ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುಳ್ಳುಹಂದಿ

ವಿಕಿಸೋರ್ಸ್ದಿಂದ

ಮುಳ್ಳುಹಂದಿ ಮ್ಯಾಮೇಲಿಯ ವರ್ಗ, ಇನ್ಸೆಕ್ಟಿವೊರ ಗಣದ ಎರಿನೇಸೈಯಿಡೀ ಕುಟುಂಬಕ್ಕೆ ಸೇರಿದ ಎರಿನೇಸಿಯಸ್, ಹೆಮಿಎರೈನಸ್ ಮತ್ತು ಪ್ಯಾರಎಕೈನಸ್ ಜಾತಿಯ ಪ್ರಾಣಿಗಳಿಗೂ ಅದೇ ವರ್ಗದ ರಾಡೆಂಷಿಯ ಗಣದ ಹಿಸ್ಟ್ರಿಸಿಡೀ ಕುಟುಂಬಕ್ಕೆ ಸೇರಿದ ಹಿಸ್ಟ್ರಿಕ್ಸ್, ಅತಿರೂರಸ್, ಟ್ರೈಕಿಸ್ ಮುಂತಾದ ಜಾತಿಯ ಪ್ರಾಣಿಗಳಿಗೂ ಅನ್ವಯವಾಗುವ ಸಾಮಾನ್ಯ ಹೆಸರು. ಮೊದಲ ಗುಂಪಿನವು ಕೀಟಭಕ್ಷಿಗಳು. ಇವನ್ನು ಇಂಗ್ಲಿಷಿನಲ್ಲಿ ಹೆಜ್‍ಹಾಗ್ಸ್ ಎಂದು ಕರೆಯಲಾಗುತ್ತದೆ. ಎರಡನೆಯ ಗುಂಪಿನವು ವಂಶಗಳು, ಇಲಿ, ಅಳಿಲು, ಮೊಲ ಮುಂತಾದವುಗಳೆ ಸಂಬಂಧಿಗಳು. ಪಾಕ್ರ್ಯುಪೈನ್ ಎಂಬ ಸಾಮಾನ್ಯ ಇಂಗ್ಲಿಷ್ ಹೆಸರುಳ್ಳ ಇವನ್ನು ಕನ್ನಡದಲ್ಲಿ ಕಣೆಹಂದಿಗಳೆಂದೂ ಕರೆಯಲಾಗುತ್ತದೆ.

ಮೇಲೆ ಹೇಳಿದ ಹಾಗೆ ಈ ಎರಡು ಗುಂಪಿನ ಪ್ರಾಣಿಗಳು ಪ್ರಾಣಿವೈಜ್ಞಾನಿಕವಾಗಿ ವಿಭಿನ್ನವಾಗಿದ್ದರೂ ಇವುಗಳಲ್ಲಿ ಕಾಣಬರುವ ಉಭಯಸಾಮಾನ್ಯ ಲಕ್ಷಣವೆಂದರೆ ಮೈಮೇಲೆ ಬಿರುಸಾದ ಮುಳ್ಳುಗಳಿರುವುದು. ಎಂದೇ ಕನ್ನಡದಲ್ಲಿ ಮುಳ್ಳುಹಂದಿ ಎಂಬ ಹೆಸರಿನಿಂದ ಇವು ಪ್ರಸಿದ್ಧ. ಪ್ರಸಕ್ತ ಲೇಖನದಲ್ಲಿ ಎರಿನೇಸಿಯಸ್ ಮತ್ತು ಹಿಸ್ಟ್ರಿಕ್ಸ್ ಜಾತಿಗಳ ಸ್ಥೂಲ ವಿವರಣೆ ಕೊಡಲಾಗಿದೆ.

