ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೂಲಂಗಿ

ವಿಕಿಸೋರ್ಸ್ದಿಂದ

ಮೂಲಂಗಿ ಬ್ರ್ಯಾಸಿಕೇಸೀ (ಕ್ರೂಸಿಫೆರೀ) ಕುಟುಂಬಕ್ಕೆ ಸೇರಿದ ಜನಪ್ರಿಯ ತರಕಾರಿಸಸ್ಯ (ರ್ಯಾಡಿಶ್). ಮುಲ್ಲಂಗಿ ಪರ್ಯಾಯ ನಾಮ. ರ್ಯಾಫನಸ್ ಸೇಟಿವಸ್ ಎಂಬುದು ಇದರ ಸಸ್ಯವೈಜ್ಞಾನಿಕ ಹೆಸರು. ಯುರೋಪ್ ಹಾಗೂ ಏಷ್ಯದ ಮೂಲವಾಸಿ. ಇಂದು ಪ್ರಪಂಚಾದ್ಯಂತ ಕೃಷಿಯಲ್ಲಿದೆ.

ಇದೊಂದು ಏಕವಾರ್ಷಿಕ ಅಥವಾ ದ್ವೈವಾರ್ಷಿಕ ಮೂಲಿಕೆ ಗಿಡ. ಬಿಳಿಯ ಇಲ್ಲವೆ ಕೆಂಪು ಬಣ್ಣದ ಉರುಳೆಯಾಕಾರದ ಚೂಪು ತುದಿಯ ತಾಯಿಬೇರು ಇದರ ಪ್ರಮುಖ ಲಕ್ಷಣಗಳಲ್ಲೊಂದು. ಇದೇ ತರಕಾರಿಯಾಗಿ ಬಳಕೆಯಾಗುವ ಭಾಗ. ಗಿಡ ಚಿಕ್ಕದಿರುವಾಗ ಬೇರಿನ ಬುಡದಿಂದ (ಅಂದರೆ ಮಣ್ಣಿನ ಪಾತಳಿಯ ಕಡೆಗಿರುವ ಭಾಗ) ಹತ್ತಾರು ಎಲೆಗಳು ಮೇಲ್ಮುಖವಾಗಿ ಬೆಳೆಯುತ್ತವೆ. ಸುಮಾರು 20 ಸೆಂಮೀ ಉದ್ದವಿರುವ ಇವು ಬುಡಭಾಗದಿಂದ ತುದಿಯೆಡೆಗೆ ಹೋದಂತೆ ಅಗಲವಾಗುತ್ತ ಹೋಗುವ ಎಲೆಯಲಗನ್ನು ಪಡೆದಿವೆ. ಎಲೆಯಂಚು ಹಲವಾರು ಹಾಲೆಗಳಾಗಿ ಸೀಳಿದೆ. ಗಿಡ ಬೆಳೆದಂತೆ ಸರಳವಾದ ಇಲ್ಲವೆ ಕೊಂಚ ಕವಲೊಡೆದ ಕಾಂಡ ಮೇಲಕ್ಕೆ ವರ್ಧಿಸುತ್ತದೆ. ಇದರ ಮೇಲೂ ಸರಳವಾದ ಮತ್ತು ರೇಖೀಯ ಆಕಾರದ ಎಲೆಗಳು ಹುಟ್ಟುತ್ತವೆ. ಹೂಗಳು ಕಾಂಡ ಕವಲುಗಳ ತುದಿಯಲ್ಲಿ ಸ್ಥಿತವಾಗಿರುವ ಅಸೀಮಾಕ್ಷಿ (ರೇಸಿಮೋಸ್) ಹೂಗೊಂಚಲುಗಳಲ್ಲಿ ಅರಳುತ್ತವೆ. ಇವುಗಳ ಬಣ್ಣ ಬಿಳಿ ಇಲ್ಲವೆ ತಿಳಿಪಾಟಲ. ಫಲಗಳು 25-90 ಸೆಂಮೀ ಉದ್ದ ಇದ್ದು ಚೂಪಾದ ತುದಿಯನ್ನು ಪಡೆದಿವೆ. ಒಳಗೆ 2-8 ಬೀಜಗಳುಂಟು. ಬೀಜಗಳಿರುವ ಭಾಗ ಗುಂಡಗೆ ಉಬ್ಬಿದ್ದು ಉಳಿದಭಾಗ ತೆಳ್ಳಗಿರುವುದರಿಂದ, ಕಾಯಿ ಮಣಿಸರದಂತೆ ಕಾಣುತ್ತದೆ.

