ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಬ್ಬರ್

ವಿಕಿಸೋರ್ಸ್ದಿಂದ

ರಬ್ಬರ್ - ನೈಸರ್ಗಿಕವಾಗಿ ದೊರೆಯುವ, ಸಂಶ್ಲೇಷಣೆಯಿಂದ ತಯಾರಿಸುವ ಇಲ್ಲವೆ ಸ್ಥಿತಿಸ್ಥಾಪಕ ಗುಣಗಳಿರುವ ಪರಿಷ್ಕøತಗೊಳಸಿದ ಉಚ್ಚ ಪಾಲಿಮರ್. ಜಾತಿ ಸೂಚಕ ಪದ ಎಲ್ಯಾಸ್ಟೊಮರ್. ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ, ಹೀವಿಯ ಬ್ರಸಿಲಿಯೆನ್ಸಿಸ್ ಎಂಬ ಮರದಿಂದ ಒಸರುವ ಹಾಲ್ನೊರೆಯನ್ನು (ಸಸ್ಯಕ್ಷೀರ-ಲೇಟೆಕ್ಸ್) ಸಂಗ್ರಹಿಸಿ, ಸಂಸ್ಕರಿಸಿ ಇದನ್ನು ತಯಾರು ಮಾಡುವುದಿದೆ.

ಮರದ ಕಾಂಡದಿಂದ 3-4 ಅಡಿ ಎತ್ತರದಲ್ಲಿ ತೊಗಟೆಯನ್ನು ತೆಳುವಾಗಿ ಹೆರೆದು, ಕಾಂಡದ ಸುತ್ತಳತೆಯ ಅರ್ಧಭಾಗದಷ್ಟನ್ನು 300 ಕೋನದಲ್ಲಿ ಕತ್ತರಿಸಲಾಗುವುದು. ಮುಂಜಾನೆ ಸಸ್ಯಕ್ಷೀರ ಸರಾಗವಾಗಿ ಸ್ರವಿಸುವುದರಿಂದ ಸೂರ್ಯೋದಯ ಕಾಲಕ್ಕೆ ಈ ಕೆಲಸ ಪ್ರಶಸ್ತವೆನಿಸುತ್ತದೆ.

ಸಾಮಾನ್ಯವಾಗಿ ವರ್ಷಕ್ಕೆ ಎರಡರಿಂದ ಆರು ಬಾರಿ ಸಸ್ಯಕ್ಷೀರವನ್ನು ತೆಗೆಯುತ್ತಾರೆ. ಅನಂತರ ಗಿಡಕ್ಕೆ ಕೆಲವು ತಿಂಗಳ ವಿಶ್ರಾಂತಿ. ಹೀಗೆ 25-30 ವರ್ಷಗಳ ತನಕ ರಬ್ಬರ್ ಗಿಡ ಸಸ್ಯಕ್ಷೀರವನ್ನು ಒದಗಿಸಬಲ್ಲದು.

ಸಸ್ಯಕ್ಷೀರದ ಬಹುಭಾಗ ನೀರು. ಇದರಲ್ಲಿ ಅಲ್ಪ ಪ್ರಮಾಣದ ಶರ್ಕರಗಳು, ಇನಾಗ್ರ್ಯಾನಿಕ್ ಲವಣಗಳು ಮತ್ತು ಪ್ರೊಟೀನುಗಳು ಇರುವುವು. ಇಂಥ ಜಲೀಯ ಮಾಧ್ಯಮದಲ್ಲಿ ರಬ್ಬರ್‍ನ ಗೋಳಾಕಾರದ ಕಣಗಳು ಕಲಿಲಸ್ಥಿತಿಯಲ್ಲಿ ಇರುತ್ತದೆ. ಸಸ್ಯಕ್ಷೀರದ ತೂಕದ ಶೇ. 30-40 ಮಾತ್ರ ರಬ್ಬರ್. ಇದಕ್ಕೆ ಆಮ್ಲಗಳನ್ನೋ (ಫಾರ್ಮಿಕ್ ಅಥವಾ ಅಸೆಟಿಕ್) ಕೆಲವು ಲವಣಗಳನ್ನೂ ಸೇರಿಸಿದಾಗ ವಿದ್ಯುದಾವೇಶವಿರುವ ರಬ್ಬರ್‍ನ ಕಣಗಳು ವಿದ್ಯುದ್ರಹಿತವಾಗಿ ಗರಣೆಗಟ್ಟುವುದರಿಂದ ದಪ್ಪ ಕಣಗಳು ಮೈದಳೆಯುತ್ತವೆ.

ಇದಕ್ಕಿಂತ ಮೊದಲು ಸಸ್ಯಕ್ಷೀರವನ್ನು ಸೋಸಿ ಇದರಲ್ಲಿರುವ ಕಲ್ಮಷಗಳನ್ನು ತೆಗೆದುಹಾಕಲಾಗುತ್ತದೆ. ಅನಂತರ ಇದನ್ನು ತೊಟ್ಟಿಗಳಿಗೆ ಸುರಿದು ಸಮ ಪ್ರಮಾಣದಲ್ಲಿ ನೀರನ್ನು ಸೇರಿಸುತ್ತಾರೆ. ಗರಣಿಗಟ್ಟಿಸಲು ಅಸಿಟಿಕ್ ಆಮ್ಲ, ಫಾರ್ಮಿಕ್ ಆಮ್ಲ ಅಥವಾ ಸೋಡಿಯಮ್ ಸಿಲಿಕೊಫ್ಲೂರೈಡ್ ಸೇರಿಸುವುದು ವಾಡಿಕೆ. ಆಗ ಸಸ್ಯಕ್ಷೀರ ಒತ್ತರಿಸುತ್ತದೆ. ಇದನ್ನು ಸಂಗ್ರಹಿಸಿದ 24 ಗಂಟೆಯೊಳಗೆ ಅದನ್ನು ಗರಣೆಗಟ್ಟಿಸಬೇಕು. ಇಲ್ಲದಿದ್ದರೆ ಅದು ಹುಳಿಹಿಡಿದು ವಿಭಜನೆ ಹೊಂದುತ್ತದೆ. ಗರಣೆಗಟ್ಟಿಸುವ ತೊಟ್ಟಿಗಳಲ್ಲಿ ಅಲ್ಯೂಮಿನಿಯಮ್ ವಿಭಾಜಕಗಳಿರುತ್ತವೆ. ಇವನ್ನು ಬೇಕೆನಿಸಿದಾಗ ದ್ರವದಲ್ಲಿ ಅದ್ದಬಹುದು. ಆಗ ರಬ್ಬರ್ ಮೇಲೇರಿ ಬಂದು ವಿಭಾಜಕಗಳ ನಡುವೆ ಫಲಕಗಳ ರೂಪದಲ್ಲಿ ಸಂಗ್ರಹವಾಗುವುದು. ಇವನ್ನು ಹೊರ ತೆಗೆದು, ತೊಳೆದು ಲೋಹದ ಸಿಲಿಂಡರುಗಳ ನಡುವೆ ಹಿಸುಕುವರು. ಬರುವ ರಬ್ಬರ್ ಹಾಳೆಗಳ ದಪ್ಪ 0.125 ಅಂಗುಲದಷ್ಟಿರುತ್ತದೆ. ಇವನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಹೊಗೆಗೂಡಿನಲ್ಲಿ ಒಂದು ವಾರದ ತನಕ ತೂಗು ಹಾಕುತ್ತಾರೆ.

