಕುವುದು ಸಾಮಾನ್ಯವಾಗಿ ಹೆರಿಂಗ್. ವೈಟಿಂಗ್, ಕಾಡ್, ಲಿಂಗ್, ಸೈಥ್ ಹ್ಯಾಡಕ್. ಮೀಸೆಮೀನು. ಬುಂಗಡೆ ಮುಂತಾದ ಮೀನುಗಳಿಗೆ ಅನ್ವಯವಾಗುತ್ತದೆ. ಆದಿಮಾನವ ತಾನು ಹಿಡಿದ ಮೀನನ್ನು ಶಿಬಿರದ ಹೊರಗೆ ಬೆಂಕಿಯ ಮೇಲೆ ತೂಗಾಡಿಸುತ್ತ ಹೊಗೆ ಊಡುತ್ತಿದ್ದ. ಈಗಲೂ ಅನೇಕ ಹಳೆಯ ಜನಾಂಗಗಳಲ್ಲಿ ಈ ಪದ್ಥತಿ ಉಂಟು. ಆದರೆ ವಾಣಿಜ್ಯ ಮೀನುಗಾರಿಕೆ ಬೆಳೆದಂತೆ ಹೆಚ್ಚಿನ ಸಾಮಥ್ರ್ಯದ ವಿಧಾನಗಳು ಅಗತ್ಯವಾದವು. ಆಧುನಿಕ ಹೊಗೆಮನೆಯಲ್ಲಿ ಒಂದೇ ಸಮಯದಲ್ಲಿ ಸಾವಿರಾರು ಮೀನುಗಳನ್ನು ಸಂಸ್ಕರಿಸಬಹುದಾಗಿದೆ. ಬೆಂಕಿಮಾಡಲು ಉಪಯೋಗಿಸುವ ಮರಗಳು ವಿಶೇಷವಾದ ಪ್ರಾಮುಖ್ಯ ಪಡೆದಿವೆ. ಗಡಸುಮರಗಳಾದ ಓಕ್, ಹಿಕರಿ, ಮಹಾಗನಿ ಮುಂತಾದ ಮರಗಳನ್ನು ಸಾಮಾನ್ಯವಾಗಿ ಈ ಕಾರ್ಯಕ್ಕೆ ಬಳಸಲಾಗುತ್ತದೆ. ಏಕೆಂದರೆ ಈ ಮರಗಳಲ್ಲಿ ಕಡಿಮೆ ಮೊತ್ತದ ಎಣ್ಣೆ ಹಾಗೂ ರಾಳಗಳಿರುವವಲ್ಲದೆ ಇವು ಮೀನಿಗೆ ಒಂದು ಬಗೆಯ ರುಚಿಯನ್ನು ಸಹ ಕೊಡಬಲ್ಲವು. ನೇರ ಮರವನ್ನೇ ಉರಿಸಿ ಹೊಗೆ ಉಂಟುಮಾಡುವುದಿಲ್ಲ. ಆದರೆ ಮರದಪುಡಿಯನ್ನು ಉರಿಸುತ್ತ ದಟ್ಟವಾದ ಹೊಗೆಯ ಮೋಡಗಳನ್ನು ಉತ್ಪತ್ತಿಮಾಡಿ ಮೀನುಗಳನ್ನು ಸುಡುತ್ತಾರೆ. ಹೊಗೆ ಊಡುವುದರ ಮೊದಲು ಮೀನಿನ ತಲೆ ಕತ್ತರಿಸಿ ಕೆಳಗಿನ ಭಾಗದವರೆಗೆ ಸೀಳಿ, ಒಳಗಿನ ಭಾಗಗಳನ್ನು ತೆಗೆದು ಹಾಕಲಾಗುತ್ತದೆ. ಅನಂತರ ಅದನ್ನು ತೊಳೆದು ಅಲ್ಪಕಾಲದ ತನಕ ಉಪ್ಪುನೀರಿನ ಸಾರದ್ರಾವಣದಲ್ಲಿ ಮುಳಿಗಿಸಿ ಒಣಗಿಸಿ 5ರಿಂದ 6 ಗಂಟೆಯತನಕ ಹೊಗೆಗೆ ಹಿಡಿಯಲಾಗುತ್ತದೆ. ಮೀನಿನ ಸಂಸ್ಕರಣದ ಇನ್ನೊಂದು ವಿಧಾನ ಒಣಗಿಸುವಿಕೆ. ಬಿಸಿಲು ಹೆಚ್ಚಾಗಿವಂಥ ಉಷ್ಣವಲಯ ದೇಶಗಳಲ್ಲಿ ಈ ಕ್ರಮ ಹೆಚ್ಚು ಪ್ರಚಲಿತವಿದೆ. ಒಣಗಿದ ಮೀನುಗಳೇ ಪ್ರಧಾನ ಆಹಾರವಾಗಿರುವ ದೇಶಗಳಾದ ಆಫ್ರಿಕ, ಭಾರತ, ಮಲಯ, ಫಿಲಿಪೀನ್ಸ್, ಚೀನ ಹಾಗೂ ಜಪಾನ್‍ಗಳಲ್ಲಿ ಈ ವಿಧಾನ ಜನಪ್ರಿಯ ಆಗಿದೆ. ಸಾಮಾನ್ಯವಾಗಿ ಮೀನುಗಳನ್ನು ಸರಳವಾಗಿ ಕತ್ತರಿಸಿ. ಒಳಗಿನ ಭಾಗಗಳನ್ನು ತೆಗೆದುಹಾಕಿ ಬಿಸಿಲಿನಲ್ಲಿ ಒಣಗಲು ಬಿಡುತ್ತಾರೆ. ಆದರೆ ಕೆಲವು ವೇಳೆ ಒಣಗಿಸುವ ಮೊದಲು ಸ್ವಲ್ಪಮಟ್ಟಿಗೆ ಉಪ್ಪಿನಲ್ಲಿ ಹಾಕುವುದುಂಟು. ಶೀತಘನೀಕರಣ ಒಂದು ಆಧುನಿಕ ಆಹಾರ ಸಂರಕ್ಷಣಾ ವಿಧಾನ. ಇದರಲ್ಲಿ ಮೀನುಗಳನ್ನು ಅತ್ಯಂತ ಕಡಿಮೆ ಉಷ್ಣತೆಯಲ್ಲಿ ಕೆಡದಂತೆ ರಕ್ಷಿಸಬಹುದಾಗಿದೆ. ವಿದೇಶಗಳಿಗೆ ರಫ್ತು ಮಾಡಲಾಗುವ ಮೀನುಗಳು, ಸೀಗಡಿಗಳನ್ನು ಸೂಕ್ತರೀತಿಲ್ಲಿ ಪೊಟ್ಟಣೀಕರಿಸಿ ಅವುಗಳನ್ನು ಶೀತಘನೀಕರಣ ಯಂತ್ರದಲ್ಲಿ ಸುಮಾರು 1 ರಿಂದ 1.50 ಗಂಟೆ ಅವದಿಯಲ್ಲಿ — 250 ಸೆ ನಿಂದ 400 ಸೆ. ಗೆ ತರಲಾಗುತ್ತದೆ. ತದನಂತರ ಇವುಗಳನ್ನು -180 ಸೆ ಉಷ್ಣತೆಯಲ್ಲಿ ಶೇಖರಿಸಿಡಲಾಗುವುದು. ಈ ವಿಧಾನದಿಮದ ಆಹಾರವನ್ನು 6 ತಿಂಗಳ ವರೆಗೆ ಉತ್ತಮ ಸ್ಥಿತಿಯಲ್ಲಿಡಬಹುದು. ಮೀನು ಸಂಸ್ಕರಣದ ಇನ್ನೊಂದು ವಿಧಾನವೆಂದರೆ ಡಬ್ಬಿಜೋಪಾಸನೆ. ಇದು ಸಂರಕ್ಷಣೆಯ ಆಧುನಿಕ ವಿಧಾನವಾಗಿದ್ದು ಆನೇಕ ಅನುಕೂಲಗಳನ್ನು ಪಡೆದಿದೆ. ಅಮೆರಿಕದಲ್ಲಂತೂ ಇದು ಅತ್ಯಂತ ಮುಖ್ಯವಾದ ಉದ್ಯಮವೇ ಆಗಿಹೋಗಿದೆ. ಅಮೆರಿಕದಲ್ಲಿ ಪೆಸಿಫಿಕ್ ಸ್ಯಾಲ್ಮನ್, ಯೂರೋಪಿನಲ್ಲಿ ಹೆರಿಂಗ್, ಸ್ಪ್ರಾಟ್, ಬೂತಾಯಿ, ಆ್ಯಂಚೊವಿ, ಬಂಗುಡೆ ಹಾಗು ಟನ್ನಿಗಳು, ಫ್ರಾನ್ಸ್ ಹಾಗೂ ಪೋರ್ಚುಗಲ್‍ಗಳಲ್ಲಿ ಬೂತಾಯಿ ಉದ್ಯಮ ಅತ್ಯಂತ ಮುಖ್ಯವೆನಿಸಿವೆ. ಡಬ್ವಿಜೋಪಾಸನೆ ಈ ರೀತಿ ಇದೆ: ಮೊದಲು ಮೀನಿನ ತಲೆ ಹಾಗೂ ಒಳಭಾಗಗಳನ್ನು ತೆಗೆದುಹಾಕಿ ದೇಹಕ್ಕೆ ಸ್ವಲ್ಪವಾಗಿ ಉಪ್ಪನ್ನು ಚಿಮುಕಿಸಲಾಗುತ್ತದೆ. ಅನಂತರ ಸ್ವಲ್ಪ ಕಾಲದ ತನಕ ಉಪ್ಪು ನೀರಿನೊಳಗೆ ಮುಳುಗಿಸಿ ಹೊರತೆಗೆದು ತೊಳೆದು ಒಣಗಿಸಲಾಗುತ್ತದೆ. ಕೊನೆಯಲ್ಲಿ ಅದನ್ನು ಆಲಿವ್ ಮುಂತಾದ ಎಣ್ಣೆಯಲ್ಲಿ ಎರಡು ನಿಮಿಷಗಳ ತನಕ ಕರಿಯಲಾಗುತ್ತದೆ. ಜೊತೆಗೆ ಇತರ ಸಂಬಾರ ಘಟಕಗಳಾದ ಲಿಂಬೆ ಎಣ್ಣೆ, ಲವಂಗ, ಬೇ ಎಲೆಗಳ ಬಟ್ಟಿಯಿಂದ ಪಡೆದ ಸುಗಂಧದ್ರವ. ಮಸಾಲೆ ಅಣಬೆ ಮುಂತಾದ ಪದಾರ್ಥಗಳೊಂದಿಗೆ ಮಿಶ್ರ ಮಾಡಲಾಗುತ್ತದೆ. ಕೊನೆಗೆ ಡಬ್ಬಿಯೊಳಗೆ ಆಲಿವ್ ಎಣ್ಣೆ ಹಾಕಿ ಮೀನನ್ನು ತುಂಬಿ ಗಾಳಿ ಸೇರದಂತೆ ಮೊಹರು ಮಾಡಲಾಗುತ್ತದೆ. ನಾರ್ವೆಯಲ್ಲಿ ಸಹ ಸ್ಟ್ರಾಟ್ (ಕ್ಲೂಪಿಯ ಸ್ಟ್ರಾಟಸ್) ಮತ್ತು ಹೆರಿಂಗ್ ಎಳೆಯ ಮೀನುಗಳನ್ನು (ಕ್ಲೂಪಿಯ ಹ್ಯಾರಂಗಸ್) ಇದೇ ರೀತಿ ಸಂಸ್ಕರಿಸಲಾಗುತ್ತದೆ.

