ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೊಲ

ವಿಕಿಸೋರ್ಸ್ದಿಂದ

ಮೊಲ ಮ್ಯಾಮೇಲಿಯ ವರ್ಗದ ಲ್ಯಾಗೂಮಾರ್ಫ ಗುಂಪಿನ ಲೆಪೊರಿಡೀ ಕುಟುಂಬಕ್ಕೆ ಸೇರಿದ ಲೀಪನ್ ಜಾತಿಯ ಪ್ರಾಣಿ (ಹೇರ್). ಕುಂದಿಲಿ(ರ್ಯಾಬಿಟ್)ಗಳಿಗೆ ಹತ್ತಿರ ಸಂಬಂಧಿ. ಮೊಲಕ್ಕೆ ಕುಂದಿಲಿಗೂ ಹಲವಾರು ಹೊರ ವ್ಯತ್ಯಾಸಗಳುಂಟು. (ನೋಡಿ- ಕುಂದಿಲಿ)

ಲೀಪಸ್ ಜಾತಿಯಲ್ಲಿ ಸುಮಾರು 26 ಪ್ರಭೇದಗಳಿದ್ದು ಇವು ಯೂರೇಷ್ಯ, ಏಷ್ಯದ ಬಹುಭಾಗ, ಆಫ್ರಿಕ, ಉತ್ತರ ಅಮೆರಿಕಗಳಲ್ಲಿ ಕಾಣದೊರೆಯುವುವು. ದಕ್ಷಿಣ ಅಮೆರಿಕ, ಆಸ್ಟ್ರೇಲಿಯ, ನ್ಯೂಜಿûಲೆಂಡಗಳಲ್ಲಿ ಇವನ್ನು ಬೇರೆಡೆಯಿಂದ ತಂದು ಬಿಡಲಾಗಿದ್ದು ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಜೀವಿಸುತ್ತವೆ. ಈ ಪ್ರಭೇದಗಳ ಪೈಕಿ ಮುಖ್ಯವಾದವು ಲೀ. ಅಮೆರಿಕಾನಸ್ (ಉತ್ತರ ಅಮೆರಿಕದ ಉತ್ತರ ಭಾಗ) ಲೀ, ಯುರೋಪಿಯಸ್ (ಯುರೋಪ್), ಲೀ. ಆರ್ಕ್‍ಟಿಕಸ್ (ಉತ್ತರ ಧ್ರುವಪ್ರದೇಶ), ಲೀ. ನೈಸರ್ಗಿಕಾಲಿಸ್ (ಭಾರತ).

ಭಾರತದಲ್ಲಿ ಸಿಕ್ಕುವ ಮೊಲಕ್ಕೆ ಬ್ಲಾಕ್‍ನೇಫ್‍ಡ್ ಹೇರ್ ಅಥವಾ ಇಂಡಿಯನ್ ಹೇರ್ ಎಂಬ ಹೆಸರುಂಟು. ಇದರಲ್ಲಿ ಸುಮಾರು 7 ವಿಭಿನ್ನ ಬಗೆಗಳಿದ್ದು ದೇಹದ ಬಣ್ಣ, ಗಾತ್ರಗಳಲ್ಲಿ ವ್ಯತ್ಯಾಸವನ್ನು ಪ್ರದರ್ಶಿಸುವುವು. ಇವುಗಳ ಸರಾಸರಿ ಉದ್ದ 40-50 ಸೆಂ.ಮೀ; ತೂಕ 1.8-3.6 ಕರಜಿ. ಕತ್ತಿನ ಮೇಲೆ ಅಂದರೆ ಕಿವಿಯಿಂದ ಹಿಡಿದು ಭುಜದವರೆಗೆ ಕಗ್ಗಂದು ಇಲ್ಲವೆ ಕಪ್ಪು ಬಣ್ಣದ ಗುರುತು ಇದೆ. ಬಾಲದ ಮೇಲ್ಮೈ ಕೂಡ ಕಪ್ಪು ; ಬಾಲದ ಉದ್ದ ಸುಮಾರು 10 ಸೆಂ.ಮೀ. ಮುಂಗಾಲುಗಳು ಚಿಕ್ಕವು; ಇವುಗಳಲ್ಲಿ ತಲಾ 5 ಬೆರಳುಗಳಿವೆ. ಹಿಂಗಾಲುಗಳು ಬಲು ಉದ್ದ ; ಇವುಗಳಲ್ಲಿ ತಲಾ 4 ಬೆರಳುಗಳಿವೆ. ಮೊಲದ ಕಿವಿ ಕುಂದಿಲಿಯದಕ್ಕಿಂತ ತುಂಬ ಉದ್ದ.

