ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮ್ಯಾಗ್ನೋಲಿಯೇಸೀ

ವಿಕಿಸೋರ್ಸ್ದಿಂದ

ಮ್ಯಾಗ್ನೋಲಿಯೇಸೀ

ಸಂಪಿಗೆ ಜಾತಿಯ ಸಸ್ಯಗಳ ಕುಟುಂಬ. ಸುಮಾರು 9 ಜಾತಿ 100 ಪ್ರಭೇದಗಳನ್ನು ಒಳಗೊಂಡಿದೆ. ಇವು ಅಮೆರಿಕ, ಆಸ್ಟ್ರೇಲಿಯ ಮತ್ತು ಏಷ್ಯಾಖಂಡಗಳ ಉಷ್ಣಪ್ರದೇಶಗಳಲ್ಲಿಯೂ ಸಮಶೀತೋಷ್ಣ ಪ್ರದೇಶಗಳಲ್ಲಿಯೂ ಹೆಚ್ಚಾಗಿ ಬೆಳೆಯುತ್ತವೆ. ಆಫ್ರಿಕದಲ್ಲಿ ಕಾಣದೊರೆಯುವುದಿಲ್ಲ. ಭಾರತದಲ್ಲಿ ಸುಮಾರು 30 ಪ್ರಭೇದಗಳು ಬೆಳೆಯುತ್ತವೆ. ಮ್ಯಾಗ್ನೋಲಿಯ, ಲಿರಿಯೋಡೆಂಡ್ರಾನ್ ಪ್ರಭೇದಗಳು ಬೆಳೆಯುತ್ತದೆ. ಮ್ಯಾಗ್ನೋಲಿಯ, ಲಿರಿಯೋಡೆಂಡ್ರಾನ್, ಸಂಪಿಗೆ, ಡ್ರೈಮಿಸ್, ಕಾಡ್ಸೂರ್, ಪೈಜಾಂಡ್ರ ಮತ್ತು ಇಲಿಸಿಯಮ್ ಎಂಬವು ಅತಿ ಮುಖ್ಯ ಜಾತಿಗಳು.

ಈ ಕುಟುಂಬದ ಸಸ್ಯಗಳು ಸಾಮಾನ್ಯವಾಗಿ ಮರ, ಪೊದರು, ರೂಪದವು; ಕಾಡ್ಸೂರ ಮತ್ತು ಪೈಜಾಂಬ ಎಂಬವು ಹಬ್ಬುವ ಗಿಡಗಳು. ಲಿರಿಯೋಡೆಂಡ್ರಾನ್ ಸುಮಾರು 30 ಮೀ. ಎತ್ತರ ಬೆಳೆಯುತ್ತದೆ. ಗಿಡಗಳ ಕಾಂಡ ಮತ್ತು ಎಲೆಗಳಲ್ಲಿಯೂ ಕೆಲವು ವೇಳೆ ದಳಗಳಲ್ಲಿಯೂ ತೈಲಗ್ರಂಥಿಗಳುಂಟು. ಕಾಂಡ ನೀಳವಾಗಿ ದೃಢವಾಗಿ ಇದೆ. ಎಲೆಗಳು ಪರ್ಯಾಯರೀತಿಯಲ್ಲಿ ಜೋಡಣೆಗೊಂಡಿವೆ. ಎಳೆಯ ಎಲೆಗಳನ್ನು ಆವರಿಸಿಕೊಂಡು ಪ್ರಮುಖವಾದ ವೃತಪತ್ರ (ಸ್ಟಿಪ್ಯೂಲ್) ಬೆಳೆದು. ಎಲೆ ದೊಡ್ಡದಾಗುವಾಗ ಬಿದ್ದುಹೋಗುತ್ತದೆ. ಹೂಗಳು ಅತ್ಯಂತ ಆಕರ್ಷಕ ಮ್ಯಾಗ್ಮೋಲಿಯ ಹೂ ದೊಡ್ದಾಗಿರುವುದೇ ಅಲ್ಲದೆ ಅತ್ಯಾಕರ್ಷಣೀಯವಾಗಿಯೂ ಇವೆ. (ಮ್ಯಾಗ್ನೋಲಿಯ ಗ್ರಾಂಡಿಪ್ಲೋರ), ಡ್ರೈಮಿಸ್ಸನ್ನು ಬಿಟ್ಟು ಉಳಿದ ಗಿಡಗಳಲ್ಲಿ ಹೂಗಳು ದ್ವಿಲಿಂಗಿಗಳು, ಡ್ರೈಮಿಸ್‍ನಲ್ಲಿ ಏಕಲಿಂಗ ಪುಷ್ಪಗಳು, ಪುಷ್ಪಗಳಲ್ಲಿ 9 ಪುಷ್ಪದಳಗಳಿರುತ್ತವೆ. ಇವು ಸುರುಳಿ ಅಥವಾ ಸುತ್ತುಗಳಲ್ಲಿ ಜೋಡಣೆಗೊಂಡಿದೆ. ಕೆಲವು ಗಿಡಗಳಲ್ಲಿ ದಳಗಳು ಮಂದವಾಗಿಯೂ ತ್ರಿಭುಜಾಕಾರದವಾಗಿಯೂ ಇರುತ್ತದೆ. ದಳಗಳು ಸುವಾಸನಾಯುಕ್ತ. ಪುಷ್ಪಪೀಠ ಶಂಖಾಕಾರದಲ್ಲಿ ಬೆಳೆದಿರುತ್ತದೆ. ಕೇಸರಗಳು ಅನಿರ್ದಿಷ್ಟ ಸಂಖ್ಯೆಯಲ್ಲಿದ್ದು ಪುಷ್ಪಪೀಠದ ಮೇಲೆ ದಳ ಮತ್ತು ಅಂಡಾಶಯಗಳು ಅನಿರ್ದಿಷ್ಟವಾಗಿರುವುದೇ ಅಲ್ಲದೆ ಬಿಡಿಬಿಡಿಯಾಗಿದ್ದು ಸುರುಳಿ ರೀತಿ ಜೋಡಣೆಗೊಂಡಿವೆ. ಪ್ರತಿಯೊಂದರಲ್ಲಿಯೂ 1-4 ಅಂಡಕಗಳಿರುತ್ತವೆ. ಫಲ ಸಂಯುಕ್ತ ಮಾದರಿಯದು.

ಮ್ಯಾಗ್ನೋಲಿಯ ಮತ್ತು ಸಂಪಿಗೆ ಗಿಡಗಳನ್ನು ಕೇವಲ ಅಲಂಕಾರದ ಹೂಗಳಿಗಾಗಿ ಬೆಳೆಸುತ್ತಾರೆ. ಲಿರಿಯೋಡೆಂಡ್ರಾನ್ ಮರವನ್ನು ಗೊಂಬೆ, ಪೆಟ್ಟಿಗೆ, ಪೀಠೋಪಕರಣಗಳ ತಯಾರಿಕೆಗೂ ಮನೆ ಕಟ್ಟುವುದಕ್ಕೂ ಉಪಯೋಗಿಸುತ್ತಾರೆ. ಸಂಪಿಗೆಯಿಂದ ಸುಂಗಂಧ ತೈಲವನ್ನೂ ಪಡೆಯುವುದಿದೆ.

(ಎಂ.ಸಿ.ಆರ್)