ಎರಿನೇಸಿಯಸ್ ಜಾತಿ ಬಲು ವಿಶಾಲ ವ್ಯಾಪ್ತಿಯುಳ್ಳದು.್ದ ಬ್ರಿಟಿಷ್ ದ್ವೀಪಗಳಿಂದ ಹಿಡಿದು ಯೂರೊಪಿನಾದ್ಯಂತವೂ ರಷ್ಯ, ಕೊರಿಯ, ಉತ್ತರ ಹಾಗೂ ಪೂರ್ವ ಚೀನಗಳಲ್ಲೂ ಏಷ್ಯ ಮೈನರ್, ಕಾಕಸಸ್ ಪ್ರದೇಶ, ಆಫ್ರಿಕದ ಮೊರಾಕೊ, ಲಿಬ್ಯ, ಅಂಗೋಲಗಳಲ್ಲೂ ಇದರ 6 ಪ್ರಭೇದಗಳನ್ನು ಕಾಣಬಹುದು. ಬಲು ಮುಖ್ಯ ಪ್ರಭೇದ ಎ. ಯೂರೊಪಿಯಸ್ (ಯೂರೇಷ್ಯದ ಹೆಜ್‍ಹಾಗ್). ಇದು 135-270 ಮಿಮೀ ಉದ್ದದ ಪ್ರಾಣಿ. 10-50 ಮಿಮೀ ಉದ್ದದ ಬಾಲವುಂಟು. ವಯಸ್ಕ ಪ್ರಾಣಿಯ ತೂಕ 400-1100 ಗ್ರಾಮ್. ಮುಸುಡು, ಕಾಲು, ಉದರಭಾಗಗಳನ್ನು ಬಿಟ್ಟರೆ ಮೈಮೇಲೆಲ್ಲ ದಟ್ಟ ಮತ್ತು ಬಿರುಸು ಮುಳ್ಳುಗಳಿವೆ. ಮೈಬಣ್ಣ ಚಾಕಲೇಟ್ ಕಂದು. ಉದ್ದನೆಯ ಚೂಪುಮೂತಿ, ಕಿರಿಯಗಲದ ಕಿವಿಗಳು ಇದರ ಇನ್ನುಳಿದ ಲಕ್ಷಣಗಳು.

ಸಾಧಾರಣವಾಗಿ ಮೆಲುಗತಿಯಲ್ಲಿ ಓಲುತ್ತ ನಡೆಯುವ ಇದು ಅಗತ್ಯವಿದ್ದಲ್ಲಿ ವೇಗವಾಗಿ ಕೂಡ ಓಡಬಲ್ಲದು. ಮರ ಹತ್ತುವುದರಲ್ಲೂ ನೀರಿನಲ್ಲಿ ಈಜುವುದರಲ್ಲೂ ನಿಷ್ಣಾತ. ಮೈಮೇಲಿನ ಮುಳ್ಳುಗಳು ಶತ್ರುಗಳ ವಿರುದ್ದ ರಕ್ಷಣೆಯೊದಗಿಸುವುದಲ್ಲದೆ, ಮರಗಿಡಗಳಿಂದ ಆಕಸ್ಮಾತ್ ಬಿದ್ದಾಗ ಮೆತ್ತೆಯಂತೆ ವರ್ತಿಸಿ ಪೆಟ್ಟಾಗುವುದನ್ನು ಕೂಡ ತಡೆಯುತ್ತದೆ. ಇದು ನಿಶಾಚರಿ. ಹಗಲಿನಲ್ಲಿ ಬಿಲಗಳಲ್ಲೊ ಕಲ್ಲು ಸಂದುಗಳಲ್ಲೊ ಅವಿತಿದ್ದು ರಾತ್ರಿ ವೇಳೆ ತನ್ನ ಎರೆಪ್ರಾಣಿಗಳಾದ ಹಲವು ವಿಧದ ಅಕಶೇರುಕಗಳನ್ನೂ ಕಪ್ಪೆ, ಹಾವು, ಓತಿ, ಸಣ್ಣಪುಟ್ಟ ಹಕ್ಕಿಗಳು, ಇಲಿ ಮುಂತಾದವನ್ನೂ ಹುಡುಕುತ್ತ ಅಲೆಯುತ್ತದೆ.

