ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರತ್ನಗಂಧಿ

ವಿಕಿಸೋರ್ಸ್ದಿಂದ

ರತ್ನಗಂಧಿ - ಲೆಗ್ಯೂಮಿನೋಸೀ ಕುಟುಂಬದ ಸಿಸಾಲ್‍ಪಿನೇ ಉಪಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ (ಪೀಕಾಕ್ ಕೋಂಬ್ ಫ್ಲವರ್). ಕೆಂಜಿಗೆಗಿಡ್ಡ ಪರ್ಯಾಯ ನಾಮ ಸೀಸಾಲ್‍ಪಿನಿಯ ಪಲ್ಚರೈಮ ಇದರ ವೈಜ್ಞಾನಿಕ ಹೆಸರು. ಭಾರತವೂ ಸೇರಿದಂತೆ ಉಷ್ಣವಲಯದ ಹಲವಾರು ದೇಶಗಳಲ್ಲಿ ಇದನ್ನು ಕಾಣಬಹುದು.

ಇದು ಸುಮಾರು 3.7 ಮೀಟರ್ ಎತ್ತರ ಬೆಳೆಯುವ ಪೊದೆರೂಪದ ಮರ. ಎಲೆಗಳು ಸಂಯುಕ್ತ ಮಾದರಿಯವು; ಒಂದೊಂದು ಎಲೆಯಲ್ಲೂ 8.16 ಕಿರುಎಲೆಗಳಿರುವುವು. ಹೂಗಳು ರೆಂಬೆಗಳ ತುದಿಗಳಲ್ಲಿ ರೇಸಿಮೋಸ್ ಮಾದರಿಯ ಗೊಂಚಲುಗಳಲ್ಲಿ ಅರಳುವುವು. ದಳಗಳು ಕೆಂಪು ಇಲ್ಲವೆ ಹಳದಿ ಬಣ್ಣದವರಾಗಿದ್ದು ಹೂಗಳ ಆಕರ್ಷಕ ಗುಣಕ್ಕೆ ಕಾರಣವಾಗಿದೆ.

ರತ್ನಗಂಧಿ ಗಿಡವನ್ನುಬೀಜಗಳಿಂದ ವೃದ್ಧಿಸಬಹುದು. ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲದೆ ಈ ಸಸ್ಯವನ್ನು ಔಷಧಿಗಾಗಿಯೂ ಬಳಸುವುದುಂಟು. ಸೊಪ್ಪಿನ ಕಷಾಯ ಗರ್ಭಸ್ರಾವಕಾರಕ, ಆಮಶಂಕೆ, ಚರ್ಮರೋಗ ಚಿಕಿತ್ಸೆಯಲ್ಲೂ ಕಷಾಯವನ್ನು ಉಪಯೋಗಿಸುವುದಿದೆ. ಹೂವಿನಲ್ಲಿ ಗ್ಯಾಲಿಕ್ ಆಮ್ಲ ಟ್ಯಾನಿನ್ ಮುಂತಾದ ರಾಸಾಯನಿಕಗಳು ಸಮೃದ್ಧಿಯಾಗಿದೆ. ಹೂವಿನಿಂದ ಕೆಂಪು ಬಣ್ಣವನ್ನು ತಯಾರಿಸುವುದುಂಟು. (ಎಸ್.ಐ.ಎಚ್.)