ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೆಣಸು

ವಿಕಿಸೋರ್ಸ್ದಿಂದ

ಮೆಣಸು - ಸುಪ್ರಸಿದ್ಧ ಸಂಬಾರ ಸಸ್ಯ (ಪೆಪರ್). ಮಾನವ ಹಲವಾರು ಶತಮಾನಗಳಿಂದ ಬಳಸುತ್ತಾ ಬಂದಿರುವ ಸಂಬಾರವಸ್ತುಗಳ ಪೈಕಿ ಇದಕ್ಕೆ ಅಗ್ರಸ್ಥಾನ. ವಾಣಿಜ್ಯ ದೃಷ್ಟಿಯಿಂದಲೂ ಇದರದು ಮೊದಲ ಸ್ಥಾನ. ಎಂದೇ ಇದು ಸಂಬಾರ ಪದಾರ್ಥಗಳ ರಾಜ ಎನಿಸಿದೆ. ಕರಿಮೆಣಸು ಕಾಳು ಮೆಣಸು ಎಂಬ ಹೆಸರುಗಳಿಂದ ಕೂಡ ಪರಿಚಿತ.

ಸಸ್ಯದ ವೈಜ್ಞಾನಿಕ ವಿವರಣೆ: ಮೆಣಸು ಪೈಪರೇಸೀ ಕುಟುಂಬಕ್ಕೆ ಸೇರಿದೆ. ಪೈಪರ್ ನೈಗ್ರಮ್ ಇದರ ವೈಜ್ಞಾನಿಕ ಹೆಸರು. ಪೈಪರ್ ಜಾತಿಯ ಇತರ ಪ್ರಭೇದಗಳಾದ ವೀಳ್ಯೆದೆಲೆ, ಹಿಪ್ಪಲಿ, ಬಾಲಮೆಣಸುಗಳಿಗೆ ಇದು ಹತ್ತಿರ ಸಂಬಂಧಿ. ಅವುಗಳಂತೆಯೇ ಇದು ಕೂಡ ಆಸರೆಗಳನ್ನು ಆಶ್ರಯಿಸಿ ಬೆಳೆಯುವ ಬಳ್ಳಿರೂಪದ ಬಹುವಾರ್ಷಿಕ ಸಸ್ಯ. ಸುಮಾರು 8 - 10 ಮೀ. ಎತ್ತರಕ್ಕೆ ಬೆಳೆಯುತ್ತದೆ. ಬಳ್ಳಿಯ ಕವಲುಗಳು ದೃಢವಾಗಿದ್ದು ಗೆಣ್ಣುಗಳ ಬಳಿ ಬೇರೊಡೆಯುತ್ತದೆ. ಎಲೆಗಳು ಹೆಚ್ಚುಕಡಿಮೆ ವೀಳ್ಯೆದೆಲೆಗಳಂತೆಯೇ ಇವೆ. ಹೂಗಳು ಕಿರಿಗಾತ್ರದವು. ಸ್ಪೈಕ್ ಮಾದರಿಯ ಮಂಜರಿಗಳಲ್ಲಿ ಸ್ಥಿತವಾಗಿವೆ. ಇವು ಏಕಲಿಂಗಿಗಳಾಗಿದ್ದು ಬೇರೆ ಬೇರೆ ಗಿಡಗಳಲ್ಲಿ ಅರಳಿರಬಹುದು ಇಲ್ಲವೆ ದ್ವಿಲಿಂಗಿಗಳಾಗಿದ್ದು ಒಂದೇ ಗಿಡದಲ್ಲಿರಬಹುದು. ಹೂಗಳು ಅರಳಿ ಕಾಯಿಕಚ್ಚಿ ಪಕ್ವವಾಗಲು ಸುಮಾರು 9 ತಿಂಗಳು ಹಿಡಿಯುತ್ತದೆ. ತಳಿಗಳನ್ನವಲಂಬಿಸಿ ಒಂದು ಗೊಂಚಲಿನಲ್ಲಿ 20 - 80 ಫಲಗಳಿರುವುವು. ಫಲಗಳು ಬೆರಿ ಮಾದರಿಯವು.

