ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೃಗಾಲಯ

ವಿಕಿಸೋರ್ಸ್ದಿಂದ

ಮೃಗಾಲಯ ವಿವಿಧ ಕಾಡುಪ್ರಾಣಿಗಳನ್ನು ಸಂಗ್ರಹಿಸಿಟ್ಟುಕೊಂಡು ಪ್ರದರ್ಶಿಸುವ ಸ್ಥಳ (ಜûೂ; ಜûೂ ಆಲಾಜಿಕಲ್ ಗಾರ್ಡನ್). ಪ್ರಾಣಿಸಂಗ್ರಹಾಲಯ, ಪ್ರಾಣಿಗಳ ಉದ್ಯಾನ, ಮೃಗೋದ್ಯಾನ ಇವೆಲ್ಲ ಪರ್ಯಾಯಪದಗಳು.

ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ನೈಸರ್ಗಿಕವಾಗಿ ಸಿಗುವುದಕ್ಕಿಂತ ಹೆಚ್ಚು ಪೋಷಣೆ ದೊರೆಯುತ್ತದೆ. ಸಾಮಾನ್ಯವಾಗಿ ಮೃಗಾಲಯಗಳಲ್ಲಿ ಜೀವ ಜಗತ್ತಿನ ಎಲ್ಲ ವರ್ಗಗಳ, ಗುಂಪುಗಳ ಪ್ರಾಣಿಗಳನ್ನು ಸಂಗ್ರಹಿಸಿಡಲಾಗುತ್ತದೆ. ಸ್ತನಿಗಳಿಗೆ, ಹುಲಿಗಳಿಗೆ, ಪಕ್ಷಿ, ಉರಗ, ಮೀನು ಮುಂತಾದವುಗಳಿಗೆಂದೇ ಪ್ರತ್ಯೇಕವಾದ ಸಂಗ್ರಹಾಲಯಗಳೂ ಇವೆ. ಇವುಗಳನ್ನು ಸರ್ಪೋದ್ಯಾನ, ಉರಗೋದ್ಯಾನ, ಮತ್ಸ್ಯಾಗಾರ, ಪಕ್ಷಿಧಾಮ ಎಂದು ಆಯಾ ಗುಂಪಿಗೆ ಸಂಬಂಧಿಸಿದಂತೆ ಹೆಸರು ನೀಡಲಾಗಿದೆ.

ಮೃಗಾಲಯಗಳ ಸ್ಥಾಪನೆಗೆ ಸಂಬಂಧಿಸಿದಂತೆ ಮಹತ್ತ್ವದ ದಾಖಲೆಗಳು ದೊರೆಯುತ್ತಿಲ್ಲವಾದ್ದರಿಂದ ಮೊದಲು ಪ್ರಾಣಿ ಸಂಗ್ರಹಾಲಯಗಳು ಎಲ್ಲಿ, ಯಾವಾಗ, ಪ್ರಾರಂಭವಾದವು ಎಂಬ ಮಾಹಿತಿ ದೊರೆಯುತ್ತಿಲ್ಲ. ಬಹುಶಃ ಪ್ರಾಣಿಗಳ ಸಾಕಣೆ ಅಸ್ತಿತ್ವಕ್ಕೆ ಬಂದಾಗಲೇ ಪ್ರಾಣಿಸಂಗ್ರಹಾಲಯಗಳ ಉದಯವಾಗಿರಬೇಕು. ಪ್ರಾಣಿಗಳ ಉಪಯುಕ್ತತೆ ಅಥವಾ ಮಾನವನ ಹವ್ಯಾಸ ಪ್ರಾಣಿಗಳ ಸಂಗ್ರಹಕ್ಕೆ ಕಾರಣವಾಗಿರಬೇಕು.

ಐತಿಹಾಸಿಕವಾಗಿ ಪರಿಶೀಲಿಸಿದಾಗ ಕ್ರಿ.ಪೂ.4500ರ ಸುಮಾರಿಗೆ ಪಾರಿವಾಳಗಳನ್ನು ಬಂಧನದಲ್ಲಿರಿಸುತ್ತಿದ್ದರೆಂದು ತಿಳಿದುಬರುತ್ತದೆ. ಕ್ರಿ.ಪೂ.2500ರ ಸಮಯಕ್ಕೆ ಆನೆಗಳನ್ನು ಹಿಡಿದು ಪಳಗಿಸಿ ಸಾಕಲಾಗುತ್ತಿತ್ತು. ಈಜಿಪ್ಟಿನ ಶಿಲಾಶಾಸನಗಳಲ್ಲಿ ಜಿಂಕೆ, ಕಾಡುಕುರಿಗಳ ಚಿತ್ರಗಳಿರುವುದನ್ನು ಕಾಣುತ್ತೇವೆ. ಚೀನದ ತಾಂಕಿ ಎಂಬ ರಾಣಿ ಕ್ರ.ಪೂ.1150ರಲ್ಲಿ ಜಿಂಕೆಯ ನಿವಾಸವೊಂದನ್ನು ಸ್ಥಾಪಿಸಿದ್ದಳೆಂದು ದಾಖಲೆಗಳು ತಿಳಿಸುತ್ತವೆ. ಕ್ರಿ.ಪೂ.1000ದಲ್ಲಿ ವೆನ್‍ವ್ಯಾಂಗ್ ಎಂಬಾತ 1500 ಎಕರೆ ಸ್ಥಳದಲ್ಲಿ ಪ್ರಾಣಿಸಂಗ್ರಹಾಲಯವೊಂದನ್ನು ಸ್ಥಾಪಿಸಿ ಅದನ್ನು ಬುದ್ಧಿವಂತಿಕೆಯ ಉದ್ಯಾನ ಎಂದು ಹೆಸರಿಸಿದ. ಕ್ರಿ.ಪೂ.600ರ ಹೊತ್ತಿಗೆ ಅಸ್ಸೀರಿಯ ಹಾಗೂ ಬ್ಯಾಬಿಲೋನಿಯದ ದೊರೆಗಳು ಪ್ರಾಣಿ ಸಂಗ್ರಹಾಲಯಗಳನ್ನು ಸ್ಥಾಪಿಸಿದರು. ಮುಂದೆ ತತ್ತ್ವಜ್ಞಾನಿ ಅರಿಸ್ಟಾಟಲ್ ಅಧ್ಯಯನಕ್ಕಾಗಿ ಸಂಗ್ರಹಿಸಿದ ಎಲ್ಲ ಪ್ರಾಣಿಗಳನ್ನು ಇಟ್ಟುಕೊಂಡಿದ್ದ ಆತನ ಸಂಗ್ರಹವೂ ಒಂದು ಪ್ರಾಣಿ ಸಂಗ್ರಹಾಲಯದಂತೆಯೇ ಇತ್ತು.

