ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯಲಹಂಕ

ವಿಕಿಸೋರ್ಸ್ದಿಂದ

ಯಲಹಂಕ ಕರ್ನಾಟಕ ರಾಜ್ಯದ ಬೆಂಗಳೂರು ಉತ್ತರ ಜಿಲ್ಲೆಯಲ್ಲಿ, ಬೆಂಗಳೂರು-ಗುಂತಕಲ್ಲು ರೈಲು ಮಾರ್ಗದಲ್ಲಿರುವ ಐತಿಹಾಸಿಕ ಸ್ಥಳ. ಬೆಂಗಳೂರಿನಿಂದ ಉತ್ತರಕ್ಕೆ 16 ಕಿ.ಮೀ. ದೂರದಲ್ಲಿದೆ. ಚೋಳರ ಕಾಲದಲ್ಲಿ ಇದನ್ನು ಇಲೈಪಾಕ್ಕಂ ಮತ್ತು ಹೊಯ್ಸಳರ ಕಾಲದಲ್ಲಿ ಎಲಹಕ್ಕ ಎಂದೂ ಸುತ್ತಮುತ್ತಲಿನ ನಾಡನ್ನು ಯಲಹಂಕ ನಾಡು ಎಂದೂ ಕರೆಯಲಾಗುತ್ತಿತ್ತು.

1871ರವರೆಗೂ ತಾಲ್ಲೂಕು ಕೇಂದ್ರವಾಗಿದ್ದು ಈಗ ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರಿದೆ. ಇಲ್ಲಿ ಒಂದು ಪುರಸಭೆ ಇದೆ. ಬೆಂಗಳೂರಿನ ಸ್ಥಾಪಕ ಕೆಂಪೇಗೌಡನ ಮೂಲ ಪುರುಷನಾಗಿದ್ದ ಜಯದೇವಗೌಡ ಬೆಂಗಳೂರು, ಮಾಗಡಿ ಮತ್ತು ಸಾವನದುರ್ಗಗಳನ್ನು ತನ್ನ ವಶಪಡಿಸಿಕೊಂಡು ಕೋಟೆ ಕೊತ್ತಳಗಳನ್ನು ಕಟ್ಟಿಸಿ ಆಡಳಿತ ವ್ಯವಸ್ಥೆ ಮಾಡಿದ. 1420ರಲ್ಲಿ ವಿಜಯನಗರ ಸಾಮ್ರಾಟರ ಆಶ್ರಯ ಪಡೆದ ಅನಂತರ ಯಲಹಂಕನಾಡ ಪ್ರಭು ಎಂಬ ಬಿರುದನ್ನು ಪಡೆದುಕೊಂಡ. ಈ ವಂಶದವರು ಸುಮಾರು 200 ವರ್ಷಗಳಷ್ಟು ದೀರ್ಘಕಾಲ ಯಲಹಂಕನಾಡನ್ನು ಆಳಿದರು. 1728ರಲ್ಲಿ ಮೈಸೂರಿನ ದಳವಾಯಿ ಈ ಪ್ರದೇಶವನ್ನು ಮೈಸೂರು ರಾಜ್ಯಕ್ಕೆ ಸೇರಿಸಿದ.

ಯಲಹಂಕದ ವೇಣುಗೋಪಾಲ ದೇವಾಲಯ ಪ್ರಸಿದ್ಧವಾದುದು. ವರ್ಷಂಪ್ರತಿ ಚೈತ್ರ ಶುದ್ಧ ಅಷ್ಟಮಿಯಂದು ನಡೆಯುವ ರಥೋತ್ಸವ ಸಾವಿರಾರು ಜನರನ್ನು ಆಕರ್ಷಿಸುತ್ತದೆ. (ಆರ್.ಎಂ.ಆರ್.)