ಭಾರತದಲ್ಲಿ ಇದರ ಬಳಕೆ ಸಾವಿರಾರು ವರ್ಷಗಳಿಂದ ಇದೆ. ಇದರ ಮಹತ್ವವನ್ನು ಈಜಿಪ್ಟಿಯನ್ನರಿಂದ ಅರಿತ ಗ್ರೀಕರು, ರೋಮನರು, ಅನಂತರ ಪೋರ್ಚುಗೀಸರು ಇದರ ಅನ್ವೇಷಣೆಗಾಗಿ ಸಮುದ್ರಯಾನ ಕೈಗೊಂಡರು. ಸಾಗರ ಮಾರ್ಗವಾಗಿ ಭಾರತದ ಪ್ರಮುಖ ಸಂಬಾರವಸ್ತು ಕೇಂದ್ರವಾದ ಕಲ್ಲಿಕೋಟೆಗೆ 1498ರಲ್ಲಿ ಬಂದ ವಾಸ್ಕೊಡಗಾಮ ಇದರ ವ್ಯಾಪಾರದ ಅಭಿವೃದ್ಧಿಗೆ ನಾಂದಿ ಹಾಡಿದ. ಡಚ್ಚರಿಂದ ಮಲಯ, ಇಂಡೋನೇಷ್ಯಗಳಿಗೆ ಮೆಣಸು ಸಾಗಣೆಯಾಗಿ ಈಗ ಅಲ್ಲಿಯೂ ಮೆಣಸಿನ ವ್ಯಾಪಕ ವ್ಯವಸಾಯವಿದೆ.

ಮೆಣಸು ಉಷ್ಣವಲಯದ ಬೆಳೆ. ವರ್ಷಕ್ಕೆ ಸರಾಸರಿ 150 - 200 ಸೆಂ.ಮೀ. ಮಳೆಯಾಗುವ ಮತ್ತು ಸಮುದ್ರಮಟ್ಟದಿಂದ ಹಿಡಿದು 500 - 1500 ಮೀ. ಎತ್ತರದ ಪ್ರದೇಶಗಳಲ್ಲಿ ಬೇಸಾಯ ಮಾಡಬಹುದು. ಉಷ್ಣತೆ 100 - 400 ಸೆಲ್ಸಿಯಸ್ ಇರಬೇಕು. ಭಾರತದಲ್ಲೆ ಕೇರಳ ಪ್ರಾಚೀನ ಕಾಲದಿಂದಲೂ ಕರಿಮೆಣಸಿನ ಬೇಸಾಯದ ಕೇಂದ್ರವೆನಿಸಿದೆ. ಕರ್ನಾಟಕದಲ್ಲಿ ಈ ಬೆಳೆಯನ್ನು ಉತ್ತರಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ.

ಕೆಂಪು ಮತ್ತು ಮರಳು ಗೋಡು ಮಣ್ಣು ಇರುವ ಬೆಟ್ಟದ ತಪ್ಪಲುಗಳಲ್ಲಿ ಇದರ ಬೆಳವಣಿಗೆ ಉತ್ತಮ. ಮೆಣಸಿಗೆ ನೀರು ಚೆನ್ನಾಗಿ ಇಂಗಿಹೋಗುವಂಥ ಇಳಿಜಾರು ಪ್ರದೇಶಗಳು ಯೋಗ್ಯವಾದವು.

ಮೆಣಸಿನಲ್ಲಿ ವೊಕಲ ಮೊರಾಟ, ಕರಿಮಂಡ, ಕರಿಮೊರಾಟ, ಅರಿಸಿನ ಮೊರಾಟ, ದೊಡ್ಡಗ, ಬಾಲಂಕೊಟ್ಟ, ಮಲ್ಲಿಗೆ ಸರ, ತಟ್ಟಿಸರ ಮುಂತಾದ ಹಲವಾರು ತಳಿಗಳಿವೆ. ಇತ್ತೀಚೆಗೆ ಹಲವಾರು ಮಿಶ್ರತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಇವುಗಳ ಪೈಕಿ ಪೆನಿಯರ್ -1 ಹೆಚ್ಚು ಜನಪ್ರಿಯವಾಗಿದೆ.

