ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೊಲೆಹಾಲೂಡಿಕೆ

ವಿಕಿಸೋರ್ಸ್ದಿಂದ

ಮೊಲೆಹಾಲೂಡಿಕೆ - ಮೊಲೆಯಿಂದಲೇ ನೇರವಾಗಿ ಮಗುವಿಗೆ ಹಾಲು ಕುಡಿಸುವಿಕೆ (ಬ್ರೆಸ್ಟ್ ಫೀಡಿಂಗ್). ಸಸ್ತನಿವರ್ಗದಲ್ಲಿ ಹಾಲು ತಯಾರಿ ಹಾಗೂ ಕುಡಿಸುವಿಕೆ ಅತ್ಯಂತ ವಿಶಿಷ್ಟವಾದುದು. ತಾಯಿಯ ಹಾಲು ಸಣ್ಣ ಮಗುವಿಗೆ ಆದರ್ಶ ಆಹಾರ. ಮೊದಲು ಕೆಲವು ತಿಂಗಳಲ್ಲಿ ಅದು ಪೂರ್ಣ ಆಹಾರವಾಗಿರುವುದೂ ನಿಜ.

ಮೊಲೆಹಾಲೂಡುವಿಕೆ ಕೃತಕಹಾಲೂಡುವಿಕೆಗಿಂತ ಉತ್ಕøಷ್ಟವಾದುದು. ಕಾರಣ : 1. ಮಗುವಿಗೆ ಬೇಕಾದ ಹಾಲು ದೇಹೋಷ್ಣತೆಯಲ್ಲೇ ಸಿಗುತ್ತದೆ. ಬಿಸಿ ಮಾಡುವ ಅಥವಾ ತಯಾರುಮಾಡುವ ಅಗತ್ಯವಿಲ್ಲ. 2. ಅದು ಸ್ವಚ್ಛವಾದುದು ಮತ್ತು ಕ್ರಿಮಿಹೀನವಾದುದು. 3. ದುಬಾರಿಯಲ್ಲ : ಖರ್ಚಿಲ್ಲದೆ ದೊರೆಯುವಂಥದು. 4. ಫಲವಾಗಿ ಮಗುವಿಗೆ ಮಾನಸಿಕ ಭದ್ರತೆಯುಂಟಾಗುತ್ತದೆ. ತಾಯಿಗೆ ಹಾಲೂಡಿಸುವ ಸಂತೋಷವುಂಟಾಗುತ್ತದೆ. 5. ಮೊಲೆ ಹಾಲಿನಲ್ಲಿ ಅನೇಕ ರಕ್ಷಣಾ ಘಟಕಗಳಿದ್ದು ಅವು ಮಗುವಿನ ಆರೋಗ್ಯವನ್ನು ಕಾಪಾಡುತ್ತದೆ. ಮೊದಲ 2-4 ದಿವಸಗಳಲ್ಲಿ ಬರುವ ಮೊಲೆಯ ದ್ರವಕ್ಕೆ ಗಿಣ್ಣುಹಾಲು (ಅoಟosಣಡಿum) ಎಂದು ಹೆಸರು. ಇದರ ಸಂಯೋಜನೆ ಬೇರೆ ರೀತಿಯದು. ಗಿಣ್ಣು ಹಾಲನ್ನು ಕುಡಿಸುವುದರಿಂದ ಯಾವ ಅಪಾಯವೂ ಇಲ್ಲ. ಕರುಳಿಗೆ ಅಗತ್ಯವಾದ ರಕ್ಷಣಾ ಕಣ-ಘಟಕಗಳು ಇದರಲ್ಲಿ ಸಾಂದ್ರೀಕೃತವಾಗಿರುತ್ತದೆ. ಮೊಲೆ ಹಾಲಿನಲ್ಲಿ 2% ಸಸಾರಜನಕ, 4% ಕೊಬ್ಬು ಮತ್ತು 6% ಪಿಷ್ಟಪದಾರ್ಥಗಳಿರುತ್ತವೆ.

