ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೋದಿ, ಎಂ ಸಿ

ವಿಕಿಸೋರ್ಸ್ದಿಂದ

ಮೋದಿ, ಎಂ ಸಿ ಮೋದಿ ಎಂ.ಸಿ. 1916 - 2005. ಪ್ರಸಿದ್ಧ ನೇತ್ರ ವೈದ್ಯರು. ಮುರಿಗೆಪ್ಪ ಚನ್ನವೀರಪ್ಪ ಮೋದಿ ಇವರ ಪೂರ್ಣ ಹೆಸರು. ತಂದೆ ಚನ್ನವೀರಪ್ಪ, ತಾಯಿ ದುಂಡಮ್ಮ. ಜನನ ಬಿಜಾಪುರ ಜಿಲ್ಲೆಯ ಬೀಳಗಿಯಲ್ಲಿ 1916 ಅಕ್ಟೋಬರ್ 4ರಂದು. ಪಿ.ಬಿ. ಪ್ರೌಢಶಾಲೆ, ಬೆಳಗಾವಿಯ ಕರ್ನಾಟಕ ಆಯುರ್ವೇದ ಕಾಲೇಜು ಮತ್ತು ಕೆ.ಬಿ.ಎಚ್.ಬಿ. ಕಣ್ಣಿನ ಆಸ್ಪತ್ರೆ ಮತ್ತು ರಾಮವಾಡಿಯ ಕಣ್ಣಿನ ಆಸ್ಪತ್ರೆಯಲ್ಲಿ ತಮ್ಮ ಪ್ರಥಮ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿದರು. 1935ರಲ್ಲಿ ಮೋದಿಯವರು ಬೆಳಗಾವಿಯ ಕರ್ನಾಟಕ ಆಯುರ್ವೇದ ಕಾಲೇಜಿನಲ್ಲಿ ಐದು ವರ್ಷಗಳ ವೈದ್ಯಕೀಯ ಅಧ್ಯಯನ ಮಾಡಿ ಎಲ್.ಐ.ಎಂ. (ಲೈಸೆನ್ಸಿಯೇಟ್ ಇನ್ ಇಂಟೆಗ್ರೇಟೆಡ್ ಮೆಡಿಸಿನ್) ಪದವಿಯನ್ನು ಪಡೆದ ನಂತರ ಮುಂಬೈನ ಖಾನ್ ಬಹದ್ದೂರ್ ಹಜೀಬ್ ಬಚೌಲಿ ಆಸ್ಪತ್ರೆಯಲ್ಲಿ ಅಧ್ಯಯನ ಮಾಡಿದರು. ಆ ಸಂದರ್ಭದಲ್ಲಿ ಭಾರತದಲ್ಲಿ ದೃಷ್ಟಿದೋಷದ ಸಮಸ್ಯೆ ಇರುವವರು ಚಿಕಿತ್ಸೆಗಾಗಿ ಮುಂಬೈಗೆ ಬರುವಲ್ಲಿ ತಮ್ಮ ಅಡವು ಆಸ್ತಿಗಳನ್ನು ಮಾರಬೇಕಾಗಿ ಬರುತ್ತಿದ್ದ ಪ್ರಸಂಗಗಳನ್ನೂ ಅಂತಹವರ ಬಡತನದ ಪರಿಸ್ಥಿತಿಯನ್ನೂ ಕಣ್ಣಾರೆ ಕಂಡರು. `ಅಂಧರು ನನ್ನ ಬಳಿಗೆ ಬರಲು ಶಕ್ತರಲ್ಲ. ನಾನೇ ಅವರ ಬಳಿಗೆ ಹೋಗಬಾರದೇಕೆ?' ಎಂದು ಅವರಿಗೆ ಈ ಅವಧಿಯಲ್ಲಿ ಅನ್ನಿಸಿತು. ಆಗಿನ ಕಾಲಕ್ಕೆ ಖ್ಯಾತ ನೇತ್ರ ವೈದ್ಯರೆಂದು ಹೆಸರು ಪಡೆದ ಮೋದಿಯವರ ಪ್ರೊಫೆಸರ್ ಆಗಿದ್ದ ಡಾ. ಡಿ.