ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮ್ಯಾಕ್ಮಿಲನ್, ಎಡ್ವಿನ್ ಮ್ಯಾಟಿಸನ್

ವಿಕಿಸೋರ್ಸ್ದಿಂದ

ಮ್ಯಾಕ್‍ಮಿಲನ್, ಎಡ್ವಿನ್ ಮ್ಯಾಟಿಸನ್ 1907- . ಯುರೇನಿಯಮ್ ಅತೀತ ಪರಮಾಣು ಸಂಖ್ಯೆ ಇದ್ದು ಅವರ್ತಕೋಷ್ಟಕದಲ್ಲಿ ಯುರೇನಿಯಮ್ ಆದ ಮೇಲೆ ಕಾಣಿಸಿಕೊಳ್ಳವ ಧಾತುಗಳ ಸಂಶೋಧನೆ ಮತ್ತು ಅಭ್ಯಾಸಕ್ಕೋಸ್ಕರ 1951ರಲ್ಲಿ ಗ್ಲೆನ್ ಟಿ, ಸೀಬೋರ್ಗ್ ಜೊತೆ ರಸಾಯನವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಕ ಪಡೆದ ವಿಜ್ಞಾನಿ. ನೆಪ್ಚೂನಿಯಮ್ (ಪರಮಾಣು ಸಂಖ್ಯೆ 93) ಮತ್ತು ಪ್ಲೊಟೋನಿಯಮ್ (94) ಧಾತುಗಳ ಸಂಶೋಧನೆಯಲ್ಲಿ ಮುಖ್ಯವಾದ ಪಾತ್ರವಹಿಸಿದ ಭೌತವಿಜ್ಞಾನಿ. ಅಮೆರಿಕದ ಕ್ಯಾಲಿಫೋರ್ನಿಯ ಪ್ರಾಂತದ ರೆಡೊಂಡೊ ಕರಾವಳಿಯಲ್ಲಿ 1997 ಸೆಪ್ಟೆಂಬರ್ 18ರಂದು ಜನನ, ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಬಿ.ಎಸ್. ಮತ್ತು ಎಮ್.ಎಸ್. ಪದವಿಗಳನ್ನು 1928 ಮತ್ತು 1929ರಲ್ಲಿಯೂ ಪ್ರಿನ್‍ಸ್ಟನ್ ವಿಶ್ವವಿದ್ಯಾಲಯದ ಪಿಎಚ್.ಡಿ. ಪದವಿಯನ್ನು 1952ರಲ್ಲಿಯೂ ಪಡೆದ.

ಯುರೇನಿಯಮ್ ವಿದಳನಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ನಡೆಸಿದ ಪ್ರಯೋಗಗಳು ಮೊದಲನೆಯ ಯುರೇನಿಯಮ್ ಆಚೆಯ ಧಾತುವಿನ ಸಂಶೋಧನೆಗೆ ಕಾರಣವಾಯಿತು. ಮ್ಯಾಕ್‍ಮಿಲನ್ ಮತ್ತಿತರರು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ವಿದಳನಕ್ರಿಯೆ ಕುರಿತ ಪ್ರಯೋಗಗಳನ್ನು ಮಾಡಿದಾಗ ಉತ್ಪನ್ನವಾದ ಪ್ರಮುಖ ಫಲಿತಗಳ ಪರಸ್ಪರ ಪಥಗಳನ್ನು ಅಳೆದರು. ಕ್ರಿಯೆಯ ಒಂದು ಫಲಿತದ ಅರ್ಧಾಯು 2:3 ದಿವಸಗಳಾಗಿದ್ದು ಅದು ಹೆಚ್ಚಾಗಿ ಹಿಮ್ಮರಳದೇ ವಿದಳಿಸುತ್ತಿರುವ ಯುರೇನಿಯಮ್ ಪರಮಾಣು ನ್ಯೂಟ್ರಾನನ್ನು ಸೆರೆಹಿಡಿದುದರ (ಕ್ಯಾಪ್ಚರ್) ಪರಿಣಾಮವಾಗಿರಬಹುದೆಂದು ಅನುಮಾನಿಸಿದರು. ಮ್ಯಾಕ್‍ಮಿಲನ್ ಮತ್ತು ಎಬೆಲ್ಸ್‍ನ್ 1940ರಲ್ಲಿ ಈ ಉತ್ಪನ್ನ 93 ಪರಮಾಣು ಸಂಖ್ಯೆಯುಳ್ಳ ಧಾತುವಾಗಿರಬಹುದೆಂದೂ 289U ಬೀಟಕ್ಷಯವೇ ಇದರ ಕಾರಣವೆಂದೂ ತೀರ್ಮಾನಿಸಿದರು. ಪರಮಾಣು ಸಂಖ್ಯೆ 93 ಇರುವ ಈ ಧಾತುವಿಗೆ ನೆಪ್ಚೂನಿಯಮ್ (ಓಠಿ) ಎಂದು ಹೆಸರಿಟ್ಟರು (ಯುರೇನಸ್ ಆಚೆಯ ಗ್ರಹ ನೆಪ್ಚೂನ್).