ಅಕ್ಟೋಬರಿನಿಂದ ಏಪ್ರಿಲ್ ತನಕ ಇದು ಶಿಶಿರಸ್ವಾಪದಲ್ಲಿ ತೊಡಗಿರುವುದುಂಟು. ಮೈಯನ್ನು ತನ್ನ ಜೊಲ್ಲಿನಿಂದ ಪೂಸಿಕೊಳ್ಳುವ ವಿಚಿತ್ರ ಪರಿಪಾಟಿಯನ್ನು ಇದು ಪ್ರದರ್ಶಿಸುತ್ತದೆ. ಯಾವುದೇ ವಸ್ತು ಸಿಕ್ಕಿದರೂ ಅದನ್ನು ನೆಕ್ಕುತ್ತನೆಕ್ಕುತ್ತ ಜೊಲ್ಲಿನ ನೊರೆಯನ್ನು ಉತ್ಪಾದಿಸಿಕೊಂಡು ಈ ನೊರೆಯಿಂದ ಮುಳ್ಳುಗಳ ಮೇಲೆ ಸವರಿಕೊಳ್ಳುತ್ತದೆ. ಶತ್ರುಗಳಿಂದ ರಕ್ಷಿಸಿಕೊಳ್ಳುವ ಮಾರ್ಗ ಎಂದರೆ ಚಂಡಿನಂತೆ ಸುತ್ತಿಕೊಳ್ಳುವುದು.

ಇದು ವರ್ಷದ ಯಾವ ಕಾಲದಲ್ಲಾದರೂ ಸಂತಾನವೃದ್ಧಿ ಮಾಡಬಲ್ಲುದಾದರೂ ಚಳಿಪ್ರದೇಶಗಳಲ್ಲಿ ವರ್ಷಕ್ಕೆರಡು ಬಾರಿ ಮಾತ್ರ ಮರಿ ಹಾಕುತ್ತದೆ. ಗರ್ಭಾವಧಿಯ ಕಾಲ 34-49 ದಿನಗಳು, ಒಂದು ಸೂಲಿಗೆ ಸುಧಾರಣವಾಗಿ 4 ಮರಿಗಳು, ಹುಟ್ಟಿದಾಗ ಮರಿಗಳು ಕಣ್ಣು ತೆರೆದಿರುವುದಿಲ್ಲ ; ಹುಟ್ಟಿದ 14-18 ದಿನಗಳ ತರುವಾಯ ಕಣ್ಣು ತೆರೆಯುತ್ತವೆ. ಏರಿನೇಸಿಯಸ್ ಮುಳ್ಳುಹಂದಿಗಳನ್ನು ಸಾಕಬಹುದು. ಇವುಗಳ ಆಯುಷ್ಯ ಸುಮಾರು 6 ವರ್ಷಗಳು.

ಹೆಮಿಎಕೈನಸ್ ಮತ್ತು ಪ್ಯಾರಎಕೈನಸ್ ಜಾತಿಯ ಮುಳ್ಳುಹಂದಿಗಳು ಭಾರತದಲ್ಲಿ ರಾಜಸ್ಥಾನದ ಮರುಭೂಮಿಯಲ್ಲಿ ಕಾಣದೊರೆಯುವುವು. ಇವುಗಳ ಜೀವನ ಕ್ರಮ ಎರಿನೇಸಿಯಸ್ ಜಾತಿಯದರಂತೆಯೇ ಇದೆ.

ಹಿಸ್ಟ್ರಿಕ್ಸ್ ಜಾತಿಯ ಮುಳ್ಳುಹಂದಿಯಲ್ಲಿ ಸುಮಾರು 6 ಪ್ರಭೇದಗಳಿವೆ. ದಕ್ಷಿಣ ಯೂರೊಪ್, ಆಫ್ರಿಕ, ಭಾರತ, ಸುಮಾತ್ರ, ಜಾವ, ಬೋರ್ನಿಯೊಗಳ ಹಾಗೂ ಆಗ್ನೇಯ ಏಷ್ಯದ ಹಲಕೆಲವು ದ್ವೀಪಗಳ ಅರಣ್ಯಗಳು, ಬೆಟ್ಟಗಳು ಇವುಗಳ ಸ್ವಾಭಾವಿಕ ನೆಲೆಗಳು.