ಪುರಾತನ ಕಾಲದ ಈಜಿಪ್ಟ್ ಮತ್ತು ಏಷ್ಯದ ಮೃಗಾಲಯಗಳು ಮನರಂಜನೆಗಾಗಿ ರಚಿತವಾದಂಥವು. ಅರಿಸ್ಟಾಟಲನ ಕಾಲದ ಮೃಗಾಲಯಗಳು ಅಧ್ಯಯನಕ್ಕೆ ಮೀಸಲಾಗಿದ್ದವು. ರೋಮನ್ನರು ಮಾತ್ರ ಅಧ್ಯಯನಕ್ಕೆ ಹಾಗೂ ಮನರಂಜನೆಗೆ ಪ್ರತ್ಯೇಕ ಮೃಗಾಲಯಗಳನ್ನು ಸ್ಥಾಪಿಸಿದರು. ಮುಂದೆ ರೋಮನ್ನರ ಸಾರ್ವಭೌಮತ್ವ ಕೊನೆಗೊಂಡಂತೆ ಪ್ರಾಣಿಸಂಗ್ರಹಾಲಯಗಳ ಸಂಖ್ಯೆ ಇಳಿಯಿತು.

ಮುಂದೆ ಇಂಗ್ಲೆಂಡಿನ ರಾಜ ಮೊದಲನೆಯ ಹೆನ್ರಿಯ ಕಾಲದಲ್ಲಿ (12ನೆಯ ಶತಮಾನ) ಪುನಃ ಮೃಗಾಲಯಗಳನ್ನು ಪ್ರಾರಂಭಿಸಲಾಯಿತು. ಕ್ರಿ.ಶ.1333ರಲ್ಲಿ ಫಿಲಿಪ್ಸ್ ದೊರೆ ಪ್ಯಾರಿಸ್ಸಿನಲ್ಲಿ ಮೃಗಾಲಯವೊಂದನ್ನು ಸ್ಥಾಪಿಸಿದ. ಅನಂತರ ಮೆಕ್ಸಿಕೋದಲ್ಲಿ 300 ಸಿಬ್ಬಂದಿಗಳನ್ನೊಳಗೊಂಡ ಒಂದು ಬೃಹತ್ ಮೃಗಾಲಯ ಅಸ್ತಿತ್ವಕ್ಕೆ ಬಂತು. ಮುಂದೆ ಅಲ್ಲೊಂದು ಇಲ್ಲೊಂದು ಮೃಗಾಲಯಗಳು ಪ್ರಾರಂಭವಾದರೂ ನವೀನ ಮಾದರಿಯ ಮೃಗಾಲಯ ಪ್ರಾರಂಭವಾದದ್ದು ಕ್ರಿ.ಶ.1752ರಲ್ಲಿ. ವಿಯನ್ನದ ಕೊಂಬ್ರನ್ ಅರಮನೆಯಲ್ಲಿ ಪ್ರಾರಂಭವಾದ ಈ ಮೃಗಾಲಯಕ್ಕೆ 1755ರಲ್ಲಿ ಸಾರ್ವಜನಿಕರಿಗೆ ಪ್ರವೇಶ ನೀಡಲಾಯಿತು. ಇಂದು ಅಸ್ತಿತ್ವದಲ್ಲಿರುವ ಮೃಗಾಲಯಗಳ ಪೈಕಿ ಇದು ಅತ್ಯಂತ ಹಳೆಯದು. 1775ರಲ್ಲಿ ಮ್ಯಾಡ್ರಿಡ್‍ನ ರಾಯಲ್ ಉದ್ಯಾನ ಪ್ರಾರಂಭವಾಯಿತು. ಪ್ರಖ್ಯಾತ ರಾಯಲ್ ಸೊಸೈಟಿ ಆಫ್ ಲಂಡನ್ನಿನ ಆಶ್ರಯದಲ್ಲಿ, 1828ರಲ್ಲಿ ರೀಜೆಂಟ್ ಪಾರ್ಕಿನಲ್ಲಿ ಮೃಗಾಲಯವೊಂದು ಪ್ರಾರಂಭವಾಯಿತು. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಹಲವು ಮೃಗಾಲಯಗಳು ಹುಟ್ಟಿಕೊಂಡವು. ಇಂದು ಯುರೋಪಿನಾದ್ಯಂತ ಹರಡಿರುವ 100 ಮೃಗಾಲಯಗಳ ಪೈಕಿ ನಲವತ್ತು, ನೂರು ವರ್ಷಗಳಿಗಿಂತ ಹಳೆಯವು. ಪ್ರಪಂಚದಾದ್ಯಂತ ಇಂದು ಸಾವಿರಕ್ಕೂ ಹೆಚ್ಚು ಮೃಗಾಲಯಗಳಿವೆ.

