ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುತ್ತಿನ ಮೀನು

ವಿಕಿಸೋರ್ಸ್ದಿಂದ

ಮುತ್ತಿನ ಮೀನು

ಕರಾಪಿಡೀ (ಫಿಯರ್ಸೆಫಿರಿಡೀ) ಕುಟುಂಬಕ್ಕೆ ಸೇರಿದ ಕಡಲಮೀನು (ಪರ್ಲ್ ಫಿಶ್). ಹೆಚ್ಚಾಗಿ ಉಷ್ಣವಲಯದ ಸಾಗರಗಳಲ್ಲಿ ಕಂಡುಬಂದರೂ ಅಟ್ಲಾಂಟಿಕ್ ಸಾಗರದಲ್ಲಿ ಕೂಡ ಅಲ್ಲಲ್ಲಿ ಕಂಡುಬರುತ್ತದೆ. ಕರಾಪಸ್ ಎಕ್ಯುಸ್, ಕರಾಪಸ್ ಹೋಮಿ ಇತ್ಯಾದಿ ಅನೇಕ ಪ್ರಭೇದಗಳು ಇದ್ದು ಸುಮಾರು ಇವು 20 ಸೆಂಮೀ ಉದ್ದಕ್ಕೆ ಬೆಳೆಯುತ್ತವೆ. ಎಲ್ಲವೂ ಉದ್ದನೆಯ ನಾಜೂಕಾದ ಚಾಕುವಿನಂಥ ದೇಹವುಳ್ಳವು. ಹುರುಪೆ, ವರ್ಣಕಗಳಾಗಲೀ ಭುಜದ ರೆಕ್ಕೆಗಳಾಗಲೀ ಇಲ್ಲ. ಗುದದ್ವಾರ ಗಂಟಲ ಭಾಗದಲ್ಲಿದೆ. ಒಂಟಿ ಈಜುರೆಕ್ಕೆಗಳು ಹಿಂಬದಿಯಲ್ಲಿ ಒಂದುಗೂಡಿ ಮೊನಚಾದ ತುದಿಯಲ್ಲಿ ಕೊನೆಗೊಳ್ಳುತ್ತವೆ. ಇವಕ್ಕೆ ಮುತ್ತಿನ ಮೀನು ಎಂಬ ಹೆಸರು ಬರಲು ಕಾರಣ ಕಲವು ಪ್ರಭೇದಗಳು ಮುತ್ತಿನ ಚಿಪ್ಪು ಗಳಲಿ ಪರತಂತ್ರ ಜೀವಿಗಳಾಗಿ ಆಶ್ರಯ ಪಡೆದಿರುತ್ತವೆ. ಕೆಲವೊಮ್ಮೆ ಆ ಚಿಪ್ಪುಗಳಲ್ಲಿ ಸಿಕ್ಕಿಕೊಂಡು ಮುತ್ತುಗಳಾಗಿರುವ ನಿದರ್ಶಣಗಳಿವೆ. ಈ ಮೀನುಗಳು ಸಮುದ್ರಸೌತೆ ಪ್ರಾಣಿಯ ದೇಹದೊಳಗೆ ಪರತಂತ್ರಜೀವಿಯಾಗಿ ಜೀವಿಸುತ್ತವೆ. ಕೆಲವೊಮ್ಮೆ ಇವನ್ನು ಸೌತೆ ಮೀನು ಎಂದು ಕರೆಯುವುದುಂಟು. ಎಳೆಯ ಮೀನು ತನ್ನ ತಲೆಯನ್ನೂ ಬೆಳದ ಮೀನು ತನ್ನ ಬಾಲವನ್ನೂ ಮೊದಲು ಸಮುದ್ರಸೌತೆಯ ವಿಸರ್ಜನದ್ವಾರದ ಮೂಲಕ ತುರುಕಿಸಿ ಆತಿಥೇಯದ ದೇಹದೊಳಗೆ ನುಸುಳಿಕೊಳ್ಳುತ್ತದೆ. ಆತಿಥೇಯ ಪ್ರಾಣಿಯ ಉಸಿರಾಟದ ಅಂಗದ ಭಿತ್ತಿಯನ್ನು ಕೊರೆದು ದೇಹಾಂತರಾವಕಾಶವನ್ನು ಸೇರುತ್ತದೆ. ಇಲ್ಲಿ ಆತಿಥೇಯದ ದೇಹದ ಉಸಿರಾಟದ ಅಂಗ, ಪ್ರಜನನಾಂಗ ಇತ್ಯಾದಿ ಅಂಗಾಂಶಗಳನ್ನು ತಿಂದು ಬದುಕುತ್ತದೆ. ಆತಿಥೇಯ ಪ್ರಾಣಿಗೆ ಅತ್ಯಧಿಕ ಪುನರುತ್ಪಾನಾ ಸಾಮಥ್ರ್ಯವಿರುವುದರಿಂದ ಪರತಂತ್ರಜೀವಿ ತಿಂದರೂ ಅದು ತನ್ನ ಅಂಗಾಂಶಗಳನ್ನು ಉತ್ಪಾದಿಸಿಕೊಳ್ಳುತ್ತದೆ. ಕೆಲವು ಪ್ರಭೇದಗಳು ಆಹಾರಕ್ಕಾಗಿಯೊ ಪುನರುತ್ಪಾದನೆಗಾಗಿಯೊ ಆತಿಥೇಯಪ್ರಾಣಿಯ ದೇಹದಿಂದ ಹೊರಬರುತ್ತವೆ. ಕೆಲವು ಮಾತ್ರ ಮತ್ತೆ ಅದೇ ಆತಿಥೇಯವನ್ನು ಪ್ರವೇಶಿಸಿದರೂ ಇನ್ನು ಕೆಲವು ಪ್ರಭೇದಗಳು ಬೇರೆ ಯಾವುದಾದರೂ ಚಿಪ್ಪು ಅಥವಾ ಸಮುದ್ರಸೌತೆಯನ್ನು ಪ್ರವೇಶಿಸುತ್ತವೆ. ಮುತ್ತಿನ ಮೀನಿನ ಡಿಂಬ ಫ್ರೌಢಮೀನಿಗಿಂತ ಭಿನ್ನವಾಗಿದ್ದು ನೀರಿಲ್ಲಿ ತೇಲಾಡುತ್ತಿರುತ್ತದೆ. ಡಿಂಬದ ತಲೆಯಲ್ಲಿ ಉದ್ದವಾದ ನೂಲಿನಾಕಾರದ ರಚನೆಯುಂಟು. (ಎಂಎಡಿಎಚ್.)