ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯಗಚಿ

ವಿಕಿಸೋರ್ಸ್ದಿಂದ

ಯಗಚಿ ಕರ್ನಾಟಕ ರಾಜ್ಯದ ಪಶ್ಚಿಮದ ಮಲೆನಾಡು ಜಿಲ್ಲೆಗಳಲ್ಲಿ ಹರಿಯುವ ಹೇಮಾವತಿ ನದಿಯ ಪ್ರಮುಖ ಉಪನದಿ. ಇದಕ್ಕೆ ಬದರಿ ಎಂಬ ಹೆಸರೂ ಇದೆ. ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‍ಗಿರಿ ಬೆಟ್ಟಗಳಲ್ಲಿ ಹುಟ್ಟಿ ದಕ್ಷಿಣ ದಿಕ್ಕಿಗೆ ಹರಿಯುತ್ತದೆ. ಪಶ್ಚಿಮ ಭಾಗದಿಂದ ಹರಿದುಬರುವ ವಾಟೆಹೊಳೆ ಮತ್ತು ಬೆರೆಂಜಿಹಳ್ಳ ಇದರ ಉಪನದಿಗಳು. ಪ್ರಖ್ಯಾತ ಬೇಲೂರು ಪಟ್ಟಣದ ಬಳಿ ಹಾದು ಹಾಸನ ತಾಲ್ಲೂಕಿನ ಗೊರೂರು ಬಳಿ ಹೇಮಾವತಿ ನದಿಯನ್ನು ಸೇರುತ್ತದೆ. ಈ ನದಿಗೆ ಮೂರು ಸಣ್ಣ ಅಣೆಕಟ್ಟುಗಳನ್ನು ಕಟ್ಟಿ ನೀರನ್ನು ವ್ಯವಸಾಯಕ್ಕೆ ಉಪಯೋಗಿಸಿಕೊಳ್ಳಲಾಗಿದೆ. ಮೊದಲನೆಯದು ಬೇಲೂರು ತಾಲ್ಲೂಕಿನ ಬೊಮ್ಮಡಿ ಹಳ್ಳಿ ಬಳಿ ಇದೆ. ಇದರಿಂದ ಸುಮಾರು 7 ಕಿಮೀ ಉದ್ದದ ಕಾಲುವೆ ತೆಗೆದು ಸುಮಾರು 300 ಎಕರೆ ಭೂಮಿಗೆ ನೀರು ಒದಗಿಸಿಕೊಳ್ಳಲಾಗಿದೆ. ಎರಡನೆಯದು ಹಾಲವಾಗಿಲು ಅಣೆಕಟ್ಟು. ಇದು ಹಾಸನದಿಂದ ಪಶ್ಚಿಮಕ್ಕೆ ಸು, 5 ಕಿಮೀ ದೂರದಲ್ಲಿದೆ. ಇದರಿಂದ ಸು. 9 ಕಿಮೀ ಉದ್ದದ ಕಾಲುವೆ ತೆಗೆದು ಸುಮಾರು 200 ಎಕರೆ ಜಮೀನಿಗೆ ಅನುಕೂಲ ಕಲ್ಪಿಸಲಾಗಿದೆ. ಮೂರನೆಯದು ಚಂದ್ರವಳ್ಳಿ ಅಣೆ. ಇದು ಹೇಮಾವತಿ ಸಂಗಮಕ್ಕೆ ಮೊದಲು ಸು. 5 ಕಿಮೀ ದೂರದಲ್ಲಿದೆ. ಇದರಿಂದ ಸು 14 ಕಿಮೀ ಉದ್ದದ ಕಾಲುವೆಗೆ ನೀರುಬಿಟ್ಟು ಸುಮಾರು 300 ಎಕರೆ ಭೂಮಿಗೆ ನೀರು ಒದಗಿಸಲಾಗಿದೆ. (ಆರ್. ಎಂ. ಆರ್.)