ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುಜೀಬುರ್ ರಹಮಾನ್, ಷೇಕ್

ವಿಕಿಸೋರ್ಸ್ದಿಂದ

ಮುಜೀಬುರ್ ರಹಮಾನ್, ಷೇಕ್ 1920-75. ಬಾಂಗ್ಲಾದೇಶದ ಸ್ಥಾಪಕ. ನಾಯಕ, ಪ್ರಥಮ ಪ್ರಧಾನ ಮಂತ್ರಿ ಮತ್ತು ಅಧ್ಯಕ್ಷ. ಷೇಕರು 1920ರಲ್ಲಿ ಢಾಕಾನಗರಕ್ಕೆ ನೈಋತ್ಯದಲ್ಲಿ 97 ಕಿಮೀ ದೂರವಿರುವ ತುಂಗಿಪಾರಾ ಎಂಬಲ್ಲಿ ಜನಿಸಿದರು. ಕಲ್ಕತ್ತದ ಇಸ್ಲಾಮಿಯಾ ಕಾಲೇಜಿನಲ್ಲಿ ಪದವೀಧರರಾಗಿ ಮುಂದೆ ಸ್ವಲ್ಪಕಾಲ ಢಾಕಾವಿಶ್ವವಿದ್ಯಾಲದಲ್ಲಿ ನ್ಯಾಯಶಾಸ್ತ್ರ ಅಭ್ಯಾಸಮಾಡಿದರು. ಪೂರ್ವಪಾಕಿಸ್ತಾನವೆಂದು 1947ರಲ್ಲಿ ರೂಪುಗೊಂಡ ಈ ಪ್ರದೇಶಕ್ಕೆ ಸ್ವಾಯತ್ತತೆಬೇಕೆಂದು ಮುಜೀಬುರ್ ರಹಮಾನರ ಮುಂದಾಳತ್ವದ ಅವಾಮಿ ಲೀಗ್ ಹೋರಾಟ ಪ್ರಾರಂಭಿಸಿತು. 1970ರಲ್ಲಿ ಈ ಚಳವಳಿ ತೀವ್ರವಾಗಿ ಷೇಕರು ಪಶ್ಚಿಮ ಪಾಕಿಸ್ತಾನದ ನಾಯಕರೊಡನೆ ಮಾತುಕತೆಗೆ ಹೋದಾಗ ಅಲ್ಲಿ ಅವರನ್ನು ಬಂಧನದಲ್ಲಿ ಇಡಲಾಯಿತು. 1971 ರಲ್ಲಿ ಈ ಚಳವಳಿ ಉಗ್ರವಾಗಿ ಪಶ್ಚಿಮ ಮತ್ತು ಪೂರ್ವಪಾಕಿಸ್ತಾನಗಳ ನಡುವೆ ಯುದ್ಧನಡೆದು ಭಾರತದ ಉದಾರ ಸಹಾಯದಿಂದ ಪೂರ್ವ ಪಾಕಿಸ್ತಾನ ಸ್ವತಂತ್ರವಾಗಿ 1971ರ ಡಿಸೆಂಬರ್ 16ರಂದು ಬಾಂಗ್ಲಾದೇಶದ ಉದಯವಾಯಿತು. ಬಿಡುಗಡೆಯಾಗಿ ಬಂದ ರೆಹಮಾನರು 1972, ಜನವರಿಯಲ್ಲಿ ಪ್ರಥಮ ಪ್ರಧಾನ ಮಂತ್ರಿಯಾದರು. 1975ರಲ್ಲಿ ಅಧ್ಯಕ್ಷೀಯ ಮಾದರಿಯ ಸರ್ಕಾರದ ಸಂವಿಧಾನವನ್ನು ಜಾರಿಗೆ ತಂದು 1975. ಜನವರಿ 26ರಂದು ಪೇಕರು ತಾವೇ ಅಧ್ಯಕ್ಷರಾದರು. ಇವರ ಅಧ್ಯಕ್ಷತೆಯ ಬಾಂಗ್ಲಾದೇಶ ಕೃಷಿಕ್ ಶ್ರಮಿಕ ಅವಾಮಿಲೀಗ್ ಪಕ್ಷವನ್ನು ಬಿಟ್ಟು ಉಳಿದೆಲ್ಲ ರಾಜಕೀಯ ಪಕ್ಷಗಳನ್ನು ಬಹಿಷ್ಕರಿಸಲಾಯಿತು. ಅದರೆ 1975 ಆಗಸ್ಟ್ 15ರಂದು ಸೇನಾಕ್ರಾಂತಿ ನಡೆದು ಬಾಂಗ್ಲಾದೇಶದ ಅಧ್ಯಕ್ಷ ಷೇಕ್ ಮುಜೀಬುರ್ ರಹಮಾನ್ ಮತ್ತು ಅವರ ಕುಟುಂಬದ ಕೆಲವರನ್ನೂ ಒಳಗೊಂಡು ಜೊತೆಗೆ ಪ್ರಧಾನಿ ಮೊಹಮದ್ ಮನ್ಸೂರ್ ಸಮೇತ ಎಲ್ಲರನ್ನೂ ಕೊಲೆಮಾಡಲಾಯಿತು. ಷೇಕರು ಸಮರ್ಥ ರಾಜಕೀಯ ಮುತ್ಸದ್ಧಿಯಾಗಿ ಬಾಂಗ್ಲಾದೇಶವನ್ನು ಅಸ್ತಿತ್ವಕ್ಕೆ ತಂದು ಅದರ ಅಭಿವೃದ್ಧಿಗೆ ಕಾರಣರಾದರು. ವಿಶ್ವಸಂಸ್ಥೆಯಲ್ಲಿ 1974 ಸೆಪ್ಟೆಂಬರ್ 17 ರಂದು ಸದಸ್ಯತ್ವ ಪಡೆಯುವ ಮೂಲಕ ಬಾಂಗ್ಲಾದೇಶಕ್ಕೆ ಗೌರವಗಳಿಸಿಕೊಟ್ಟರು.