ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುಳಗುಂದ

ವಿಕಿಸೋರ್ಸ್ದಿಂದ

ಮುಳಗುಂದ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಗದಗ ತಾಲ್ಲೂಕಿನ ಅತಿ ಪುರಾತನವೂ ಇತಿಹಾಸಪ್ರಸಿದ್ಧವೂ ಆದ ಗ್ರಾಮ. ಗದಗಿನ ನೈಋತ್ಯಕ್ಕೆ 19 ಕಿಮೀ ದೂರದಲ್ಲಿದೆ. ಜನಸಂಖ್ಯೆ 14,535 (1931). ಗ್ರೀಕ್ ಭೂಗೋಳಕಾರ ಟಾಲೆಮಿಯ ಬರೆಹದಲ್ಲಿ ಹೆಸರಿರುವ ಮೊರಾಂಡ್ ಮುಳಗುಂದ ಎಂದು ಊಹಿಸಲಾಗಿದೆ. ಈ ಗ್ರಾಮದಲ್ಲಿ ರಾಷ್ಟ್ರಕೂಟ, ಗಂಗ, ಕಲ್ಯಾಣದ ಚಾಲುಕ್ಯ, ಕಳಚುರಿ, ಹೊಯ್ಸಳ ಮೊದಲಾದ ರಾಜವಂಶಗಳ ಕಾಲದ ಸುಮಾರು 20 ಶಾಸನಗಳು ದೊರೆತಿವೆ. ಪ್ರಾಚೀನ ಕಾಲದಲ್ಲಿ ಇದೊಂದು ಪಟ್ಟಣವಾಗಿತ್ತಲ್ಲದೆ ಬೆಳ್ವೊಲ-300ರಲ್ಲಿ ಮುಳಗುಂದ-12 ಎಂಬ ಒಂದು ಚಿಕ್ಕ ಮಂಡಲವಾಗಿದ್ದು ವಿಶೇಷ ಪ್ರಸಿದ್ಧಿ ಪಡೆದಿತ್ತು.

ಇಲ್ಲಿದ್ದ ಜಿನಭವನಗಳು ಮತ್ತು ಚಂದ್ರಿಕಾವಾಟದ ಯತಿಗಳ ಪರಂಪರೆಯಿಂದಾಗಿ ಇದು ಜೈನಧರ್ಮೀಯರಿಗೆ ತೀರ್ಥಕ್ಷೇತ್ರವಾಗಿತ್ತು. ಕನ್ನಡ, ಸಂಸ್ಕøತ ಹಾಗೂ ಪ್ರಾಕೃತ ಭಾಷೆಗಳ ಸಾಹಿತ್ಯಕ್ಕೆ ಈ ಊರು ತನ್ನದೇ ಆದ ಕೊಡುಗೆ ಕೊಟ್ಟಿದೆ. ಕರ್ನಾಟಕ ಭಾಷಾಭೂಷಣ ಗ್ರಂಥದಲ್ಲಿಯ ದೀರ್ಘೋಕ್ತಿರ್ನಯಸೇನಸ್ಯ ಎಂಬ ಸೂತ್ರದಲ್ಲಿ ಉಲ್ಲೇಖಿತವಾದ ನಯಸೇನ ಮುಳಗುಂದದವ.

1047ರಲ್ಲಿ ಸಂಸ್ಕøತದಲ್ಲಿ ಮಹಾಪುರಾಣ ರಚಿಸಿದ ಮಲ್ಲಿಷೇಣಯತಿ ಆ ಗ್ರಂಥವನ್ನು ಮುಳಗುಂದ ತೀರ್ಥದಲ್ಲಿ ಬರೆದು ಮುಗಿಸಿದುದಾಗಿ ಆ ಗ್ರಂಥದ ಪದ್ಯವೊಂದರಿಂದ ತಿಳಿಯುತ್ತದೆ. ಈತ ನಾಗಕುಮಾರಕಾವ್ಯ, ಭೈರವಪದ್ಮಾವತೀಕಲ್ಪ, ಸರಸ್ವತೀ ಮಂತ್ರಕಲ್ಪ ಎಂಬ ಇತರ ಗ್ರಂಥಗಳನ್ನು ಕೂಡ ರಚಿಸಿದ್ದಾನೆ. ಕೈವಲ್ಯದರ್ಪಣ ಎಂಬ ಗ್ರಂಥ ಹಾಗೂ ಅನುಭಾವ ಗೀತೆಗಳನ್ನು ಬರೆದ ಬಾಲಲೀಲಾ ಮಹಾಂತ ಶಿವಯೋಗಿಗಳು (ನೋಡಿ- ಬಾಲಲೀಲಾ-ಮಹಾಂತ-ಶಿವಯೋಗಿ) ಮುಳಗುಂದದಲ್ಲಿದ್ದರು. ಅದರ ಪ್ರಸಿದ್ಧ ಗವಿಮಠ ಇಲ್ಲಿಯೆ ಇದೆ.

ಇಲ್ಲಿ ಕುಂಭೇಶ್ವರ, ನಗರೇಶ್ವರ, ಪೇಟೆ ಬಸಪ್ಪ, ಸಿದ್ಧೇಶ್ವರ, ರಾಮದೇವ ನಾರಾಯಣದೇವ ಎಂಬ ದೇವಸ್ಥಾನಗಳೂ ಚಂದ್ರನಾಥ ಬಸದಿ, ಪಾಶ್ರ್ವನಾಥ ಬಸದಿ ಹಿರಿಬಸದಿ ಎಂಬ ಜೈನಬಸದಿಗಳೂ ವೀರಶೈವರ ಅಂದಾನೇಶ್ವರಸ್ವಾಮಿ ಮಠವೂ ಪಳೆಯುಳಿಕೆಗಳಾಗಿ ನಿಂತಿವೆ. ಪುರಾತನ ಕಟ್ಟಡಗಳಲ್ಲಿ ಕೆಲವು ಹಾಳಾಗಿ ಅಸ್ತವ್ಯಸ್ತವಾಗಿ ನಿಂತಿವೆ. ಚಾವಣಿಯ ಬಳಿಯಲ್ಲಿ ಬಿದ್ದ ಶಾಸನಗಳು, ನಾರಾಯಣದೇವರ ಗುಡಿಯ ಮುಂದಿನ ಧ್ವಜಸ್ತಂಭ ಈ ಮಾತಿಗೆ ಸಾಕ್ಷಿ. ಈ ಧ್ವಜಸ್ತಂಭ ಈ ಮಾತಿಗೆ ಸಾಕ್ಷಿ. ಈ ಧ್ವಜಸ್ತಂಭ ಮೂಲದಲ್ಲಿ ಜೈನ ಬಸದಿಯೊಂದರ ಮುಂದೆ ನಿಲ್ಲಿಸಿದ್ದ ಮಾನಸ್ತಂಭ. ಇದನ್ನು 977ರಲ್ಲಿ ಮಾಡಿಸಿ ಪ್ರತಿಷ್ಠೆಗೈದ ಸಂಗತಿಯನ್ನು ಅದರ ಮೇಲಿರುವ ಶಾಸನ ಸಾರುತ್ತದೆ. ಮುಳಗುಂದ 1848ರ ತನಕ ತಾಸಗಾಂವ್ ಜಹಗೀರಿಗೆ ಸೇರಿತ್ತು.