ಮೀನುಗಳ ಮಾಂಸದ ಕಣಕದಿಂದ ತಯಾರಿಸಲಾಗುವ ಮೀನು ಸಾಸೆಜ್, ಮೀನಿನದೋಸೆ ಉಂಡೆ (ರಿಸೋಲ್ಸ್). ಆ್ಯಂಚೊವಿ ಪಿಷ್ಟದ ವ್ಯಂಜನ, ಮೀನುದೋಸೆ, ಕ್ಯಾವೀಯಾರ್ ವ್ಯಂಜನ ಮುಂತಾದವು ಕೂಡ ಮೀನುಗಾರಿಕೆಯ ಉಪೋತ್ಪನ್ನಗಳೇ ಆಗಿವೆ. ಅಲ್ಲದೆ ಇತರ ಉತ್ಪನ್ನಗಳಾದ ಶಾರ್ಕ್ ಮಾಂಸದ ಕಣಕ, ಶಾರ್ಕ್‍ಮೀನಿನ ಯಕೃತ್ತಿನ ಎಣ್ಣೆ, ಮೀನಿನ ಮರವಜ್ರ, ಮೀನಂಟುವಜ್ರ ಮುಂತಾದವು ಪ್ರಸಿದ್ಧವಾಗಿವೆ. ಕಡಿಮೆ ಬೆಲೆಯ ಮೀನುಗಳಿಂದ ಗೊಬ್ಬರ ಮತ್ತು ಪಶು ಆಹಾರ ತಯಾರಿಕೆಯಲ್ಲಿಯೂ ಬಳಸಲಾಗುವುದು. ಸ್ತನಿಗಳಾದ ತಿಮಿಂಗಲ, ಸೀಲ್‍ಪ್ರಾಣಿ, ಕಡಲಸಿಂಹ, ಕಡಲಹಸು ಹಾಗೂ ಉರಗವರ್ಗದ ಆಮೆಗಳ ಮೀನುಗಾರಿಕೆ ಸಹ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಹೀಗಾಗಿ ಮೀನುಗಾರಿಕೆ ಪ್ರಪಂಚದ ಒಂದು ಅತ್ಯಂತ ವಾಣಿಜ್ಯ ಹಾಗೂ ಜೀವನೋಪಾಯದ ಉದ್ಯಮವಾಗಿ ಬೆಳೆದಿದೆ.

ಜಲಕೃಷಿ (ಅಕ್ವಾಕಲ್ಚರ್): ಮೀನುಗಾರಿಕೆಯ ಆಧುನಿಕ ವಿಧಾನ ಜಲಕೃಷಿ (ಅಕ್ವಾಕಲ್ಚರ್). ನಿರ್ಧಿಷ್ಟವಾದ ಜಲ ಪ್ರದೇಶದಲ್ಲಿ ನಿರ್ಧಿಷ್ಟವಾದ ಜಲಜೀವಿಯನ್ನು ವೈಜ್ಞಾನಿಕ ರೀತಿಲ್ಲಿ ಬೆಳೆಸುವುದಕ್ಕೆ ಜಲಕೃಷಿ ಯೆಂದು ಹೆಸರು. ಇದಕ್ಕೆ ಮೀನುಕೃಷಿ ಎಂದೂ ಕರೆಯಬಹುದು, ಮೀನು ಸಾಕಾಣಿಕೆ ಬಹಳ ಹಿಂದಿನಿಂದಲೂ ಇತ್ತೆಂಬುದು ತಿಳಿದು ಬಂದಿದೆ. ಮೀನುಸಾಕಾಣಿಕೆಯಲ್ಲಿ ಈಜಿಪ್ಟ್‍ನ ಜನರು ಬಹುಶಃ ಪ್ರಪಂಚದಲ್ಲೇ ಮೊದಲಿಗರರಿಬೇಕೆಂಬುದಕ್ಕೆ ಪುರಾವೆಗಳಿವೆ. ಸುಮಾರು ಕ್ರಿ.ಪೂ. 2500 ರಲ್ಲೇ ಈಜಿಪ್ಟ್‍ನಲ್ಲಿ ಮೀನು ಸಾಕಾಣಿಕೆ ಬಗ್ಗೆ ಅಲ್ಲಿನ ಪಿರಮಿಡ್‍ಗಳ ಮೇಲಿನ ಕೆತ್ತಿರುವ ಚಿತ್ರಣಗಳಿಂದ ತಿಳಿದುಬರುತ್ತದೆ. ಸುಮಾರು ಕ್ರಿ.