ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಕ್ತ ಚಂದನ

ವಿಕಿಸೋರ್ಸ್ದಿಂದ

ರಕ್ತ ಚಂದನ - ಪ್ಯಾಬೇಸೀ ಕುಟುಂಬದ ಫ್ಯಾಬಾಯ್ಡೀ ಉಪಕುಟುಂಬಕ್ಕೆ ಸೇರಿರುವ ಪರ್ಣಪಾತಿ ಮರ (ರೆಡ್ ಸ್ಯಾಂಡರ್ಸ್) ಹೊನ್ನೆಮರದ ಹತ್ತಿರ ಸಂಬಂಧಿ. ಅದರಂತೆಯೇ ಇದು ಕೂಡ ಒಳ್ಳೆಯ ಚೌಬೀನೆಮರವಾಗಿ ಪ್ರಸಿದ್ಧವಾಗಿದೆ. ಟೀರೊಪಕಾರ್ಪಸ್ ಸ್ಯಾಂಟಲೈನಸ್ ಇದರ ಸಸ್ಯಶಾಸ್ತ್ರೀಯ ಹೆಸರು. ಇದಕ್ಕೆ ರಂಜನ ಎಂಬ ಹೆಸರೂ ಇದೆ.

ಭಾರತದಲ್ಲಿ ಕೆಲವು ಪ್ರದೇಶಗಳಲ್ಲಿ ಮಾತ್ರ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ. ಆಂಧ್ರಪ್ರದೇಶದ ಕಡಪ, ಕರ್ನೂಲು, ನೆಲ್ಲೂರು ಮತ್ತು ಉತ್ತರ ಅರ್ಕಾಟ್ ಜಿಲ್ಲೆಗಳಲ್ಲಿ ಹೆಚ್ಚು ಕಾಣದೊರೆಯುವ ಇದು ಈ ಜಿಲ್ಲೆಗಳಿಗೆ ಅಂಟಿಕೊಂಡಂತಿರುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಜೆಲ್ಲೆಗಳಲ್ಲೂ ಕೊಂಚಮಟ್ಟಿಗೆ ಬೆಳೆಯುತ್ತದೆ. ಸುಮಾರು 75 ರಿಂದ 100 ಸೆಂಮೀ ಮಳೆ ಬೀಳುವ ಪ್ರದೇಶದಲ್ಲಿ ಇದು ಚೆನ್ನಾಗಿ ಬೆಳೆಯಬಲ್ಲದು.

ಕಲ್ಲುಬಂಡೆಗಳಿರುವ ಬಂಜರು ಭೂಮಿಗಳಲ್ಲಿ, ಬೆಟ್ಟಪ್ರದೇಶಗಳಲ್ಲಿ ನೀರು ಚೆನ್ನಾಗಿ ಬಸಿದುಹೋಗುವಂಥ ನೈಸ್, ಕ್ವಾರ್ಟ್‍ಜೈóಲ್, ಷೇಲ್ ಮತ್ತು ಲ್ಯಾಟರೈಟ್ ಶಿಲೆಗಳ ಭೂಮಿಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಧ್ಯಮಗಾತ್ರದ ಮರ ಇದು; ಸುಮಾರು 10ಮೀ ಎತ್ತರಕ್ಕೆ ಬೆಳೆಯುತ್ತದೆ. ಮುಖ್ಯ ಕಾಂಡದ ವ್ಯಾಸ ಸುಮಾರು 1.5 ಮೀ ಇರುವುದುಂಟು. ತೊಗಟೆ ಕಪ್ಪುಮಿಶ್ರಿತ ಕಂದು. ಕಾಂಡವನ್ನು ಕತ್ತರಿಸಿದರೆ ಕೆಂಪುರಸ ಹೊಮ್ಮುತ್ತದೆ.

