ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೆಟಫಿಸಿಕಲ್ ಕಾವ್ಯ

ವಿಕಿಸೋರ್ಸ್ದಿಂದ

17ನೆಯ ಶತಮಾನ ಇಂಗ್ಲೆಂಡಿನ ಚರಿತ್ರೆಯಲ್ಲಿ ರಾಜಕೀಯ ಮತ್ತು ಧಾರ್ಮಿಕ ಜಿಜ್ಞಾಸೆಯ ಮತ್ತು ಕಲಹಗಳ ಕಾಲ. ಎಲಿಜಬೆತ್ಳ ಯುಗದಂತೆ ತಾರುಣ್ಯದ ಉತ್ಸಾಹ, ಉದ್ವೇಗ, ಭಾವಾತಿಶಯಗಳು ಪ್ರಧಾನವಾಗಿರದೆ ಆಲೋಚನೆ, ವಿಮರ್ಶೆ ಈ ಕಾಲದಲ್ಲಿ ಪ್ರಾಬಲ್ಯಕ್ಕೆ ಬಂದುವು. ಇದಕ್ಕೆ ಅನುಗುಣವಾಗಿ ಚರ್ಚಾತ್ಮಕವಾದ ಗದ್ಯಸಾಹಿತ್ಯ ಈ ಶತಮಾನದಲ್ಲಿ ಬೆಳೆಯಿತು. ಆದರೆ ಕಾವ್ಯಸೃಷ್ಟಿಯೂ ನಡೆಯಿತು. ಇಡೀ ರಾಷ್ಟ್ರಜೀವನವನ್ನು ಪ್ರತಿಬಿಂಬಿಸುವ ಕಾವ್ಯ ಬಂದಿತು. ಪ್ರಾಟೆಸ್ಟಂಟ್ ಮತ ಮತ್ತು ಅದರ ಒಳಪಂಗಡಗಳು, ಕ್ಯಾಥೊಲಿಕ್ ಮತ ಮುಂತಾದುವನ್ನು ಪ್ರತಿನಿಧಿಸುವ ಕವಿಗಳು ಬಂದರು. ಲೌಕಿಕ ಕಾವ್ಯವೂ ಪ್ರಣಯಗೀತೆಗಳ ಮತ್ತು ರಾಜಕೀಯ ವಿಡಂಬನೆಗಳ ರೂಪವನ್ನು ತಳೆದು ಬೆಳೆಯಿತು. ಇಂಥ ಲೌಕಿಕ ಕವಿಗಳಲ್ಲಿ ಮೊದಲು ಹೆಸರಿಸಬೇಕಾದವ ಜಾನ್ ಡನ್. ಮತಸಂಬಂಧವಾದ ಕವಿತೆಗಳನ್ನೂ ಡನ್ ಬರೆದಿದ್ದಾನೆ. ಆದರೆ ಅವನು ತನ್ನ ಯೌವನದಲ್ಲಿ ಬರೆದ ಪ್ರಣಯಗೀತೆಗಳಿಗಿರುವ ಪ್ರಾಶಸ್ತ್ಯ ಅವಕ್ಕಿಲ್ಲ. ಆತ ದಿ ಮೆಟಫಿಜಿಕಲ್ ಸ್ಕೂಲ್ ಎಂಬ ಕಾವ್ಯವರ್ಗವನ್ನು ಆರಂಭಿಸಿದವ. ಈ ಗುಂಪಿನ ಕವನಗಳ ಒಂದು ಲಕ್ಷಣ ಅವುಗಳಲ್ಲಿ ಬುದ್ಧಿಚಮತ್ಕಾರದ ಅಂಶವಿರುವುದು. ಕವಿಸಮಯಗಳನ್ನು ದೂರವಿರಿಸಿ, ಹೊಸ ಪ್ರತಿಮೆಗಳನ್ನು ಬಳಸಿ, ಬುದ್ಧಿ ಚಮತ್ಕಾರಕ್ಕೂ ಪ್ರಾಧಾನ್ಯವಿರುವ ಕವನಗಳನ್ನು ಬರೆದ. ಅವನ ಕವನಗಳು ತೀವ್ರಭಾವಕ್ಕೂ ಅರ್ಥಸ್ಪಷ್ಟತೆಗೂ ನಿಷ್ಕೃಷ್ಟತೆಗೂ ಆಡುಮಾತಿನ ಬಳಕೆಗೂ ಗಮನಾರ್ಹವಾಗಿವೆ; ತತ್ಕಾರಣ ಅವು ಆಧುನಿಕ ಇಂಗ್ಲಿಷ್ ಕವಿಗಳ ಮತ್ತು ವಿಮರ್ಶಕರ ಮನ್ನಣೆ ಪಡೆದಿವೆ. ಡನ್ನ ಅನಂತರ ಬಂದ ಪ್ರಣಯ ಕವಿಗಳಲ್ಲಿ ಕ್ಯಾರ್ಯೂ, ಹೆರಿಕ್, ಲವ್ಲೇಸ್, ಸಕ್ಲಿಂಗ್, ರಾಛೆಸ್ಟರ್ ಮೊದಲಾದವರ ಭಾವಗೀತೆಗಳು ಪ್ರಣಯದ ವಿವಿಧ ರೂಪದ ಅಭಿವ್ಯಕ್ತಿಯನ್ನು ಅತ್ಯಂತ ಆಕರ್ಷಕವಾದ ರೀತಿಯಲ್ಲಿ ಮಾಡುತ್ತವೆ. ಇವರೆಲ್ಲರಿಗೂ ಕ್ಯವಾಲಿಯರ್ ಪೊಯಟ್ಸ್ ಎಂಬ ಹೆಸರಿದೆ. ಹಗುರವಾದ ಪ್ರಣಯಭಾವದ ನಾನಾ ಛಾಯೆಗಳನ್ನು ಮನಮೋಹಕವಾದ ರೀತಿಯಲ್ಲಿ ವ್ಯಕ್ತಪಡಿಸುವುದರಲ್ಲಿ ಇವರು ಸಿದ್ಧಹಸ್ತರು. ಪ್ರಣಯನಿಷ್ಠೆಯಾಗಲಿ ಏಕಪತ್ನೀವ್ರತವಾಗಲಿ ಇವರಲ್ಲಿ ಅಪರೂಪ. 17ನೆಯ ಶತಮಾನದ ಪೂರ್ವಾರ್ಧದಲ್ಲಿ ಎಡ್ಮಂಡ್ ವ್ಯಾಲರ್, ಆ್ಯಂಡ್ರ್ಯೂ ಮಾರ್ವೆಲ್, ಏಬ್ರಹಾಮ್ ಕೌಲಿ, ಜಾನ್ ಡ್ರೈಡನ್-ಇವರೆಲ್ಲ ಉತ್ತಮ ಮಟ್ಟದ ಕೆಲವು ಭಾವಗೀತೆಗಳನ್ನೂ ಹಾಡುಗಳನ್ನೂ ಬರೆದರು. ಕೌಲಿ ಮಹಾಕಾವ್ಯವನ್ನು ಬರೆಯಬೇಕೆಂಬ ಬಯಕೆಯಿಂದ ಡೇವಿಡೇಯಿಸ್ ಎಂಬ ಬಹಳ ದೊಡ್ಡ ಕವನವನ್ನೇ ಬರೆದು ತನ್ನ ಕಾಲದಲ್ಲಿ ಬಹು ಪ್ರಖ್ಯಾತನಾಗಿದ್ದ. ಈಗ ಆ ಕಾವ್ಯವನ್ನು ಕೇಳುವವರೇ ಇಲ್ಲ. ಆ ಶತಮಾನಕ್ಕೆ ಸೇರಿದ ಜಾರ್ಜ್ ಹರ್ಬರ್ಟ್, ರಿಚರ್ಡ್ ಕ್ರಾಷಾ, ಹೆನ್ರಿ ವಾಹನ್ ಮತ್ತು ಥಾಮಸ್ ಟ್ರಹರ್ನ್ ಮೆಟಫಿಸಿಕಲ್ ಸ್ಕೂಲ್ಗೆ ಸೇರಿದ ಒಳ್ಳೆಯ ಕವಿಗಳು. ಎಲ್ಲರೂ ಅಲೌಕಿಕ ವಿಚಾರಗಳನ್ನು ಕುರಿತು ಅನುಭಾವಿ ಕವನಗಳನ್ನು ಬರೆದಿರುವರು. ಇವರ ಕವನಗಳು 17ನೆಯ ಶತಮಾನದ ಧಾರ್ಮಿಕ ದೃಷ್ಟಿಗೆ ದ್ಯೋತಕವಾಗಿವೆ.