ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೊಸಳೆ 2

ವಿಕಿಸೋರ್ಸ್ದಿಂದ

ಮೊಸಳೆ 2 -

ಕ್ರಾಕೊಡಿಲಿಯ ಗಣ ಕ್ರಾಕೊಡೈಲಿಡಿ ಕುಟುಂಬದ ಕ್ರಾಕೊಡೈಲಸ್ ಜಾತಿಗೆ ಸೇರಿದ ಸುಮಾರು 11 ಬಗೆಯ ಜಲವಾಸಿ ಸರೀಸೃಪಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು (ಕ್ರಾಕೊಡೈಲ್). ಅಲಿಗೇಟರ್ (ಅಲಿಗೇಟೊರಿಡೀ) ಮತ್ತು ಘಾರಿಯಲ್ (ಗೇವಿಯಾಲಿಡೀ) ಮೊಸಳೆಗಳಿಗೆ ಬಲುಹತ್ತಿರದ ಸಂಬಂಧಿಗಳಿವು. ಇವುಗಳ ಪೈಕಿ ಪ್ರಧಾನವಾದವು ಇಂತಿವೆ : ಓರಿನೋಕೊ ಮೊಸಳೆ (ಕ್ರಾ. ಇಂಟರ್‍ಮೀಡಿಯಸ್-ದಕ್ಷಿಣ ಅಮೆರಿಕದ ಓರಿನೋಕೊ, ಅಮೆಜಾನ್ ನದಿಗಳು), ಅಮೆರಿಕದ ಮೊಸಳೆ (ಕ್ರಾ. ಅಕ್ಯೂಟಸ್-ಉತ್ತರ ಅಮೆರಿಕದ ಫ್ಲಾರಿಡ ಮತ್ತು ಮಧ್ಯಅಮೆರಿಕ ಹಾಗೂ ವಾಯುವ್ಯ ದಕ್ಷಿಣ ಅಮೆರಿಕ),

ಕ್ರಾಕೊಡೈಲಸ್ ಪ್ಯಾಲಸ್ಟ್ರಿಸ್ ಪ್ರಭೇದ

 ಮೋರ್‍ಲೆಟ್ ಮೊಸಳೆ (ಕ್ರಾ. ಮೋರ್‍ಲೆಟೈ-ಮೆಕ್ಸಿಕೊ, ಹಾಂಡುರಾಸ್, ಗ್ವಾಟೆಮಾಲ), ಆಸ್ಟ್ರೇಲಿಯದ ಮೊಸಳೆ (ಕ್ರಾ. ಜಾನ್‍ಸೋನೈ-ಆಸ್ಟ್ರೇಲಿಯ), ನ್ಯೂಗಿನಿ ಮೊಸಳೆ (ಕ್ರಾ. ನಿಲೋಟಿಕಸ್-ಆಫ್ರಿಕದ ಕೆಲವು ಪ್ರದೇಶಗಳು) ಭಾರತದ ಮೊಸಳೆ (ಕ್ರಾ. ಪ್ಯಾಲಸ್ಟ್ರಿಸ್-ಭಾರತ ಮತ್ತು ಶ್ರೀಲಂಕಾ) ಉಪ್ಪುನೀರಿನ ಮೊಸಳೆ (ಕ್ರಾ. ಪೋರೋಸಸ್-ಭಾರತವೂ ಸೇರಿದಂತೆ, ಫಿಲಿಪೀನ್ಸ್, ನ್ಯೂ ಹೆಬ್ರಿಡೀಸ್ ದ್ವೀಪಗಳ ಕರಾವಳಿ ಪ್ರದೇಶಗಳು).
    ಇವುಗಳ ಪೈಕಿ ಕೊನೆಯ ಪ್ರಭೇದವನ್ನು ಬಿಟ್ಟರೆ ಉಳಿದೆಲ್ಲ ಸಿಹಿನೀರಿನ ಮೊಸಳೆಗಳು ನದಿಗಳಲ್ಲಿ ವಾಸಿಸುತ್ತವೆ.