ಗರಣೆಗಟ್ಟಿಸುವ ಹಂತದಲ್ಲಿ ಆಮ್ಲಕ್ಕೆ ಸ್ವಲ್ಪಮಟ್ಟಿನ ಸೋಡಿಯಮ್ ಬೈಸಲ್ಫೈಟ್ ಸೇರಿಸಿದರೆ ರಬ್ಬರಿಗೆ ತಿಳಿಹಳದಿ ಬಣ್ಣ ಬರುವುದು. ನೈಸರ್ಗಿಕ ರಬ್ಬರ್ ಸಸ್ಯಕ್ಷೀರಕ್ಕೆ ಅಮೋನಿಯ ದ್ರಾವಣ ಸೇರಿಸುವುದು ರೂಢಿ. ಇದು ರಕ್ಷಕವಾಗಿ ವರ್ತಿಸುತ್ತದೆ ಮತ್ತು ಗರಣೆಗಟ್ಟಿಸುವ ತನಕ ಸಸ್ಯಕ್ಷೀರ ಕಲಿಲಸ್ಥಿತಿಯಲ್ಲೇ ಉಳಿಯುವಂತೆ ನೋಡಿಕೊಳ್ಳುತ್ತದೆ. ಇತ್ತೀಚಿಗೆ ಅಮೋನಿಯ ಬದಲು ಫಾರ್ಮಾಲ್ಡಿಹೈಡ್ ಮತ್ತು ಪೊಟ್ಯಾಸಿಯಮ್ ಹೈಡ್ರಾಕ್ಸೈಡ್‍ಗಳನ್ನು ಸೇರಿಸುವುದು ವಾಡಿಕೆ.

ರಬ್ಬರು ಸಂಸ್ಕರಣದಲ್ಲಿ ಜಗಿಯು (ಮ್ಯಾಸ್ಟಿಕೇಟಿಂಗ್) ಹಂತ ಮುಖ್ಯ. ಈ ಘಟ್ಟದಲ್ಲಿ ಸಮಾಂತರವಾಗಿ ತಿರುಗುತ್ತಿರುವ ಎರಡು ಕಬ್ಬಿಣದ ರೋಲರುಗಳ ನಡುವೆ ರಬ್ಬರ್ ತುಂಡುಗಳನ್ನು ಒತ್ತಡದಲ್ಲಿ ಅರೆಯಲಾಗುವುದು. ಆಗ ಒಂದು ರೋಲರಿಗೆ ರಬ್ಬರಿನ ಹಾಳೆ ಅಂಟಿಕೊಳ್ಳುತ್ತದೆ. ಹೀಗೆ ಅರೆಯಲ್ಪಟ್ಟ ರಬ್ಬರಿಗೆ ಬೇಕಾದ ರಂಗುಗಳನ್ನು ಸೇರಿಸುತ್ತಾರೆ. ಇದು ಸಂಯೋಜನಾ (ಕಾಂಪೌಂಡಿಂಗ್) ಹಂತ. ಬಟ್ಟೆ ಮೊದಲಾದವುಗಳಿಗೆ ರಬ್ಬರ್ ಲೇಪಿಸುವ ವಿಧಾನಕ್ಕೆ ಕ್ಯಾಲೆಂಡರಿಂಗ್ ಇಂದು ಹೆಸರು. ರಬ್ಬರ್ ಟ್ಯೂಬುಗಳನ್ನು ಮಾಡಲು ಎಕ್ಸ್‍ಟ್ರೂಡರ್ ಎಂಬ ಯಂತ್ರ ಬಳಸುತ್ತಾರೆ.

ರಬ್ಬರಿಗೆ ಕೂಡಿಸಲಾಗುವ ಇತರ ಪದಾರ್ಥಗಳು

1. ಫಿಲ್ಲರ್‍ಗಳು: ಇವು ಬಲವರ್ಧಕಗಳು. ರಬ್ಬರಿಗೆ ಗಡಸುತನ ಮತ್ತು ಘರ್ಷಣೆ, ಉಷ್ಣತೆ ಮತ್ತು ರಾಸಾಯನಿಕಗಳ ಪ್ರಭಾವವನ್ನು ಎದರುರಿಸುವ ಸಾಮಥ್ರ್ಯವನ್ನು ನೀಡುತ್ತದೆ. ವೈದ್ಯುತಗುಣಗಳನ್ನು ಸುಧಾರಿಸುತ್ತದೆ. ಬಳಕೆಯಲ್ಲಿರುವ ಫಿಲ್ಲರುಗಳಲ್ಲಿ ಮುಖ್ಯವಾದವು; ಬರೈಟಿಸ್ (ನೈಸರ್ಗಿಕ ಬೇರಿಯಮ್ ಸಲ್ಫೇಟ್) ಕಲ್ನಾರಿನ ಪುಡಿ, ಗಟ್ಟಿಮಣ್ಣು ಫ್ಯಾಕ್ಟಿಸ್ (ಕೆಲವು ಸಸ್ಯತೈಲಗಳೊಡನೆ ಗಂಧಕ ವರ್ತಿಸಿದಾಗ ಉಂಟಾಗುವ ರಬ್ಬರಿನಂಥ ಪದಾರ್ಥ), ಟಾಲ್ಕ್ (ಜಲಸಂಯೋಜಿತ ಮೆಗ್ನೀಸಿಯಮ್ ಕಾರ್ಬೊನೇಟ್, ಕ್ಯಾಲ್ಸಿಯಮ್ ಸಿಲಿಕೇಟ್ ಮತ್ತು ಸಿಲಿಕಾನ್ ಡೈಆಕ್ಸೈಡ್ ಸೇರಿಸಿದರೆ ರಬ್ಬರ್ ಎರಡಕ್ಕೂ ಇಂಗಾಲಮಸಿಯನ್ನು (ಕಾರ್ಬನ್ ಬ್ಲ್ಯಾಕ್) ಸೇರಿಸುವುದು ಅನಿವಾರ್ಯ.

2. ಬಣ್ಣಗಳು: ಹಿಂದೆ ರಬ್ಬರಿಗೆ ಬಣ್ಣಕೊಡಲು ಕಬ್ಬಿಣದ ಆಕ್ಸೈಡುಗಳು, ಸತುವಿನ ಆಕ್ಸೈಡ್, ಸತುವಿನ ಸಲ್ಫೈಡ್ ಮತ್ತಿ ಲಿಥೂಪೋನ್ (ಬೇರಿಯಮ್) ಸಲ್ಫೇಟ್ ಮತ್ತು ಸತುವಿನ ಸಲ್ಫೈಡ್‍ಗಳ ನಿಕಟಮಿಶ್ರಣ ಸೇರಿಸುತ್ತಿದ್ದರು. ಈಗ ಉತ್ಕøಷ್ಟ ಬಿಳಿಯ ರಂಗು ಎನಿಸಿಕೊಂಡಿರುವ ಟೈಟೇನಿಯಮ್ ಡೈಆಕ್ಸೈಡ್ ಮತ್ತು ಆಗ್ರ್ಯಾನಿಕ್ ಮೂಲದ ಥ್ಯಾಲೊ ಸಯನೈನ್ ಬಣ್ಣಗಳನ್ನು ಅಳವಡಿಸುವುದು ಪದ್ಧತಿ. ಬಣ್ಣಗಳನ್ನು ಆಯ್ಕೆಮಾಡುವಾಗ ಅವುಗಳಿಗೂ ಮತ್ತು ರಬ್ಬರಿನಲ್ಲಿರುವ ಇತರ ಕಚ್ಚಾ ಪದಾರ್ಥಗಳಿಗೂ ನಡುವೆ ಜರುಗಬಹುದಾದಾ ರಾಸಾಯನಿಕ ಪ್ರತಿಕ್ರಿಯೆಗಳನ್ನು ಗಮನಿಸುವುದು ಅಗತ್ಯ.

3. ನಮ್ಯಕಗಳು : (ಪ್ಲ್ಯಾಸ್ಟಿಸೈಸರ್ಸ್) ಮತ್ತು ಮೆಧುಕಕಾರಕಗಳು (ಸಾಫನರ್ಸ್) ರಬ್ಬರ್ ಉದ್ಯಮದ ಆದಿಕಾಲದಿಂದಲೂ ನಾನಾ ಬಗೆಯ ಸಸ್ಯ ಮತ್ತು ಪ್ರಾಣಿ ತೈಲಗಳು, ಉತ್ಕರ್ಷಿತ ಪೆಟ್ರೋಲಿಯಮ್ ಶೇಷವಸ್ತುಗಳು, ಕೊಬ್ಬಿನ ಆಮ್ಲಗಳು ಅಥವಾ ಅವುಗಳ ಸತುವಿನ ಲವಣಗಳು, ಮೇಣಗಳು, ಡಾಂಬರು ಮತ್ತು ಅಂಟುಗಳನ್ನು ಸೇರಿಸುವಂಥ ಪರಿಪಾಠವಿದೆ. ಇದರಿಂದ ರಬ್ಬರಿನ ಸಂಸ್ಕರಣಕ್ಕೆ ಅನುಕೂಲ ಒದಗುತ್ತದೆ. ಸಂಶ್ಲೇಷಿತ ರಬ್ಬರಿಗೆ ಕಲ್ಲಿದ್ದಲ ಶುಷ್ಕಾಸವನದಿಂದ ದೊರೆಯುವ ಕೆಲವು ಅಂಟುಗಳನ್ನು ಸೇರಿಸಿದರೆ ಅದು ಬಲು ಮೃದುವಾಗುತ್ತದೆ.

4. ವಲ್ಕನೈಸರುಗಳು : ಬೇಸಗೆಯಲ್ಲಿ ಕರಗಿ ಮೆದುವಾಗಿ, ಚಳಿಗಾಲದಲ್ಲಿ ಗಡಸಾಗಿ ಒಡೆಯುವುದು ಸಾಮಾನ್ಯ ರಬ್ಬರಿನ ಸ್ವಭಾವ. ರಬ್ಬರಿಗೆ ಕೆಲವು ಗಂಧಕದ ಸಂಯುಕ್ತಗಳನ್ನು ಸೇರಿಸಿದಾಗ ಹೀಗಾಗದು. ಈ ವಿಧಾನಕ್ಕೆ ವಲ್ಕನೈಸೇಷನ್ ಎಂದು ಹೆಸರು. ಇದನ್ನು ಉಪಜ್ಞಿಸಿದವ ಅಮೆರಿಕದ ಚಾರಲ್ರ್ಸ್ ಗುಡ್‍ಇಯರ್ (1800-60). ಈತ ಮೊತ್ತಮೊದಲು ತಯಾರಿಸಿದ ವಲ್ಕನೀಕೃತ ರಬ್ಬರಿನಲ್ಲಿ ಗಂಧಕದೊಡನೆ ಸೀಸವೂ ಇತ್ತು. ಇಂದು ಬಳಕೆಯಲ್ಲಿರುವ ವಲ್ಕನೈಸರುಗಳ ಪೈಕಿ ಟೆಟ್ರಮಿಥೈಲ್-ಥಯೂರಮ್ ಡೈಸಲ್ಫೈಡ್, ಗಂಧಕ ಮಿಶ್ರಿತ ಸೆಲೆನಿಯಮ್ ಮತ್ತು ಟೆಲ್ಯೂರಿಯಮ್, ಬೆನ್‍ಜೋಯಿಲ್ ಪರಾಕ್ಸೈಡ್, ಎರಡು ಅಥವಾ ಮೂರು ನೈಟ್ರೊಜನ್ ಪರಮಾಣುಗಳನ್ನು ಒಳಗೊಂಡ ಆ್ಯರೋಮ್ಯಾಟಿಕ್ ಚಕ್ರೀಯ ಸಂಯುಕ್ತಗಳು, ಡಯಾಕ್ಸೀನುಗಳು, ಡೈಐಸೊಸಯನೇಟುಗಳು ಮತ್ತು ಡೈನೈಟ್ರೊಸೊ ಸಂಯುಕ್ತಗಳನ್ನು ಹೆಸರಿಸಬಹುದು. ಗುಡ್ ಇಯರ್‍ನ ಉಪಜ್ಞೆಯಿಂದ ಬೈಸಿಕಲ್ ಮತ್ತು ಮೋಟರ್ ಟೈರುಗಳ ತಯಾರಿಕೆಗೆ ಇಂಬು ದೊರಕಿತು.