ಮೊಲೆಹಾಲೂಡುವಿಕೆಯನ್ನು ಶಿಶುಜನಿಸಿ 1/2 ಗಂಟೆಯ ಒಳಗೆ ಆರಂಭಿಸಬಹುದು. ಮಗುವಿನ ಜನನದ ಕೂಡಲೇ ಮೊಲೆ ಹಾಲೂಡುವಿಕೆಗೆ ಪ್ರೋತ್ಸಾಹ ನೀಡಬೇಕು. ತಾಯಿ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.

1. ಮೊಲೆಯ ಆರೈಕೆ : ಮೊಲೆ ತೊಟ್ಟು ಸಣ್ಣದಾಗಿದ್ದರೆ ಅಥವಾ ಒಳಗೆ ತಿರುಗಿಕೊಂಡಿದ್ದರೆ ಅದನ್ನು ಹೊರಗೆ ಮೆದುವಾಗಿ ಎಳೆಯಬೇಕು. ಮೊಲೆ ಹಾಲೂಡುವ ಮುನ್ನ ಮತ್ತು ಆ ಬಳಿಕ ಅದನ್ನು ನೀರಿನಲ್ಲಿ ತೊಳೆಯಬೇಕು.

2. ಹಾಲೂಡುವಿಕೆಗೆ ಅಂತರ : ಒಂದು ಸಾರಿ ಹಾಲೂಡುವಿಕೆ ಆರಂಭವಾದ ಬಳಿಕ, ಮೂರು ತಿಂಗಳ ತನಕ ಪ್ರತಿ ಮೂರು ಗಂಟೆಗಳಿಗೊಮ್ಮೆ ದಿನಕ್ಕೆ ಆರು ಬಾರಿ ಕೊಡುವ ಗುರಿಯಿರಿಸಿಕೊಳ್ಳಬೇಕು. ಮೂರು ತಿಂಗಳ ಬಳಿಕ ನಾಲ್ಕು ಗಂಟೆಗಳಿಗೊಮ್ಮೆ, ದಿನಕ್ಕೆ ಐದು ಸಾರಿ ಕೊಡಬೇಕು. ಸಾಧಾರಣವಾಗಿ ಮಗು ಹಾಲೂಡುವಿಕೆಗೆ ನಿಯಮಿತವಾಗಿ ಸಮಯವನ್ನು ಬೆಳೆಸಿಕೊಳ್ಳುತ್ತದೆ. ಆದರೆ ಕಟ್ಟುನಿಟ್ಟಾಗಿ ಗಡಿಯಾರಕ್ಕೆ ಅಂಟಿಕೊಳ್ಳುವ ಪರಿಪಾಠವನ್ನು ಎಂದಿಗೂ ಮಾಡಬಾರದು. ಮಗುವಿನ ಹಸಿವು ಮತ್ತು ಮನೋಧರ್ಮವನ್ನು ಗೌರವಿಸಬೇಕು.

3. ಮೊಲೆ ಕೊಡುವ ಅವಧಿ ಪ್ರತಿಯೊಂದು ಮಗುವಿಗೂ ಬೇರೆ ಬೇರೆಯಾಗುತ್ತದೆ. ಆದರೆ ಪ್ರತಿಬಾರಿ ಬೇಕಾದಷ್ಟು ಪ್ರಮಾಣ ಸಿಗಬೇಕಾದರೆ ಸರಾಸರಿ 15 ಮಿನಿಟುಗಳು ಸಾಕು.

