ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯುರಾಲಿಕ್ ಮತ್ತು ಆಲ್ಟಾಯಿಕ್ ಭಾಷೆಗಳು

ವಿಕಿಸೋರ್ಸ್ದಿಂದ

ಯುರಾಲಿಕ್ ಮತ್ತು ಆಲ್ಟಾಯಿಕ್ ಭಾಷೆಗಳು

ಫಿನ್ನೊಉಗ್ರಿಕ್ ಭಾಷಾ ಪರಿವಾರಕ್ಕೆ ಸೇರಿದ ಪ್ರಮುಖ ಭಾಷಾಕುಟುಂಬ. ಈ ಪರಿವಾರಕ್ಕೆ ಸೇರಿದ ಭಾಷೆಗಳು ಪೂರ್ವ ಯುರೋಪ್‍ನಿಂದ ಏಷ್ಯದ ಪೆಸಿಫಿಕ್ ಸಾಗರದವರೆಗಿನ ವಿಶಾಲ ಭೂಭಾಗದಲ್ಲಿ-ತುರ್ಕಿ, ಆಫ್‍ಘಾನಿಸ್ತಾನ, ಸೈಬೀರಿಯ, ಸೈಪ್ರಸ್, ಚೀನ, ರಷ್ಯ, ಮಂಚೂರಿಯ, ಮಂಗೋಲಿಯ, ಹಂಗೇರಿ, ಇರಾನ್, ಇರಾಕ್, ಫಿನ್ಲೆಂಡ್, ನಾವೇ, ಎಸ್ಟೋನಿಯ-ವ್ಯಾಪಿಸಿಕೊಂಡಿವೆ. ಈ ಭಾಷೆಗಳನ್ನು ಸುಮಾರು 12 ಕೋಟಿ ಜನರು ಬಳಸುತ್ತಾರೆ. ಯೂರಲ್-ಆಲ್ಟಾಯಿಕ್ ಭಾಷಾ ಕುಟುಂಬವೆಂಬ ಹೆಸರು ಯುರೋಪ್ ಮತ್ತು ಏಷ್ಯಖಂಡಗಳನ್ನು ಬೇರ್ಪಡಿಸುವ ಯೂರಲ್ ಮತ್ತು ಆಲ್ಟಾಯ್ ಎಂಬ ಪರ್ವತಶ್ರೇಣಿಗಳಿಂದ ಬಂದಿದೆ. ಈ ಪ್ರದೇಶದಲ್ಲಿಯೇ ಈ ಭಾಷೆಗಳು ಹುಟ್ಟಿವೆ ಎಂದು ನಂಬಲಾಗಿದೆ. ಈ ಭಾಷೆಗಳನ್ನಾಡುವ ಜನರು ಕಾಲಕ್ರಮೇಣ ತಾವು ಈಗ ನೆಲೆಸಿರುವ ಸ್ಥಳಗಳಿಗೆ ಹಲವು ಶತಮಾನಗಳ ಹಿಂದೆಯೇ ವಲಸೆ ಬಂದು ನೆಲೆಸಿದರು. ಪರಸ್ಪರ ಸಂಬಂಧವಿರುವ ಈ ಎರಡು ಭಾಷಾಕುಟುಂಬಗಳನ್ನು ಯೂರಲ್-ಆಲ್ಟಾಯಿಕ್ ಭಾಷೆಗಳು ಎಂಬ ಒಂದೇ ಭಾಷಾ ಕುಟುಂಬವನ್ನಾಗಿ ಹಲವು ವಿದ್ವಾಂಸರು ಪರಿಗಣಿಸಿದ್ದಾರೆ. ಆದರೆ ಮತ್ತೆ ಕೆಲವು ವಿದ್ವಾಂಸರು ಇವೆರಡೂ ಯುರಾಲಿಕ್ ಮತ್ತು ಆಲ್ಟಾಯಿಕ್ ಎಂಬ ಪ್ರತ್ಯೇಕ ಭಾಷಾಗುಂಪುಗಳಾಗಿದ್ದು ಪ್ರತ್ಯೇಕ ಭಾಷಾಕುಟುಂಬಗಳಿಗೆ ಸೇರುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುಟುಂಬದ ಹೆಚ್ಚು ಭಾಷೆಗಳು ಯೂರಲ್ ಮತ್ತು ಆಲ್ಟಾಯಿಕ್ ಪರ್ವತಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಅ) ಯುರಾಲಿಕ್ ಭಾಷಾವರ್ಗ : ಇದು ಸುಮಾರು 2 ಕೋಟಿ ಭಾಷಿಕರನ್ನು ಹೊಂದಿದೆ. ಈ ವರ್ಗದ ಭಾಷೆಗಳನ್ನು ಪ್ರಧಾನವಾಗಿ ಫಿನ್ನೊಉಗ್ರಿಕ್ ಮತ್ತು ಸಮೊಯೆಡ್ ಭಾಷಾವರ್ಗ ಎಂದು ಎರಡು ವರ್ಗಗಳಾಗಿ ವರ್ಗೀಕರಿಸಿಕೊಳ್ಳಲಾಗಿದೆ.