ಪೂ. 2000 ರಲ್ಲಿ ಚೀನಾ ದೇಶದಲ್ಲಿ ಗೆಂಡೆ ಮೀನುಗಳ ಸಾಕಾಣಿಕೆಯನ್ನು ವ್ಯಾಪಕವಾಗಿ ಮಾಡಲಾಗುತ್ತಿತ್ತು. ಭಾರತದಲ್ಲಿಯೂ ಮೀನುಕೃಷಿಯು ನೂರಾರು ವರ್ಷಗಳಿಂದ ಮಾಡಲಾಗುತ್ತಿದೆ. ಕೌಟಿಲ್ಯನ ಆರ್ಥಶಾಸ್ತ್ರದಲ್ಲಿ ರಾಜಾ ಸೋಮೇಶ್ವರನ ವಿಶ್ವಕೋಶದಲ್ಲಿ ಇದರ ಬಗ್ಗೆ ಉಲ್ಲೇಖಗಳಿವೆ. ಬಹಳ ಹಿಂದೆ ಮೀನು ಕೃಷಿಯೆಂದರೆ ಕೆರೆ,ಕೊಳ, ನದಿಗಳಲ್ಲಿ ದೊರೆಯುವ ಮೀನುಗಳನ್ನು ಕೃತಕವಾಗಿ ನಿರ್ಮಿಸಿದ ತೊಟ್ಟಿಗಳಲ್ಲಿ ಕೆಲಕಾಲ ಇಟ್ಟುಕೊಂಡು ಬೇಕಾದಾಗ ಹಿಡಿಯುವುದೇ ಆಗಿತ್ತು. ಕಾಲಕ್ರಮೇಣ ನದಿಗಳಿಂದ ಮೀನಿನ ಮರಿಗಳನ್ನು ಹಿಡಿದು ತಂದು ಕೊಳಗಳಲ್ಲಿ ಸಾಕುವ ವಿಧಾನ ರೂಢಿಗೆ ಬಂತು. ಈ ವಿಧಾನ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬಹಳ ಹಿಂದಿನಿಂದಲೂ ಮಾಡಲಾಗುತ್ತಿತ್ತು. ತದನಂತರ ಇತರೆ ರಾಜ್ಯಗಳಿಗೂ ಈ ವಿಧಾನ ಹರಡಿತು. ಆನಂತರ ಬಂಗಾಳದಲ್ಲಿ ಬಂದ್‍ಗಳನ್ನುನಿರ್ಮಿಸಿ ಗೆಂಡೆಮೀನುಗಳ ಮರಿಮಾಡಿಸುವಿಕೆ ಪ್ರಾರಂಭವಾದ ನಂತರ ಗೆಂಡೆ ಮೀನುಗಳ ಕೃಷಿ ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿತು. ಗೆಮಡೆ ಮೀನುಗಳು ನಿಂತ ಕೋಳಗಳ ನೀರಿನಲ್ಲಿ ಮರಿ ಮಾಡುವುದಿಲ್ಲವಾದ್ದರಿಂದ ಇವುಗಳ ಕೃಷಿಗೆ ಬಹಳ ಕಾಲ ಮೀನುಮರಿಗಳ ಕೊರತಯಿತ್ತು. ಭಾರತದಲ್ಲಿ 1957 ರಲ್ಲಿ ಗೆಂಡೆ ಮೀನುಗಳ ಪ್ರಚೋದಿತ ಸಂತಾನೋತ್ಪತ್ತಿ ವಿಧಾನವನ್ನು ಪರಿಚಯಿಸಿದ ನಂತರವಂತೂ ಗೆಂಡೆ ಮೀನುಗಳ ಮರಿಗಳ ಲಭ್ಯತೆ ಹೆಚ್ಚಾಗಿ ಇವುಗಳ ಜಲಕೃಷಿ ತೀವ್ರಗತಿಯಲ್ಲಿ ಬೆಳೆಯತೊಡಗಿತು. ಪ್ರಸ್ತುತ ಆಂದ್ರ ಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್ ರಾಜ್ಯಗಳು ಗೆಂಡೆ ಮೀನುಕೃಷಿಯ ಮಂಚೂಣಿಯಲ್ಲಿವೆ. ಕರ್ನಾಟಕದಲ್ಲಿರುವ ಅಗಾಧ ಕೆರೆ ಜಲಾಶಯಗಳಲ್ಲಿಯೂ ಗೆಂಡೆ ಮೀನುಮರಿಗಳನ್ನು ಬಿತ್ತನೆ ಮಾಡಿ ಬೆಳೆಸಲಾಗುತ್ತಿದೆ.

ಜಾಗತಿಕ ಮಟ್ಟದಲ್ಲಿ ಹೇಳುವದಾದರೂ ಇತ್ತೀಚಿನ ಎಫ್.ಎ.ಒ. ಅಂಕಿ-ಅಂಶಗಳ ಪ್ರಕಾರ ಒಟ್ಟು ಉತ್ಪಾದನೆಯ ಶೇಕಡ 42 ರಷ್ಟು ಗೆಂಡೆ ಮೀನುಗಳು ಮತ್ತದರ ಸಂಬಂಧಿ ಸಿಪ್ರಿನಿಡೆ ಕುಟುಂಬದ ಮೀನುಗಳ ಜಲಕೃಷಿಯಿಂದ ಬರುತ್ತಿದೆ. ಇತ್ತೀಚೆಗೆ ಕಡಲ ಹಿಡುವಳಿ ಉತ್ಪನ್ನ ಸ್ಥಿರಗೊಳ್ಳುತ್ತಿದ್ದು ಹೆಚ್ಚುತ್ತಿರುವ ಜನಸಂಖ್ಯೆಯ ಆಹಾರ ಬೇಡಿಕೆ ನೀಗಿಸಲು ಇರುವ ವಿಫುಲ ಅವಕಾಶವೆಂದರೆ, ಮೀನುಕೃಷಿ. ಕಡಲ ಮೀನುಗಳ ಕೃಷಿಗಿಂತ ಒಳನಾಡು ಮೀನುಗಳ ಕೃಷಿ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. 2003 ರಲ್ಲಿ ಹಿಡುವಳಿಯಿಂದ ಒಟ್ಟು 90.30 ದಶ ಲಕ್ಷ ಟನ್ ಉತ್ಪಾದನಯಾಗಿದ್ದರೆ ಮೀನುಕೃಷಿಯಿಂದ 34.20 ದಶ ಲಕ್ಷ ಟನ್‍ಗಳಷ್ಟು ಉತ್ಪಾದನೆಯಗಿದೆ. ಗಮನಸಿಬೇಕಾದ ಅಂಶವೆಂದರೆ 2002 ಕ್ಕೆ ಹೋಲಿಸದರೆ ಹಿಡಿವಳಿಯ ಉತ್ಪಾದನೆ ಶೇ.3 ರಷ್ಟು ಕುಸಿತ ಕಂಡಿದ್ದರೆ ಮೀನುಕೃಷಿಯಿಂದ ಉತ್ಪಾದನೆ ಶೇ. 5 ರಷ್ಟು ಹೆಚ್ಚಿದೆ. ಏಷ್ಯಾದ ದೇಶಗಳಿಂದ ಶೇ.90 ರಷ್ಟು ಮೀನುಕೃಷಿ ಉತ್ಪಾದನೆಯಾಗುತ್ತಿದೆ. ಆದ್ದರಿಂದ ಮೀನುಕೃಷಿಯಿಂದ ಉತ್ಪಾದೆನೆ ಹೆಚ್ಚಿಸಲು ವಿಫುಲ ಅವಕಾಶಗಳಿವೆ.

