ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೀಲಿಯೇಸೀ

ವಿಕಿಸೋರ್ಸ್ದಿಂದ

ಮೀಲಿಯೇಸೀ - ಪಾಲಿಪೆಟಲೀ ಗುಂಪಿಗೆ ಸೇರಿದ ದ್ವಿದಳಸಸ್ಯಗಳ ಕುಟುಂಬ ಇದರಲ್ಲಿ 50 ಜಾತಿಗಳೂ 800 ಪ್ರಭೇದಗಳೂ ಉಂಟು. ಬಹುಪಾಲು ಗಿಡಗಳು ಸಾಮಾನ್ಯವಾಗಿ ಪೊದೆಗಳು ಅಥವಾ ಮರಗಳು. ಕುಟುಂಬದ ಸದಸ್ಯಗಳ ಎಲೆಗಳು ಗರಿರೂಪದ ಸಂಯುಕ್ತಮಾದರಿಯವು; ಪರ್ಯಾಯ ರೀತಿಯಲ್ಲಿ ಜೋಡಣೆಗೊಂಡಿರುವುವು. ಕಿರು ಎಲೆಗಳು ಪರ್ಯಾಯ ಅಥವಾ ಅಭಿಮುಖ ಜೋಡಣೆಯಲ್ಲಿ ಸ್ಥಿತವಾಗಿರುತ್ತವೆ. ಹೂಗೊಂಚಲು ಸೈಮ್ ಮಾದರಿಯದಾಗಿದ್ದು ಕೊಂಬೆಗಳ ತುದಿಯಲ್ಲಿ ಅಥವಾ ಎಲೆಯ ಕಕ್ಷದಲ್ಲಿ ಇರುತ್ತದೆ. ಹೂಗಳು ವೃಂತ ಪತ್ರಯುಕ್ತ. ದ್ವಿಲಿಂಗ ಅಥವಾ ಸಂಕೀರ್ಣಲಿಂಗ ಬಗೆಯವಾಗಿದ್ದು ಆರೀಯ ಸಮಮಿತಿಯನ್ನೂ ಉಚ್ಚಸ್ಥಾನದ ಅಂಡಾಶಯವನ್ನೂ ಪಡೆದಿರುವುವು. ನಿದಳ ಪುಂಜ ಚಿಕ್ಕಗಾತ್ರದ್ದು. ಇದರಲ್ಲಿ 3ರಿಂದ 6 ನಿದಳಗಳುಂಟು. ದಳಗಳು 3-6. ಬಿಡಿಬಿಡಿಯಾಗಿವೆ. ಕೆಲವು ಪ್ರಭೇದಗಳಲ್ಲಿ ಬುಡಭಾಗದಲ್ಲಿ ಸ್ವಲ್ಪ ಸೇರಿಕೊಂಡಿರಬಹುದು. ಪುಂಕೇಸರಗಳಿಗೂ ದಳಗಳಿಗೂ ಮಧ್ಯೆ ಉಂಗುರಾಕಾರದ ತಟ್ಟೆಯುಂಟು. ಪುಂಕೇಸರಗಳು 4ರಿಂದ 12 ಪುಂಕೇಸರದಂಡ ಬಿಡಿಬಿಡಿಯಾಗಿರಬಹುದು ಅಥವಾ ಬುಡದಲ್ಲಿ ಕೂಡಿಕೊಂಡಿರಬಹುದು. ಕೂಡಿದಾಗ ಒಂದು ಕೇಸರ ಕೊಳವೆ ರೂಪಿತವಾಗಿರುತ್ತದೆ. ಪರಾಗಕೋಶ ಉದ್ದವಾಗಿದ್ದು ಉದ್ದುದ್ದವಾಗಿ ಸೀಳುತ್ತದೆ. ಅಂಡಾಶಯ 2-5 ಕಾರ್ಪೆಲ್‍ಗಳಿಂದ ರಚಿತವಾಗಿದೆ. ಒಳಗೆ 1 ಅಥವಾ 3ರಿಂದ 5 ಕೋಣೆಗಳುಂಟು. ಫಲಸಂಪುಟ ರಸಭರಿತ ಚೆರ್ರಿ ಅಥವಾ ಅಷ್ಟಿಫಲ ಮಾದರಿಯದು. ಬೀಜಗಳು ಬ್ರೂಣಾಹಾರಯುಕ್ತ ಅಥವಾ ರಹಿತ, ಕೆಲವು ವೇಳೆ ಬೀಜದಲ್ಲಿ ರೆಕ್ಕೆಗಳಿರುತ್ತವೆ. ಈ ಕುಟುಂಬದ ಕೆಲವು ಉಪಯುಕ್ತ ಸಸ್ಯಗಳು ಇಂತಿವೆ: ಬೇವು, ಕರ್ರಿಡಿ, ಮುಳ್ಳು ಮುತ್ತುಗ, ಅಗಿಲು, ಮಹಾಗನಿ, ಸ್ವಾಮಿಮರ, ಗಂಧಗರಿಗೆ ಮತ್ತು ಅರಬೇವು. (ಎಚ್.ಕೆ.ಎಸ್.ಯು.)