1) ಫಿನ್ನೊಉಗ್ರಿಕ್ ಭಾಷಾವರ್ಗ : ಈ ಭಾಷಾವರ್ಗವನ್ನು ಫಿನ್ನಿಕ್, ಪರ್ಮಿಯನ್ ಮತ್ತು ಉಗ್ರಿಕ್ ಭಾಷೆಗಳೆಂದು ಮೂರು ಉಪವಿಭಾಗಗಳನ್ನಾಗಿ ವಿಂಗಡಿಸಬಹುದು. ಈ ವರ್ಗದ ಭಾಷೆಗಳನ್ನು 2 ಕೋಟಿ ಜನರು ಮಾತನಾಡುತ್ತಾರೆ. ಫಿನ್ನಿಕ್ ವರ್ಗದಲ್ಲಿ ಫಿನಿಷ್ ಅಥವಾ ಸುವೊಮಿ, ಕರೇಲಿಯನ್, ವೋಟಿಷ್, ಎಸ್ಟೋನಿಯನ್, ಲಿವೋನಿಯನ್, ಚೆರ್ಮಿಸ್ಸಿಕ್, ಮಾಡ್ರ್ವಿನಿಕ್, ಲೆಪ್ವಿಕ್ ಭಾಷೆಗಳು ; ಉಗ್ರಿಕ್ ವರ್ಗದಲ್ಲಿ ಒಸ್ತ್ಯಾಕ್, ವೊಗುಲ್, ಮೆಗ್ಯಾರ್ ಅಥವಾ ಹಂಗೇರಿಯನ್ ಭಾಷೆಗಳು ಒಳಗೊಳ್ಳುತ್ತವೆ.

2) ಸಮೊಯೆಡ್ ಭಾಷಾವರ್ಗ : ಈ ಭಾಷಾವರ್ಗದಲ್ಲಿ ಯುರಾಕಿ, ತಾವ್ಗಿ, ಯೆನಿಸ್ಸಿ ಸಮೊಯೆಡ್, ಪೂರ್ವ ಸಮೊಯೆಡ್ ಮತ್ತು ಕಮಾಸ್ಸಿನ್ ಭಾಷೆಗಳು ಸೇರುತ್ತವೆ. ಈ ಭಾಷೆಗಳು ಫಿನ್ನಿಕ್ ಭಾಷೆಗಳನ್ನು ಹೋಲುತ್ತವೆಯಾದರೂ ಇವುಗಳಲ್ಲಿ ಯುರಾಲಿಕ್ ಮತ್ತು ಆಲ್ಟಾಯಿಕ್ ಭಾಷೆಗಳ ಅನೇಕ ಅಂಶಗಳಿರುವುದು ಕಂಡುಬರುತ್ತದೆ. ಆದ್ದರಿಂದ ಇದನ್ನು ಯುರಾಲಿಕ್ ಮತ್ತು ಆಲ್ಟಾಯಿಕ್ ಭಾಷೆಗಳ ಮಧ್ಯವರ್ತಿ ಭಾಷೆಗಳೆಂದು ಕೆಲವರು ವರ್ಗೀಕರಿಸಿದ್ದಾರೆ. ಈ ಭಾಷಾ ವರ್ಗ ಸುಮಾರು 28,600 ಭಾಷಿಕರನ್ನು ಹೊಂದಿದೆ. ಸೈಬೀರಿಯದ ವಾಯುವ್ಯ ಮತ್ತು ಯುರೋಪಿನ ಈಶಾನ್ಯ ಭಾಗಗಳಲ್ಲಿ ಈ ಭಾಷೆಗಳನ್ನಾಡುವ ಜನರಿದ್ದಾರೆ.