5. ವಲ್ಕನೈಸೇಷನ್ ಉತ್ತೇಜಕಗಳು : ಇವು ವಲ್ಕನೈಸೇಷನ್ ಕ್ರಿಯೆಯನ್ನು ಚುರುಕುಗೊಳಿಸುವುದಲ್ಲದೆ ಕ್ರಿಯೆ ಕಡಿಮೆ ಉಷ್ಣತೆಯಲ್ಲಿ ಜರುಗಲು ನೆರವಾಗುವುವು. ಉತ್ಪನ್ನದ ಗುಣಮಟ್ಟವೂ ಸುಧಾರಿಸುತ್ತದೆ. ಇವುಗಳಲ್ಲಿ ಥಯೂರಮ್‍ಗಳು ಡೈಥಯೊಕಾರ್ಬಮೇಟುಗಳು, ಸತುವಿನ ಆಲ್ಯೈಲ್ ಕ್ಯ್ಸಾಂತೇಟುಗಳು, ನೈಟ್ರೊಸೋಡಿಮೀಥೈಲ್ ಅನಿಲಿನ್, ಡೈಫೀನೈಲ್ ಗ್ವಾನಿಡಿನ್, ಮರ್‍ಕ್ಯಾಪ್ಟೊ ಬೆನ್‍ಜೋಥಯೊಜೋಲ್ ಮುಖ್ಯವಾದವು. ಇವುಗಳೊಡನೆ ಸತುವಿನ ಆಕ್ಸೈಡ್ ಮತ್ತು ಸ್ಟಿಯರಿಕ್ ಆಮ್ಲಗಳಿದ್ದರೆ ಹೆಚ್ಚು ಪರಿಣಾಮಕಾರಿ.

6. ಉತ್ಕರ್ಷಣ ವಿರೋಧಿಗಳು ಮತ್ತು ಆಯುರ್ವರ್ಧಕಗಳು : ಭೂಮಿಯ ವಾಯುಮಂಡಲದಲ್ಲಿರುವ ಆಕ್ಸಿಜನ್ ರಬ್ಬರಿನ ಮೇಲೆ ಬೀರುವ ದುಷ್ಪರಿಣಾಮವನ್ನು ಕುಂಠಿತಗೊಳಿಸುವುದು ಇವುಗಳ ಕೆಲಸ. ಇದರ ಸಲುವಾಗಿ ಅಲ್ಡಾಲ್-ಆಲ್ಫ-ನ್ಯಾಫ್ತೈಲ್ ಅಮೀನ್, ಫೀನೈಲ್-ಬೀಟ-ನ್ಯಾಫ್ತೈಲ್ ಅಮೀನ್, ಡೈ-ಬೀಟ-ನ್ಯಾಫ್ತೈಲ್-ಪ್ಯಾರಾ-ಫಿನಿಲೀನ್ ಡಯಮೀನ್ ಮತ್ತು ಪಾಲಿಮರೀಕೃತ ಟ್ರೈಮೀಥೈಲ್ ಡೈಹೈಡ್ರೊಕ್ಟಿನೊಲಿನ್ ಉಪಯೋಗಿಸುತ್ತಾರೆ. ಕಾರು, ಲಾರಿ, ಬಸ್ಸು ಮೊದಲಾದ ಸಾರಿಗೆ ವಾಹನಗಳ ಟೈರುಗಳಿಗೆ ಇಂಥ ರಬ್ಬರು ಅಗತ್ಯ.

7. ನೂಲುಗಳು : ಹತ್ತಿ, ರೇಯಾನ್ ಮತ್ತು ನೈಲಾನ್‍ಗಳನ್ನೊಳಗೊಂಡ ರಬ್ಬರಿನಿಂದ ವಾಹನಗಳ ಟೈರುಗಳು, ಪಾದರಕ್ಷೆಗಳು ಮತ್ತು ತೇವನಿರೋಧಕ ಉಡುಪುಗಳು (ರೇನ್ ಕೋಟು, ಟಾರ್ಪಾಲಿನ್‍ಗಳು) ಇತ್ಯಾದಿಗಳನ್ನು ತಯಾರಿಸುವುದಿದೆ.

ನೈಸರ್ಗಿಕ ರಬ್ಬರಿನ ಗುಣಲಕ್ಷಣಗಳು : ಸ್ಥಿತಿಸ್ಥಾಪಕಸಾಮಥ್ರ್ಯ ರಬ್ಬರಿನ ವೈಶಿಷ್ಟ್ಯ. 0-100ಅ ಉಷ್ಣತೆ ಮಿತಿಯಲ್ಲಿ ಗಡಸಾಗುವುದು. 500ಅ ಮೀರಿ ಕಾಸಿದರೆ ಮೆತ್ತಗಾಗಿ ಸುಮಾರು 190-2000ಅ ಮಿತಿಯಲ್ಲಿ ಕಾಸಿದಾಗ ತನ್ನ ಥರ್ಮೊಪ್ಲ್ಯಾಸ್ಟಿಕ್ ಗುಣವನ್ನು ಕಳೆದುಕೊಂಡು ಬಲಯುತವಾಗುವುದು; ಸ್ಥಿತಿಸ್ಥಾಪಕಸಾಮಥ್ರ್ಯ ಹೆಚ್ಚುವುದು. ವಲ್ಕನೀಕೃತ ಮೆದುರಬ್ಬರನ್ನು ಇದರ ಉದ್ದದ 7-10 ಪಟ್ಟು ಎಳೆದು ಬಿಟ್ಟರೆ ತನ್ನ ಪೂರ್ವಸ್ಥಿತಿಗೇ ಮರಳುತ್ತದೆ. ನೈಸರ್ಗಿಕ ರಬ್ಬರ್‍ನ ಒಂದು ಚದರ ಸೆಂಟಿಮೀಟರ್ ತುಂಡು 275-350 ಕೆಜಿ ಭಾರ ಭರಿಸಬಲ್ಲದು. ಇದಕ್ಕೆ ನೀರು ಅಂಟಿ ಒದ್ದೆಯಾಗುವುದಿಲ್ಲ. ಇದರ ಮೂಲಕ ಅನಿಲಗಳು ಹಾಯವು. ರಬ್ಬರ್ ವಿದ್ಯುನ್ನಿರೋಧಕ. ವಾಸ್ತವವಾಗಿ ಎಬೊನೈಟ್ ಒಂದು ಉತ್ತಮ ಪರಾವೈದ್ಯುತ (ಡೈಎಲೆಕ್ಟ್ರಿಕ್). ರಬ್ಬರ್ ರಾಸಾಯನಿಕವಾಗಿ ಐಸೊಪ್ರೀನ್‍ನ (ಅ2ಊ8) ಪಾಲಿಮರ್. ಸಹಸ್ರಾರು ಅಣುಗಳು (40-80 ಸಾವಿರ ಎಂದು ಅಂದಾಜು) ನೇರ ಸರಣಿಯಾಗಿ ಹೆಣೆದುಕೊಂಡು ಮೈದಳೆದಿರುವ ಒಂದು ಬೃಹದಣುವೇ ಐಸೊಪ್ರೀನ್. ರಬ್ಬರ್ ದೈತ್ಯಾಣುವಿನ ಎಡ ಬಲ ತುದಿಗಳಲ್ಲಿರುವ ಪರಮಾಣು ಗುಚ್ಛಗಳ ನಿಖರಚಿತ್ರ ಇನ್ನೂ ಅಲಭ್ಯ. ಆರ್ಗ್ಯಾನಿಕ್ ದ್ರಾವಕಗಳಾದ ಬೆನ್‍ಜೀನ್, ಕ್ಲೋರೊಫಾರಮ್, ಕಾರ್ಬನ್ ಟೆಟ್ರಕ್ಲೋರೈಡ್ ಈಥರ್ ಮೊದಲಾದವುಗಳಲ್ಲಿ ರಬ್ಬರ್ ವಿಲೀನವಾಗಿ ಸ್ನಿಗ್ಧರಾಶಿಯಾಗುವುದು. ಈ ಸ್ಥಿತಿಯಲ್ಲಿ ಅದನ್ನು ಸಂಪೀಡನದಿಂದ ಯಾವ ರೂಪಕ್ಕಾದರೂ ತರಬಹುದು. ಉತ್ಪನ್ನದ ರೂಪರೇಷೆ ಶಾಶ್ವತವಾಗಿರುತ್ತದೆ.

