ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಣಹದ್ದು

ವಿಕಿಸೋರ್ಸ್ದಿಂದ

ರಣಹದ್ದು ಫಾಲ್ಕನಿಫಾರ್ಮೀಸ್ ಗಣಕ್ಕೆ ಸೇರಿದ ಒಂದು ದೊಡ್ಡ ಗಾತ್ರದ ಪಕ್ಷಿ (ವಲ್ಚರ್). ಹದ್ದು, ಗರುಡ, ಗಿಡುಗ ಮುಂತಾದ ಪಕ್ಷಿಗಳ ಹತ್ತಿರ ಸಂಬಂಧಿ. ಸತ್ತಪ್ರಾಣಿಯ ಮಾಂಸವನ್ನು ತಿನ್ನುವ ಈ ಪಕ್ಷಿ ಭಯಂಕರವಾಗಿ ಕಂಡರೂ ಪರಿಸರದ ಆಹಾರ ಸರಪಣಿಯಲ್ಲಿ ಮುಖ್ಯಸ್ಥಾನ ಪಡೆದಿದೆ. ರಣಹದ್ದು ಎಂಬ ಸಾಮಾನ್ಯ ಹೆಸರಿನ ಇಪ್ಪತ್ತಕ್ಕೂ ಹೆಚ್ಚು ಪ್ರಭೇದಗಳಿವೆ. ಉಷ್ಣ ಹಾಗೂ ಸಮಶೀತೋಷ್ಣ ವಲಯಗಳಲ್ಲಿ ಕಂಡುಬರುವ ಈ ಪಕ್ಷಿಗಳು. ಆಸ್ಟ್ರೇಲಿಯ ಹಾಗೂ ಹಿಂದೂಸಾಗರಗಳ ನಡುವೆ ಇರುವ ಕೆಲವು ದ್ವೀಪಗಳನ್ನು ಹೊರತುಪಡಿಸಿ ಎಲ್ಲ ಭೂಪ್ರದೇಶಗಳಲ್ಲೂ ಕಂಡುಬರುತ್ತವೆ. ದಪ್ಪತಲೆ, ಉದ್ದವಾದ ನೀಳಕುತ್ತಿಗೆ, ಭಾರವಾದ ದೇಹ ಹಾಗೂ ನೀಳ ಕಾಲುಗಳುಳ್ಳ ಈ ಪಕ್ಷಿಯ ತಲೆ ಹಾಗೂ ಕುತ್ತಿಗೆಯ ಭಾಗದಲ್ಲಿ ಪುಕ್ಕಗಳಿಲ್ಲದಿರುವುದರಿಂದ ಬೋಳಾಗಿ ಕಾಣುತ್ತದೆ. ಬಲವಾದ ಉದ್ದನೆಯ ಕೊಕ್ಕು ಮುಂಭಾಗದಲ್ಲಿ ಕೆಳಕ್ಕೆ ಭಾಗಿಕೊಂಡಿರುತ್ತದೆ. ಕೊಕ್ಕು ಸಾಕಷ್ಟು ಗಟ್ಟಿಯಾಗಿಯೂ ಬಿರುಸಾಗಿಯೂ ಇದ್ದು ಸತ್ತಪ್ರಾಣಿಗಳ ಅಸ್ಥಿಪಂಜರದ ಒಳಭಾಗದಿಂದಲೂ ಮಾಂಸವನ್ನು ಕಚ್ಚಿ ಎಳೆಯಲು