ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯೌವನ

ವಿಕಿಸೋರ್ಸ್ದಿಂದ

ಯೌವನ - ಮನುಷ್ಯ ಜೀವನದಲ್ಲಿ ದೈಹಿಕ ಬೆಳವಣಿಗೆ ಸ್ಥಗಿತಗೊಂಡ ಅನಂತರದ ಸಾಮಾಜಿಕ ಜೀವನದ ಜವಾಬ್ದಾರಿಗಳನ್ನು ರೂಢಿಸಿಕೊಳ್ಳುತ್ತಿರುವ ಹಲವಾರು ವರ್ಷಗಳ ಅವಧಿ (ಯೂತ್). ಹರೆಯ, ತಾರುಣ್ಯ ಪರ್ಯಾಯ ನಾಮಗಳು. ಸಾಮಾನ್ಯವಾಗಿ 18-20 ವರ್ಷಗಳು ಕಳೆದ ಮತ್ತು 25-30 ವರ್ಷ ವಯಸ್ಸಿನ ವ್ಯಕ್ತಿಗಳನ್ನು ಯುವಕ ಯುವತಿಯರೆಂದು ಸಂಬೋಧಿಸುವುದು ವಾಡಿಕೆ. ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ವ್ಯಾಪಾರಗಳು ಪಕ್ವವಾಗಿ ವ್ಯಕ್ತಿಯದೇ ಆದ ವೈಶಿಷ್ಟ್ಯಗಳಾಗಿ ಹೊಮ್ಮಲು ಬೇಕಾಗುವ ಕಾಲವಧಿಗೆ ಯೌವನವೆನ್ನುವುದಿದೆ. ದೇಶ, ಕಾಲ, ಧರ್ಮಗಳಿಂದ ಹಾಗೂ ಮನೆತನದ ಮತ್ತು ಹೊರಗಿನ ಅಂದರೆ ಸಾರ್ವಜನಿಕ ಕ್ಷೇತ್ರಗಳ ಪ್ರಭಾವಗಳಿಂದ ಉದ್ಭವಿಸುವ ವೈಯಕ್ತಿಕ ಮುದ್ರೆಯನ್ನು ಗಣಿಸಿ ವ್ಯಕ್ತಿ ಯೌವನಪೂರ್ವ ಕಾಲದವನೆ, ಯುವಕನೆ, ಬೆಳೆದವನೆ ಎಂಬುದನ್ನು ಸ್ಥೂಲವಾಗಿಯೇ ನಿರ್ಧರಿಸಬೇಕಾಗುತ್ತದೆ. ಆದ್ದರಿಂದ ವ್ಯಕ್ತಿಯ ಇಂತಿಷ್ಟನೇ ವಯಸ್ಸಿನಿಂದ ಇಂತಿಷ್ಟನೇ ವಯಸ್ಸಿನ ತನಕವೇ ಯೌವನಕಾಲವೆಂದು ಹೇಳುವುದು ತಪ್ಪಾಗುತ್ತದೆ. ಯೌವನಕಾಲವೆಂದು ನಿರ್ಧರಿಸುವಾಗ ಗಣಿಸಬೇಕಾದ ಅನೇಕ ವಿಷಯಗಳಲ್ಲಿ ವ್ಯಕ್ತಿಯ ದೈಹಿಕ ಬೆಳವಣಿಗೆ ಮುಗಿದಿದೆ ಎನ್ನುವುದು ಒಂದು ಮಾತ್ರ. ಒಬ್ಬೊಬ್ಬ ವ್ಯಕ್ತಿ ಬೆಳೆಯುತ್ತಿರುವ ಪರಿಸರದಲ್ಲಿ ವ್ಯತ್ಯಾಸಗಳಿರುವುದರಿಂದ ಒಬ್ಬೊಬ್ಬ ವ್ಯಕ್ತಿಯ ಯೌವನಕಾಲವನ್ನೂ ಬೇರೆಬೇರೆಯಾಗಿಯೇ ನಿರ್ಧರಿಸಬೇಕಾಗುತ್ತದೆ. ಯಾವುದೊಂದು ಸಣ್ಣ ಸಮಾಜದಲ್ಲಿ ಕೂಡ ಇದು ನಿಜಸ್ಥಿತಿ ಆಗಿರುವುದರಿಂದ ಬೇರೆ ಬೇರೆ ದೇಶಗಳಲ್ಲಿ ಯೌವನವೆಂದು ಗಣಿಸುವ ಕಾಲ ಬೇರೆ ಬೇರೆ ಆಗಿರುವುದು ಸಾಧ್ಯ.