ಎಸ್. ಸರ್‍ದೇಸಾಯ್ ಅವರು ಪಾಟ್ನಾ ಮತ್ತು ಗುಜರಾತಿನಲ್ಲಿ ಹಮ್ಮಿಕೊಂಡಿದ್ದ ನೇತ್ರ ಚಿಕಿತ್ಸೆಯ ಶಿಬಿರದಲ್ಲಿ ಭಾಗವಹಿಸಲು ಮೋದಿಯವರನ್ನು ಆಹ್ವಾನಿಸಿದರು. ಗುರುವಿನ ಜೊತೆ ಕೈಜೋಡಿಸಿ ಸ್ವತಂತ್ರವಾಗಿ ಮೋದಿಯವರು 20 ಮಂದಿಯ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಅಲ್ಲಿ ಕೈಗೊಂಡರು. ಗ್ರಾಮೀಣ ಜನತೆಗೆ ಸೇವೆ ಮಾಡಲು ಅವರಿಗೆ ಇದು ಮತ್ತಷ್ಟು ಪ್ರೇರಕ ಶಕ್ತಿಯನ್ನು ಕೊಟ್ಟಿತು. ಇದರ ಹಿಂದೆಯೇ ಧಾರವಾಡ ಜಿಲ್ಲೆಯ ನರಗಲ್ ಹಳ್ಳಿಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಯ ಶಿಬಿರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸ್ಥಳೀಯರಿಗೆ ಆಗ ಶಸ್ತ್ರ ಚಿಕಿತ್ಸೆಗೆ ತಮ್ಮನ್ನು ಒಡ್ಡಿಕೊಳ್ಳಲು ಇನ್ನೂ ಅಳುಕಿತ್ತು. ಇದನ್ನು ಮನಗಂಡ ಮೋದಿಯವರು ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ರೋಗಿಗಳನ್ನುದ್ದೇಶಿಸಿ ಅದು ಅಪಾಯಕಾರಿಯಲ್ಲ ಎಂದು ಮನವರಿಕೆ ಮಾಡಿಕೊಡಲು ದೀರ್ಘ ಪ್ರವಚನವನ್ನೇ ನೀಡಿದರು. ಇದರಿಂದ ಪ್ರೇರಿತರಾಗಿ ಕಣ್ಣಿನ ರೋಗಿಗಳು ಶಸ್ತ್ರ ಚಿಕಿತ್ಸೆಗೆ ಮುಂದಾದರು. ಮುಂದಿನ ಎರಡೇ ಗಂಟೆಯಲ್ಲಿ 20 ಮಂದಿ ಯಶಸ್ವಿಯಾಗಿ ಚಿಕಿತ್ಸೆ ಮಾಡಿಸಿಕೊಂಡರು. ಮೋದಿಯವರು ಅಮೆರಿಕದ ಕೊಲಂಬಿಯ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿ ಮುಂಬೈಯಲ್ಲಿ 1942ರಲ್ಲಿ ಖಾಸಗೀ ವೈದ್ಯವೃತ್ತಿಯನ್ನು ಆರಂಭಿಸಿದರು. ಭಾರತದಲ್ಲಿ ವ್ಯಾಪಕವಾಗಿ ಕಾಡುವ ಅಂಧತ್ವದ ನಿವಾರಣೆ ಇವರ ಬದುಕಿನ ಗುರಿಯಾಯಿತು. ಮಹಾತ್ಮ ಗಾಂಧಿಯವರ ಅರ್ಪಣಾಭಾವ, ಜನಸೇವೆ, ಪ್ರಭಾವಿ ಭಾಷಣ ಇವರ ಮೇಲೆ ಹೆಚ್ಚು ಪರಿಣಾಮಬೀರಿತು. ಸಮಾಜದ ಒಳಿತಿಗಾಗಿ ದುಡಿಯಲು ತಮ್ಮನ್ನು ತಾವು ಅರ್ಪಿಸಿಕೊಂಡರು. ವೈಯಕ್ತಿಕ ಸುಖ ಸಂತೋಷ ತ್ಯಜಿಸಿ, ತಮ್ಮ ಪ್ರತಿಭೆ ಮತ್ತು ಪರಿಣತಿಯನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಕಣ್ಣಿಲ್ಲದವರಿಗೆ ಮೋದಿ ಬೆಳಕಾದರು.