ಇವುಗಳ ದೇಹದ ಸರಾಸರಿ ಉದ್ದ 600-800 ಮಿಮೀ : ತೂಕ 18-30 ಕೆಜಿ ಸುಮಾರು 125-150 ಮಿಮೀ ಉದ್ದದ ಬಾಲ ಉಂಟು. ದೇಹದ ಮೇಲ್ಭಾಗ ದೃಢವೂ ಉದ್ದವೂ ಆದ ಟೊಳ್ಳು ಕಣೆಗಳ (ಮುಳ್ಳುಗಳ) ಕವಚದಿಂದ ಆವೃತವಾಗಿದೆ. ಇವುಗಳ ಬಣ್ಣ ಕಗ್ಗಂದು ಅಥವಾ ಕಪ್ಪು, ಪ್ರತಿಯೊಂದು ಮುಳ್ಳಿನುದ್ದಕ್ಕೂ ಬಿಳಿ ಇಲ್ಲವೆ ಹಳದಿ ಬಣ್ಣದ ಪಟ್ಟೆಗಳುಂಟು. ಅಲ್ಲಲ್ಲಿ ಪೂರ್ತಿ ಬಿಳಿಯ ಬಣ್ಣದ ಇನ್ನೂ ಹೆಚ್ಚು ಉದ್ದದ ಮುಳ್ಳುಗಳೂ ಇದೆ. ಕೆಲವು ಪ್ರಭೇದಗಳಲ್ಲಿ ಹೆಕ್ಕತ್ತಿನ ಮೇಲೂ ಮುಳ್ಳುಗಳಿವೆ. ಮೈಯಿಯ ತಳಭಾಗದಲ್ಲಿ ಒರಟಾದ, ನೆಟ್ಟನೆಯ ಬಿರುಗೂದಲುಗಳು ಮಾತ್ರ ಇವೆ. ಹುಟ್ಟುವ ಮರಿಗಳ ಮೈಮೇಲೂ ಮುಳ್ಳುಗಳಿರುವುವು. ಆದರೆ ಇವು ಮೃದುವಾಗಿದ್ದು ಸ್ವಲ್ಪಕಾಲದ ತರುವಾಯ ಬಿರುಸಾಗುವುವು. ಈ ಜಾತಿಯ ಮುಳ್ಳುಹಂದಿಗಳ ಮುಂಗಾಲುಗಳಲ್ಲಿ 4 ಬೆರಳುಗಳೂ ಹಿಂಗಾಲುಗಳಲ್ಲಿ 5 ಬೆರಳುಗಳೂ ಇವೆ. ಇವು ಕೂಡ ನಿಶಾಚರಿಗಳು. ಇವುಗಳ ಆಹಾರ ಪ್ರಧಾನವಾಗಿ ತೊಗಟೆ, ಬೇರು, ಗೆಡ್ಡಗೆಣಸು, ಹಣ್ಣು ಇತ್ಯಾದಿ. ಸತ್ತಪ್ರಾಣಿಯ ದೇಹಗಳನ್ನೂ ಮೂಳೆ ದಂತಗಳನ್ನೂ ತಿನ್ನುವುದೆನ್ನಲಾಗಿದೆ. ವೈರಿಗಳೆದುರಾದಾಗ ಪಲಾಯನವೇ ರಕ್ಷಣೆಯ ಸಾಮಾನ್ಯ ಮಾರ್ಗ. ಆದರೆ ಹೀಗೆ ಓಡಿ ತಪ್ಪಿಸಿಕೊಳ್ಳುವುದು ಕಠಿಣ ಎನಿಸಿದಾಗ ಶತ್ರುವಿಗೆ ಬೆನ್ನಾಗಿ ನಿಂತು, ಕಣೆಗಳನ್ನು ನಿಮಿರಿಸಿಕೊಂಡು ಕಂಪಿಸುತ್ತದೆ. ಕಣೆಗಳು ಟೊಳ್ಳಾಗಿರುವುದರಿಂದ ಒಂದು ರೀತಿಯ ಕಟಕಟ ಸದ್ದು ಉಂಟಾಗುತ್ತದೆ. ವೈರಿ ಇನ್ನೂ ಹತ್ತಿರ ಬಂದರೆ ಕಣೆಗಳನ್ನು ಅದರತ್ತ ಎಸೆಯುವುದೂ ಉಂಟು.

ಇವುಗಳ ಸಂತಾನವೃದ್ದಿ ಶ್ರಾಯ ವಸಂತ. ಒಂದು ಸೂಲಿಗೆ 1-4 ಮರಿಗಳು ಹುಟ್ಟುವುವು. ಗರ್ಭಾವಧಿ ಸುಮಾರು 112 ದಿನಗಳು. ಇವು ಸುಮಾರು 20 ವರ್ಷ ಬದುಕಿರುವುವು. ಇವುಗಳ ಮಾಂಸ ಬಲು ರುಚಿಕರವಾಗಿರುವುದೆನ್ನಲಾಗಿದೆ. (ಬಿ.ಎಚ್.ಎಂ.; ಎ.)