ಜಲಕೃಷಿ ಉತ್ಪಾದನೆಯಲ್ಲಿ ಸಿಹಿನೀರು ಮೀನುಗಳದ್ದೇ ಸಿಂಹಪಾಲು. ಆದರೂ ಪ್ರಪಂಚದಲ್ಲಿ ಅನೇಕ ಜಾತಿಯ ಸಿಹಿನೀರು ಹಾಗೂ ಕಡಲ ಜಲಚರಗಳನ್ನು ಸಾಕಾಣಿಕೆ ಮಾಡಲಾಗುತ್ತದೆ, ಸೀಗಡಿ, ಕಡಲ ಇಚಿಪ್ಪುಮೀನುಗಳು, ಮುತ್ತಿನ ಚಿಪ್ಪುಗಳು, ಕಾಡ್ ಮೀನು, ಹೇಕ್, ಹೆಡಕ್ ಮೀನುಗಳು, ಟ್ಯೂನಾ ಗಳು, ಸಿಹಿನೀರು ಸೀಗಡಿ, ಏಡಿಗಳು, ಸಿಹಿನೀರು ಚಿಪ್ಪುಪ್ರಾಣಿಗಳು, ಹೀಗೆ ನೂರಾರು ಜಾತಿಯ ಜಲಚರಗಳ ಕೃಷಿ ಮಾಡಲಾಗುತ್ತಿದೆ. ಇವುಗಳ ಮೀನುಮರಿಗಳ ಉತ್ಪಾದನೆ, ಪಾಲನೆ ಕೇಂದ್ರಗಳ (ಹ್ಯಾಚರಿ) ಸ್ಥಾಪನೆ ಮತ್ತು ನಿರ್ವಹಣೆ ಜಲಕೃಷಿಯ ಒಂದು ಅವಿಭಾಜ್ಯ ಉದ್ಯಮವಾಗಿದೆ.

ಜಲಕೃಷಿ ಕೈಗೊಳ್ಳಬೇಕಾದರೆ ಗಮನದಲ್ಲಿಡಬೇಕಾದ ಪ್ರಮುಖ ಅಂಶಗಳೆಂದರೆ, ಕೊಳ ನಿರ್ಮಾಣಕ್ಕೆ ಸ್ಥಳದ ಆಯ್ಕೆ, ಉತ್ತಮ ಹಾಗೂ ಹೇರಳ ನೀರಿನ ಲಭ್ಯತೆ, ಶೀಘ್ರವಾಗಿ ಬೆಳೆಯುವ, ಬೇಡಿಕೆಯುಳ್ಳ ಸೂಕ್ತ ತಳಿಯ ಆಯ್ಕೆ, ಆ ತಳಿಯ ಬಿತ್ತನೆಮರಿಗಳ ಲಭ್ಯತೆ. ಪಾಲನಾ ವಿಧಾನ, ನಿರ್ವಹಣಾ ವಿಧಾನ, ಮತ್ತು ಹಿಡುವಳಿ ಮತ್ತು ಮಾರಾಟ ವಿಧಾನಗಳು. ಇತ್ತೀಚೆಗೆ ಮೀನುಗಾರಿಕೆ ಉತ್ಪಾದನೆ ಹೆಚ್ಚಳಕ್ಕೆ ಜಲಕೃಷಿನ್ನೇ ಅವಲಂಬಿಸಿದೆ. (ಬಿ.ಎಚ್.ಎಂ.)