ಮಾನವ ನಾಗರಿಕತೆ ಬೆಳೆಯುತ್ತಿದ್ದಂತೆ, ತನ್ನ ಜೀವನ ಸೌಲಭ್ಯಗಳಿಗಾಗಿ ಆತ ನೈಸರ್ಗಿಕ ಸಂಪತ್ತನ್ನು ಬಳಸಿಕೊಳ್ಳುವುದು ಹೆಚ್ಚಾಗುತ್ತಿದೆ. ಹೀಗಾಗಿ ನಿಸರ್ಗ ಪರಿಸರ ಬದಲಾವಣೆಗೆ ಒಳಗಾಗುತ್ತಿದೆ. ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳಲಾರದ ಹಲವು ಸಸ್ಯಗಳು ಹಾಗೂ ಪ್ರಾಣಿಗಳು ವಿನಾಶದ ಹಾದಿ ಹಿಡಿಯುತ್ತಿದೆ. ಇದೇ ಸ್ಥಿತಿ ಮುಂದುವರಿಯುತ್ತಿದ್ದರೆ ಇಂದು ಬದುಕಿರುವ ಹಲವು ಜೀವಿಗಳು ನಶಿಸಿ ಪಳೆಯುಳಿಕೆಗಳಾಗಬಹುದು. ಇಂಥ ಸಂದರ್ಭದಲ್ಲಿ ನಶಿಸಿಹೋಗುತ್ತಿರುವ ಹಲವು ಪ್ರಭೇದಗಳಿಗೆ ಮೃಗಾಲಯಗಳು ರಕ್ಷೆ ನೀಡುವ ಸ್ಥಾನಗಳಾಗಿವೆ. ವಿರಳವಾಗುತ್ತಿರುವ ಪ್ರಾಣಿಗಳನ್ನು ಮೃಗಾಲಯಗಳಲ್ಲಿಟ್ಟು ಅವುಗಳ ಸಂತತಿಯನ್ನು ಹೆಚ್ಚಿಸುವುದು ಮೃಗಾಲಯಗಳ ಉದ್ದೇಶಗಳಲ್ಲಿ ಒಂದು.

ಪ್ರಾಣಿಗಳ ಆಕಾರ, ದೇಹ ರಚನೆ, ಜೀವನಕ್ರಮ ವೈವಿಧ್ಯಮಯವಾದದ್ದು. ಅವುಗಳ ನಡತೆ, ಜೀವನಕ್ರಮ, ಉಪಯುಕ್ತತೆ ಮುಂತಾದವುಗಳ ಬಗೆಗೆ ಆಯಾ ಪ್ರಾಣಿಗಳ ನೈಸರ್ಗಿಕ ಪರಿಸರದಲ್ಲಿ ಅಧ್ಯಯನ ನಡೆಸುವುದು ಕಷ್ಟಸಾಧ್ಯ. ಪ್ರಾಣಿಗಳ ಬಗೆಗೆ ವಿವರವಾಗಿ ಅಧ್ಯಯನ ನಡೆಸಲು ಮೃಗಾಲಯಗಳು ಉಪಯುಕ್ತವಾಗಿವೆ. ಪ್ರಾಣಿಗಳ ವರ್ಗೀಕರಣ, ಅಂಗರಚನೆ, ನಡತೆ, ರೋಗವಿಜ್ಞಾನ ಇತ್ಯಾದಿ ಹಲವು ವಿಷಯಗಳನ್ನು ಕುರಿತು ಮೃಗಾಲಯಗಳಲ್ಲಿ ಆಳವಾದ ಅಧ್ಯಯನ ನಡೆಸಲಾಗಿದ್ದು ಹಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ.