ರಕ್ತಚಂದನ ತೀಕ್ಷ್ಣ ಬಿಸಿಲಿನಲ್ಲಿ ಹುಲುಸಾಗಿ ಬೆಳೆಯುತ್ತದೆ. ನೆರಳನ್ನು ಇಷ್ಟಪಡದು. ಬೆಂಕಿಗೆ ಬೇಗ ಈಡಾಗುವುದಿಲ್ಲ. ಬೀಜ ಬಿತ್ತಿ ವೃದ್ಧಿಸಬಹುದು; ಇಲ್ಲವೆ ಕಾಂಡತುಂಡುಗಳಿಂದ ಬೆಳೆಸಬಹುದು. ಬೆಳೆದ ಮರವನ್ನು ಬುಡಮಟ್ಟಕ್ಕೆ ಕತ್ತರಿಸಿದರೆ ಮೋಟಿನಿಂದ ಚೆನ್ನಾಗಿ ಚಿಗುರೊಡೆಯಯುತ್ತದೆ. ಅಲ್ಲದೆ ಬೇರುಸಸಿಗಳೂ ಧಾರಾಳವಾಗಿ ಹುಟ್ಟುವುವು. ಎಳೆಯ ಸಸಿಗಳು ದನಕರು, ಜೆಂಕೆ ಜಾನುವಾರಗಳಿಗೆ ಮೆಚ್ಚಿನ ಮೇವೆನಿಸಿವೆ. ರಕ್ತಚಂದನದ ಎಲೆ ಮೂರು ಕಿರು ಎಲೆಗಳಿಂದ ಕೂಡಿದ ಸಂಯುಕ್ತ ಮಾದರಿಯದು. ಕೆಲವೊಮ್ಮೆ ನಾಲ್ಕು -ಐದು ಕಿರು ಎಲೆಗಳೂ ಇರುವುದುಂಟು. ಹೂವಿನಲ್ಲಿ ಹತ್ತು ಕೇಸರಗಳಿದ್ದು ಅವು ಎರಡು ಗುಂಪುಗಳಾಗಿ ವಿಂಗಡಣೆಗೊಂಡಿರುತ್ತದೆ. ಈ ಸ್ಥಿತಿಗೆ ಡಯಾಡೆಲ್ಫಸ್ ಎಂದು ಹೆಸರು. ಬೀಜಗಳು ಮಳೆಗಾಲದಲ್ಲಿ ಮೊಳೆತು ಸಸಿಯಾಗುತ್ತವೆ. ಬೆಂಕಿ ಅಥವಾ ಜಾನುವಾರಗಳಿಂದ ಬಾಧಿತವಾಗದ ಪ್ರದೇಶಗಳಲ್ಲಿ ಈ ಮರ ಹೆಚ್ಚಾಗಿ ಬೆಳೆಯುತ್ತದೆ. ಸಾಲುಮರಗಳಂತೆ, ಸಾಲು ಚರಂಡಿ, ಕೋಡಿ ಹಾಗೂ ಮಣ್ಣಿನ ದಿಬ್ಬಗಳಲ್ಲಿ ಬೀಜವನ್ನು ಬಿತ್ತಿ ಕೃತಕವಾಗೂ ಬೆಳೆಸಬಹುದು.

ರಕ್ತಚಂದನದ ಚೌಬೀನೆ ಭಾರವಾದ್ದೂ (ಘನ ಅಡಿಗೆ 76 ಪೌಂ) ಗಡುಸಾದ್ದೂ ಬಾಳಿಕೆ ಬರುವಂಥದ್ದೂ ಆಗಿದೆ. ಹದಮಾಡುವುದೂ ಸುಲಭ. ಹೊರ ಮರ ಮಾಸಲು ಬಿಳಿಯ ಬಣ್ಣಕ್ಕಿದ್ದರೆ ಚೇಗುಮರ ಕುಯ್ದ ಹೊಸದರಲ್ಲಿ ಕೆಂಪು ಬಣ್ಣದ್ದಾಗಿದ್ದು ಕ್ರಮೇಣ ಕಂದುಬಣ್ಣಕ್ಕೆ ತಿರುಗುತ್ತದೆ. ಚೌಬೀನೆ ಕೆತ್ತನೆ ಕೆಲಸಗಳಿಗೆ ಉಪಯುಕ್ತ. ರಕ್ತಚಂದನದ ಬೊಂಬೆಗಳು ಪ್ರಸಿದ್ಧವಾಗಿವೆ. ರಕ್ತಚಂದನದ ಕಾಷ್ಠದಲ್ಲಿ ಸ್ಯಾಂಟಲಿನ್ ಎಂಬ ಕೆಂಪು ವರ್ಣಕವೂ ಡೀಸಾಕ್ಸಿ ಸ್ಯಾಂಟಲಿನ್ ಎಂಬ ಹಳದಿ ವರ್ಣಕವೂ ಇವೆ. ಉಣ್ಣೆ, ಹತ್ತಿಬಟ್ಟೆ, ಚರ್ಮ ಮತ್ತು ಬೇರೆ ತೆರನ ಚೌಬೀನೆಗಳಿಗು ಕೆಲವೊಂದು ಆಹಾರಪದಾರ್ಥಗಳು, ಔಷಧಿಗಳು ಹಾಗೂ ಕಾಗದ ಪಲ್ಪಿಗೂ ಬಣ್ಣಕಟ್ಟಲು ಈ ವರ್ಣಕಗಳನ್ನು ಬಳಸಲಾಗುತ್ತದೆ. ಮರಕ್ಕೆ ಪ್ರತಿಬಂಧಕ, ಉತ್ತೇಜಕಗುಣಗಳೂ ಇವೆ. ಊತ, ತಲೆನೋವು ನಿವಾರಣೆಗೆ ಇದರ ಲೇಪ ಹಚ್ಚಲಾಗುತ್ತದೆ. ಜನವರಿಯಿಂದ ಮಾರ್ಚ್ ತಿಂಗಳ ತನಕ ಎಲೆಗಳು ಉದುರುತ್ತವೆ. ಏಪ್ರಿಲ್‍ನಲ್ಲಿ ಹೊಸ ಚಿಗುರು ಮೂಡುತ್ತದೆ. ಏಪ್ರಿಲ್‍ನಿಂದ ಜೂನ್ ತಿಂಗಳ ಹೂ ಬಿಡುವ ಕಾಲ ಹೂಗಳು ಮುಂದಿನ ಫೆಬ್ರವರಿ ವೇಳೆಗ ಕಾಯಾಗಿ ಬಲಿಯುತ್ತವೆ. ಎಲೆಗಳು ದನಗಳಿಗೆ ಒಳ್ಳೆಯ ಮೇವಾಗಿರುತ್ತದೆ. (ಎ.ಕೆ.; ಟಿ.ಎಂ.ಆರ್.)