(ಆ) ಆಲ್ಟಾಯಿಕ್ ಭಾಷಾವರ್ಗ : ಈ ಭಾಷಾವರ್ಗಕ್ಕೆ ಸೇರಿದ ಭಾಷೆಗಳನ್ನು ಮುಖ್ಯವಾಗಿ ತುರ್ಕಿಭಾಷೆಗಳು, ಮಂಗೋಲಿಯನ್ ಭಾಷೆಗಳು ಮತ್ತು ಮಂಚುಭಾಷೆಗಳು ಎಂದು ಮೂರು ವರ್ಗಗಳಲ್ಲಿ ವರ್ಗೀಕರಿಸಲಾಗಿದೆ. ಇದರಲ್ಲಿ 40ಕ್ಕೂ ಹೆಚ್ಚು ಆಲ್ಟಾಯಿಕ್ ಭಾಷೆಗಳು ಒಳಗೊಂಡಿವೆ. ಸುಮಾರು10 ಕೋಟಿಗಳಿಗೂ ಹೆಚ್ಚು ಜನರು ಈ ಭಾಷೆಗಳನ್ನು ಬಳಸುತ್ತಾರೆ.

1) ತುರ್ಕಿ ಭಾಷೆಗಳು : ಈ ಭಾಷೆಗಳನ್ನು ಮತ್ತೆ ಪೂರ್ವ ತುರ್ಕಿ ಭಾಷೆಗಳು, ಪಶ್ವಿಮ ತುರ್ಕಿ ಭಾಷೆಗಳು, ದಕ್ಷಿಣ ತುರ್ಕಿ ಭಾಷೆಗಳು ಮತ್ತು ಮಧ್ಯ ತುರ್ಕಿಭಾಷೆಗಳು ಎಂದು ನಾಲ್ಕು ಉಪವರ್ಗಗಳನ್ನಾಗಿ ವಿಂಗಡಿಸಿಕೊಳ್ಳಲಾಗಿದೆ.

ಅ) ಪೂರ್ವ ತುರ್ಕಿ ಭಾಷೆಗಳು : ಇದರಲ್ಲಿ ಆಲ್ಟಾಯ್ ತುರ್ಕಿ ಭಾಷೆಗಳು, ಬರಾಬ, ಅಬಕಾನ್ ಸೊಯೋನಿ, ಕಾರಗಸ್ಸಿ, ಉಯಿಗುರ್ ಮತ್ತು ಕೋಕ್ ತುರ್ಕಿ ಭಾಷೆಗಳು ಸೇರುತ್ತವೆ.

ಆ) ಪಶ್ಚಿಮ ತುರ್ಕಿ ಭಾಷೆಗಳು : ಬಿರ್ಗಿಜ್, ಬಷ್ಕಿರ್, ಚುವಾಷ್ ಮತ್ತು ಐರಿಷ್ ಉಪಭಾಷೆಗಳು ಈ ವರ್ಗದಲ್ಲಿ ಸೇರುತ್ತವೆ.

ಇ) ದಕ್ಷಿಣ ತುರ್ಕಿ ಭಾಷೆಗಳು : ಈ ವರ್ಗದಲ್ಲಿ ಓಸ್‍ಮನ್ಲಿ ಅಥವಾ ತುರ್ಕಿಷ್, ತುರ್ಕೊಮನ್, ಅಜರ್‍ಬೈಜಾನ್ ಉಪಭಾಷೆಗಳು ಮತ್ತು ಅನತೋಲಿಯನ್ ಭಾಷೆ ಮತ್ತು ಉಪಭಾಷೆಗಳು ಒಳಗೊಳ್ಳುತ್ತವೆ.

ಈ) ಮಧ್ಯ ತುರ್ಕಿ ಭಾಷೆಗಳು : ಕಷ್‍ಘರ್ ಉಪಭಾಷೆಗಳು, ಯಾರ್ಕಂಡ್ ಉಪಭಾಷೆಗಳು, ತಾರಾನಿ ಸರ್ತಿಷ್ ಮತ್ತು ಉಜ್‍ಬೆಕ್ ಅಥವಾ ಒಸ್‍ಬೆಗ್ ಇವು ಈ ವರ್ಗದಲ್ಲಿ ಸೇರುವ ಭಾಷೆಗಳು.