ಸಂಶ್ಲೇಷಿತ ರಬ್ಬರ್ : ಕೆಲವು ಅಪರ್ಯಾಪ್ತ ಹೈಡ್ರೊಕಾರ್ಬನ್ನುಗಳು ಮತ್ತು ಅವುಗಳ ಉತ್ಪನ್ನಗಳ ಅಣುರಚನೆಗಳಲ್ಲಿ ಯುಕ್ತ ಪುನರ್ವ್ಯವಸ್ಥೆ ಮಾಡಿದಾಗ ರಬ್ಬರಿನಂಥ ಪದಾರ್ಥ ದೊರೆಯುತ್ತದೆ. ಇಲ್ಲಿ ನಡೆಯುವ ಕ್ರಿಯೆ ಮೂಲತಃ ಪಾಲಿಮರೀಕರಣ ಅಂದರೆ, ಎರಡು ಅಥವಾ ಹೆಚ್ಚು ಸದೃಶ ಅಥವಾ ವಿಭಿನ್ನ ಅಣುಗಳು ಒಂದಕ್ಕೊಂದು ಲಗತ್ತಾಗಿ ಮಾನೊಮರ್ ಎಂಬ ಮೂಲಘಟಕವಾಗಿ, ಅನಂತರ ಇವು ಒಂದಕ್ಕೊಂದು ಹೆಣೆದುಕೊಂಡು ಒಂದು ದೈತ್ಯಾಣುವನ್ನು ಕೊಡುವ ವಿಶಿಷ್ಟಕ್ರಿಯೆ. ಇದಕ್ಕೆ ಬೇಕಾದ ಕಚ್ಚಾವಸ್ತುಗಳು ಬಹುತೇಕ ಪೆಟ್ರೋಲಿಯಮ್ ಉತ್ಪನ್ನಗಳು. ಕೋಕ್ (ಕಲ್ಲಿದ್ದಲು ಶುಷ್ಕಾಸವನದಿಂದ ಲಭ್ಯವಾದ ಇಂಗಾಲದ ಘನ), ಸುಣ್ಣಕಲ್ಲು, ಉಪ್ಪು ಮತ್ತು ಗಂಧಕಗಳ ಪಾತ್ರವೂ ಉಂಟು. ಸಂಶ್ಲೇಷಿತ ರಬ್ಬರಿನ ಮುಖ್ಯ ಪ್ರಭೇದಗಳನ್ನು ಈ ಮುಂದೆ ಪ್ರಸ್ತಾವಿಸಲಾಗಿದೆ.

1. ಎಸ್ ಬಿ ಆರ್ (ಜಿ ಆರ್-ಎನ್ ಅಥವಾ ಬ್ಯೂನಾ-ಎಸ್) : ಇದು ಬ್ಯೂಟಡಯೀನ್ (ಅಊ2 = ಅಊ-ಅಊ = ಅಊ2) ಮತ್ತು ಸ್ಟೈರೀನ್‍ಗಳಿಂದ (ಅ6ಊ5-ಅಊ = ಅಊ2) ಆದ ಪಾಲಿಮರ್. ಬ್ಯೂಟಡಯೀನ್ ತಯಾರಿಸಲು ನಾನಾ ವಿಧಾನಗಳುಂಟು. ಪೆಟ್ರೋಲಿಯಮ್ ಹೈಡ್ರೊಕಾರ್ಬನ್ನುಗಳನ್ನು ಸೀಳಿ, ನೈಸರ್ಗಿಕ ಅನಿಲದಲ್ಲಿರುವ ಬ್ಯೂಟೀನ್‍ನಿಂದ. ಆಲ್ಕೊಹಾಲ್ ಆವಿಯನ್ನು ಕಾಸಿದ ಅಲ್ಯೂಮಿನಿಯಮ್ ಆಕ್ಸೈಡ್ ಮತ್ತು ಸತುವಿನ ಆಕ್ಸೈಡುಗಳ ಮಿಶ್ರಣದ ಮೇಲೆ ಹಾಯಿಸಿ, ಕಾರ್ಬೊಹೈಡ್ರೇಟುಗಳ ಕಿಣ್ವನದಿಂದ ಉತ್ಪತ್ತಿಯಾಗುವ ಬ್ಯೂಟೆಲೀನ್ ಗ್ಲೈಕಾಲ್‍ನಿಂದ, ಬ್ಯೂಟಡಯೀನ್ ಮಾಡಿಕೊಳ್ಳಬಹುದು.

