ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೀಸೆಮೀನು

ವಿಕಿಸೋರ್ಸ್ದಿಂದ

ಮೀಸೆಮೀನು - ಸೈಲ್ಯೂರಿಫಾರ್ಮಿಸ್ ಗಣಕ್ಕೆ ಸೇರಿದ ಕ್ಲಾರಿಯಿಡೆ, ಸೈಲ್ಯೂರಿಡೆ (ಗೊದ್ಲೆ, ಕೆಂಬಾರಿ, ಬಾಳೆ) ಹೆಟಿರೊಪ್ನೆಸ್ಟಿಡೆ (ಚೇಳು ಮೀನು), ಬಾಗ್ರಿಡೆ (ತೊರವಿ), ಏರಿಯಿಡೆ (ತೇಡೆ), ಕುಟುಂಬಗಳಿಗೆ ಸೇರಿದ ಹಲವಾರು ಜಾತಿಯ ಮೀನುಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು (ಕ್ಯಾಟ್ ಫಿಶ್). ಇವೆಲ್ಲವೂ ಬೇರೆ ಬೇರೆ ಕುಟುಂಬಕ್ಕೆ ಸೇರಿದ ಹಲವಾರು ಜಾತಿಯ ಮೀನುಗಳಾದರೂ ಇವುಗಳ ಮೂತಿಯ ಮೇಲೆ 3-4 ಜೊತೆ ಮೀಸೆಗಳಂಥ ರಚನೆಗಳು (ಬಾರ್ಬೆಲ್ಸ್) ಗಳಿರುವುದರಿಂದ ಎಲ್ಲವಕ್ಕೂ ಮೀಸೆ ಮೀನು ಎಂಬ ಹೆಸರು ಬಂದಿದೆ. ಅಲ್ಲದೆ ಅವುಗಳಿಗೇ ಆದ ಬೇರೆ ಹೆಸರುಗಳೂ ಇವೆ.

ಇವುಗಳ ಪೈಕಿ ಏರಿಯಿಡೆ ಕುಟುಂಬಕ್ಕೆ ಸೇರಿದ ಮೀನುಗಳು ಕಡಲ ವಾಸಿಗಳು. ಉಳಿದವು ಒಳನಾಡಿನ ನದಿ, ಕೆರೆ, ಹಳ್ಳಗಳಲ್ಲಿ ವಾಸಿಸುವಂತಹವು. ಭಾರತ, ಪಾಕಿಸ್ಥಾನ, ನೇಪಾಲ, ಬಾಂಗ್ಲಾದೇಶ ಮುಂತಾದ ಏಷ್ಯಾ ಖಂಡದ ದೇಶಗಳಲ್ಲಿ ವಿಫುಲವಾಗಿ ದೊರೆಯತ್ತವೆ. ಇವುಗಳಲ್ಲಿ ಬಹುಪಾಲು ಮೀನುಗಳು ಆಹಾರ ಯೋಗ್ಯವಾಗಿದ್ದು ಉತ್ತಮ ಬೇಡಿಕೆ ಇರುವುದರಿಮದ ಮೀನುಗಾರಿಕೆಯಲ್ಲಿ ಪ್ರಮುಖವಾಗಿವೆ. ಉದಾಹರಣೆಗೆ, ಏರಿಯಸ್ ಡುಸ್ಸುಮಿಯರಿ (ಶೇಡೆ), ಕ್ಲಾರಿಯಸ್ ಬಟ್ರಾಕಸ್ (ಮುರ್ಗೋಡು), ಓಂಪಾಕ್ ಬೈಮ್ಯಾಕ್ಯುಲೇಟಸ್ (ಗೊದ್ಲೆ) , ವಲಾಗೋ ಅಟ್ಟು (ಬಾಳೆ ಮೀನು), ಬಗೇರಿಯಸ್ ಯಾರೆಲ್ಲಿಯೈ (ಕುರುಡಿ ಮೀನು), ಮಿಸ್ಟಸ್ ಸೀಂಗ್ಹಾಲಾ (ಬಿಳಿ ಸುರಗಿ), ಮಿಸ್ಟಸ್ ಓರ್ (ಕಪ್ಪು ಸುರಗಿ) ಮಿಸ್ಟಸ್ ವಿಟ್ಟೇಟಸ್ (ಕೆಳತಿ ಮೀನು, ಜಲ್ಲ, ಗಿರ್ಲು), ಹೆಟಿರೋಪ್ನೆಸ್ಟಿಸ್ ಫಾಸಿಲಿಸ್ (ಚೇಳು ಮೀನು). ಇನ್ನೂ ಮುಂತಾದವು.

(ಎಂಎಡಿಎಚ್.; ಟಿ.ಎಸ್.ವಿಶ್ವನಾಥ್)