ಪ್ರಾಣಿಸಂಗ್ರಹಾಲಯಗಳು ಮಕ್ಕಳಿಗಂತೂ ಅತ್ಯಂತ ಪ್ರಿಯವಾದ ಸ್ಥಳಗಳು. ಪ್ರಾಣಿಜೀವನಕ್ಕೆ ಸಂಬಂಧಿಸಿದ ಸಾಮಾನ್ಯ ಜ್ಞಾನವನ್ನು ಅವು ಮಕ್ಕಳಿಗೆ ನೀಡುತ್ತವೆ. ಅಷ್ಟೇ ಅಲ್ಲ ಎಲ್ಲ ವಯಸ್ಸಿನವರಿಗೂ ಭೂಮಿಯ ವಿವಿಧ ಭಾಗಗಳಲ್ಲಿ ವಾಸಿಸುವ ಪ್ರಾಣಿಗಳ ಬಗ್ಗೆ ಹಾಗೂ ಅವುಗಳ ಪರಿಸರದ ಬಗ್ಗೆ ಮೃಗಾಲಯಗಳು ತಿಳಿವಳಿಕೆ ನೀಡುತ್ತವೆ. ಇತ್ತೀಚೆಗೆ ಕೆಲವು ಪ್ರಾಣಿ ಸಂಗ್ರಹಾಲಯಗಳು ಸ್ವಯಂಸೇವಕರನ್ನು ನೇಮಿಸಿಕೊಂಡು ಜನರ ಸಾಮಾನ್ಯ ಜ್ಞಾನವರ್ಧನೆಗೆ ಸಹಾಯಮಾಡುತ್ತಿವೆ. ಹಲವು ಸಂಘ ಸಂಸ್ಥೆಗಳೂ ಮೃಗಾಲಯಗಳ ಈ ಉದ್ದೇಶವನ್ನು ನೆರವೇರಿಸಲು ಸಹಕರಿಸುತ್ತಿವೆ.

ಉಳಿವು-ಅಳಿವಿನ ನಿರಂತರ ಸಂಗ್ರಾಮದಲ್ಲಿ ಹೋರಾಡಲಾಗದೆ ನಶಿಸುತ್ತಿರುವ ಕೆಲವು ಪ್ರಭೇದಗಳಿಗಂತೂ ಮೃಗಾಲಯಗಳು ವಿಶ್ರಾಂತಿಧಾಮಗಳಾಗುತ್ತಿವೆ. ಇಂಥ ಪ್ರಾಣಿಗಳನ್ನು ಸಂಗ್ರಹಿಸಿ ಅವುಗಳಿಗೆ ಶೋಷಣೆಯಿಲ್ಲದ ಮುಕ್ತ ಪರಿಸರವನ್ನು ನಿರ್ಮಿಸಿ ಪ್ರಾಣಿಸಂಗ್ರಹಾಲಯಗಳಲ್ಲಿ ಅವುಗಳ ಸಂತಾನಾಭಿವೃದ್ಧಿಗೂ ಅವಕಾಶ ಮಾಡಿಕೊಡಲಾಗುತ್ತದೆ. ಸಂಗ್ರಹಿಸಿದ ಎಲ್ಲ ಪ್ರಾಣಿಗಳೂ ಮೃಗಾಲಯದ ಕೃತಕ ವಾತಾವರಣದಲ್ಲಿ ಸಂತಾನಾಭಿವೃದ್ಧಿ ಮಾಡಲಾರವು ನಿಜ. ಆದರೆ ಕೆಲವು ಅಪರೂಪದ ಪ್ರಾಣಿಗಳು ಸಂತಾನಾಭಿವೃದ್ಧಿಯನ್ನು ನಿರಾತಂಕವಾಗಿ ಮಾಡಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ. ಉದಾಹರಣೆಗೆ:1950ರಲ್ಲಿ ಹವಾಯಿಯ ಬಾತುಕೋಳಿಗಳ ಒಂದು ಜೊತೆಯನ್ನು ಇಂಗ್ಲೆಂಡಿನ ಕಾಡುಕೋಳಿ (ವೈಲ್ಡ್ ಫೌಲ್) ಟ್ರಸ್ಟ್‍ಗೆ ತರಲಾಯಿತು. ಅಲ್ಲಿ ಅವು ಮೊಟ್ಟೆಯಿಟ್ಟು ಕೇವಲ ಹತ್ತು ವರ್ಷಗಳಲ್ಲಿ ಅವುಗಳ ಸಂಖ್ಯೆ 12ಕ್ಕೆ ಏರಿತು. ಇನ್ನೊಂದು ಉದಾಹರಣೆಯೆಂದರೆ ಯುರೋಪಿನ ಕಾಡುಕೋಣಸಂತತಿ ನೈಸರ್ಗಿಕ ಪರಿಸರದಲ್ಲಿ 1925ರಲ್ಲಿ ನಾಶವಾಯಿತು. ಅದೃಷ್ಟವಶಾತ್ ಈ ಪಶುಗಳನ್ನು ಮೃಗಾಲಯಗಳಲ್ಲಿ ಸಾಕಲಾಗುತ್ತಿತ್ತು. ಅಂದು ಯುರೋಪಿನ ಮೃಗಾಲಯಗಳಲ್ಲಿ ಒಟ್ಟು 50 ಕಾಡು ಕೋಣಗಳಿದ್ದವು. ಮೃಗಾಲಯಗಳಲ್ಲಿ ಅವುಗಳ ಸಂತಾನಾಭಿವೃದ್ಧಿಕ್ರಿಯೆಯಿಂದ 1938ರಲ್ಲಿ ಅವುಗಳ ಸಂಖ್ಯೆ 97ಕ್ಕೇರಿತು. ಇಂದು 600ಕ್ಕೂ ಹೆಚ್ಚು ಕಾಡುಕೋಣಗಳು ಯುರೋಪಿನ ವಿವಿಧ ಮೃಗಾಲಯಗಳಲ್ಲಿವೆ.

