ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೋವ

ವಿಕಿಸೋರ್ಸ್ದಿಂದ

ಮೋವ - ನ್ಯೂಜಿಲೆಂಡಿನಲ್ಲಿ ವಾಸಿಸುತ್ತಿದ್ದು ಸುಮಾರು 600 ವರ್ಷಗಳ ಹಿಂದೆ ಗತವಂಶಿಯಾದ ಹಾರಲಾರದ ಹಕ್ಕಿ. ಇದನ್ನು ಪೇಲಿಯೊಗ್ನಾತೀ ಅಥವಾ ರಟೈಟೀ ಗುಂಪಿನ ಡೈನಾರ್ನಿತಿ ಫಾರ್ಮಿಸ್ ಗಣದ ಡೈನಾರ್ನಿತಿಡೀ ಕುಟುಂಬಕ್ಕೆ ಸೇರಿಸಲಾಗಿದೆ. ಇದರಲ್ಲಿ ಸುಮಾರು 22 ಪ್ರಭೇದಗಳಿದ್ದುವೆನ್ನಲಾಗಿದ್ದು ಎಲ್ಲವೂ ಅಳಿದುಳಿದ ಮೂಳೆ ಇಲ್ಲವೆ ಗರಿಗಳ ರೂಪದಲ್ಲಿ ಮಾತ್ರ ಪತ್ತೆಯಾಗಿವೆ. ಹಾರಲಾರದ ಪಕ್ಷಿಗಳಲ್ಲಿ ಇವು ಅತಿ ದೊಡ್ಡ ಗಾತ್ರವಾಗಿದ್ದವು. ಇವುಗಳ ಪೈಕಿ ಡೈನಾರ್ನಿಸ್ ಮ್ಯಾಕ್ಸಿಮಸ್ ಎಂಬ ಬಗೆಯದು ಸುಮಾರು 4 ಮೀ. ಎತ್ತರವಾಗಿತ್ತೆಂದೂ ಕಿರಿ ಗಾತ್ರದ್ದೆನಿಸಿದ್ದು ಇಂದಿನ ಟರ್ಕಿಕೋಳಿಯ ಗಾತ್ರದಾಗಿತ್ತೆಂದೂ ಹೇಳಲಾಗಿದೆ.


ಇವುಗಳಲ್ಲಿ ರೆಕ್ಕೆಗಳೇ ಇರಲಿಲ್ಲ. ಸ್ಟರ್ನಮ್, ಕೊರಕಾಯಿಡ್, ಸ್ಕ್ಯಾಪುಲ ಮತ್ತು ರೆಕ್ಕೆಯ ಮೂಳೆಗಳು ಚಿಕ್ಕವಾಗಿದ್ದವು. ಇಲ್ಲವೆ ಸಂಪೂರ್ಣವಾಗಿ ನಶಿಸಿ ಹೋಗಿದ್ದವು. ಕ್ಲಾನಿಕಲ್ ಮತ್ತು ಪೈಗೋಸ್ಟೈಲ್‍ಗಳ ಕೊರತೆ ಇತ್ತು. ಇವುಗಳ ಮೊಟ್ಟೆಗಳು ಸುಮಾರು 22 ಸೆಂಮೀ ಅಗಲ ಮತ್ತು 30 ಸೆಂಮೀ ಉದ್ದ ಇದ್ದವು. ಮೋವಗಳ ನಾಶಕ್ಕೆ ಖಚಿತ ಕಾರಣ ಗೊತ್ತಿಲ್ಲವಾದರೂ ನ್ಯೂಜಿûೀಲೆಂಡಿಗೆ ಮಾವೋರಿ ಜನಗಳು ವಲಸೆ ಬಂದ ಮೇಲೆ ಬಹುಶಃ ಅವರ ಬೇಟೆಗೆ ತುತ್ತಾಗಿ ನಶಿಸಿಹೋಗಿರಬೇಕು. ಈ ಬಗ್ಗೆ ಸಾಕಷ್ಟು ದಾಖಲೆಗಳಿವೆ. (ವಿ.ಕೆ.ವಿ.) (ಪರಿಷ್ಕರಣೆ : ಕೆ ಎಸ್ ನವೀನ್)