ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯಾಕ್

ವಿಕಿಸೋರ್ಸ್ದಿಂದ

ಯಾಕ್ - ಭಾರತದ ಲಡಾಖ್ ಪ್ರದೇಶ, ಚೀನದ ಟಿಬೆಟ್ ಮತ್ತು ಕ್ಯಾನ್ಸೂ ಪ್ರಾಂತ್ಯಗಳಲ್ಲಿ ಕಾಣದೊರೆಯುವ ಒಂದು ಬಗೆಯ ಕಾಡೆತ್ತು. ಆರ್ಟಿಯೊಡ್ಯಾಕ್ಟಿಲ ಗಣದ ಬೋವಿಡೀ ಕುಟುಂಬಕ್ಕೆ ಸೇರಿದೆ. ಬಾಸ್ ಗ್ರುನಿಯೆನ್ಸ್ ಇದರ ವೈಜ್ಞಾನಿಕ ಹೆಸರು. ದಕ್ಷಿಣ ಭಾರತದಲ್ಲಿ ದೊರೆಯುವ ಕಾಟಿ, ಅಸ್ಸಾಮ್ ಮತ್ತು ಬರ್ಮದಲ್ಲಿ ಸಿಕ್ಕುವ ಗಾಯಲ್ ಹಾಗೂ ಸಾಕುದನಗಳ ಹತ್ತಿರ ಸಂಬಂಧಿ. ಚಮರೀ ಅಥವಾ ಚವರೀ ಮೃಗ ಎಂಬ ಹೆಸರುಗಳಿಂದಲೂ ಪ್ರಸಿದ್ಧವಾಗಿದೆ. ಇದರಲ್ಲಿ ಎರಡು ಬಗೆಗಳಿವೆ. ಒಂದು ಹಿಮಾಲಯದ 6000 ಮೀಗೂ ಎತ್ತರದ ಪರ್ವತಪ್ರದೇಶಗಳಿಗೆ ಸೀಮಿತವಾದ, ನಿಜವಾಗಿಯೂ ವನ್ಯವೆನಿಸುವ ಯಾಕ್. ಇನ್ನೊಂದು ಲಡಾಖ್, ನೇಪಾಳ, ಸಿಕ್ಕಿಮ್ ಪ್ರದೇಶಗಳಲ್ಲಿ 4,200-6000 ಮೀ ಎತ್ತರದ ಭಾಗಗಳಲ್ಲಿ ಸಾಕುಪ್ರಾಣಿಯಾಗಿ ವೃದ್ಧಿಪಡಿಸಲಾದ ಯಾಕ್. ಇವೆರಡೂ ನೋಡಲು ಒಂದೇ ತೆರನಾಗಿವೆಯಾದರೂ ಬಣ್ಣದಲ್ಲಿ ವಿಭಿನ್ನ. ಕಾಡು ಯಾಕ್ ಕಗ್ಗಂದು ಬಣ್ಣದ್ದಾದರೆ, ಸಾಕಿರುವ ಯಾಕ್ ತಿಳಿಗಂದು, ಕಪ್ಪು ಇಲ್ಲವೆ ಹಂಡಬಂಡ ಬಣ್ಣದ್ದು. ಮೂತಿಯ ತುದಿ ಮಾತ್ರ ಕೊಂಚ ಬಿಳಿಯ ಬಣ್ಣದ್ದಾಗಿರುತ್ತದೆ.