ಈವರೆಗೆ ತಿಳಿಸಲಾದವುಗಳು ಮೃಗಾಲಯಗಳ ಸಾಮಾನ್ಯ ಉದ್ದೇಶಗಳು. ಕೆಲವು ಮೃಗಾಲಯಗಳು ವಿಶೇಷ ಉದ್ದೇಶಗಳನ್ನಿಟ್ಟುಕೊಂಡಿವೆ. ಉದಾಹರಣೆಗೆ ಲಂಡನ್ನಿನ ಪ್ರಾಣಿ ವಿಜ್ಞಾನ ಸಂಘ ತನ್ನದೇ ಆದ ಪ್ರಯೋಗಾಲಯ ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸಿಕೊಂಡಿದೆ. 1960ರಲ್ಲಿ ಈ ಸಂಘ ಅಂತಾರಾಷ್ಟ್ರೀಯ ಮೃಗಾಲಯಗಳನ್ನು ಕುರಿತ ಕೈಪಿಡಿಯೊಂದನ್ನು ಬಿಡುಗಡೆ ಮಾಡಿತು. ಈ ಪುಸ್ತಕದಲ್ಲಿ ಪ್ರಪಂಚದ ವಿವಿಧಭಾಗಗಳಲ್ಲಿರುವ ಮೃಗಾಲಯಗಳ ಬಗ್ಗೆ ಹಾಗೂ ಅವುಗಳ ಕಾರ್ಯಚಟುವಟಿಕೆಗಳ ಬಗೆಗೆ ಮಹತ್ತ್ವದ ದಾಖಲೆಗಳಿವೆ. ಇದೇ ಸಂಘವು ಪ್ರೊಸೀಡಿಂಗ್ಸ್ ಆಫ್ ಜûೂ ಆಲಾಜಿಕಲ್ ಸೊಸೈಟಿ ಆಫ್ ಲಂಡನ್ ಎಂಬ ಮಾಸಿಕವನ್ನು 1830 ರಿಂದಲೇ ಹೊರತರುತ್ತಿದೆ. ಪ್ರಾಣಿಗಳ ಬಗೆಗಿನ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದು ಈ ಪತ್ರಿಕೆಯ ಉದ್ದೇಶ. ಇದೇ ರೀತಿ ಹಲವು ಮೃಗಾಲಯಗಳು ವೈವಿಧ್ಯಮಯ ಪ್ರಕಟಣೆಗಳನ್ನು ಹೊರತರುತ್ತಿವೆ. ಭಾರತದ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಇಂಥದೇ ಉದ್ದೇಶಗಳನ್ನು ಇಟ್ಟುಕೊಂಡಿರುವ ಒಂದು ಸಂಸ್ಥೆ. ಈ ಸಂಸ್ಥೆಯ ಸಂಗ್ರಹಾಲಯದಲ್ಲಿ ಹೆಚ್ಚು ಕಡಿಮೆ ಭಾರತದ ಎಲ್ಲ ಬಗೆಯ ಪ್ರಾಣಿ ಪಕ್ಷಿಗಳ ದೇಹಗಳನ್ನು ರಕ್ಷಿಸಿ ಇಡಲಾಗಿದೆ. ಜರ್ನಲ್ ಆಫ್ ಬಾಂಬೆ ನ್ಯಾಚುರಲ್ ಹಿಸ್ಟರಿ ಎಂಬುದು ಸಂಸ್ಥೆಯ ನಿಯತಕಾಲಿಕ ಪ್ರಕಟಣೆ.

ಮೃಗಾಲಯಗಳ ರಚನೆ ಮತ್ತು ವಿನ್ಯಾಸ: ಮೃಗಾಲಯಗಳನ್ನು ರಚಿಸುವಾಗ ಪ್ರಾಣಿಗಳಿಗೆ ಅವಶ್ಯಕವಾದ ಸೌಕರ್ಯ ಮತ್ತು ಜನಸಾಮಾನ್ಯರಿಗೆ ವೀಕ್ಷಣೆಗೆ ಅವಕಾಶ ಎರಡನ್ನೂ ಕಲ್ಪಿಸಿಕೊಡುವುದಿದೆ. ಈಗ ಅಸ್ತಿತ್ವದಲ್ಲಿರುವ ಮೃಗಾಲಯಗಳಲ್ಲಿ ಸ್ಥಳಾವಕಾಶ, ವಾತಾವರಣ ಮುಂತಾದವು ವೈವಿಧ್ಯಮಯವಾಗಿದ್ದು ಅವುಗಳಿಗೆ ನಿಶ್ಚಿತ ರಚನೆ ಎಂಬುದಿಲ್ಲ. ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಪಂಜರದಲ್ಲಿಟ್ಟು ಅವು ತಪ್ಪಿಸಿಕೊಂಡು ಹೋಗದಂತೆ, ವೀಕ್ಷಕರಿಂದ ತೊಂದರೆಯಾಗದಂತೆ ಕಾಪಾಡುವುದು ಒಂದು ವಿಧಾನ. ಇನ್ನೊಂದು ವಿಧಾನವೆಂದರೆ ಮೃಗಾಲಯದ ವಿಶಾಲ ಆವರಣದಲ್ಲಿ ಮೃಗಗಳನ್ನು ಸ್ವೇಚ್ಛೆಯಾಗಿ ಬಿಟ್ಟು ವೀಕ್ಷಕರು ಮತ್ತು ಮೃಗಗಳ ನಡುವೆ ವಿಶಾಲವಾದ ತಂತಿಯ ಬೇಲಿ ಅಥವಾ ಜಾಳಿಗೆಗಳನ್ನು ರಚಿಸುವುದು. ಸಾಮಾನ್ಯವಾಗಿ ಚಿಕ್ಕ ಪ್ರಾಣಿಗಳನ್ನು ಪಂಜರದಲ್ಲಿಯೂ ದೊಡ್ಡ ಪ್ರಾಣಿಗಳನ್ನು ಮುಕ್ತವಾತಾವರಣದಲ್ಲಿಡುವುದು ಉತ್ತಮ. ಕೆಲವು ಪ್ರಾಣಿಗಳು ಪಂಜರಗಳಲ್ಲಿ ಬಹಳಕಾಲ ಬದುಕುವುದಿಲ್ಲ. ಇಂಥ ಪ್ರಾಣಿಗಳ ಗಾತ್ರವನ್ನು ಗಣನೆಗೆ ತೆಗೆದುಕೊಳ್ಳದೆ ಮುಕ್ತ ಪರಿಸರದಲ್ಲಿರಿಸುವುದು ಒಳ್ಳೆಯದು.