ಮೂಲಂಗಿಯಲ್ಲಿ ಹಲವಾರು ಬಗೆಗಳಿವೆ. ಇವುಗಳ ಬೇರಿನ ಬಣ್ಣ, ಆಕಾರ ಗಾತ್ರಗಳಲ್ಲೂ ಬಲಿಯಲು ಹಿಡಿಯುವ ಕಾಲಾವಧಿಯಲ್ಲೂ ರುಚಿಯಲ್ಲೂ ಗಮನಾರ್ಹ ವ್ಯತ್ಯಾಸಗಳುಂಟು. ಅಂತೆಯೇ ಮೂಲತಃ ಯಾವ ಪ್ರದೇಶದಿಂದ ಇವು ಬಂದವು ಎನ್ನುವುದರ ಆಧಾರದ ಮೇಲೆ ಇವುಗಳಲ್ಲಿ ಯುರೋಪಿಯನ್, ಜಪಾನೀ ಹಾಗೂ ಭಾರತೀಯ ಎಂಬ ಮೂರು ಪ್ರಧಾನ ಗುಂಪುಗಳನ್ನು ಗುರುತಿಸಬಹುದು. ಇವನ್ನು ಸ್ಥೂಲವಾಗಿ ರ್ಯಾಫನಿಸ್ಟ್ರಮ್, ರ್ಯಾಫನಿಸ್ಟ್ರಾಯ್‍ಡಿಸ್ ಮತ್ತು ಇಂಡಿಕಸ್ ಬಗೆಗಳು ಎಂದು ನಿರ್ದೇಶಿಸಲಾಗುತ್ತದೆ. ಇವು ಕೂಡ ಶುದ್ಧಬಗೆಗಳಾಗಿರದೆ ಹಲವಾರು ಕಾಡುಬಗೆಯ ಮೂಲಂಗಿ ತಳಿಗಳ (ಮ್ಯಾರಿಟಿಮಸ್, ಲ್ಯಾಂಡ್ರ, ರಾಸ್ಟ್ರೇಟಸ್ ಮುಂತಾದವು) ವರ್ಣಸಂಕರದಿಂದ ಸ್ವಾಭಾವಿಕವಾಗಿ ರೂಪಿತವಾದವು ಎಂದು ತಿಳಿಯಲಾಗಿದೆ. ಆದ್ದರಿಂದ ಇವೆಲ್ಲವನ್ನೂ ರ್ಯಾ. ಸೇಟಿವಸ್ ಎಂಬ ಒಂದೇ ಗುಂಪಿನ ವಿಭಿನ್ನ ತಳಿಗಳೆಂದೇ ಪರಿಗಣಿಸಬೇಕು ಎಂಬುದು ಬಹುತೇಕ ತಜ್ಞರ ಅಭಿಪ್ರಾಯ. ಅಲ್ಲದೆ ಮೂಲಂಗಿಯನ್ನು ಕೋಸು ಮತ್ತು ಬ್ರಸೆಲ್ಸ್ ಸ್ಟ್ರೌಟ್‍ಗಳೊಂದಿಗೆ ಅಂತರಜಾತೀಯ ಅಡ್ಡತಳಿ ಎಬ್ಬಿಸಿ ಪಡೆದಿರುವಂಥ ಸಂಕರ ತಳಿಗಳೂ ಇವೆ. ಆದರೆ ಇವು ವಾಣಿಜ್ಯದೃಷ್ಟಿಯಿಂದ ಮುಖ್ಯವಲ್ಲ.

ಕೃಷಿಯಲ್ಲಿ ಮುಖ್ಯವೆನಿಸಿರುವ ಮೂಲಂಗಿ ಬಗೆಗಳು ಇವು : ಜೋನ್‍ಪುರಿ, ಬಡಾಮಾಸಿ, ಪೂಸಾದೇಸಿ ಬಿಳಿ, ಚೈನಾ ರೋಸ್, ಚೈನಿಸ್ ಪಿಂಕ್, ಜಪಾನೀ ಬಿಳಿ, ಫ್ರೆಂಚ್ ಬ್ರೆಕ್‍ಫಾಸ್ಟ್, ಸ್ಕಾರ್ಲೆಟ್ ಗ್ಲೋಬ್, ಹ್ವೈಟ್ ಐಸಿಕಲ್, ಪರ್ಪಲ್ ಟಾಪ್ ಹ್ವೈಟ್ ಮತ್ತು ಮಿಯಾಶೀಗೆ.

ಭಾರತದಲ್ಲಿ ಕರಾವಳಿ ಮೈದಾನಗಳಿಂದ ಹಿಡಿದು ಹಿಮಾಲಯದ 3000 ಮೀ ಎತ್ತರದ ಪ್ರದೇಶಗಳವರೆಗೆ ಮೂಲಂಗಿ ಬೇಸಾಯದಲ್ಲಿದೆ. ಪ್ರಧಾನವಾಗಿ ಇದು ತಂಪು ಹವೆಯ ಬೆಳೆಯಾದರೂ ವರ್ಷವಿಡೀ ಬೆಳೆಯಬಹುದು. ಮರಳುಮಿಶ್ರಿತ ಗೋಡುಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಬಿತ್ತನೆ ಬೀಜಗಳ ಮೂಲಕ ನೇರವಾಗಿ ಜಮೀನಿನಲ್ಲೊ ಇಲ್ಲವೆ ಒಟ್ಲು ಪಾತಿಗಳಲ್ಲೊ ಬೀಜ ಬಿತ್ತಬಹುದು.