    ಭಾರತದ ಮೊಸಳೆ ಸುಮಾರು 4 ಮೀ ಉದ್ದದ ಪ್ರಾಣಿ.  ತೂಕ 200 ಕೆಜಿ ಅಥವಾ ಅದಕ್ಕೂ  ಹೆಚ್ಚು.  ದೇಹದ ಬಣ್ಣ ಹಸುರುಮಿಶ್ರಿತ ಕಪ್ಪು.  ಹೊಟ್ಟೆಯ ಭಾಗ ಹಳದಿ ಇಲ್ಲವೆ ಬಿಳಿಬಣ್ಣದ್ದು.  ಮೂತಿಯ ತುದಿ ಅಗಲವಾಗಿದೆ.  ಕತ್ತು ಮತ್ತು ತಲೆ ಸೇರುವೆಡೆಯಲ್ಲಿ ಮೇಲ್ಭಾಗದಲ್ಲಿ ಉಬ್ಬಿಕೊಂಡಂತಿರುವ 4 ಹುರುಪೆಗಳಿವೆ.  ಬೆನ್ನಿನ ಉದ್ದಕ್ಕೂ ಅಡ್ಡಡ್ಡಲಾಗಿ 16-17 ಉದ್ದುದ್ದವಾಗಿ 6 ಸಾಲುಗಳ ಎಲುಬಿನ ಫಲಕಗಳುಂಟು.  ಬಾಲದುದ್ದಕ್ಕೂ 2 ಸಾಲುಗಳಲ್ಲಿ ಚಪ್ಪಟೆಯಾದ ಹಾಗೂ ಎದ್ದುಕೊಂಡಿರುವಂತಹ ಹುರುಪೆಗಳಿವೆ.  ಕಾಲ್ಬೆರಳುಗಳು ಜಾಲದಿಂದ ಪರಸ್ಪರ ಕೂಡಿಕೊಂಡಿವೆ.  ಬಾಯಿಯಲ್ಲಿ ದವಡೆಯುದ್ದಕ್ಕೂ ಹಲ್ಲುಗಳಿವೆ.  ಕೆಳದವಡೆಯ ನಾಲ್ಕನೆಯ ಹಲ್ಲು ಮೇಲ್ದವಡೆಯ ಅಂಚಿನಲ್ಲಿರುವ ಒಂದು ಕುಳಿಯಲ್ಲಿ ಗುತ್ತವಾಗಿ ಅಳವಡಿಕೆಯಾಗುವಂತಿದ್ದು ಬಾಯಿ ಮುಚ್ಚಿದರೂ ಹಲ್ಲುಗಳು ಕಾಣುತ್ತವೆ.  ಜೀವಮಾನವಿಡೀ ಹಲ್ಲುಗಳು ಬಿದ್ದು ಹುಟ್ಟುತ್ತಿರುತ್ತವೆ.
   ಮೊಸಳೆಗಳಲ್ಲಿ ದೃಷ್ಟಿ, ಘ್ರಾಣ ಮತ್ತು ಶ್ರವಣೇಂದ್ರಿಯಗಳು ಚುರುಕಾಗಿವೆ.  ದೇಹದ ಉಳಿದ ಭಾಗ ನೀರಿನಲ್ಲಿ ಮುಳುಗಿದ್ದರೂ ಉಸಿರಾಟಕ್ಕೆ ತೊಂದರೆಯಾಗದಂತೆ ಮುಸುಡಿನ ತುದಿಯಲ್ಲಿರುವ ಉಬ್ಬಿನಲ್ಲಿ ಮೂಗಿನ ಹೊಳ್ಳೆಗಳು ಸ್ಥಿತವಾಗಿವೆ.  