ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುಳ್ಳುರಾಮಫಲ

ವಿಕಿಸೋರ್ಸ್ದಿಂದ

ಮುಳ್ಳುರಾಮಫಲ - ಅನೋನೇಸೀ ಕುಟುಂಬಕ್ಕೆ ಸೇರಿದ ಫಲವೃಕ್ಷ (ಸೌರ್‍ಸಾಪ್). ಅನೋನ ಮ್ಯೂರಿಕೇಟ ಇದರ ಶಾಸ್ತ್ರೀಯ ಹೆಸರು. ರಾಮಫಲ, ಸೀತಾಫಲಗಳ ಹತ್ತಿರ ಸಂಬಂಧಿ. ಸುಮಾರು 6 ಮೀಟರಿಗಿಂತ ಎತ್ತರಕ್ಕೆ ಬೆಳೆಯುವ ನಿತ್ಯ ಹಸಿರಾಗಿರುವ ಸಣ್ಣ ಮರ ಇದು. ದಕ್ಷಿಣ ಭಾರತ ಹಾಗೂ ಶ್ರೀಲಂಕಾಗಳಲ್ಲಿ ಈ ಮರ ಅಲ್ಲಲ್ಲಿ ಕಂಡು ಬರುತ್ತದೆ. ಅಸ್ಸಾಮ್ ಮತ್ತು ಬರ್ಮಾಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಯುವುದಿದೆ.

ಇದರ ಹಣ್ಣುಗಳ ಮೇಲೆ ಸಣ್ಣ ಸಣ್ಣ ಮುಳ್ಳುಗಳಿರುತ್ತವೆ. ಒಳಗೆ ನಾರಿನಿಂದ ಕೂಡಿದ ತಿರುಳು ರಸಭರಿತವಾಗಿಯೂ ವಾಸನಾಭರಿತವಾಗಿಯೂ ಇರುತ್ತದೆ. ಇದಕ್ಕೆ ಒಂದು ತೆರನ ಹುಳಿ ರುಚಿಯುಂಟು. ಇದಕ್ಕೆ ಕಾರಣ ತಿರುಳಿನಲ್ಲಿರುವ ಆಮ್ಲದ ಅಂಶ. ಸಕ್ಕರೆ ಅಂಶ ಕಡಿಮೆ ಪ್ರಮಾಣದಲ್ಲಿದೆ. ಜಾವಾದಲ್ಲಿ ಎಳೆಯ ಹಣ್ಣುಗಳನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಮೀನುಗಳನ್ನು ಕೊಲ್ಲಲು ಇದರ ಬೀಜದ ಬಳಕೆಯುಂಟು. ಇದಕ್ಕೆ ಕ್ರಿಮಿನಾಶಕ ಗುಣಗಳೂ ಉಂಟು. ಇದರ ಎಲೆಗಳಲ್ಲಿ ಸುವಾಸನೆಭರಿತ ತೈಲವಿದೆ. (ಕೆ.ಜಿಎ.) (ಪರಿಷ್ಕರಣೆ : ಕೆ ಬಿ ಸದಾನಂದ)