2) ಮಂಗೋಲಿಯನ್ ಭಾಷೆಗಳು : ಯಾಕುತ್, ಕಾಲ್‍ಮುಖ್ ಅಥವಾ ಪಶ್ಚಿಮ ಮಂಗೋಲ್ ಆಫ್‍ಘನ್ ಮಂಗೋಲ್, ಬುರ್ಯಾತ್ ಅಥವಾ ಪೂರ್ವ ಮಂಗೋಲ್ ಭಾಷೆಗಳು ಎಂದು ವರ್ಗೀಕರಿಸಿಕೊಳ್ಳಲಾಗಿದೆ. ಇವು ರಷ್ಯ, ಮಂಚೂರಿಯ, ಸೈಬೀರಿಯ, ಚೀನ, ಆಫ್‍ಘಾನಿಸ್ತಾನ, ಮಂಗೋಲಿಯ ಮುಂತಾದ ಕಡೆಗಳಲ್ಲಿ ಬಳಕೆಯಲ್ಲಿದ್ದು ಇರಾನಿಯನ್ ಉಪ ಭಾಷೆಗಳಿಂದ ಹೆಚ್ಚು ಪ್ರಭಾವಿತಗೊಂಡಿವೆ. ಈ ಭಾಷೆಗಳನ್ನು ಹೆಚ್ಚಾಗಿ ಮಂಗೋಲಿಯನ್ನರು ಆಡುತ್ತಾರೆ.

3) ಮಂಚು ಭಾಷೆಗಳು : ಈ ಭಾಷಾವರ್ಗದಲ್ಲಿ ಮುಂಚು ಮತ್ತು ತುಂಗುಸ್ ಭಾಷೆಗಳು ಸೇರುತ್ತವೆ. ಈ ಭಾಷೆಗಳು ರಷ್ಯದ ಪೂರ್ವಭಾಗ, ಸೈಬೀರಿಯ, ಮಂಚೂರಿಯ, ಚೀನ, ಕೊರಿಯ, ಜಪಾನ್, ಮುಂತಾದ ಕಡೆಗಳಲ್ಲಿ ಬಳಕೆಯಲ್ಲಿವೆ. ಸುಮಾರು 28 ಲಕ್ಷಕ್ಕೂ ಹೆಚ್ಚು ಜನರು ಈ ಭಾಷೆಗಳನ್ನು ಆಡುತ್ತಾರೆ.