ಕೆಲವು ಪ್ರಾಣಿಗಳಿಗೆ ವಿಶಿಷ್ಟವಾದ ಪರಿಸರದ ಆವಶ್ಯಕತೆಯಿದೆ. ಅಂಥ ಪ್ರಾಣಿಗಳಿಗೆ ಮಾತ್ರ ಯುಕ್ತ ವಾತಾವರಣವನ್ನು ಕಲ್ಪಿಸಲು ಮೃಗಾಲಯಗಳಲ್ಲಿ ಅವಕಾಶವಿರಬೇಕು. ಸ್ಥಳಾವಕಾಶ ಹೆಚ್ಚಾಗಿರಲಿ, ಕಡಿಮೆಯಾಗಿರಲಿ, ಆಯಾ ಪ್ರಾಣಿಗಳ ನೈಸರ್ಗಿಕಪರಿಸರವನ್ನು ಹೋಲುವಂಥ ಆವರಣಗಳನ್ನು, ಕಟಕಟೆಗಳನ್ನು ನಿರ್ಮಿಸಿದರೆ ಅಂಥ ಮೃಗಾಲಯ ಆದರ್ಶಮೃಗಾಲಯವಾಗುತ್ತದೆ. ಉದಾಹರಣೆಗೆ ಹಿಮಕರಡಿಯನ್ನು ತಂಪಾದ ನೀರಿನ ಕೊಳದಲ್ಲೊ ಅಥವಾ ವಾತಾವರಣವನ್ನು ಸದಾ ತಂಪಾಗಿಸುವ ಕೃತಕ ಸಾಧನಗಳ ಉಪಯೋಗದಿಂದಲೊ ಸುಲಭವಾಗಿ ರಕ್ಷಿಸಬಹುದು. ಮರದ ಮೇಲೆ ವಾಸಿಸುವ ಮರ್ಕಟಗಳ ವಿವಿಧ ಪ್ರಭೇದಗಳನ್ನು ಪಂಜರದಲ್ಲಿಯೇ ಪೋಷಿಸಲು ಸಾಧ್ಯವಿದ್ದರೂ ನಿಸರ್ಗದಲ್ಲಿರುವಂತೆ ಮರಗಳ ರೆಂಬೆಗಳು ಅಥವಾ ಇತರ ಕೃತಕ ವಿಧಾನಗಳಿಂದ ಅವು ಅತ್ತಿಂದಿತ್ತ ಇತ್ತಿಂದತ್ತ ಜಿಗಿಯಲು ಸಾಧ್ಯವಿರುವಂತೆ ಪಂಜರಗಳನ್ನು ನಿರ್ಮಿಸಿದರೆ ಅವು ಮೃಗಾಲಯದ ಪರಿಸರಕ್ಕೆ ಸುಲಭವಾಗಿ ಹೊಂದಿಕೊಳ್ಳಬಲ್ಲವು. ಹೊಸ ಪ್ರಾಣಿಗಳು ಮೃಗಾಲಯಕ್ಕೆ ಬಂದರೆ ಅವುಗಳನ್ನು ಇಡಲು ಯುಕ್ತಸ್ಥಳಾವಕಾಶವಿರಬೇಕು.