ಕಲ್ಲಿದ್ದಲು ಡಾಂಬರಿನಿಂದ ಬೆನ್‍ಜೀನ್ ಒದಗುತ್ತದೆ. ಪೆಟ್ರೋಲಿಯ್ ಅಥವಾ ಆಲ್ಕೋಹಾಲ್‍ನಿಂದ ಎಥಿಲೀನ್ ಪಡೆಯಬಹುದು. ಬೆನ್‍ಜೀನಿನ ಆವಿ ಮತ್ತು ಎಥಿಲೀನ್ ಅನಿಲಗಳ ಮಿಶ್ರಣವು ನಿರ್ಜಲ ಅಲ್ಯೂಮಿನಿಯಮ್ ಕ್ಲೋರೈಡ್ ಕ್ರಿಯಾವರ್ಧಕದ ಸಮ್ಮುಖದಲ್ಲಿ ವರ್ತಿಸಿದಾಗ ಸ್ಟೈರೀನ್ ಉಂಟಾಗುತ್ತದೆ. 75% ಬ್ಯೂಟಡಯೀನ್ ಮತ್ತು 25% ಸ್ಟೈರೀನ್‍ಗಳನ್ನು ಎಮಲ್ಷನ್‍ಮಾಡಿ. ಕ್ಯೂಮೀನ್ ಹೈಡ್ರೊಪರಾಕ್ಸೈಡ್ ಮತ್ತು ಪ್ಯಾರಾಮೆಂಥೇನ್ ಹೈಡ್ರೊಪರಾಕ್ಸೈಡ್‍ಗಳ ಮಿಶ್ರಣದ ಸಂಪರ್ಕದಲ್ಲಿ ವರ್ತಿಸಲು ಬಿಟ್ಟಾಗ 500ಅ ಉಷ್ಣತೆಯಲ್ಲಿ ಅವು ಸಹಪಾಲಿಮರೀಕರಣ ಹೊಂದಿ ರಬ್ಬರ್ ಉಂಟಾಗುತ್ತದೆ. ಇದರ ನಮ್ಯಗುಣ ಕಡಿಮೆ. ಆದ್ದರಿಂದ ಭಾರವಾಹನಗಳ ಟೈರುಗಳಿಗೆ ತಕ್ಕುದಲ್ಲ. ಆದರೆ ಆಕ್ಸಿಜನ್ ನಿರೋಧಕ ಸಾಮರ್ಥ್ಯ ಅಧಿಕ.

2. ಬ್ಯೂಟೈಲ್ : ಇದು ಐಸೊಬ್ಯೂಟೀನ್ ಮತ್ತು 2-3% ಐಸೊಪ್ರಿನ್‍ಗಳ ಸಹಪಾಲಿಮರ್. ಕ್ರಿಯೆ ನಡೆಯಲು-940ಅನಷ್ಟು ಶೈತ್ಯ ಮತ್ತು ನಿರ್ಜಲ ಅಲ್ಯೂಮಿನಿಯಮ್ ಕ್ಲೋರೈಡ್ ಕ್ರಿಯಾವರ್ಧಕ ಆವಶ್ಯಕ. ಬೋರಾನ್ ಫ್ಲೂರೈಡ್ ಹಾಯಿಸಿದರೆ ಕ್ರಿಯೆ ಪ್ರಚೋದಿತಗೊಳ್ಳುತ್ತದೆ. ಪೆಂಟೇನ್ ಅಥವಾ ಎಥಿಲೀನ ಸೇರಿಸಿದರೆ ಉತ್ಪತ್ತಿಯಾಗುವ ಉಷ್ಣ ಹೀರಲ್ಪಡುತ್ತದೆ. ನೈಸರ್ಗಿಕ ರಬ್ಬರಿಗಿಂತ ಇದರ ಉತ್ಕರ್ಷಣ ನಿರೋಧಕ ಸಾಮಥ್ರ್ಯ ಹೆಚ್ಚು. ಆದ್ದರಿಂದ ಓಜೋನ್ ಮತ್ತು ಆಮ್ಲಗಳಿಂದ ಬಾಧಿತವಾಗದು.

3. ನೈಟ್ರೀಲ್ (ಬ್ಯೂನಾ-ಎನ್) : ಇದು ಬ್ಯೂಟಡಯೀನ್ ಮತ್ತು ಅಕ್ರಿಲೊನೈಟ್ರೀಲ್‍ಗಳ (ಅಊ2 = ಅಊ.ಅಓ) ಸಹಪಾಲಿಮರ್, ಎಥಿಲೀನ್ ಕ್ಲೋರೊಹೈಡ್ರಿನ್ ಮತ್ತು ಸೋಡಿಯಮ್ ಸಯನೈಡ್‍ಗಳ ಸಂಯೋಗದಿಂದ ಹೈಡ್ರಾಕ್ರಿಲಿಕ್ ನೈಟ್ರೀಲ್ ಉಂಟಾಗುವುದಷ್ಟೆ ಇದನ್ನು ನಿರ್ಜಲೀಕರಿಸಿದಾಗ ಅಕ್ರಿಲೊನೈಟ್ರೀಲ್ ದೊರೆಯುವುದು. ಯುಕ್ತ ಕ್ರಿಯಾವರ್ಧಕದ ಸಮ್ಮುಖದಲ್ಲಿ ಅಸಿಟಲೀನ್ ಹೈಡ್ರೊಜನ್ ಸಯನೈಡನ್ನು ಕೂಡಿಸಿಕೊಂಡಾಗಲೂ ಅಕ್ರಿಲೊ ನೈಟ್ರೀಲ್ ಲಭ್ಯ. ಸಹ ಪಾಲಿಮರೀಕರಣಕ್ರಿಯೆಗೆ ಒಂದು ಎಮಲ್ಸಿಫಯರ್ ಯಂತ್ರ, ಯುಕ್ತ ಕ್ರಿಯಾವರ್ಧಕ ಮತ್ತು 130ಅ ಉಷ್ಣತೆಗಳು ಅಗತ್ಯ. ಘರ್ಷಣೆ, ಉನ್ನತ ಉಷ್ಣತೆ ಮತ್ತು ಆರೋಮ್ಯಾಟಿಕ್ ತೈಲಗಳ ಪ್ರತಿಕ್ರಿಯೆಯನ್ನು ಈ ರಬ್ಬರ್ ಸಹಿಸಿಕೊಳ್ಳಬಲ್ಲುದು.