ವೈದ್ಯಕೀಯ ವೃತ್ತಿಯಲ್ಲಿ ಮೋದಿಯವರ ಸಾಧನೆ ಅನುಪಮ ಮತ್ತು ಅದ್ವಿತೀಯ. ಭಾರತದ ಬಹುತೇಕ ಪ್ರದೇಶದಲ್ಲಿ ಸಂಚರಿಸಿ, ದೃಷ್ಟಿಹೀನರಿಗೆ ದೃಷ್ಟಿ ಕೊಟ್ಟ ಖ್ಯಾತಿ ಇವರದು. ಸಂಚಾರಿ ನೇತ್ರ ಚಿಕಿತ್ಸಾಲಯವನ್ನು ಸ್ಥಾಪಿಸಿದ ಮೊದಲ ವ್ಯಕ್ತಿ. ಈಗ ಇದು ಬೃಹತ್ತಾಗಿ ಬೆಳೆದಿದೆ. ಸಾಮೂಹಿಕ, ಉಚಿತ ನೇತ್ರ ಚಿಕಿತ್ಸೆಯನ್ನು ಪ್ರಾರಂಭಿಸಿದವರಲ್ಲಿ ಇವರೇ ಮೊದಲಿಗರು. ಅಂಧತ್ವ ನಿವಾರಣೆಗೆ ಇವರು ಹಮ್ಮಿಕೊಂಡ ಆಂದೋಲನದಲ್ಲಿ 1993ರವರೆಗೆ 6,10,564 ಜನರ ಕಣ್ಣುಗಳ ಶಸ್ತ್ರ ಚಿಕಿತ್ಸೆಯನ್ನೂ, 1,21,18,630ಕ್ಕೂ ಹೆಚ್ಚಿನ ರೋಗಿಗಳ ಕಣ್ಣು ತಪಾಸಣೆಯನ್ನು ಇವರು ಮಾಡಿದ್ದಾರೆ. ಒಂದೇ ದಿನದಲ್ಲಿ ತಿರುಪತಿಯಲ್ಲಿ 833 ಮಂದಿಗೆ ಮೋತಿಬಿಂದು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿ ಗಿನ್ನೆಸ್ ದಾಖಲೆ ಸ್ಥಾಪಿಸಿದ್ದಾರೆ. ಈ ಹಿಂದೆ ಇಂಥ ದಾಖಲೆ ಕೆನಡದ ಆಂಟೇರಿಯೋದ ವೈದ್ಯ ಡಾ. ರಾಬರ್ಟ್ ಮ್ಯಾಕ್ಲ್ಯೂರ್ ಅವರ ಹೆಸರಿನಲ್ಲಿತ್ತು. ಈ ವೈದ್ಯ (1924-78) 20,424 ಶಸ್ತ್ರ ಚಿಕಿತ್ಸೆ ಮಾಡಿ ದಾಖಲೆ ಸ್ಥಾಪಿಸಿದ್ದ. ಡಾ. ಮೋದಿಯವರು ತಮ್ಮ ಜೀವಿತಾವಧಿಯಲ್ಲಿ ಕಣ್ಣಿನ ರೋಗಿಗಳನ್ನು ತಪಾಸಣೆ ಮಾಡಲು 46,120 ಹಳ್ಳಿಗಳನ್ನು ಸಂದರ್ಶಿಸಿದ್ದರು.