ವಯಸ್ಕ ಗೂಳಿ ಸುಮಾರು 2 ಮೀ ಎತ್ತರ ಇದ್ದು ಸುಮಾರು 545 ಕೆಜಿ ತೂಗುತ್ತದೆ. ಹಣೆಯಿಂದ ಮುಂಚಾಚಿಕೊಂಡಿರುವ ಬಲವಾದ ಮತ್ತು ಕಪ್ಪು ಬಣ್ಣದ ಕೊಂಬುಗಳಿವೆ. ಭುಜ, ದೇಹದ ಇಕ್ಕೆಲಗಳು ಮತ್ತು ತೊಡೆಗಳಿಂದ ನೆಲಕ್ಕೆ ತಾಗುವಂತೆ ಇಳಿಬಿದ್ದಿರುವ ಜೂಲುಗಳಿವೆ. ಬಾಲದ ತುದಿಯಲ್ಲಿ ಕೂಡ ಉದ್ದ ಕೂದಲುಗಳಿಂದ ರಚಿತವಾಗಿರುವ ಗೊಂಡೆ ಇದೆ. ಬೋವಿಡೀ ಕುಟುಂಬದ ಪ್ರಾಣಿಗಳಲ್ಲೆಲ್ಲ ಯಾಕ್ ಒಂದೇ ಅತ್ಯುಗ್ರ ಚಳಿಪ್ರದೇಶಕ್ಕೂ ಶೀತ ಮರುಭೂಮಿ ವಾತಾವರಣಕ್ಕೂ ಬಲು ಚೆನ್ನಾಗಿ ಹೊಂದಿಕೊಂಡಿದೆ. ಕೊರೆದ ಚಳಿ ಪ್ರದೇಶದಲ್ಲಿ ಬೆಳೆಯುವ ಕುರುಚಲೇ ಇದರ ಬದುಕಿಗೆ ಆಧಾರ. ನೀರು ಸಿಕ್ಕದಿದ್ದರೆ ಮಂಜುಗಡ್ಡೆಯನ್ನೇ ತಿಂದು ಬಾಯಾರಿಸಿಕೊಳ್ಳುತ್ತದೆ. ಸಾಕಿದ ದನಕರುಗಳಂತಲ್ಲದೆ ಯಾಕಿನ ಸಗಣಿ ಶುಷ್ಕಗೋಲಿಗಳಂತಿರುತ್ತದೆ. ಇದರ ಕೂಗು ಒಂದು ತೆರನ ಗುಟುರು. ಸಣ್ಣ ಹಿಂಡುಗಳಲ್ಲಿ ವಾಸ. ಬಲು ನಾಚಿಕೆ ಸ್ವಭಾವದ ಇವು ಕಣ್ಣಿಗೆ ಬೀಳುವುದೇ ಅಪೂರ್ವ. ತಮ್ಮ ಅಪಾಯದ ಸುಳಿವನ್ನು ಚುರುಕಾದ ಘ್ರಾಣಶಕ್ತಿಯಿಂದ ತಿಳಿದುಕೊಳ್ಳುತ್ತದೆ. ಸುಮಾರು 9 ತಿಂಗಳ ಗರ್ಭಾವಧಿಯ ತರುವಾಯ ಏಪ್ರಿಲ್ ವೇಳೆಗೆ ಕರು ಹಾಕುತ್ತದೆ.

ಸಾಕಿರುವ ಯಾಕ್ ಹಿಮಾಲಯದ ಉನ್ನತ ಪ್ರದೇಶಗಳ ಹಳ್ಳಿಗರಿಗೆ ಬಲು ಉಪಯುಕ್ತವಾಗಿದೆ. ಗಾಡಿ ಎಳೆಯಲು, ಹೇರು ಹೊರಲು ಬಳಸುವರಲ್ಲದೆ ಇದರ ಮಾಂಸವನ್ನು ಆಹಾರವಾಗಿಯೂ ಚರ್ಮವನ್ನು ಹಲವಾರು ಕೆಲಸಗಳಿಗೂ ಉಪಯೋಗಿಸುವರು. ಹಾಲು ಕುಡಿಯುತ್ತಾರೆ. ಯಾಕ್‍ನ ಕೂದಲಿನಿಂದ ಚವರಿಯನ್ನು ತಯಾರಿಸುವುದಲ್ಲದೆ, ಬಾಲದ ಗೊಂಡೆಯನ್ನು ಉನ್ನತ ಅಧಿಕಾರಿಗಳು ಧಾರ್ಮಿಕ, ಮುಖಂಡರು ತಮ್ಮ ಸ್ಥಾನದ ಪ್ರತಿಷ್ಠಿತ ಲಾಂಛನವಾಗಿ ಬಳಸುವರು.