4. ನಿಯೊಪ್ರೀನ್ : ಇದು ಕ್ಲೋರೋಪ್ರೀನ್‍ನ (ಅ2ಊ5ಅಐ) ಪಾಲಿಮರ್. ಕ್ಲೋರೋಪ್ರೀನ್ ತಯಾರಿಸುವುದು ಅಬಟಲೀನ್‍ನಿಂದ. ಸಂಶ್ಲೇಷಿತ ರಬ್ಬರ್ ತಯಾರಿಕಾ ಕಾರ್ಖಾನೆಗಳಲ್ಲಿ, ಪೆಟ್ರೋಲಿಯಮ್ ಅಥವಾ ನೈಸರ್ಗಿಕ ಅನಿಲದಲ್ಲಿರುವ ಹೈಡ್ರೊಕಾರ್ಬನ್‍ಗಳನ್ನು ಅಧಿಕೋಷ್ಣ ವಿದ್ಯುಚ್ಚಾಪದ ಮೂಲಕ ಹಾಯಿಸಿ ಅವನ್ನು ಒಡೆದು ಅಸಿಟಲೀನ್ ಮಾಡಿಕೊಳ್ಳಲಾಗುತ್ತದೆ. ಇದರಿಂದ ವಿನೈಲ್ ಅಸಿಟಲೀನ್ ತಯಾರಿಸಿ, ಅದಕ್ಕೆ ಕ್ರಿಯಾವರ್ಧಕದ ನೆರವಿನಿಂದ ಹೈಡ್ರೊಕ್ಲೋರಿಕ್ ಆಮ್ಲವನ್ನು ಕೂಡಿಸಿದರೆ ಕ್ಲೋರೋಪ್ರೀನ್ ಸಿದ್ಧವಾಗುತ್ತವೆ. ಇದು ಎಮಲ್ಷನ್‍ಸ್ಥಿತಿಯಲ್ಲಿ ಗಂಧಕದ ಸಹಯೋಗದಲ್ಲಿ ಸ್ವಯಂಪಾಲಿಮರೀಕರಣಕ್ಕೆ ಈಡಾಗಿ ನಿಯೊಪ್ರೀನ್ ರಬ್ಬರನ್ನು ಕೊಡುತ್ತದೆ. ಇದರ ಭಾರಧಾರಣಸಾಮರ್ಥ್ಯ ಹೆಚ್ಚು. ಉತ್ಕರ್ಷಣ ವಿರೋಧಿ. ಆದ್ದರಿಂದ ಭೂಮಿಯ ವಾಯುಮಂಡಲದಲ್ಲಿರುವ ಓಜೋನ್‍ನಿಂದ ಬಾಧಿತವಾಗದು.

5. ಥಯೊಕಾಲ್‍ಗಳು : ಇದನ್ನು ಪಾಲಿಸಲ್ಫೈಡ್ ರಬ್ಬರ್‍ಗಳು ಎಂದೂ ಕರೆಯುವುದಿದೆ. ಇದರಲ್ಲಿ ಂ ಮತ್ತು ಃ ಎಂಬ ಎರಡು ಬಗೆಗಳುಂಟು. ಇವು ಎಥಿಲೀನ್, ಡೈಹ್ಯಾಲೈಡ್ ಮತ್ತು ಕ್ಷಾರೀಯ ಪಾಲಿಸಲ್ಫೈಡ್‍ಗಳ ಮಿಲನದಿಂದ ಉಂಟಾದ ಉತ್ಪನ್ನಗಳು. ಥಯೊಕಾಲ್-ಂ ಎಂಬುದು ಎಥಿಲೀನ್ ಡೈಕ್ಲೋರೈಡ್ ಮತ್ತು ಸೋಡಿಯಮ್ ಪಾಲಿಸಲ್ಫೈಡ್‍ಗಳಿಂದಾದ ಪಾಲಿಮರ್, ಎಥಿಲೀನ್ ಮತ್ತು ಕ್ಲೋರೀನ್‍ಗಳ ನೇರ ಸಂಯೋಗದಿಂದ ಎಥಿಲೀನ್ ಡೈಕ್ಲೋರೈಡ್ (ಅಊ2.ಅಐ-ಅಊ2.ಅಐ) ಉಂಟಾಗುವುದು. ಗಂಧಕವನ್ನು ಸೋಡಿಯಮ್ ಸಲ್ಫೈಡ್ ದ್ರಾವಣದಲ್ಲಿ ವಿಲೀನಗೊಳಿಸಿದರೆ ಅಥವಾ ಸೋಡಿಯಮ್ ಹೈಡ್ರಾಕ್ಸೈಡ್‍ನ ಜಲೀಯ ದ್ರಾವಣದೊಡನೆ ಕಾಸಿದರೆ ಸೋಡಿಯಮ್ ಪಾಲಿಸಲ್ಫೈಡ್ (ಓಚಿ2Sಟಿ : ಟಿ ( 2ರಿಂದ 5) ಸಿದ್ಧಗೊಳ್ಳುತ್ತದೆ. ಪಾಲಿಮರೀಕರಣಕ್ಕೆ 750ಅ ಉಷ್ಣತೆ ಅಗತ್ಯ.

ಥಯೊಕಾಲ್--ಃಡೈಕ್ಲೋರೋಈಥೈಲ್ ಈಥರ್ ಮತ್ತು ಸೋಡಿಯಮ್ ಪಾಲಿಸಲ್ಫೈಡ್‍ಗಳಿಂದಾದ ಪಾಲಿಮರ್.

ಥಯೊಕಾಲ್ ರಬ್ಬರುಗಳ ವೈಶಿಷ್ಟ್ಯ ಎರಡು. ಇದಕ್ಕೆ ಎಣ್ಣೆ ಮತ್ತು ಲೀನಕಾರಿಗಳು ಅಂಟುವುದಿಲ್ಲ. ಈ ರಬ್ಬರುಗಳು ತಮ್ಮ ಮೂಲಕ ಅನಿಲಗಳನ್ನು ಹಾಯಲು ಬಿಡುವುದಿಲ್ಲ.