ತಮ್ಮ ಸುತ್ತ ತ್ಯಾಗಜೀವಿಗಳ ದೊಡ್ಡ ಗುಂಪನ್ನೇ ಬೆಳೆಸಿ, ಮಾನವೀಯ ಸೇವೆಗೆ ನಿಂತ ಮಹಾನ್ ವ್ಯಕ್ತಿ ಇವರು. ಇಂಥವರು ಕೂಡ ತಮ್ಮ ಬದುಕಿನಲ್ಲಿ ಕೆಲವೊಂದು ಕಹಿ ಪ್ರಸಂಗಗಳನ್ನು ಎದುರಿಸಬೇಕಾಯಿತು. ಆಧುನಿಕ ಶಸ್ತ್ರ ಚಿಕಿತ್ಸಾ ವೈದ್ಯರು, ಡಾ. ಮೋದಿಯವರು ಕಳಪೆ ಪರಿಸರದಲ್ಲಿ ಶಸ್ತ್ರ ಕ್ರಿಯೆಯನ್ನು ನಡೆಸುತ್ತಾರೆಂದು ದೂರಿದ್ದರು. ಜೊತೆಗೆ ಮೋದಿಯವರ ವೈದ್ಯಕೀಯ ಹಿನ್ನೆಲೆ ಕೇವಲ ಎಲ್.ಐ.ಎಮ್. ಎಂದೂ ಇತರ ವೈದ್ಯರಿಗಿರುವಂತೆ ಎಲ್.ಸಿ.ಪಿ.ಎಸ್.(ಲೈಸೆನ್ಸಿಯೇಟ್ ಆಫ್ ದಿ ಕಾಲೇಜ್ ಆಫ್ ಫಿಸಿಷಿಯನ್ಸ್ ಅಂಡ್ ಸರ್ಜನ್ಸ್) ಅಲ್ಲವೆಂದೂ ಅವರು ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲು ಅರ್ಹರಲ್ಲವೆಂದೂ ಆರೋಪಿಸಿದ್ದರು. ಕರ್ನಾಟಕ ಸರ್ಕಾರ ಇಂಥ ಆರೋಪಗಳನ್ನು ಸ್ವೀಕರಿಸಲು ಸಿದ್ಧವಿರಲಿಲ್ಲ. ಕಣ್ಣಿನ ಶಸ್ತ್ರ ಚಿಕಿತ್ಸೆಯ ಯಾವುದೇ ಪರಿಣತರಿಗಿಂತ ಇವರು ತ್ವರಿತವಾಗಿ ಚಿಕಿತ್ಸೆ ನಡೆಸುತ್ತಾರೆಂಬುದನ್ನೂ ಒಪ್ಪಿಕೊಂಡಿತು. ಮೋದಿಯವರ ವೃತ್ತಿಪರ ವೈಶಿಷ್ಟ್ಯವೆಂದರೆ ಮೋತಿಬಿಂದು ಶಸ್ತ್ರ ಚಿಕಿತ್ಸೆಗೆ ಇವರು ತೆಗೆದುಕೊಳ್ಳುತ್ತಿದ್ದ ಸಮಯ ಕೇವಲ 14 ಸೆಕೆಂಡುಗಳು ಅಷ್ಟೇ.

ಬಾಳಿನಂಚಿನಲ್ಲಿ ಡಾ. ಮೋದಿಯವರು ದಯಾಮರಣದ ಬಗ್ಗೆ ಪ್ರತಿಪಾದಿಸುತ್ತಿದ್ದರು. ತೀವ್ರ ಬೇನೆಯಿಂದ ನರಳುತ್ತಿರುವ, ಬದುಕುಳಿಯುವ ಸಾಧ್ಯತೆ ಇಲ್ಲದಿರುವ ರೋಗಿಗಳಿಗೆ ಸಾವಿನ ಹಕ್ಕೂ ಇರಬೇಕೆಂದು ಅವರು ಬಲವಾಗಿ ನಂಬಿದ್ದರು. ಆ ಕುರಿತು ಕರಪತ್ರಗಳನ್ನೂ ಕಿರು ಪುಸ್ತಕಗಳನ್ನೂ ರಚಿಸಿದ್ದರು. ಜೊತೆಗೆ ಸರ್ಕಾರದ ಮೇಲೆ ಒತ್ತಡವನ್ನೂ ಹಾಕಿದ್ದರು. 1990ರ ದಶಕದಲ್ಲಿ ಡಾ. ಮೋದಿಯವರನ್ನು ಕರ್ನಾಟಕ ಸರ್ಕಾರ ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಆರಿಸಿತ್ತು.

