ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೆಣಸಿನಕಾಯಿ

ವಿಕಿಸೋರ್ಸ್ದಿಂದ

ಮೆಣಸಿನಕಾಯಿ ಸಂಬಾರಪದಾರ್ಥವಾಗಿಯೂ ತರಕಾರಿಯಾಗಿಯೂ ಜನಪ್ರಿಯವಾಗಿರುವ ಸಸ್ಯ ಹಾಗೂ ಅದರ ಕಾಯಿ (ಕ್ಯಾಪ್ಸಿಕಮ್; ಚಿಲ್ಲೀ). ಸೊಲನೇಸೀ ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಕ್ಯಾಪ್ಸಿಕಮ್. ಇದರಲ್ಲಿ ಆನ್ಯುಯಮ್ ಮತ್ತು ಫ್ರೂಟಿಸೆನ್ಸ್ ಎಂಬ ಎರಡು ಮುಖ್ಯ ಪ್ರಭೇದಗಳುಂಟು.

ಮೆಣಸಿನಕಾಯಿ ಗಿಡದ ತವರು ಮಧ್ಯ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಎನ್ನಲಾಗಿದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್‍ಗಳನ್ನು ಕಂಡುಹಿಡಿದ ಸ್ವಲ್ಪ ಸಮಯದಲ್ಲೇ ಮೆಣಸಿನಕಾಯಿ ಪ್ರಪಂಚದ ಉಷ್ಣವಲಯ ಪ್ರದೇಶಗಳಲ್ಲೆಲ್ಲ ಹರಡುವಂತಾಗಿ ಬಲುಬೇಗ ವಿವಿಧ ವಾತಾವರಣಗಳಿಗೆ ಹೊಂದಿಕೊಂಡು ಬೆಳೆಯತೊಡಗಿ ಪ್ರಪಂಚದಾದ್ಯಂತ ಪಸರಿಸಿದೆ. ಉಷ್ಣದೇಶಗಳಲ್ಲಂತೂ ಇದು ಬಲು ಪರಿಚಿತ ಸಂಬಾರವಸ್ತುವೆನಿಸಿದೆ. ಭಾರತಕ್ಕೆ ಇದನ್ನು ಪರಿಚಯಿಸಿದವರು 15ನೆಯ ಶತಮಾನದಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸರು. ಇದಕ್ಕಿಂತ ಮೊದಲು ಭಾರತೀಯರು ಸಂಬಾರಪದಾರ್ಥವಾಗಿ ಬಳಸುತ್ತಿದ್ದುದು ಕಾಳುಮೆಣಸನ್ನು.

ಭಾರತಾದ್ಯಂತ ಮೆಣಸಿನಕಾಯಿಯ ವ್ಯವಸಾಯವಿದ್ದು ಸುಮಾರು 7 ಲಕ್ಷ ಹೆಕ್ಟೇರಿಗೂ ಹೆಚ್ಚು ಪ್ರದೇಶದಲ್ಲಿ ಇದನ್ನು ಬೆಳೆಸಲಾಗುತ್ತಿದೆ. ಇದರ ಶೇಕಡಾ 75 ರಷ್ಟು ಕೃಷಿಯಿರುವುದು ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ. ಉಳಿದ ರಾಜ್ಯಗಳ ಪೈಕಿ ಮುಖ್ಯವಾದುವೆಂದರೆ ಮಧ್ಯಪ್ರದೇಶ, ಪಂಜಾಬ್ ಮತ್ತು ಬಿಹಾರ.