6. ಸ್ಟೀರಿಯೊಸ್ಪೆಸಿಫಿಕ್ ರಬ್ಬರುಗಳು : ಸ್ಟೀರಿಯೊಸ್ಪೆಸಿಫಿಕ್ ಕ್ರಿಯಾವರ್ಧಕಗಳ ಆವಿಷ್ಕಾರ (ಕಾರ್ಲ್ ಸೀಗ್ಲರ್--1954) ಇಂಥ ರಬ್ಬರ್‍ಗಳ ಸಂಶ್ಲೇಷಣೆಗೆ ನಾಂದಿಯಾಯಿತು. ಇವು ರಾಸಾಯನಿಕವಾಗಿ ಸಿಸ್ -- 1.4-ಪಾಲಿಐಸೊಪ್ರೀನ್ ಅಥವಾ ಸಿಸ್ - 1, 4-ಪಾಲಿಬ್ಯೂಟಡಯೀನ್ ಎಂದೆನಿಸುತ್ತವೆ. ಇವು ನೈಸರ್ಗಿಕ ರಬ್ಬರಿನ ಬಹುತೇಕ ಲಕ್ಷಣಗಳನ್ನು ಹೊಂದಿದೆ. ಪಾಲಿಮರೀಕರಣ ಕಾಲದಲ್ಲಿ ಅಯಾನಿಕ ಕ್ರಿಯಾವರ್ಧಕಗಳಿರಬೇಕು. ಫೈರ್‍ಸ್ಟೋನ್ ವಿಧಾನದಲ್ಲಿ 100 ಭಾಗ ಐಸೊಪ್ರೀನ್‍ಗೆ 0.1 ಭಾಗ ಲಿಥಿಯಮ್ ಸೇರಿಸಿ 30-400ಅ ಉಷ್ಣತೆಯಲ್ಲಿ ಕಾಸುತ್ತಾರೆ.

ಕಳಪೆಯಿಂದ ರಬ್ಬರ್ ಸಂಪಾದನೆ : ಪ್ರಪಂಚಾದ್ಯಂತ ಪ್ರತಿವರ್ಷ ಲಕ್ಷಾಂತರ ಟನ್‍ಗಳಷ್ಟು ಚೂರು ಪಾರು ರಬ್ಬರ್ ಶೇಖರವಾಗುತ್ತಿದೆ. ಇದರಿಂದಲೂ ರಬ್ಬರ್ ಸಂಪಾದಿಸುವ ಪ್ರಯತ್ನಗಳು ನಡೆಯುತ್ತಿವೆ. ಇದೊಂದು ಲಾಭದಾಯಕ ಉದ್ಯಮ. ನಿರುಪಯೋಗಿ ಟೈರುಗಳು, ಟ್ಯೂಬುಗಳು, ಪಾದರಕ್ಷೆಗಳು ಇತ್ಯಾದಿಗಳನ್ನು ತುಂಡರಿಸಿ, ಅರೆದು, ಕ್ಷಾರೀಯ ವಿಧಾನದಿಂದ ಸಂಸ್ಕರಿಸಲಾಗುವುದು. ಕಚ್ಚಾವಸ್ತುವಿನಲ್ಲಿ ನೂಲುಗಳಿದ್ದರೆ ಅದನ್ನು ಹೀಟರ್ ವಿಧಾನಕ್ಕೆ ಈಡು ಮಾಡುತ್ತಾರೆ. ಅನಂತರ ಉತ್ಪನ್ನವನ್ನು ಸಾಂಪ್ರದಾಯಿಕ ವಿಧಾನಗಳಿಂದ ಸಂಸ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು.

ಫೋಮ್ ರಬ್ಬರ್ : ಇದನ್ನು ಸ್ಪಂಜ್ ರಬ್ಬರ್ ಎಂದೂ ಕರೆಯುವುದುಂಟು. ಇದು ಕೇವಲ ನೊರೆಗೂಡಿಸಿದ ರಬ್ಬರ್ ಲೇಟೆಕ್ಸ್ (ಸಸ್ಯಕ್ಷೀರ). ಇದಕ್ಕೆ ಹಾಕುವ ಮಾಮೂಲು ಪದಾರ್ಥಗಳ ಜೊತೆಗೆ ಸಾಬೂನು ಮತ್ತು ಸೋಡಿಯಮ್ ಸಿಲಿಕೊಫಪ್ಲೊರೈಡ್, ಪಾಲಿವೀನೈಲ್ ಮೀಥೈಲ್ ಈಥರ್ ಅಥವಾ ಅಮೋನಿಯಮ್ ಸತುವಿನ ಸಂಯುಕ್ತಗಳಂಥ ಜೆಲ್‍ಜನಕಗಳನ್ನು ಕೂಡಿಸಿ ಯಾಂತ್ರಿಕವಾಗಿ ನೊರೆಯೆಬ್ಬಿಸುತ್ತಾರೆ. ಉತ್ಪನ್ನದಲ್ಲಿರುವುದು 85% ವಾಯು; 15% ಮಾತ್ರ ರಬ್ಬರ್. ಇದನ್ನು ಎರೆಕಹುಯಿದು, ವಲ್ಕನೈಸ್ ಮಾಡಿ ವಿದ್ಯುದ್ವಿಧಾನದಿಂದ ಒಣಗಿಸಲಾಗುವುದು. ಪರ್ಯಾಯವಾಗಿ ಸಸ್ಯಕ್ಷೀರಕ್ಕೆ ಹೈಡ್ರೊಜನ್ ಪರಾಕ್ಸೈಡ್ ಮತ್ತು ಜೀವಂತ ಯೀಸ್ಟ್ ಸೇರಿಸಬಹುದು. ಅದರಲ್ಲಿರುವ ಕೆಟಲೇಸ್ ಎಂಬ ಕಿಣ್ವ ಹೈಡ್ರೊಜನ್ ಪರಾಕ್ಸೈಡನ ವಿಭಜನೆಯನ್ನು ಚುರುಕುಗೊಳಿಸಿ, ಅದರಿಂದ ಬಿಡುಗಡೆಯಾದ ಆಕ್ಸಿಜನ್ ನೊರೆಯನ್ನು ಬಡಿದೆಬ್ಬಿಸುತ್ತದೆ. ನೊರೆಯನ್ನು ಶೈತ್ಯೀಕರಿಸಿ, ಕಾರ್ಬನ್ ಡೈಆಕ್ಸೈಡ್‍ನಿಂದ ಗರಣೆಗಟ್ಟಿಸಿ ತೇವಸ್ಥಿತಿಯಲ್ಲೇ ವಲ್ಕನೈಸ್ ಮಾಡುತ್ತಾರೆ. ಫೋಮ್ ರಬ್ಬರಿನಿಂದ ಮಾಡಿದ ಹಾಸಿಗೆ, ದಿಂಬು, ಸೋಫಾ, ವಾಹನದ ಪೀಠಗಳು ಮತ್ತು ಚಿತ್ರಮಂದಿರಗಳಲ್ಲಿ ಆಸನಗಳಿಗೆ ಅಳವಡಿಸಿರುವ ಮೆತ್ತೆಗಳು ಇತ್ಯಾದಿ ಚಿರಪರಿಚಿತ. (ನೋಡಿ- ಎಲ್ಯಾಸ್ಟೊಮರ್) (ಎಚ್.ಜಿ.ಎಸ್.)