ಮೆಣಸನ್ನು ಬೀಜಗಳಿಂದ, ಕಾಂಡದ ತುಂಡುಗಳಿಂದ, ಗೂಟಿ ಕಟ್ಟುವುದರಿಂದ ವೃದ್ಧಿಮಾಡಬಹುದು. ಕಾಂಡದ ತುಂಡುಗಳಿಂದ ವೃದ್ಧಿ ಮಾಡುವುದು ಹೆಚ್ಚು ರೂಢಿಯಲ್ಲಿದೆ.

ಕೊಯ್ಲು : ಮೆಣಸು ನಾಟಿಮಾಡಿದ 4 ವರ್ಷಗಳ ಮೇಲೆ ಇಳುವರಿ ಕೊಡಲು ಪ್ರಾರಂಭಿಸುತ್ತದೆ. ಆದರೆ ಒಳ್ಳೆ ಇಳುವರಿ ನಾಟಿ ಮಾಡಿದ 6 ವರ್ಷಗಳ ತರುವಾಯ ಪ್ರಾರಂಭವಾಗುವುದು. ಬಳ್ಳಿ ಜುಲೈ ತಿಂಗಳಲ್ಲಿ ಹೂ ಬಿಟ್ಟರೆ ಹಣ್ಣು ಫೆಬ್ರವರಿ ತಿಂಗಳಲ್ಲಿ ಕೊಯ್ಲಿಗೆ ಬರುವುದು. ಫಲಗಳನ್ನು ಕಣಕ್ಕೆ ತಂದು ಕೈಯಿಂದಾಗಲೀ ಉಪಕರಣಗಳಿಂದಾಗಲೀ ಕಾಯಿಗಳನ್ನು ತೊಟ್ಟಿನಿಂದ ಬೇರ್ಪಡಿಸಬೇಕು. ಅನಂತರ ಅವನ್ನು 6 ದಿನ ಚೆನ್ನಾಗಿ ಒಣಗಿಸಬೇಕು. ಮೆಣಸು ಚೆನ್ನಾಗಿ ಒಣಗಿದ ಮೇಲೆ ಮೆಣಸಿನ ಹೊರ ಸಿಪ್ಪೆ ಹಸುರು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗಿ ಸುಕ್ಕುಸುಕ್ಕಾಗುತ್ತದೆ. ಇದೇ ಕರಿಮೆಣಸು, ಮೆಣಸಿನ ಹೊರ ಸಿಪ್ಪೆ ಮತ್ತು ತಿರುಳನ್ನು ಬೇರ್ಪಡಿಸಿದರೆ ಬಿಳಿ ಮೆಣಸಾಗುತ್ತದೆ.

ಕೊಡುವ ಗೊಬ್ಬರ, ನೀರು ಮತ್ತು ತಳಿಗಳನ್ನು ಅನುಸರಿಸಿ ಇಳುವರಿ ವ್ಯತ್ಯಾಸವಾಗುತ್ತದೆ. ಒಂದು ಪೊದೆಗೆ 0.5 - 1.5 ಕಿಲೊಗ್ರಾಮಿನಂತೆ ಎಕರೆಗೆ 30 - 40 ಕೆಜಿ ಇಳುವರಿ ದೊರೆಯುತ್ತದೆ.

ಮೆಣಸಿಗೆ ಹಲವಾರು ಬಗೆಯ ಕೀಟಗಳೂ, ಶಿಲೀಂಧ್ರ ರೋಗಗಳೂ ತಗಲುವುದುಂಟು. ಕೀಟಗಳ ಪೈಕಿ ಕಾಳನ್ನು ಕೊರೆದು ಪೊಳ್ಳು ಮಾಡುವ ಕುರುವಾಯಿ, ಎಲೆ ಮತ್ತು ಕಾಂಡವನ್ನು ಹಾಳು ಮಾಡುವ ಶಲ್ಕಕೀಟ ಹಾಗೂ ಸಸ್ಯತಿಗಣೆಗಳು ಮುಖ್ಯವೆನಿಸಿವೆ. ಶಿಲೀಂಧ್ರರೋಗಗಳ ಪೈಕಿ ಬಾಡುರೋಗ (ವಿಲ್ಟ್) ಕೊಲೆಟೊರೈಕಮ್ ರೋಗ ಪ್ರಮುಖವಾಗಿವೆ.