ಮ್ಯಾಕ್‍ಮಿಲನ್ ಮತ್ತು ಎಬೆಲ್ಸ್‍ನ್ ಅವರ ಸಂಶೋಧನೆಯಿಂದ ನೆಪ್ಚೂನಿಯಮ್ ಸಹ ಬೀಟಕ್ಷಯಕ್ಕೆ ತುತ್ತಾಗುವುದು ಖಚಿತವಾಯಿತು. ಹೀಗೆ ಓಠಿ ಕ್ಷಯಿಸಿದಾಗ ಪರಮಾಣು ಸಂಖ್ಯೆ 94 ಇರುವ ಮುಂದಿನ ಧಾತು ದೊರಕುವ ಸಂಭವ ಹೆಚ್ಚಾಯಿತು. 1940ರಲ್ಲಿ ಸೀರ್ಬ, ಮ್ಯಾಕ್‍ಮಿಲನ್, ಕೆನಡಿ ಮತ್ತು ವಾಲ್ ಅವರು ಯುರೇನಿಯಮ್ ಧಾತುವನ್ನು ಡ್ಯೂಟರಾನುಗಳಿಂದ ತಾಡಿಸಿದಾಗ ಹೊಸ ನೆಪ್ಚೂನಿಯಮ್ ಸಮಸ್ಥಾನಿ ಉಂಟಾಗಿ ಬೀಟ ಕ್ಷಯದಿಂದ ಪರಮಾಣು 94 ಉಳ್ಳ ಪ್ಲೂಟೋನಿಯಮ್ ಫಲಿಸಿತು. ಮ್ಯಾಕ್‍ಮಿಲನ್ 1958ರಲ್ಲಿ ಕ್ಯಾಲಿಫೋರ್ನಿಯದ ಬಕ್ರ್ಲಿಯಲ್ಲಿ ವಿಕಿರಣ ಪ್ರಯೋಗಶಾಲೆಯ ನಿರ್ದೇಶಕರಾಗಿ ನೇಮಕಗೊಂಡರು. ಎರಡನೆಯ ಮಹಾಯುದ್ಧದ ವೇಳೆ ರೇಡಾರ್ ಸಂಶೋಧನೆಯಲ್ಲಿ ತೊಡಗಿದ್ದರು. ಲಾಸ್ ಅಲಮೋಸ್ ಪ್ರಯೋಗಶಾಲೆಯ ಸ್ಥಾಪನೆಯಲ್ಲಿ ಮುಖ್ಯಪಾತ್ರವಹಿಸಿದರು. ರಷ್ಯದ ವಿಜ್ಞಾನಿ ವ್ಲಾಡಿಮಿರ್ ವೆಕ್ಸ್‍ಲರ್ ಮತ್ತು ಮ್ಯಾಕ್‍ಮಿಲನ್ ಇಬ್ಬರೂ ಪ್ರತ್ಯೇಕವಾಗಿ ಸಿಂಕ್ರೊಟ್ರಾನ್ ಉಪಕರಣವನ್ನು ಉಪಜ್ಞಿಸಿದರು. ಇದರಿಂದಾಗಿ ಎಲೆಕ್ಟ್ರಾನ್ ಮತ್ತು ಇತರ ಮೂಲಕಣಗಳು ಅತ್ಯಧಿಕ ವೇಗದಿಂದ ಪರಮಾಣು ಕ್ರಿಯೆಯಲ್ಲಿ ಭಾಗವಹಿಸುವಂತಾಯಿತು. ಹೀಗೆ ಮೂಲಕಣಗಳ ಅಭ್ಯಾಸಕ್ಕೆ ಸಿಂಕ್ರೊಟ್ರಾನ್ ಒಂದು ಕೊಡುಗೆಯಾಯಿತು.

ಅಮೆರಿಕದ ವೈಜ್ಞಾನಿಕ ಸಲಹಾಸಮಿತಿಯ ಸದಸ್ಯರಾಗಿದ್ದ ಮ್ಯಾಕ್‍ಮಿಲನ್ 1968ರಿಂದ 1971 ರ ತನಕ ರಾಷ್ಟ್ರೀಯ ವೈಜ್ಞಾನಿಕ ಅಕಡೆಮಿಯ ಅಧ್ಯಕ್ಷರಾಗಿದ್ದರು. 1963ರಲ್ಲಿ ಇವರಿಗೆ ಶಾಂತಿಗಾಗಿ ಪರಮಾಣು ಪಾರಿತೋಷಿಕವನ್ನು ಪ್ರಧಾನಿಸಲಾಯಿತು. ಅಮೆರಿಕದ ಭೌತವಿಜ್ಞಾನ ಸಂಘದ ಫೆಲೋ ಆಗಿ ಚುನಾಯಿತರಾಗಿದ್ದಾರೆ. ಕ್ಯಾಲಿಫೋರ್ನಿಯದ ಬಕ್ರ್ಲಿಯ ಲಾರೆನ್ಸ್ ಪ್ರಯೋಗ ಶಾಲೆಯಲ್ಲಿ ಸಂಶೋಧನ ನಿರತರಾಗಿದ್ದರು (1977). (ಎಂ.ಎ.ಎಸ್.ಆರ್.)