ಅಲ್ಲದೆ ಹೊಳ್ಳೆಗಳಿಗೂ ಕಿವಿಗಳಿಗೂ ಪಟಲದ ಹೊದಿಕೆಯಿದ್ದು ಮೊಸಳೆ ನೀರಿನಲ್ಲಿ ಮುಳುಗಿದರೂ ಒಳಕ್ಕೆ ನೀರು ಹೋಗದಂತೆ ತಡೆಯಾಗುತ್ತದೆ.  ಜೊತೆಗೆ ಹೊಳ್ಳೆಗಳಿಗೂ ಗಂಟಲಿಗೂ ಸಂಪರ್ಕ ಕಲ್ಪಿಸುವ ಉದ್ದನೆಯ ಕೊಳವೆಗಳೂ ಬಾಯಿಯಿಂದ  ಪ್ರತ್ಯೇಕಿಸುವಂತೆ ತಡೆಯೂ ಇದ್ದು ಬಾಯಿಯಲ್ಲಿ ಎರೆಯನ್ನು ಕಚ್ಚಿಕೊಂಡಿರುವಾಗ ಉಸಿರಾಟಕ್ಕೆ ಯಾವುದೇ ತೊಂದರೆಯಾಗದು.  ಮೊಸಳೆ ಬೇರೆ ಸರೀಸೃಪಗಳಂತೆ ನಾಲಗೆಯನ್ನು ಹೊರಚಾಚಲಾರದು.  ನಾಲಿಗೆಯ ಮೇಲೂ ಅಂಗುಳದ ಮೇಲೂ ಹಲವಾರು ಮಡಿಕೆಗಳಿದ್ದು ನೀರಿನೊಳಗೆ ಮುಳುಗಿ ಬಾಯಿ ತೆರೆದರೂ ನೀರು ಒಳಹೋಗದಂತೆ ತಡೆಯಲು ಅನುಕೂಲವಾಗಿದೆ.  ಕಣ್ಣುಗಳಲ್ಲಿ ಪಾರದರ್ಶಕವಾದ ಮೂರನೆಯ ರೆಪ್ಪೆಯುಂಟು.  ಇವೆಲ್ಲ ಲಕ್ಷಣಗಳಿಂದಾಗಿ ಮೊಸಳೆ ಜಲವಾಸಕ್ಕೆ ಚೆನ್ನಾಗಿ ಹೊಂದಿಕೊಂಡಿದೆ.
   ಗಂಟಲಲ್ಲಿ ಒಂದು ಜೊತೆ ಮತ್ತು ಗುದದ್ವಾರದ ಬಳಿ ಒಂದು ಜೊತೆ-ಹೀಗೆ ಒಟ್ಟು ಎರಡು ಜೊತೆ ವಾಸನಾಗ್ರಂಥಿಗಳಿವೆ.
   ಮೊಸಳೆಗಳು ಈಜುವುದರಲ್ಲಿ ಬಲು ನಿಸ್ಸೀಮ.  ಜಾಲಪಾದಗಳನ್ನು ಪಡೆದಿದ್ದರೂ ಈಜುವುದು ಬಾಲದ ಸಹಾಯದಿಂದ.  ನೆಲದ ಮೇಲೆ ತೆವಳಿಕೊಂಡೋ, ನಡೆದುಕೊಂಡೋ, ಚಲಿಸಬಲ್ಲದು.  ನಡೆಯುವುದು ಕೊಂಚ ವಿಚಿತ್ರ ; ದೇಹವನ್ನು ನೆಲದಿಂದ ಎತ್ತರವಾಗಿ ಎತ್ತಿಕೊಂಡು ನಡೆಯುತ್ತವೆ.  ಗಂಟೆಗೆ ಸು. 50ಕಿಮೀ ವೇಗದ ನಾಗಾಲೋಟವೂ ಉಂಟು.