ಸಹಕಾರಿಯಾಗಿದೆ. ಕಾಲುಗಳು ನೀಳವಾಗಿದ್ದರೂ ಬಿರುಸಾದ ಉಗುರುಗಳಿರುವ ಬೆರಳುಗಳು ಸಾಕಷ್ಟು ಬಲವಾಗಿರುವುದರಿಂದ ಮಾಂಸವನ್ನು ಎಲುಬಿನಿಂದ ಬೇರ್ಪಡಿಸುವುದಕ್ಕೆ ಸಹಾಯಕವಾಗಿದೆ. ಕೆಲವು ರಣಹದ್ದುಗಳು ಆಕಾಶದಲ್ಲಿ ಬಹು ಎತ್ತರದಲ್ಲಿ ಹಾರಾಡುತ್ತಿದ್ದರೂ ನೆಲದ ಮೇಲೆ ಓಡಾಡುವ ಚಿಕ್ಕ ಪ್ರಾಣಿಗಳನ್ನು ಪತ್ತೆಹಚ್ಚಬಲ್ಲವು. ರಣಹದ್ದುಗಳು ವಿಶಾಲವಾದ ಕಲ್ಲುಬಂಡೆಗಳ ಮೇಲೆ ಇಲ್ಲವೆ ಬಯಲು ಪ್ರದೇಶಗಳಲ್ಲಿ ಅಥವಾ ಸಮುದ್ರತೀರದಲ್ಲಿ ಸಮುದ್ರದ ಕಡೆ ಚಾಚಿಕೊಂಡಿರುವ ಕಲ್ಲುಬಂಡೆಗಳ ಮೇಲೆ ಗುಂಪಾಗಿ ಕುಳಿತುಕೊಳ್ಳುತ್ತವೆ. ಆಗೊಮ್ಮೆ ಈಗೊಮ್ಮೆ ರೆಕ್ಕೆ ಬಡಿಯುತ್ತ ಚೀರಾಡುತ್ತ ಅಲ್ಲಿಯೇ ಜಿಗಿದಾಡುತ್ತವೆ. ಯಾವುದಾದರೂ ಒಂದು ರಣಹದ್ದು ದೂರದಲ್ಲೆಲ್ಲೊ ಸತ್ತ ಪ್ರಾಣಿಯನ್ನು ಕಂಡರೆ ಉಳಿದವುಗಳಿಗೂ ಸೂಚನೆ ನೀಡುತ್ತದೆ. ಆಗ ಇವು ಹಲವಾರು ಕಿ.ಮೀ. ದೂರವಿದ್ದರೂ ಅಲ್ಲಿಗೆ ಹಾರಿ ಆಹಾರವಿರುವ ಸ್ಥಳವನ್ನು ತಲುಪುತ್ತವೆ. ಆಹಾರ ಭಕ್ಷಣೆಯ ಸಮಯದಲ್ಲಿ ಸಾಮಾನ್ಯ ಸಮಾಜಜೀವನದ ನೀತಿಗಳನ್ನು ಪಾಲಿಸುತ್ತವೆ. ಆಹಾರವನ್ನು ಹಂಚಿಕೊಳ್ಳುವಾಗ ದೊಡ್ಡ ಹಾಗೂ ಬಲಶಾಲಿ ಹದ್ದುಗಳಿಗೆ ಸಿಂಹ ಪಾಲು ದೊರೆಯುತ್ತದೆ. ಕಾಗೆ, ತೋಳ-ಕತ್ತೆಕಿರುಬಗಳಂಥ ಸ್ತನಿಗಳಿಗೂ ಭೋಜನದ ಅವಕಾಶವಿರುತ್ತದೆ.