ಮೆಣಸಿನಕಾಯಿಗಿಡ ಮೂಲಿಕೆಯಾಗಿಯೂ ಪೊದೆರೂಪದಲ್ಲೂ ಬೆಳೆಯುತ್ತದೆ. ಆನ್ಯುಯಮ್ ಪ್ರಭೇದ ಏಕವಾರ್ಷಿಕ ಬಗೆಯದು. ಇದರಲ್ಲಿ ಹೂಗಳು ಒಂಟೊಂಟಿಯಾಗಿ ಎಲೆಗಳ ಕಕ್ಷಗಳಲ್ಲಿ ಅರಳುತ್ತವೆ. ಫ್ರೂಟಿಸೆನ್ಸ್ ಪ್ರಭೇದ ಬಹು ವಾರ್ಷಿಕ ರೀತಿಯದು. ಹೂಗಳು ಅರಳುವುದು ಗೊಂಚಲುಗಳಲ್ಲಿ. ಎಲೆಗಳ ಕಕ್ಷಗಳಲ್ಲಿ. ಇವುಗಳ ಪೈಕಿ ಬಹುಶಃ ಹೆಚ್ಚು ಆರ್ಥಿಕ ಪ್ರಾಮುಖ್ಯವಿರುವುದು ಮೊದಲನೆಯದಕ್ಕೆ. ಬಹಳ ಕಾಲದಿಂದ ಕೃಷಿಯಲ್ಲಿರುವುದರಿಂದ ಇದರಲ್ಲಿ ಅನೇಕ ರೂಪಭೇದಗಳನ್ನು ಕಾಣಬಹುದು. ಕಾಯಿಗಳ ಗಾತ್ರದಲ್ಲೂ ಆಕಾರದಲ್ಲೂ ಬಲಿತ ಮೇಲೆ ಹಣ್ಣುಗಳು ತಳೆಯುವ ಬಣ್ಣದಲ್ಲೂ ಖಾರದ ತೀಕ್ಷ್ಣತೆಯಲ್ಲೂ ಗಮನಾರ್ಹ ವ್ಯತ್ಯಾಸಗಳಿದ್ದು ಇವುಗಳ ಆಧಾರದ ಮೇಲೆ ಮೆಣಸಿನಕಾಯಿ ತಳಿಗಳಿಗೆ ವಿವಿಧ ಹೆಸರುಗಳನ್ನು ಕೊಡಲಾಗಿದೆ. ಉದಾಹರಣೆಗೆ ಅಂಗೀಕಸಿಕಾಯಿ, ಡಬ್ಬಗಾಯಿ, ಗಿಡ್ಡಗಾಯಿ, ಬಳ್ಗಳಿಗಾಯಿ, ಬಿಳಿಗಾಯಿ ಇತ್ಯಾದಿ. ಬೆಳೆಯುವ ಪ್ರದೇಶಗಳ ಆಧಾರದ ಮೇಲೂ ಮೆಣಸಿನಕಾಯಿಗೆ ಬೇರೆ ಬೇರೆ ಹೆಸರುಗಳುಂಟು. ಉದಾಹರಣೆಗೆ ನೇಪಾಳ, ಸ್ಪ್ಯಾನಿಷ್, ಅಮೆರಿಕ, ಬಲ್ಗೇರಿಯನ್, ಹಂಗೇರಿಯನ್ ಮೊರಾಕನ್, ಯೂಗೋಸ್ಲಾವಿಯನ್ ಇತ್ಯಾದಿ. ಭಾರತದಲ್ಲೂ ಬ್ಯಾಡಗಿ, ಗುಂಟೂರು ಮೊದಲಾದ ಹಲವಾರು ಬಗೆಗಳುಂಟು. ಆನ್ಯುಯಮ್ ಬಗೆಯ ಮೆಣಸಿನಕಾಯಿಯಲ್ಲಿ ಬಲು ಮುಖ್ಯವಾಗಿ ಖಾರಕ್ಕಾಗಿ ಬಳಸುವ ಉದ್ದನೆಯ ಕಾಯುಳ್ಳ ಬಗೆ ಮತ್ತು ತರಕಾರಿಯಾಗಿ ಬಳಸುವ ಗುಂಡನೆಯ ಕಾಯುಳ್ಳ ಬಗೆ ಎಂಬ ಎರಡು ಗುಂಪುಗಳುಂಟು. ತರಕಾರಿಯಾಗಿ ಬಳಕೆಯಾಗುವ ಮೆಣಸಿನಕಾಯಿ ದಪ್ಪ ಮತ್ತು ದೊಡ್ಡಮೆಣಸಿನಕಾಯಿ ಎಂದು ಪ್ರಸಿದ್ಧವಾಗಿದೆ. ಇದರಲ್ಲಿ ಖಾರದ ಅಂಶ ಬಲು ಕಡಿಮೆ ಅಥವಾ ಇಲ್ಲವೇ ಇಲ್ಲ. ವಾಣಿಜ್ಯಕ್ಷೇತ್ರದಲ್ಲಿ ಪಪ್ರಿಕ, ಚಿಲೀಸ್, ರೆಡ್‍ಪೆಪರ್ಸ್, ಕೇಯನ್, ಕ್ಯಾಪ್ಸಿಕಮ್, ಸ್ವೀಟ್ ಪೆಪರ್ಸ್, ಪಮಿಯೆಂಟೊ ಎಂಬ ಹೆಸರುಗಳಿಂದ ಇವು ಪರಿಚಿತವಾಗಿವೆ.