ಒಂದು ಸಂವತ್ಸರವನ್ನು ಹೇಗೆ ವಸಂತ, ಬೇಸಗೆ, ಮಾಗಿ ಮತ್ತು ಚಳಿಗಾಲವೆಂದು ನಾಲ್ಕು ಅವಧಿಗಳಾಗಿ ಗಣಿಸುವುದಿದೆಯೋ ಹಾಗೆಯೇ ಮನುಷ್ಯ ಜೀವನವನ್ನೂ ಪ್ರಾಚೀನ ಗ್ರೀಸಿನ ತತ್ತ್ವe್ಞÁನಿ ಹಗೂ ವಿe್ಞÁನಿ ಪೈಥಾಗೊರಸ್ ಗಣಿಸಿದ್ದಾನೆ. ಆ ಪ್ರಕಾರ ಜೀವನದ ವಸಂತಕಾಲ ಎನ್ನುವುದು ಸು. 30 ವರ್ಷ ವಯಸ್ಸಿನತನಕ - ಶೈಶವ, ಬಾಲ್ಯ ಹಾಗೂ ಯೌವನಗಳನ್ನು ಒಳಗೊಂಡು ಇರುವುದು.

ಸೋಲನ್ ಎಂಬ ಇನ್ನೊಬ್ಬ ತತ್ತ್ವe್ಞÁನಿಯ ಪ್ರಕಾರ ಮನುಷ್ಯ ಜೀವನವನ್ನು 7 ವರ್ಷಗಳ ಅವಧಿಯ 10 ಘಟ್ಟಗಳಾಗಿ ಪರಿಗಣಿಸಬಹುದು. ಬಾಲ್ಯ ಹಾಗೂ ಪ್ರಬುದ್ಧತೆಯ ಘಟ್ಟಗಳನ್ನು ಕಳೆದ ಅನಂತರ 14 ರಿಂದ 24ನೆಯ ವರ್ಷ ವಯಸ್ಸಿನ ಅವಧಿ ಈತನ ಪ್ರಕಾರ ವ್ಯಕ್ತಿಯ ಯೌವನಕಾಲ. ದೈಹಿಕ ಸಾಮಥ್ರ್ಯತೆಯನ್ನು ಪರಮಾವಧಿಕಾಲ, ಸಂತಾನ ಪ್ರಾಪ್ತಿಯ ಅನುಕೂಲತಮ ಕಾಲ.

ಜನಸಾಮಾನ್ಯರ ಗಣನೆಯಂತೆ ಯೌವನ ಎಂದರೆ ವ್ಯಕ್ತಿ ಲಂಗುಲಗಾಮುಗಳಿರದಂತಿರುವುದನ್ನು ಬಿಟ್ಟು ಸ್ವತಃ ಸಂಸಾರ ಹೂಡಿ ಸಾಮಾಜಿಕ ಹೊಣೆಗಾರಿಕೆಗಳನ್ನು ರೂಢಿಸಿಕೊಳ್ಳುತ್ತಿರುವ ಕಾಲವೆಂದು ಸರ್ವವೇದ್ಯವಾಗಿದೆ. ವಯಸ್ಕ ಎಂದು ಗಣಿಸಲ್ಪಡುವುದಕ್ಕೆ ಅಗತ್ಯವಾದ ಶಿಕ್ಷಣಕಾಲ ಇದು. ಈ ಕಾಲದಲ್ಲಿ ವ್ಯಕ್ತಿ ವಿದ್ಯಾಶಿಕ್ಷಣವನ್ನು ಮುಗಿಸಿ ಖಚಿತವಾದ ಉದ್ಯೋಗ ಒಂದನ್ನು ಗಳಿಸುತ್ತಾನೆ, ರಾಜಕೀಯ ಹಾಗೂ ಸಾಮಾಜಿಕ ಹಕ್ಕುಗಳನ್ನು ಸಂಪಾದಿಸಿ ಅವುಗಳ ಬಗ್ಗೆ ತನ್ನ ಹೊಣೆಯೆನು ಎಂಬುದನ್ನು ಅರಿಯುತ್ತಾನೆ. ಸಾಮಾನ್ಯವಾಗಿ ಆರ್ಥಿಕವಾಗಿ ತಂದೆತಾಯಂದಿರ ನೆರವು ಪಡೆಯುವುದನ್ನು ಬಿಟ್ಟು ಸ್ವತಂತ್ರನಾಗುತ್ತಾನೆ. ಮದುವೆಯಾಗಿ ಮಕ್ಕಳ ತಂದೆ ಎನಿಸಿಕೊಳ್ಳುತ್ತಾನೆ.