ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೆಸ್ಮರ್, ಫ್ರೆಡ್ರಿಕ್ ಆಂಟನ್

ವಿಕಿಸೋರ್ಸ್ದಿಂದ

ಮೆಸ್ಮರ್, ಫ್ರೆಡ್ರಿಕ್ ಆಂಟನ್ 1734-1815. ಜರ್ಮನಿಯ ವೈದ್ಯ. ವಿಯನ್ನದಲ್ಲಿ ವಿದ್ಯಾಭ್ಯಾಸ ಮಾಡಿದ. ಅಲ್ಲಿಯೇ ವೈದ್ಯವೃತ್ತಿ ನಡೆಸುತ್ತಿದ್ದ ಈತ ಮನುಷ್ಯರ ಮೇಲೆ ಗ್ರಹಗಳ ಪ್ರಭಾವವನ್ನು ಕುರಿತು ಅಧ್ಯಯನ ನಡೆಸಿದ. ಇಡೀ ಪ್ರಪಂಚದಲ್ಲಿ ಒಂದೇ ಬಗೆಯ ರಸ ಹರಿಯುವುದೆಂದೂ ಈ ರಸ ಪ್ರವಾಹ ವಿದ್ಯುತ್ತಿನಂತೆ ಅಯಸ್ಕಾಂತದಂತೆ ಇರುವುದೆಂದೂ ಈತನ ಕಲ್ಪನೆ. ಮನುಷ್ಯರ ದೇಹವನ್ನು ಅಯಸ್ಕಾಂತ ಶಿಲೆಯಿಂದ ಮುಟ್ಟಿದಾಗ ಆಕರ್ಷಣೆಯ ಪ್ರಸಂಗ ಕಾಣುವುದೆಂದು ತೋರಿಸಿ ಪ್ರಾಣಿಗಳಲ್ಲಿ ಅಯಸ್ಕಾಂತ ಆಕರ್ಷಣೆ ಎಂಬ ಸಿದ್ಧಾಂತ ಮಂಡಿಸಿದ. ತನ್ನ ವೃತ್ತಿಯಲ್ಲಿಯೂ ಹಲವಾರು ರೋಗಿಗಳನ್ನು ಈ ವಿಧಾನದಿಂದ ಗುಣಪಡಿಸಲು ಯತ್ನಿಸಿದ. 1766ರಲ್ಲಿ ಈ ವಿಚಾರವಾಗಿ ಗ್ರಂಥವೊಂದನ್ನು ಪ್ರಕಟಿಸಿದ. ಮೂವತ್ತು ವರ್ಷಗಳ ಅನಂತರ ಗಾಸ್ನೆರ್ ಎಂಬ ಸ್ವಿಸ್ ಪಾದ್ರಿಯನ್ನು ಸಂಧಿಸಿ ಅವನು ಅಯಸ್ಕಾಂತವಿಲ್ಲದೆ ಆಕರ್ಷಿಸುತ್ತಿದ್ದುದನ್ನು ನೋಡಿದಾಗ ಆ ವಿಧಾನವನ್ನೇ ಅನುಸರಿಸಿ ಪ್ರಾಣಿಗಳ ಆಕರ್ಷಣಾಪ್ರವೃತ್ತಿ ಎಂಬ ಹೊಸಪದ್ಧತಿಯನ್ನು ಏರ್ಪಡಿಸಿದ. 1775ರಲ್ಲಿ ತನ್ನ ಸಿದ್ಧಾಂತವನ್ನು ವಿವರಿಸಿ ವೈಜ್ಞಾನಿಕ ಸಂಸ್ಥೆಗಳಿಗೆ ಬರೆದ. ಅದರೆ ಎಲ್ಲರೂ ಇದನ್ನು ತಿರಸ್ಕರಿಸಿದರು. ವಿಯನ್ನದಲ್ಲಿ ಇವನಿಗೆ ವಿರೋಧ ಬಲವಾದಾಗ ಮೆಸ್ಮರ್ 1778ರಲ್ಲಿ ಪ್ಯಾರಿಸ್‍ಗೆ ತೆರಳಿದ. ಪ್ಯಾರಿಸ್ಸಿನಿಂದ ಸ್ವಿಟ್‍ಜûರ್‍ಲೆಂಡಿಗೆ ತೆರಳಿ ಅಲ್ಲಿ 1815ರಲ್ಲಿ ತೀರಿಕೊಂಡ. ಹೀಗೆ ಬಾಹ್ಯಸಾಧನೆಗಳಿಂದ ನಿದ್ರೆಯನ್ನು ಪ್ರೇರಿಸುವ ಪ್ರಸಂಗಕ್ಕೆ `ಮೆಸ್ಮರಿಸಮ್‍ಎಂದೇ ಕರೆಯಲಾಗಿದೆ.

ಎಲಿಯಟ್ಸನ್, ಜೇಮ್ಸ್ ಎಸ್‍ಡೇಲ್ ಮೊದಲಾದವರು ಈ ವಿಧಾನವನ್ನು ಅನುಸರಿಸಿದರು. ಎಸ್‍ಡೇಲ್ ಭಾರತದಲ್ಲಿ ಮೆಸ್ಮರಿಸಮ್ ಪದ್ಧತಿಯನ್ನು ಬಳಕೆಗೆ ತಂದ. ಜೇಮ್ಸ್ ಬ್ರೈಡ್(1795--1860) ಎಂಬ ಪ್ರಯೋಗಶೀಲ ಮೆಸ್ಮರ್‍ನಿದ್ರೆಯನ್ನು `ನರಗಳ ಸ್ವಾಪ (ನರ್ವಸ್ ಸ್ಲೀಪ್) ಎಂದು ಬಣ್ಣಿಸಿದ. ಈತನ ಅನುಯಾಯಿಗಳು ಮೆಸ್ಮರ್ ಸಿದ್ಧಾಂತಕ್ಕೆ ವಿರೋಧಿಗಳಾಗಿದ್ದರು. ಈತನ ಹಿಪ್ನಾಟಿಸಮ್ ಸಿದ್ಧಾಂತದಿಂದ ಮೆಸ್ಮರ್‍ನ ಆಕರ್ಷಣಾ ಸಿದ್ಧಾಂತ ಹಿಂದೆ ಬಿದ್ದು ಕ್ರಮೇಣ ಮರೆಯಾಯಿತು. (ಎಸ್.ಕೆ.ಆರ್.)