   ಮೊಸಳೆಗಳು ವಾಸಿಸುವುದು ನೀರಿನಲ್ಲಿಯೇ ಆದರೂ ಹಗಲಿನಲ್ಲಿ ಯಾವುದಾದರೂ ಆಯಕಟ್ಟಿನ ಬಂಡೆಯ ಮೇಲೆ ಬಾಯಿತೆರೆದುಕೊಂಡು ನಿಶ್ಚಲವಾಗಿ ಮಲಗಿರುವುದು ಇವುಗಳ ಸ್ವಭಾವ.  ದೇಹದಲ್ಲಿ ಸ್ವೇದಗ್ರಂಥಿಗಳಿಲ್ಲದಿರುವುರಿಂದ ಮೈಯಿಂದ ನೀರು ಆವಿಯಾಗಲೂ ಸಹಾಯವಾಗಲೂ ತನ್ಮೂಲಕ ದೇಹದ ತಾಪವನ್ನು ಕಾಯ್ದುಕೊಳ್ಳಲೂ ಇದರಿಂದ ಅನುಕೂಲ.  ರಾತ್ರಿವೇಳೆ ಯಾವುದಾದರೂ ಆಯ್ಕೆಮಾಡಿದ ನೆರಳು ಇಲ್ಲವೆ ನದಿ ಅಂಚಿನ ಡೊಗರುಗಳಲ್ಲಿ ಅಡಗಿರುತ್ತವೆ.  ವಾಸದ ನೆಲೆಗಳು 60-80 ಸೆಂ.ಮೀ ಅಗಲದ ಪ್ರವೇಶದ್ವಾರವನ್ನೂ 2.5-4.5 ಮೀ ಉದ್ದದ ದಾರಿಯನ್ನೂ 8-10 ಮೀ ವ್ಯಾಸದ ಕೋಣೆಯನ್ನೂ ಒಳಗೊಂಡಿರುತ್ತವೆ.
   ಮೊಸಳೆ ಮಾಂಸಹಾರಿ :  ನೀರಿನಲ್ಲಿ ಸಿಕ್ಕುವ ಮೀನು ಪ್ರಧಾನ ಆಹಾರವಾದರೂ ನೀರಿಗೆಂದು ಬರುವ ಯಾವುದೇ ನೆಲವಾಸಿ ಪ್ರಾಣಿಗಳನ್ನೂ ಬೇಟೆಯಾಡುವುದು ಉಂಟು.  ಉದಾಹರಣೆಗೆ : ಕೋತಿ, ನಾಯಿ, ಆಡು, ದನಕರು, ಜಿಂಕೆ, ಕಡವೆ, ಕತ್ತೆಕಿರುಬ, ಕಾಡುನಾಯಿ, ಹಂದಿ, ಬಾತು ಇತ್ಯಾದಿ.  ಅಪರೂಪಕ್ಕೆ ಮನುಷ್ಯ ಕೂಡ ಇವುಗಳ ಬಾಯಿಗೆ ಬೀಳುವುದುಂಟು.  ಇನ್ನಿತರ ಹಿಂಸ್ರಪ್ರಾಣಿಗಳಂತೆ ಮೊಸಳೆಗೆ ಬೇಟೆಯನ್ನು ಸಿಗಿದು ತಿನ್ನುವುದಕ್ಕಾಗಲಿ, ಅಗಿಯುವುದಕ್ಕಾಗಲಿ ಆಗದು.  ಸಿಕ್ಕ ಸೆರೆಯನ್ನು ಬಲವಾಗಿ ಹಿಡಿದು, ನೀರಿನಲ್ಲಿ ಮುಳುಗಿಸಿ ಸಾಯಿಸಿ ನೀರಿನ ಅಡಿಯಲ್ಲಿರಬಹುದಾದ ಬಂಡೆಸಂದುಗಳಲ್ಲಿ ಸಿಕ್ಕಿಸಿ ಇಟ್ಟು ಅದು ಕೊಳೆತ ತರುವಾಯ ಬಿಡಿಸಿಬಿಡಿಸಿ ತಿನ್ನುತ್ತದೆ.
    ಇವು ಸಾಮಾನ್ಯವಾಗಿ ಯಾವ ತೆರನ ಸದ್ದನ್ನೂ ಮಾಡುವುದಿಲ್ಲ.  ಆದರೆ ಶತ್ರುವಿಗೆ ಎದುರಾದಾಗ ಬುಸುಗುಟ್ಟುತ್ತವೆ.  ಕೆಲವೊಮ್ಮೆ ಆಕಳುಗಳ ಕೂಗಿನಂತೆ  ಸದ್ದು ಮಾಡುವುದುಂಟು.