ಇವು ಪ್ರಾಣಿಗಳಿಗೆ ನಿಲುಕದ ಕಲ್ಲುಬಂಡೆ ಅಥವಾ ಎತ್ತರವಾದ ದೈತ್ಯವೃಕ್ಷಗಳ ತುದಿಯಲ್ಲಿ ಗೂಡು ನಿರ್ಮಿಸುತ್ತವೆ. ಒಂದೇ ಕಡೆ ಹಲವು ಗೂಡುಗಳೂ ಇರುವುದುಂಟು. ಒಂದು ಅಥವಾ ಎರಡು ಮೊಟ್ಟೆಯನ್ನಿಟ್ಟು ಏಳರಿಂದ ಎಂಟು ವಾರಗಳ ತನಕ ಕಾವುಕೊಟ್ಟು ಮರಿ ಮಾಡುತ್ತವೆ.

ಅಮರಿಕ ರಾಜಹದ್ದು (ಕಿಂಗ್ ವಲ್ಚರ್- ಸಾರ್ಕೊರ್ಯಾಂಪಸ್ ಪಾಪ) ಎಂಬುದು ಮೆಕ್ಸಿಕೋ, ಮಧ್ಯ ಅಮೆರಿಕ ಹಾಗೂ ಆರ್ಜಂಟೈನಗಳ ನಡುವೆ ಕಾಣದೊರೆಯುವ ಒಂದು ಪ್ರಭೇದ. ವರ್ಣರಂಜಿತವಾಗಿರುವ ಇವುಗಳ ತಲೆ ಹಾಗೂ ಕುತ್ತಿಗೆಯ ಭಾಗಗಳು ಕೆಂಪು, ಹಳದಿ ಅಥವಾ ನೀಲಿ ಬಣ್ಣಗಳಿಂದ ಕೂಡಿರುತ್ತವೆ. ಕಣ್ಣಿನ ಸುತ್ತ ಕೆಂಪುಬಣ್ಣದ ಒಂದು ವೃತ್ತವಿರುತ್ತದೆ. ರೆಕ್ಕೆ ಬಿಚ್ಚಿದಾಗ ಇವು ಸು. 1.7ಮೀ ಅಗಲವಿರುತ್ತದೆ.

ಕಪ್ಪು ರಣಹದ್ದು (ಏಜಿಪ್ಷಿಯನ್ಸ್ ಮಾನಕಸ್) ಎಂಬುದು ರಣಹದ್ದುಗಳ ಪೈಕಿ ಅತಿ ದೊಡ್ಡದು. ಸು. 100 ಸೆಂಮೀ ಉದ್ದದ ಈ ಪಕ್ಷಿ ರೆಕ್ಕೆ ಬಿಚ್ಚಿದಾಗ 2.7 ಮೀ ಅಗಲವಿರುತ್ತದೆ. ನಿಯೊಫ್ರೋನ್ ಎಂಬ ಈಜಿಫ್ಷಿಯನ್ ರಣಹದ್ದು ಹದ್ದುಗಳಲ್ಲೆ ಚಿಕ್ಕದು. ಇದರ ಉದ್ದ 60 ಸೆಂಮೀ.

ರಾಜ ರಣಹದ್ದು (ಸಾರ್ಕೊಜಿಪ್ಸ್ ಕ್ಯಾಲ್ವಸ್) ಎಂಬುದು ಭಾರತದಲ್ಲಿ ಕಾಣಸಿಕ್ಕುವ ರಣಹದ್ದು. ಈ ಪ್ರಭೇದ ಪಾಕಿಸ್ತಾನದಿಂದ ಭಾರತವೂ ಸೇರಿದಂತೆ ಮಲೇಷ್ಯದವರೆಗೂ ಹರಡಿವೆ. 75 ಸೆಂ.ಮೀ ಉದ್ದದ ಈ ರಣಹದ್ದು ರೆಕ್ಕೆ ಬಿಚ್ಚಿದಾಗ 2.7 ಮೀ ಅಗಲವಿರುತ್ತದೆ. ಮೇಲ್ಭಾಗದಲ್ಲಿ ಕಪ್ಪು ಬಣ್ಣವಿರುವ ಈ ಪಕ್ಷಿಗಳ ತಳಭಾಗ ಬೂದುಬಣ್ಣದ್ದು. ನಡತೆ ಹಾಗೂ ದೇಹದ ಅಂಗರಚನೆಯಲ್ಲಿ ಇವು ಉಳಿದ ಪ್ರಭೇದಗಳನ್ನು ಹೋಲುತ್ತವೆ. (ಎಸ್.ಎನ್.ಎಚ್.)

ಭಾರತದಲ್ಲಿ ಒಟ್ಟು ಏಳು ಪ್ರಭೇದಗಳ ರಣಹದ್ದುಗಳು ಕಂಡುಬರುತ್ತವೆ. ಕೊಳೆತ ಮಾಂಸವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರುವ ಇವು, ನಮ್ಮ ಪರಿಸರದ ಸೂಕ್ಷ್ಮ ಕೊಂಡಿಗಳಲ್ಲೊಂದು.

(ನೋಡಿ : ಭಾರತದ ರಣಹದ್ದಿನ ಬಿಕ್ಕಟ್ಟು) (ಪರಿಷ್ಕರಣೆ : ಕೆ ಎಸ್ ನವೀನ್)