ಉಪಯೋಗ: ಮೆಣಸನ್ನು ಒಣಗಿಸಿ ಕರಿಮೆಣಸಿನ ರೂಪದಲ್ಲೂ ಸಿಪ್ಪೆಯನ್ನು ತೆಗೆದು ಬಿಳಿಮೆಣಸಿನ ರೂಪದಲ್ಲೂ ಸಾಂಬಾರ ಪದಾರ್ಥವಾಗಿ ಬಳಸುವುದು ಎಲ್ಲರಿಗೂ ಪರಿಚಿತ. ಆಹಾರಪದಾರ್ಥಗಳಿಗೆ ವಿಶಿಷ್ಟ ರುಚಿ ಕೊಡುವುದಕ್ಕೂ ಸ್ವಾದ ಬರುವಂತೆ ಮಾಡಲು ಬಳಸುವುದಲ್ಲದೆ, ಅಮೆರಿಕ ಮತ್ತಿತರ ಪಾಶ್ಚಾತ್ಯ ದೇಶಗಳಲ್ಲಿ ಮಾಂಸಾಹಾರವನ್ನು ಹಲವಾರು ದಿನ ಸುರಕ್ಷಿತವಾಗಿರುವಂತೆ ಮಾಡಲು ಉಪಯೋಗಿಸುತ್ತಾರೆ.

ಮೆಣಸಿನ ಖಾರ ರುಚಿಗೂ ಘಾಟಿಗೂ ಕಾರಣ ಇದರಲ್ಲಿರುವ ವಿಶೇಷ ಓಲಿಯೊರೆಸಿನ್ ಎಂಬ ತೈಲಾಂಶ. ಈ ವಸ್ತುವಿಗೆ ಹಲವಾರು ಬಗೆಯ ಬ್ಯಾಕ್ಟೀರಿಯ ಮತ್ತು ಶಿಲೀಂಧ್ರನಾಶಕ ಗುಣವುಂಟು. ಅಲ್ಲದೆ ಮಾಂಸ, ಎಣ್ಣೆ, ಕೊಬ್ಬುಗಳು ಕೊಳೆಯುವುದನ್ನೂ ಇದು ತಡೆಯುತ್ತದೆ.

ಮೆಣಸಿನಕಾಳುಗಳಿಂದ ಒಂದು ರೀತಿಯ ಚಂಚಲತೈಲವನ್ನೂ ಪಡೆಯಬಹುದಾಗಿದ್ದು ಇದನ್ನು ವಿವಿಧ ರೀತಿಯ ಆಹಾರವಸ್ತುಗಳಿಗೆ ಮತ್ತು ಪಾನೀಯಗಳಿಗೆ ರುಚಿ ಒದಗಿಸಲು ಬಳಸಲಾಗುತ್ತದೆ. ಕೇರಳದ ಕೆಲವಡೆ ಹಸುರುಮೆಣಸನ್ನೂ ಉಪ್ಪಿನಕಾಯಿಯ ರೂಪದಲ್ಲಿ ಬಳಸುವುದಿದೆ.

ಮೆಣಸಿಗೆ ಔಷಧೀಯ ಗುಣಗಳೂ ಉಂಟು. ಜ್ವರ, ತಲೆಸುತ್ತು ಮುಂತಾದ ಸಂದರ್ಭಗಳಲ್ಲಿ ಇದನ್ನು ಪ್ರಚೋದಕವಾಗಿಯೂ, ಅಜೀರ್ಣ, ಹೊಟ್ಟೆಯುಬ್ಬರಗಳಲ್ಲಿ ಜೀರ್ಣಕಾರಿಯಾಗಿಯೂ, ಮಲೇರಿಯ, ಸಂಧಿವಾತ ಇತ್ಯಾದಿಗಳಲ್ಲಿ ಜ್ವರ ನಿವಾರಕವಾಗಿಯೂ ಇದರ ಬಳಕೆ ಉಂಟು. ಮೂಲವ್ಯಾಧಿ, ಗಂಟಲುನೋವು, ಕೆಲವು ತೆರನ ಚರ್ಮರೋಗಗಳ ಚಿಕಿತ್ಸೆಯಲ್ಲಿ ಇದನ್ನು ಉಪಚಾರವಾಗಿ ಉಪಯೋಗಿಸುವುದಿದೆ. (ಬಿ.ಎ.ಸಿ.; ಡಿ.ಜಿ.ಎ.ಸಡ್.; ಪಿ.ಎಸ್.ಸಿ.)