    ಸಂತಾನವೃದ್ದಿಯ ಶ್ರಾಯ ಜನವರಿಯಿಂದ ಮಾರ್ಚ್.  ಗಂಡು ಹೆಣ್ಣುಗಳ ಕೂಡುವಿಕೆ ನೀರಿನಲ್ಲಿ ನಡೆಯುತ್ತದೆ.  ಗರ್ಭಧರಿಸಿದ ಹೆಣ್ಣು ಮರಳಿನಲ್ಲೋ, ನದಿ ಕೆರೆಗಳ ದಂಡೆಯ ನೆಲದಲ್ಲೊ, ನೀರಿನಿಂದ 2-500 ಮೀ ದೂರದಲ್ಲಿ ಗೂಡು ರಚಿಸಿ 10-40 ಮೊಟ್ಟೆಗಳನ್ನಿಡುತ್ತದೆ.  ಮೊಟ್ಟೆಗಳಿಗೆ ಕಾವುಕೊಡುವ ಪರಿಪಾಠ ಇಲ್ಲವಾದರೂ, ಹೆಣ್ಣು ಗೂಡಿಗೆ ಆದಷ್ಟು ಹತ್ತಿರದಲ್ಲೇ ಕಾವಲು ಕಾಯುತ್ತಿದ್ದು ವೈರಿಗಳಿಂದ ರಕ್ಷಿಸಿ, ಮೊಟ್ಟೆಯೊಡೆದು ಮರಿಗಳು ಹೊರಬರಲು ಸಹಾಯ ಮಾಡುತ್ತದೆ.  ಮೊಟ್ಟೆಗಳು ಬಿಳಿಬಣ್ಣದವು.  ಮೊಟ್ಟೆಗಳು ಮರಿಯಾಗಿ ಹೊರಬರಲು ಹಿಡಿಯುವ ಅವಧಿ ಹೊರಗಿನ ಉಷ್ಣತೆಯನ್ನು ಅನುಸರಿಸಿ 2-3 ತಿಂಗಳು ಆಗುತ್ತದೆ.
   ಮರಿಗಳ ಬೆಳೆವಣಿಗೆ ಶೀಘ್ರಗತಿಯದು.  ತಿಂಗಳಿಗೆ 6 ಸೆಂ.ಮೀ ದರದಲ್ಲಿ ಮರಿಗಳು ಬೆಳೆಯುವುವು.
   ಭಾರತದಲ್ಲಿ ಸಿಕ್ಕುವ ಇನ್ನೆರಡು ಬಗೆಯ ಮೊಸಳೆಗಳೆಂದರೆ ಕಡಲ ನೀರಿನ ಮೊಸಳೆ (ಕ್ರಾ. ಪ್ರೋರೋಸಸ್) ಮತ್ತು ಘಾರಿಯಲ್ (ಗೇವಿಯಾಲಿಸ್ ಗ್ಯಾಂಜೆಟಿಕಸ್).  ಇವುಗಳಲ್ಲಿ ಮೊದಲನೆಯದು ನೋಡಲು ಹೆಚ್ಚುಕಡಿಮೆ ಪ್ಯಾಲಸ್ಟ್ರಿಸ್ ಪ್ರಭೇದದಂತೆಯೇ ಇದೆ.  ಇದು ಭಾರತದ ಕೇರಳದಿಂದ ತೊಡಗಿ ಪಶ್ಚಿಮ ಬಂಗಾಲದ ವರೆಗೆ ಕರಾವಳಿಯುದ್ದಕ್ಕೂ ಅಳಿವೆ, ಮ್ಯಾಂಗ್ರೋವ್ ಕಾಡುಗಳಲ್ಲೂ ಕೆಲವು ಕರಾವಳಿಯ ಉಷ್ಣನೀರಿನ ಸರೋವರಗಳಲ್ಲೂ ಕಾಣದೊರೆಯುತ್ತದೆ.  ಅಂಡಮಾನ್, ನಿಕೋಬಾರ್ ದ್ವೀಪಸಮೂಹಗಳಲ್ಲೂ ಉಂಟು.  