ಇತ್ತೀಚಿನ ದಿವಸಗಳಲ್ಲಿ ಬಯಲುಮೃಗಾಲಯಗಳು (ಸಫಾರಿ ಪಾಕ್ರ್ಸ್) ಪ್ರಾಮುಖ್ಯ ಪಡೆಯುತ್ತಿವೆ. ವಿಶಾಲವಾದ ಹೊರಾಂಗಣದಲ್ಲಿ. ಇಂಥ ಮೃಗಾಲಯಗಳನ್ನು ನಿರ್ಮಿಸಲಾಗುತ್ತದೆ. ಮೃಗಗಳ ವೀಕ್ಷಣೆಗೆ ಎರಡೂ ಕಡೆ ತಂತಿಯ ಜಾಳಿಗೆ ಅಥವಾ ಬೇಲಿಗಳನ್ನು ನಿರ್ಮಿಸಿ ಮಧ್ಯೆ ವೀಕ್ಷಕರು ವಾಹನಗಳಲ್ಲಿ ಇಲ್ಲವೆ ಕಾಲುನಡಿಗೆಯಲ್ಲಿ ಸಂಚರಿಸುವಂತೆ ವ್ಯವಸ್ಥೆಮಾಡಲಾಗುತ್ತದೆ. ಇಂಥ ಮೃಗಾಲಯಗಳಲ್ಲಿ ಕೆಲವೇ ಪ್ರಭೇದಗಳನ್ನು ಸಂಗ್ರಹಿಸಿಡಲಾಗುತ್ತದೆ. ವಿವಿಧ ಪ್ರಭೇದಗಳಿಗೆ, ಗುಂಪುಗಳಿಗೆಂದೇ ಪ್ರತ್ಯೇಕ ಮೃಗಾಲಯಗಳನ್ನು ನಿರ್ಮಿಸಿರುವುದೂ ಉಂಟು. ಅಭಯಾರಣ್ಯಗಳೂ ಒಂದು ದೃಷ್ಟಿಯಲ್ಲಿ ಮೃಗಾಲಯಗಳೇ. ಬಯಲು ಮೃಗಾಲಯಗಳಲ್ಲಿ ಮೃಗಗಳಿಗೆ ನೈಸರ್ಗಿಕ ಪರಿಸರ ದೊರೆಯುತ್ತದೆ. ಅಮೆರಿಕದ ಮಿಯಾಮಿಯಲ್ಲಿರುವ ಮರ್ಕಟಾರಣ್ಯ ಇಂಥ ಬಯಲು ಮೃಗಾಲಯಗಳ ಪೈಕಿ ಪ್ರಸಿದ್ಧವಾದ್ದು.

ಕೃತಕ ಪರಿಸರದಲ್ಲಿ ಪ್ರಜನನ ನಡೆಸುವ ಸಾಮಥ್ರ್ಯವುಳ್ಳ ಪ್ರಾಣಿಗಳ ಸಂಖ್ಯೆ ಕಡಿಮೆ. ಅದರಿಂದ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಸಂಗ್ರಹಿಸುವುದು ಹಾಗೂ ರಕ್ಷಿಸುವುದು ಮುಖ್ಯ ಕೆಲಸ. ಅವುಗಳನ್ನು ಅಡವಿಗಳಿಂದ ಹಿಡಿದು ತರುವುದು ಇಲ್ಲವೆ ವ್ಯಾಪಾರಿಗಳಿಂದ ಕೊಳ್ಳುವುದು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವಾಗ ಆ ಪ್ರಾಣಿಗೆ ಯಾವುದೇ ಧಕ್ಕೆಯಾಗದಂತೆ ಅಥವಾ ಅದು ಸಾಯದಂತೆ ರಕ್ಷಿಸುವುದು ಮುಖ್ಯ. ಇವೆಲ್ಲ ಕಷ್ಟಸಾಧ್ಯವಾದುದರಿಂದ ಪ್ರಾಣಿಗಳು ಮೃಗಾಲಯದಲ್ಲಿಯೇ ಸಂತಾನಾಭಿವೃದ್ಧಿ ಮಾಡುವಂತೆ ಪ್ರೋತ್ಸಾಹಿಸುವತ್ತ ಮೃಗಾಲಯ ರಕ್ಷಕರು ಇತ್ತೀಚೆಗೆ ಗಮನಹರಿಸುತ್ತಿದ್ದಾರೆ.

ಪ್ರಾಣಿಗಳ ಸಂಗ್ರಾಹಕರೂ ಕೆಲವು ಮುಖ್ಯ ಅಂಶಗಳನ್ನು ಗಮನಿಸುವುದು ಅಗತ್ಯ. ಜೀವಿಯೊಂದರ ಅಸ್ತಿತ್ವಕ್ಕೆ ಧಕ್ಕೆಯಾಗುವಂತೆ ಗೋಚರಿಸಿದರೆ ಅದನ್ನು ಕೆಂಪು ದಾಖಲೆ ಪುಸ್ತಕದಲ್ಲಿ (ರೆಡ್ ಡೇಟ ಬುಕ್) ನಮೂದಿಸಬೇಕು. ಇಂಥ ಪ್ರಾಣಿಗಳನ್ನು ಹಿಡಿಯುವುದು ಅಂತಾರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಕಾನೂನಿನ ಪ್ರಕಾರ ಶಿಕ್ಷಾರ್ಹವಾಗುತ್ತದೆ. ಇಂಥ ಪ್ರಭೇದ ಮೃಗಾಲಯದ ಕೃತಕ ಪರಿಸರದಲ್ಲಿ ವಂಶಾಭಿವೃದ್ಧಿ ಮಾಡಬಲ್ಲದು ಎಂದು ಖಚಿತವಾಗಿ ತಿಳಿದಿದ್ದರೆ ಮಾತ್ರ ಅದನ್ನು ಸಂಗ್ರಹಿಸಿ ಮೃಗಾಲಯಕ್ಕೆ ಸ್ಥಳಾಂತರಿಸಬೇಕು.