ಡಾ. ಮೋದಿ ಸಾವಿನಲ್ಲೂ ಸಾರ್ಥಕತೆ ಪಡೆದವರು. ಅವರ ನಿಧನಾನಂತರ (11.11.2005) ಅವರ ಎರಡೂ ಕಣ್ಣಗಳನ್ನು ಅವರ ಕುಟುಂಬದವರು ಅಂಧರಿಗೆ ದಾನ ಮಾಡಿದರು. `ಕಣ್ಣುಕೊಟ್ಟ ಅಣ್ಣ ಎಂಬ ಬಿರುದು ಈ ದೃಷ್ಟಿಯಿಂದಲೂ ಸಾರ್ಥಕವಾಯಿತು. ಈಗ ಅವರ ಸಾಮಾಜಿಕ ಕಳಕಳಿಯನ್ನು ಅವರ ಪುತ್ರ ಡಾ. ಅಮರನಾಥ ಮೋದಿ ಮತ್ತು ಸೊಸೆ ಡಾ. ಸುವರ್ಣ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ 1980ರಲ್ಲಿ ಮೋದಿಯವರೇ ಸ್ಥಾಪಿಸಿದ ಡಾ. ಮೋದಿ ಕಣ್ಣಿನ ಆಸ್ಪತ್ರೆ ಸುಸಜ್ಜಿತ ಸಲಕರಣೆಗಳಿಂದ ಅತ್ಯಾಧುನಿಕ ಕಣ್ಣಿನ ಆಸ್ಪತ್ರೆಯಾಗಿ ಬೆಳೆದಿದೆ. ಮೋದಿಯವರು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಬಡವರ ಬಗೆಗಿನ ಅನುಕಂಪ ಇವರಲ್ಲೂ ನೆಲೆಗೊಂಡು ಅಂಧರಿಗೆ ಈ ಸಂಸ್ಥೆ ಸದಾ ಮಿಡಿಯುತ್ತಿದೆ. ಮಧುಮೇಹಿಗಳಿಗೆ ಉಚಿತ ಕಣ್ಣಿನ ತಪಾಸಣೆಯನ್ನು ಈ ಸಂಸ್ಥೆ ಹಮ್ಮಿಕೊಂಡು ಪ್ರಶಂಸೆಗೆ ಪಾತ್ರವಾಗಿದೆ. ಭಾರತ ಸರ್ಕಾರ ಇವರ ಸಮಾಜಸೇವೆಯನ್ನು ಗುರುತಿಸಿ `ಪದ್ಮಶ್ರೀ` ಪ್ರಶಸ್ತಿಯನ್ನೂ (1956) ಮತ್ತು `ಪದ್ಮಭೂಷಣ` ಪ್ರಶಸ್ತಿಯನ್ನೂ (1968) ನೀಡಿ ಗೌರವಿಸಿತು. ಮೈಸೂರು, ಕರ್ನಾಟಕ, ಮತ್ತು ಪೂನಾ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟೊರೇಟ್ ಪ್ರಶಸ್ತಿ ನೀಡಿದವು. ಮೋದಿಯವರ ಅನುಪಮ ಸೇವೆಯನ್ನು ಅಮೆರಿಕ, ರಷ್ಯ ಮುಂತಾದ ದೇಶಗಳು ಗೌರವಿಸಿದುವು. ಕರ್ನಾಟಕ ಸರ್ಕಾರ ಮೋದಿಯವರ ಬದುಕು, ಸಾಧನೆ ಕುರಿತಂತೆ ಒಂದು ಸಾಕ್ಷ್ಯ ಚಿತ್ರವನ್ನೂ ತಯಾರಿಸಿದೆ. (ಪರಿಷ್ಕರಣೆ: ಟಿ.ಆರ್.ಅನಂತರಾಮು)