    ಘಾರಿಯಲ್ ಮೊಸಳೆ ಸಿಂಧೂ, ಗಂಗಾ, ಬ್ರಹ್ಮಪುತ್ರ, ಮಹಾನದಿಗಳಲ್ಲೂ ಚಂಚಲ್, ಗಿರ್ವ, ರಪ್ತಿ, ನಾರಾಯಣಿ ಹೊಳೆಗಳಲ್ಲೂ ಸಿಕ್ಕುತ್ತದೆ.  ಇದರ ಮೂತಿ ಉದ್ದವೂ ಕಿರಿಯಗಲದ್ದೂ ಆಗಿದ್ದು ಗಂಡಿನಲ್ಲಿ ಮುಸುಡಿಯ ತುದಿಯಲ್ಲಿ ಚೆಂಡಿನಗಾತ್ರದ ಗಂಟನ್ನು ಪಡೆದಿದೆ.  ಈ ಲಕ್ಷಣದಿಂದ ಇದನ್ನು ಉಳಿದ ಮೊಸಳೆಗಳಿಂದ ಬೇರೆಯಾಗಿ ಗುರುತಿಸಬಹುದು.
    ಮೊಸಳೆ ಚರ್ಮಕ್ಕೆ ಹೆಚ್ಚು ಬೇಡಿಕೆಯೂ ಬೆಲೆಯೂ ಇರುವುದರಿಂದ ಇದನ್ನು ಬೇಟೆಯಾಡಲಾಗುತ್ತದೆ.  ಇದರಿಂದಾಗಿ ಇವುಗಳ ಸಂಖ್ಯೆ ಗಣನೀಯವಾಗಿ ಇಳಿದು ಹೋಗಿ ಮೊಸಳೆ ಸಂತತಿ ಅಪಾಯದ ಅಂಚಿನಲ್ಲಿ ಇರುವಂತಾಗಿದೆ.  ಇತ್ತೀಚಿನ ದಿನಗಳಲ್ಲಿ ಮೊಸಳೆ ಸಂತತಿಗೆ ಕಾನೂನಿನ ರಕ್ಷಣೆ ದೊರೆತಿದೆ.
    ಪ್ರಪಂಚದಾದ್ಯಂತ ಮೊಸಳೆಗಳ ಬಗ್ಗೆ ಮಾನವನ ಭಾವನೆ ಭಯ, ಅಸಹ್ಯಗಳಿಂದ ಹಿಡಿದು ಧಾರ್ಮಿಕ ಎಂಬುದರವರೆಗೆ ವ್ಯತ್ಯಾಸವಾಗುತ್ತದೆ.  ಪಾಕಿಸ್ತಾನದ ಕರಾಚಿಯಲ್ಲಿ ಮೊಸಳೆಗಳಿಗೆಂದೇ ಮೀಸಲಾದ ಕೊಳವೊಂದಿದ್ದು ಇದರಲ್ಲಿ ವಾಸವಾಗಿರುವ ಮೊಸಳೆಗಳನ್ನು ಪೂಜ್ಯವೆಂದು ಗಣಿಸಲಾಗಿದೆ.  ಪ್ರಾಚೀನ ಈಜಿಪ್ಟಿನಲ್ಲಿ ನದೀದೇವತೆಯನ್ನು ಪ್ರಸನ್ನಗೊಳಿಸಲು ಮೊಸಳೆಗಳಿರುವ ನದಿಗೆ ನರಬಲಿ ಕೊಡುವ ಪದ್ಧತಿ ಇತ್ತು.  ಆಫ್ರಿಕದ ವಿಕ್ಟೋರಿಯ ಸರೋವರದ ಕೆಲವು ದ್ವೀಪಗಳಲ್ಲಿನ ಜನ ಮೊಸಳೆಯನ್ನು ಅವರ ದೇವರ ಪ್ರಧಾನ ಅರ್ಚಕ  ಎಂದು ಭಾವಿಸಿದ್ದರು.  ಮನುಷ್ಯರನ್ನು ಕತ್ತರಿಸಿ ಎಸೆದು ಬಲಿ ನೀಡುತ್ತಿದ್ದರು.  ಭಾರತದಲ್ಲಿ ಮೊಸಳೆ ನೈಋತ್ಯದಿಕ್ಕಿನ ಅಧಿಪತಿಯಾದ ನಿರುತಿಯ ಹಾಗೂ ಗಂಗೆಯ ವಾಹನವೆಂದು ಪರಿಗಣಿತವಾಗಿದೆ.				   

(ಬಿ.ಟಿಎಚ್.)