ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೂರ್ಗಿನಹುಳಿ ಮರ

ವಿಕಿಸೋರ್ಸ್ದಿಂದ

ಮೂರ್ಗಿನಹುಳಿ ಮರ - ಗಟಿಫೆರೀ (ಕ್ಲೂಸಿಯೇಸೀ) ಕುಟುಂಬಕ್ಕೆ ಸೇರಿದ ಕಾಡುಮರ (ಕೋಕಮ್ ಬಟರ್ ಟ್ರೀ. ಬ್ರಿಂಡೋನಿಯ ಟ್ಯಾಲೊ ಟ್ರೀ). ಮುರುವನ ಹುಳಿ, ಮುರ್ಗಲ, ಬಿರಿಂಡ ಪರ್ಯಾಯನಾಮಗಳು. ಉಪಾಗಿ (ಮಂತುಳ್ಳಿ). ಮಂಗೊಸ್ಟೀನ್, ದೇವನಹುಳಿ, ದೇವಗರಿಗೆ ಮುಂತಾದ ಮರಗಳಿಗೆ ಹತ್ತಿರ ಸಂಬಂಧಿಯಾದ ಇದು ಅವುಗಳಂತೆಯೇ ಗಾರ್ಸೀನಿಯ ಎಂಬ ಜಾತಿಗೆ ಸೇರಿದೆ. ಇದು ಗಾರ್ಸೀನಿಯ ಇಂಡಿಕ ಎಂಬ ಪ್ರಭೇದ. ಭಾರತದ ಪಶ್ಚಿಮ ಘಟ್ಟಗಳಲ್ಲಿ ಕರ್ನಾಟಕದ ಮತ್ತು ಕೇರಳದ ವೈನಾಡಿನ ಕಾಡುಗಳಲ್ಲಿ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ. ಮಹಾರಾಷ್ಟ್ರದ ಕೊಂಕಣ ಸೀಮೆಯಲ್ಲೂ ತಮಿಳುನಾಡಿನ ನೀಲಗಿರಿ ಶ್ರೇಣಿಗಳಲ್ಲೂ ಇದನ್ನು ಬೆಳೆಸುವುದುಂಟು.

ಮಧ್ಯಮ ಗಾತ್ರದ ಮರ ಇದು : ಸುಮಾರು 10 ಮೀ ಎತ್ತರಕ್ಕೆ ಬೆಳೆಯುತ್ತದೆ. ಹಣ್ಣುಗಳು 2-4 ಸೆಂಮೀ ವ್ಯಾಸದ ಚೆಂಡುಗಳಂತಿವೆ. ಮಾಗಿದಾಗ ಕಡುನೀಲಿ ಬಣ್ಣ ತಳೆಯುತ್ತವೆ. ಒಳಗೆ ರಸಭರಿತ ತಿರುಳೂ 5-8 ಬೀಜಗಳೂ ಇವೆ. ಹಣ್ಣಿಗೆ ಸುವಾಸನಾಯುಕ್ತಸ್ವಾದವೂ ಸಿಹಿಮಿಶ್ರಿತ ಹುಳಿ ರುಚಿಯೂ ಉಂಟು. ಹಣ್ಣಿನ ಸಿಪ್ಪೆಯನ್ನು ತಿರುಳಿನ ರಸದಲ್ಲಿ ಕೆಲಕಾಲ ನೆನೆಯಿಕ್ಕಿ ತೆಗೆದು ಬಿಸಿಲಿನಲ್ಲಿ ಒಣಗಿಸಿ ಕೋಕಮ್ ಎಂಬ ಹುಳಿಯನ್ನು ತಯಾರಿಸಲಾಗುತ್ತದೆ. ಇದರಲ್ಲಿ ಶೇ. 10 ಮ್ಯಾಲಿಕ್ ಆಮ್ಲ. ಕೊಂಚ ಮೊತ್ತದ ಸಿಟ್ರಿಕ್ ಅಥವಾ ಟಾರ್ಟಾರಿಕ್ ಆಮ್ಲ ಇದ್ದು. ಇದನ್ನು ಹುಣಸೆಹುಳಿಯಂತೆ ಅಡುಗೆಗೆ. ತಂಪು ಪಾನೀಯ ತಯಾರಿಕೆಗೆ ಬಳಸಲಾಗುತ್ತದೆ.

ಮೂರ್ಗಿನಹುಳಿಹಣ್ಣಿನ ಬೀಜದಿಂದ ಕೋಕಮ್ ಬೆಣ್ಣೆಯನ್ನು ಪಡೆಯಬಹದು. ಖಾದ್ಯಯೋಗ್ಯವಾಗಿರುವ ಈ ಬೆಣ್ಣೆಯನ್ನು ಹಾಗೆಯೇ ಸೇವಿಸುವುದಲ್ಲದೆ ತುಪ್ಪದೊಂದಿಗೆ ಮಿಶ್ರಮಾಡಿ ಬಳಸುವುದುಂಟು. ಇದು ಶಕ್ತಿವರ್ಧಕ, ತಂಪುಕಾರದ, ಪ್ರತಿಬಂಧಕವೆಂದು ಹೆಸರಾಗಿದೆ. ಇದನ್ನು ಮುಲಾಮಿನ ರೂಪದಲ್ಲಿ ಕೈ, ತುಟಿ ಬಿರುಕುಗಳ ಚಿಕಿತ್ಸೆಯಲ್ಲಿ ಉಪಯೋಗಿಸುವುದಿದೆ. ಬೆಣ್ಣೆ ತೆಗೆದಮೇಲೆ ಉಳಿಯುವ ಹಿಂಡಿ ಗೊಬ್ಬರವಾಗಿ ಉಪಯುಕ್ತ.

ಹಣ್ಣು ಜಂತುನಾಶಕ, ಹೃದಯೋತ್ತೇಜಕವಾಗಿದೆಯಲ್ಲದೆ ಮೂಲವ್ಯಾಧಿ. ಆಮಶಂಕೆಗಳಿಗೂ ಔಷಧಿಯಾಗಿದೆ. ಹಣ್ಣಿನ ರಸ ಪಿತ್ತಹರ. (ಟಿ.ಸಿ.)