ಯಾರಾಲಿಕ್ ಮತ್ತು ಆಲ್ಟಾಯಿಕ್ ಭಾಷೆಗಳ ವೈಶಿಷ್ಟ್ಯಗಳು: ಪ್ರತ್ಯಯ ಸಂಶ್ಲಿಷ್ಟತೆ ಮತ್ತು ಸ್ವರಾನುರೂಪತೆ - ಇವು ಈ ಭಾಷೆಗಳ ಪ್ರಧಾನ ಲಕ್ಷಣಗಳು. ಈ ಎರಡು ಅಂಶಗಳೇ ಈ ಭಾಷಾಕುಟುಂಬಗಳನ್ನು ಯೂರಲ್ - ಆಲ್ಟಾಯಿಕ್ ಎಂಬ ಒಂದೇ ಭಾಷಾಕುಟುಂಬವನ್ನಾಗಿ ಪರಿಗಣಿಸಲು ಕಾರಣವಾಗಿವೆ. ಈ ಭಾಷೆಗಳು ಪ್ರತ್ಯಯ ಪ್ರಧಾನವಾದವು. ಇವುಗಳಲ್ಲಿ ಅಂತ್ಯಪ್ರತ್ಯಯಗಳ ಬಳಕೆ ಹೆಚ್ಚು, ಆದಿಪ್ರತ್ಯಯಗಳು ಬಹುತೇಕ ಕಡಿಮೆ. ಧಾತುಗಳಿಗೆ ಬೇರೆ ಬೇರೆ ಪ್ರತ್ಯಯಗಳನ್ನು ಹಚ್ಚುವುದರ ಮೂಲಕ ಬೇರೆ ಬೇರೆ ಪದಗಳನ್ನು ರಚಿಸಿಕೊಳ್ಳಬಹುದು. ಯೋಗಾತ್ಮಕ ಭಾಷೆಗಳಲ್ಲಿ ಒಂದು ನಿರ್ದಿಷ್ಟ ಅರ್ಥವನ್ನು ಸೂಚಿಸುವ ಸ್ವತಂತ್ರ ರೂಪಗಳು ಹಾಗೂ ಬೇರೆ ಬೇರೆ ಭಾಷಿಕ ಅಂಶಗಳು ಒಂದು ಪದವನ್ನು ರೂಪಿಸಿಕೊಳ್ಳಲು ನೆರವಾಗುತ್ತವೆ. ಕೆಲವು ವೇಳೆ ಧಾತುಗಳಿಗೆ ಒಂದಕ್ಕಿಂತ ಹೆಚ್ಚು ಪ್ರತ್ಯಯಗಳನ್ನು ಹಚ್ಚಬಹುದಾದ ಅವಕಾಶ ಈ ಭಾಷೆಗಳಲ್ಲಿದೆ. ಈ ದೃಷ್ಟಿಯಿಂದ ಇವು ದ್ರಾವಿಡ ಭಾಷೆಗಳನ್ನು ಹೆಚ್ಚು ಹೋಲುತ್ತವೆ. ಪದಗಳಿಗೆ ಹತ್ತುವ ಅಂತ್ಯಪ್ರತ್ಯಯದ ಸ್ವರ ಆ ಪದದ ಧಾತುವಿನ ಸ್ವರವನ್ನು ಅನುಸರಿಸಿ ಬದಲಾಗುತ್ತದೆ. ಈ ಬಗೆಯ ರೂಪಗಳನ್ನು ತುರ್ಕಿ ಭಾಷೆಗಳಲ್ಲಿ ಹೆಚ್ಚಾಗಿ ಕಾಣಬಹುದು. ಉದಾ: ಎವ್(ಮನೆ) ಎವ್‍ದೆ(ಮನೆಯಲ್ಲಿ) ಮಸ(ಮೇಜು) ಮಸದ(ಮೇಜಿನಲ್ಲಿ). ಹೀಗಾಗಿ ಬಹಳಷ್ಟು ಅಂತ್ಯಪ್ರತ್ಯಯಗಳು ಎರಡೆರಡು ರೂಪಗಳನ್ನು ಹೊಂದಿವೆ. ಪುಲ್ಲಿಂಗ, ಸ್ತ್ರೀಲಿಂಗ ಹಾಗೂ ನಪುಂಸಕ ಲಿಂಗಸೂಚಕ ಪ್ರತ್ಯಯಗಳು ಸಾಮಾನ್ಯವಾಗಿ ಈ ಭಾಷೆಗಳಲ್ಲಿ ವ್ಯವಸ್ಥಿತವಾಗಿ ಕಂಡುಬರುವುದಿಲ್ಲ. ಪ್ರಥಮ ಪುರುಷ ಸರ್ವನಾಮವಾಚಕಗಳು ಸ್ಪಷ್ಟವಾದ ಅವನು, ಅವಳು ಎಂಬ ಲಿಂಗವನ್ನು ಸೂಚಿಸುವುದಿಲ್ಲ. ಅಂತೆಯೇ ಏಕವಚನ ಮತ್ತು ಬಹುವಚನ ವ್ಯತ್ಯಾಸವನ್ನೂ ವ್ಯಕ್ತಪಡಿಸುವುದಿಲ್ಲ. ಈ ಭಾಷೆಗಳು ಅಲ್ಪಪ್ರಮಾಣದ -ಮೂಲ ಪದಗಳು, ವ್ಯಕ್ತಿವಾಚಕ ಸರ್ವನಾಮಗಳು, ಸಂಬಂಧ ಸೂಚಕ ಶಬ್ದಗಳು (ತಂದೆ, ತಾಯಿ ಇತ್ಯಾದಿ), ಸಸ್ಯವರ್ಗ, ಪ್ರಾಣಿವರ್ಗ, ವೃತ್ತಿಸೂಚಕ ಶಬ್ದಗಳು - ಸಾಮಾನ್ಯ ಪದಸಮೂಹವನ್ನು ಹೊಂದಿವೆ. ಈ ಬಗೆಯ ಮೂಲ ಶಬ್ದಕೋಶ ವ್ಯಾಪಕವಾಗಿ ಬಳಕೆಯಲ್ಲಿದೆ. ಆದ್ದರಿಂದ ಯೂರಲ್-ಆಲ್ಟಾಯಿಕ್ ಭಾಷೆಗಳು ಒಂದೇ ಎಂದು ಪರಿಗಣಿಸಲು ಇನ್ನೊಂದು ಪುರಾವೆಯಾಗಿದೆ. ಜೊತೆಗೆ ಬೇರೆ ಬೇರೆ ಸಮಾಜ, ಸಂಸ್ಕøತಿಯ ಜನರೊಂದಿಗೆ ಹೊಂದಿದ ಸಂಪರ್ಕದಿಂದಾಗಿ ಅನ್ಯಭಾಷೆಯ ಶಬ್ದಗಳೂ ಸಾಕಷ್ಟು ಸಂಖ್ಯೆಯಲ್ಲಿ ಈ ಭಾಷೆಗಳಲ್ಲಿ ಸೇರಿವೆ.