ಮೂಲಂಗಿಗೆ ರೋಗರುಜಿನಗಳ ಬಾಧೆ ಕಡಿಮೆ. ಬೀಜ ಬಿತ್ತಿದ 30-50 ದಿವಸಗಳ ತರುವಾಯ ಬೇರು ಕೀಳಲು ಸಿದ್ಧವಾಗುತ್ತದೆ. ಇಳುವರಿಯಲ್ಲಿ ಬಗೆಗಳನ್ನು ಅನುಸರಿಸಿ ವ್ಯತ್ಯಾಸವುಂಟು. ಭಾರತದಲ್ಲಿ ಯುರೋಪಿಯನ್ ತಳಿಗಳು ಹೆಕ್ಟೇರಿಗೆ 7500 ಕೆಜಿ ಇಳುವರಿ ಕೊಟ್ಟರೆ ಸ್ಥಳೀಯ ತಳಿಗಳು 15,000-20,000 ಕೆಜಿ ಕೊಡುತ್ತವೆ.

ಮೂಲಂಗಿಯನ್ನು ಹಸಿತರಕಾರಿಯಾಗಿ ಇಲ್ಲವೆ ಬೇಯಿಸಿ ತಿನ್ನುವುದಿದೆ. ಇದರ ಎಲೆಗಳನ್ನು ಸಹ ಹಸಿಯಾಗಿ ಅಥವಾ ಬೇಯಿಸಿ ಸೇವಿಸುವುದುಂಟು. ಎಲೆಗಳು ಕಾಲ್ಸಿಯಮ್, ಕಬ್ಬಿಣ, ಆಸ್ಕಾರ್ಬಿಕ್ ಆಮ್ಲ ಹಾಗೂ ಂ ವಿಟಮಿನ್ನಿನ ಒಳ್ಳೆಯ ಆಕರಗಳೆನಿಸಿವೆ. ಬೇರಿನಲ್ಲಿ ಕೂಡ ಹೇರಳ ಮೊತ್ತದಲ್ಲಿ ಆಸ್ಕಾರ್ಬಿಕ್ ಆಮ್ಲ ಇದೆ. ಮೂಲಂಗಿಗೆ ಒಂದು ಬಗೆಯ ಘಾಟು ರುಚಿಯಿದೆಯಷ್ಟೆ ಇದಕ್ಕೆ ಕಾರಣ ಇದರೊಳಗೆ ಇರುವ ಹಲವಾರು ಬಗೆಯ ಐಸೊತಯೊಸಯಸೇಟ್ ಎಂಬ ಚಂಚಲ ತೈಲಗಳು (ಮಸ್ಟರ್ಡ್ ಆಯಿಲ್ಸ್). ಅಲ್ಲದೆ ಎಲೆಗಳಲ್ಲಿ ಸುಮಾರು 22 ಬಗೆಯ ಅಮೈನೋ ಆಮ್ಲಗಳಿವೆಯೆನ್ನಲಾಗಿದೆ. ಮೂಲಂಗಿಯ ಕಾಯಿಗಳನ್ನು ಸಹ ತರಕಾರಿಯಾಗಿ ಬಳಸುವುದಿದೆ. ದನಗಳಿಗೆ ಮೂಲಂಗಿ ಒಳ್ಳೆಯ ಮೇವು. ಬೀಜದ ಹಿಂಡಿಯನ್ನು ಗೊಬ್ಬರವಾಗಿ ಬಳಸಬಹುದೆನ್ನಲಾಗಿದೆ.

ಮೂಲಂಗಿಗೆ ಹಲವಾರು ಜೌಷಧೀಯ ಗುಣಗಳೂ ಉಂಟು. ಹೋಮಿಯೋಪತಿ ಪದ್ಧತಿಯಲ್ಲಿ ತಲೆನೋವು, ನಿದ್ರಾರಾಹಿತ್ಯ, ದೀರ್ಘಕಾಲದ ಅತಿಸಾರ ಮುಂತಾದ ರೋಗಚಿಕಿತ್ಸೆಗೆ ಉಪಯೋಗಿಸುತ್ತಾರೆ. ಮೂತ್ರಸಂಬಂಧಿ ರೋಗಗಳು. ಮೊಳೆ ರೋಗ, ಜಠರಶೂಲೆಗಳಿಗೆ ಬೇರು ಒಳ್ಳೆಯ ಮದ್ದು. ಹಸಿಯ ಎಲೆಗಳ ರಸ ಮೂತ್ರೋತ್ತೇಜಕ ಹಾಗೂ ಭೇದಿಕಾರಕ. ಬೀಜಗಳಿಗೆ ಕಫಹರ, ಮೂತ್ರೋತ್ತೇಜಕ, ವಾತಹರ ಮತ್ತು ಜೀರ್ಣಕ ಗುಣಗಳಿವೆ. (ಟಿ.ಸಿ.)