ಮೃಗಾಲಯದಲ್ಲಿ ಮೃಗಗಳ ಸಂಗ್ರಹ. ರಕ್ಷಣೆ ಮುಂತಾದ ಜವಾಬ್ದಾರಿ ನಿರ್ವಹಿಸಬಲ್ಲ ತಜ್ಞ, ಸಂಯಮಶೀಲ. ಕಷ್ಟಸಹಿಷ್ಣುಗಳಾದ ಸಿಬ್ಬಂದಿಗಳಿರಬೇಕು. ಸಿಬ್ಬಂದಿಗಳು ಸ್ವಲ್ಪವೇ ನಿರ್ಲಕ್ಷ್ಯ ತಾಳಿದರೂ ಅದರಿಂದಾಗುವ ಹಾನಿ ಅಪಾರ. ಮೃಗಗಳಿಗೆ ರೋಗ ತಗುಲಿದಾಗ ಸೂಕ್ತ ಚಿಕಿತ್ಸೆಮಾಡಬಲ್ಲ ತಜ್ಞ ವೈದ್ಯರ ಅಗತ್ಯವೂ ಇದೆ.

ಭಾರತದಲ್ಲಿ ಇಂದು 44 ಅಂಗೀಕೃತ ಮೃಗಾಲಯಗಳಿವೆ. ಇವುಗಳಲ್ಲಿ ಕೆಲವು ಕೇಂದ್ರಸರ್ಕಾರದ ಅಧೀನದಲ್ಲೂ ಉಳಿದವು ಆಯಾ ರಾಜ್ಯ ಸರ್ಕಾರಗಳ ಅಧೀನದಲ್ಲೂ ಇವೆ. ಈ ಮೃಗಾಲಯಗಳಲ್ಲಿ ಕೆಲವು ವಿಶಿಷ್ಟ ಪ್ರಾಣಿಗಳ ಸಂಗ್ರಹವಿದ್ದು, ಕೆಲವು ಮೃಗಾಲಯಗಳಲ್ಲಿ ಅವು ಪ್ರಜನನವನ್ನು ಮಾಡುತ್ತಿವೆ. ಉದಾಹರಣೆಗೆ ಅಸ್ಸಾಂ ರಾಜ್ಯದ ಗೌಹತಿಯ ರಾಜ್ಯ ಮೃಗಾಲಯದಲ್ಲಿ ಘೇಂಡಾಮೃಗಗಳ ಸಂತಾನಾಭಿವೃದ್ಧಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೈದರಾಬಾದಿನ ನೆಹರೂ ಜûೂಆಲಾಜಿಕಲ್ ಪಾರ್ಕಿನಲ್ಲಿ ಮೊಸಳೆಗಳ ಸಂಕರ, ದೆಹಲಿಯ ರಾಷ್ಟ್ರೀಯ ಮೃಗಾಲಯದಲ್ಲಿ ಬಿಳಿ ಹುಲಿಗಳ ಹಾಗೂ ತೋಳಗಳ ಸಂತಾನಾಭಿವೃದ್ಧಿ ನಡೆಯುತ್ತಿದೆ. ಮಹಾರಾಜಾ ಫತೇಸಿಂಹ ಮೃಗಾಲಯದಲ್ಲಿ ಕಾಡುಕತ್ತೆ, ಏಷ್ಯದ ಸಿಂಹಗಳು, ಒಂಟೆಗಳು ಪ್ರಮುಖ ಆಕರ್ಷಣೆಗಳು. ಸಿಮ್ಲಾದ ಹಿಮಾಲಯನ್ ಜûೂಆಲಾಜಿಕಲ್ ಪಾರ್ಕಿನಲ್ಲಿ ಮೊನಾಲ್ ಫೆಸೆಂಟ್ ಎಂಬ ಪಕ್ಷಿ ಪ್ರಸಿದ್ಧವಾದದ್ದು. ತಿರುವನಂತಪುರದ ಮೃಗಾಲಯದಲ್ಲಿ ನೀಲಗಿರಿಟಹರ್, ಕಾಡುಕುರಿ, ಮಕಾಕ್ ಕೋತಿಗಳು ಬಹು ಮುಖ್ಯ ಸಂಗ್ರಹಗಳು. ಮೈಸೂರಿನ ಮೃಗಾಲಯದಲ್ಲಿ ಚಿಂಪಾಂಜಿ, ಒರಾಂಗುಟಾನ್, ಟಪೀರ್, ಕಪ್ಪುಸಿಂಗಳೀಕ, ಕಪ್ಪುಹಂಸ, ನೀಲಗಿರಿ ಸಿಂಗಳೀಕ ಮುಂತಾದ ಹಲವು ಮಹತ್ತ್ವದ ಪ್ರಾಣಿಗಳಿವೆ. ಹುಲಿಗಳ ಸಂತಾನಾಭಿವೃದ್ಧಿಗೂ ಇಲ್ಲಿ ವಿಶೇಷ ಆಸಕ್ತಿ ನೀಡಲಾಗಿದೆ.

ಭಾರತದ ಮೃಗಾಲಯಗಳನ್ನು ಕುರಿತಂತೆ ಭಾರತ ಸರ್ಕಾರ ಭಾರತದ ಸಸ್ಯೋದ್ಯಾನಗಳು ಮತ್ತು ಮೃಗಾಲಯಗಳ ಬಗೆಗೆ ನಿಯತಕಾಲಿಕವೊಂದನ್ನು ಹೊರತರುತ್ತಿದೆ. ಈ ಪತ್ರಿಕೆಯಲ್ಲಿ ಭಾರತದ ಮೃಗಾಲಯಗಳ ಬಗೆಗೆ ಸಮಗ್ರ ಮಾಹಿತಿ ದೊರೆಯುತ್ತದೆ. (ಎಸ್.ಎನ್.ಎಚ್)