ಮೆಣಸಿನಕಾಯಿಯನ್ನು ಮಳೆ ಆಶ್ರಯ ಬೆಳೆಯಾಗಿ ಕೃಷಿ ಮಾಡುವುದೇ ರೂಢಿ. ಕೆಲವೆಡೆ ನೀರಾವರಿ ಬೇಸಾಯ ಮಾಡುವುದು ಉಂಟು. ವಿವಿಧ ಬಗೆಯ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಕೆಂಪುಗೋಡು ಒಳ್ಳೆಯದು. ಮುಂಗಾರು ಇದರ ಬೇಸಾಯದ ಕಾಲ. ಶುದ್ಧಬೆಳೆಯಾಗಿಯೊ ಬೆಳ್ಳುಳ್ಳಿಯೊಂದಿಗೆ ಅಕ್ಕಡಿ ಬೆಳೆಯಾಗಿಯೂ ಬೆಳೆಯುವುದಿದೆ. ಬೀಜಗಳನ್ನು ಒಟ್ಟು ಪಾತಿಯಲ್ಲಿ ನೆಟ್ಟು ಸಸಿಪಡೆದು ಅನಂತರ ಸಸಿಗಳನ್ನು ಬೇಕೆಂದ ಕಡೆ ನಾಟಿ ಮಾಡಲಾಗುತ್ತದೆ.

ಗಿಡಗಳು 2 1/2 - 3 1/2 ತಿಂಗಳ ವಯಸ್ಸಿನವಾದ ಅನಂತರ ಹೂ ಬಿಡಲು ಆರಂಭಿಸಿ ಸುಮಾರು ಮೂರು ತಿಂಗಳ ಕಾಲ ಹೂ ಧರಿಸಿರುವುವು. ಕಾಯಿ ಕಚ್ಚಿ ಅವು ಬಲಿಯಲಾರಂಭಿಸಿದ ಮೇಲೆ 3 - 4 ತಿಂಗಳ ಕಾಲ, 6 ರಿಂದ 10 ಸಲ 5, 10 ಅಥವಾ 20 ದಿವಸಗಳ ಅಂತರವಿಟ್ಟು ಕಾಯಿ ಬಿಡಿಸಲಾಗುತ್ತದೆ. ಇವನ್ನು ಹಸಿಯಾಗಿ ಇಲ್ಲವೆ ಅವು ಕೆಂಪು ಬಣ್ಣ ತಳೆದ ಮೇಲೆ ಒಣಗಿಸಿ ಬಳಸಲಾಗುತ್ತದೆ.