4. ವಿಧಾನ : ತಾಯಿ ಆರಾಮವಾಗಿ ಕುಳಿತುಕೊಳ್ಳಬೇಕು. ಮಗುವನ್ನು ಮೊಲೆಗೆ ಸಮೀಪವಾಗಿ 300-400 ಕೋನದಲ್ಲಿ ಬೆನ್ನು ಆಧರಿಸಿ ಹಿಡಿಯಬೇಕು. ಅವಳು ಮೊಲೆತೊಟ್ಟನ್ನು ಬೆರಳುಗಳ ಮಧ್ಯೆ ಹಿಡಿದು, ಮಗುವಿನ ತುಟಿಗೆ, ಕೆನ್ನೆಗೆ ಮಿದುವಾಗಿ ತಾಗಿಸಿದಾಗ ಮಗು ಜೋರಾಗಿ ಬಾಯಿ ತೆಗೆದು ತೊಟ್ಟನ್ನು ಹುಡುಕತೊಡಗುತ್ತದೆ. ಆಗ ಅದರ ಬಾಯೊಳಗೆ ತೊಟ್ಟನ್ನು ಅದರ ಸುತ್ತ ಇರುವ ಕಪ್ಪುಭಾಗವನ್ನು (ಏರಿಯೋಲಾ) ಊಡಬೇಕು. ಮಗು ಏರಿಯೋಲಾದ ಮೇಲೆ ದವಡೆಯನ್ನಿಟ್ಟು ಕಚ್ಚಲು ಅನುವು ಮಾಡಿಕೊಡಬೇಕು. ಮಗುವಿನ ಬಾಯಿಯೊಳಗೆ ಇರಿಸಬೇಕು. ಪ್ರತಿ ಬಾರಿಯೂ ಎರಡೂ ಕಡೆ ಕುಡಿಸಬೇಕು. ಮಗುವಿನ ಮುಖವನ್ನು ತಾಯಿಯ ಹೆಗಲಮೇಲಿರಿಸಿಕೊಂಡು ಬೆನ್ನನ್ನು ಮೆಲ್ಲನೆ ನೀವಿ ವಾಯುವನ್ನು ಹೊರಗೆ ಬರಿಸಬೇಕು.

5. ಹಾಲು ಸಾಕಾಗುತ್ತದೆಯೇ ಎಂಬುದನ್ನು ಈ ಮುಂದಿನವುಗಳಿಂದ ನಿರ್ಧರಿಸಬಹುದು : ಮಗುವಿನ ತೃಪ್ತಿ, ತೂಕಮಾಡಿದಾಗ ಮಗುವಿನ ತೂಕ ಏರುವಿಕೆ ಸಮಾಧಾನಕರವಾಗಿರುತ್ತದೆ. ಸಾಕಾಗದಿದ್ದರೆ ಮಲಬದ್ಧತೆಯುಂಟಾಗುತ್ತದೆ. ಸಾಕಷ್ಟು ಬಾರಿ ಮಗು ಒಂದ ಮಾಡುತ್ತದೆ. ತಿಂಗಳಿಗೆ 300-400 ಗ್ರಾಂ ಹೆಚ್ಚಳ ತೂಕ ಆಗುತ್ತವೆ.

ತೊಟ್ಟಿನ ಸುತ್ತ ಇರುವ ಂsಛಿoಟಚಿ ಭಾಗದಲ್ಲಿ ಸಿದ್ಧಿಗೊಂಡ ಹಾಲು ಶೇಖರಣೆಯಾಗಿರುತ್ತವೆ. ಅದು ಮೊದಲು ಸುಲಭವಾಗಿ ಮಗುವಿನ ಬಾಯೊಳಗೆ ಹೋಗುತ್ತವೆ. ಮಗು ಚೀಪಲು ಆರಂಭಿಸಿದಾಗ ದುಗ್ಧನಾಳಗಳಲ್ಲಿ, ಗ್ರಂಥಿಗಳಲ್ಲಿ ಉತ್ಪತ್ತಿಯಾದ ಹಾಲನ್ನು ಎಳೆಯಲು ಸಮರ್ಥವಾಗುತ್ತದೆ. ತಾಯಿಗೂ ಅನಿವರ್ಚನೀಯ ಆನಂದ ಸಿಗುತ್ತದೆ. (ಪಿ.ಸಿ.ಬಿ.)