ಮೊಲಗಳು ಸಸ್ಯಹಾರಿಗಳು. ಮೈದಾನ ಪ್ರದೇಶದ ಹುಲ್ಲುಗಾವಲುಗಳು ಇವುಗಳ ಮೆಚ್ಚಿನ ನೆಲೆ. ಹಳ್ಳಿಗಳ, ಕೃಷಿಭೂಮಿಗಳ ಸನಿಹದಲ್ಲೂ ವಾಸಿಸುತ್ತವೆ. ಕೆಲವೊಮ್ಮೆ ಹಳ್ಳಿರಸ್ತೆಗಳಿಗೂ ಮನೆತೋಟಗಳಿಗೂ ಬರುವುದುಂಟು. ಸಾಧಾರಣವಾಗಿ ನಿಶಾಚಾರಿಗಳಾದ ಇವು ಸಂಜೆ ವೇಳೆ ತಮ್ಮ ನೆಲೆಗಳಿಂದ ಹೊರಬಂದು ಹುಲ್ಲಿನ ಎಳೆಚಿಗುರು ಮುಂತಾದನ್ನು ತಿನ್ನುತ್ತವೆ. ಅದರೆ ಹಲವಾರು ಸಲ ಹಗಲಿನಲ್ಲೂ ಆಹಾರಾನ್ವೇಷಣೆಯಲ್ಲಿ ತೊಡಗುವುದುಂಟು. ಸಾಮಾನ್ಯವಾಗಿ ಹಗಲಿನಲ್ಲಿ ಪೊದೆಗಳಲ್ಲೂ ಹುಲ್ಲು ತೆಂಡೆಗಳಲ್ಲೋ ಅಡಗಿದ್ದು ತಮ್ಮ ಸಹಜ ವೈರಿಗಳಾದ ನರಿ, ಮುಂಗಸಿ, ಕಾಡುಬೆಕ್ಕು ಮುಂತಾದವುಗಳಿಂದ ರಕ್ಷಣೆ ಪಡೆಯುತ್ತವೆ. ಇವುಗಳ ಮೈಬಣ್ಣ ವಾಸಸ್ಥಳಗಳ ಹಿನ್ನಲೆಯೊಂದಿಗೆ ಚೆನ್ನಾಗಿ ಹೊಂದುಕೊಳ್ಳುವುದರಿಂದ ಸುಲಭವಾಗಿ ಕಣ್ಣಿಗೆ ಬೀಳವು. ಅಲ್ಲದೆ ವೈರಿಯೊ ಮನುಷ್ಯರೊ ತುಂಬಹತ್ತಿರ ಬರುವವರೆಗೂ ಚಲಿಸದೆ ಅಡಗಿದ್ದು ಕೊನೆಯಗಳಿಗೆಯಲ್ಲಿ ಚಂಗನೆ ನೆಗೆದು ಓಡಿ ಹೋಗುವುವು. ಇದರಿಂದಾಗಿ ಇವನ್ನು ಹಿಡಿಯುವುದು ಕಷ್ಟ. ಕೊಂಚ ದೂರ ಓಡಿ ಬಳಿಕ ಹಿಂಗಾಲಿನ ಮೇಲೆ ನಿಂತು ಹಿಂದಕ್ಕೆ ತಿರುಗಿ ನೋಡುವುದು ಇವುಗಳ ಸ್ವಭಾವ.

ಮೊಲ ವರ್ಷವಿಡೀ ಮರಿಗಳನ್ನು ಹಾಕುತ್ತದೆ. ಒಂದು ಸಲಿಗೆ ಒಂದು ಇಲ್ಲವೆ ಎರಡು ಮರಿಗಳು ಹುಟ್ಟುತ್ತವೆ. ಕುಂದಿಲಿಯ ಮರಿಗಳಂತಲ್ಲದೆ ಮೊಲದ ಮರಿಗಳು ಹುಟ್ಟುವಾಗಲೇ ಮೈತುಂಬ ಕೂದಲನ್ನು ತೆರೆದಿರುವ ಕಣ್ಣುಗಳನ್ನೂ ಪಡೆದಿರುವುವು. ಮೊಲದ ಮಾಂಸ ರುಚಿಕರವಾದ್ದರಿಂದ ಇದನ್ನು ಬೇಟೆಯಾಡುವುದಿದೆ.

(ಎಸ್.ಎನ್.ಎಚ್.)