ಮೆಣಸಿನ ಗಿಡಕ್ಕೆ ತಗಲುವ ರೋಗರುಜಿನಗಳಲ್ಲಿ ಮುಖ್ಯವಾದವು ಇಂತಿವೆ : (1) ಸ್ಕಿರ್ಟೊತ್ರಿಪ್ಸ್ ಡಾಸರ್ದಾಲಿಸ್ ಎಂಬ ಕೀಟದಿಂದ (ಥ್ರಿಪ್ಸ್) ಹರಡುವ ವೈರಸ್ ರೋಗ - ಎಲೆಮುರುಟು. ಗಿಡದ ಬೆಳವಣಿಗೆ ಕುಂಠಿತಗೊಳ್ಳುವುದು, ಎಲೆಗಳು ಮುರುಟಿಕೊಳ್ಳುವುದು, ರೆಂಬೆಗಳ ತುದಿಗಳು ಅಂಟುದ್ರವದಿಂದ ಆವೃತವಾಗುವುದು ಈ ರೋಗದ ಲಕ್ಷಣಗಳು. (2) ಕೊಲೆಟೊಟ್ರೈಕಮ್ ಕ್ಯಾಪ್ಸಿಸಿ ಎಂಬ ಬೂಷ್ಟಿನಿಂದ ಉಂಟಾಗುವ ಕಾಯಿಗಳ ಕೊಳೆರೋಗ. (3) ಕೊಲೆಟೊ ಟ್ರೈಕಮ್ ನೈಗ್ರಮ್ ಎಂಬ ಬೂಷ್ಟಿನಿಂದ ಬರುವ ಆಂತ್ರಾಕ್ನೋಸ್ ರೋಗ. ಮೆಣಸಿನಕಾಯಿ ಉಪಯೋಗ : ಮೆಣಸಿನಕಾಯಿ ಬಹು ಜನಪ್ರಿಯ ಸಂಬಾರ ವಸ್ತು. ಭಾರತದಲ್ಲಿ, ಏಷ್ಯದ ಹಲವಾರು ದೇಶಗಳಲ್ಲಿ ಇದು ಆಹಾರದ ಪ್ರಧಾನ ಅಂಶವಾಗಿದೆ; ಹಸಿಯಾಗಿಯೊ ಬೇಯಿಸಿಯೊ ಒಂದಲ್ಲ ಒಂದು ಬಗೆಯಲ್ಲಿ ಇದರ ಬಳಕೆ ಉಂಟು. ಪಲ್ಯ, ಸಾರು, ಸಾಂಬಾರು, ಉಪ್ಪಿನಕಾಯಿ ಹೀಗೆ ಹಲವು ರೂಪಗಳಲ್ಲಿ ಇದು ಉಪಯೋಗವಾಗುತ್ತದೆ. ಒಣಗಿದ ಖಾರದ ಪುಡಿ ರೂಪದಲ್ಲಿ ಮಸಾಲೆಗಳ ತಯಾರಿಕೆಯಲ್ಲಿ ಇದರ ಬಳಕೆ ಇದೆ. ಮುಖ್ಯವಾಗಿ ಆಹಾರ ಪದಾರ್ಥಗಳಿಗೆ ಖಾರವನ್ನೂಡಲು ಇದು ಬಳಕೆಯಾಗುತ್ತಾದರೂ ಬಣ್ಣ ಕಟ್ಟಲೂ ಉಪಯುಕ್ತ. ಮೆಣಸಿನ ಕಾಯಿಯ ಖಾರದ ರುಚಿಗೆ ಕಾರಣ ಇದರಲ್ಲಿರುವ ಕ್ಯಾಪ್ಸಿಸಿನ್ ಎಂಬ ರಾಸಾಯನಿಕ. ಮೆಣಸಿನ ಘಾಟಿಗೂ ಇದೇ ಕಾರಣ. ಕಾಯಿಗಳು ಬಲಿತಂತೆ, ಒಣಗಿದಂತೆ ಕೆಂಪು ಬಣ್ಣ ಬರಲು ಕಾರಣ ಕ್ಯಾಪ್ಸೆಂತಿನ್. ಕ್ಯಾಪ್ಸೊರೂಬಿನ್, ಜಿಯಾಕ್ಸಾಂತಿನ್, ಕ್ರಿಪ್ಟೊಕ್ಸಾಂತಿನ್, ಆಲ್ಫ ಮತ್ತು ಬೀಟ ಕ್ಯಾರೊಟಿನ್ ಎಂಬ ಸಂಯುಕ್ತಗಳು. ಜೊತೆಗೆ ಮೆಣಸಿನಕಾಯಿ `ಸಿ ವಿಟಮಿನ್ನಿನ ಒಳ್ಳೆಯ ಆಕರ ಕೂಡ. ತಳಿಯನ್ನವಲಂಬಿಸಿ ಈ ವಿಟಮಿನ್ನಿನ ಮೊತ್ತ ಪ್ರತಿ 100 ಗ್ರಾಮಿಗೆ 50 - 280 ಮಿಗ್ರಾಂ ಇದೆ. ಹಾಗೆಯೇ ವಿಟಮಿನ್ `ಎ' ಕೂಡ ಗಣನೀಯ ಪ್ರಮಾಣದಲ್ಲಿದೆ.

ಮೆಣಸಿನಕಾಯಿಗೆ ಔಷಧೀಯ ಗುಣಗಳೂ ಉಂಟು. ಜೀರ್ಣಕಾರಿ ಎನಿಸಿಕೊಂಡಿರುವ ಇದನ್ನು ಅಜೀರ್ಣದ ಕೆಲವು ಬಗೆಗಳ ಚಿಕಿತ್ಸೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ. ಹಲವು ರೀತಿಯ ಕೀಲುನೋವುಗಳ ಉಪಶಮನಕ್ಕೂ ಇದರ ಬಳಕೆ ಉಂಟು. ಗಂಟಲು ನೋವಿಗೆ ಉಪಯೋಗಿಸುವ ಕೆಲವು ಔಷಧಿಗಳಲ್ಲಿ ಇದನ್ನು ಸೇರಿಸುವುದಿದೆ.

ಫ್ರೂಟಿಸೆನ್ಸ್ ಪ್ರಭೇದದ ಕಾಯಿಗಳು ವಿಪರೀತ ಖಾರ ಗುಣವುಳ್ಳವು. ಇದರ ಕಾಯಿಗಳು ಚಿಕ್ಕಗಾತ್ರದವು, ಮೇಲ್ಮುಖವಾಗಿ ಸ್ಥಿತಗೊಂಡಿರುವುವು : ಕೇಯೆನ್ ಪೆಪರ್ಸ್, ಟಬಸ್ಕೊ ಪೆಪರ್ಸ್ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಇವು ಹೆಚ್ಚಾಗಿ ಸಂಬಾರವಸ್ತುವಾಗಿ ಬಳಕೆಯಲ್ಲಿದೆ. (ಸಿ.ವಿ.ಡಿ.)