ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಸಲ್, ಬರ್ಟ್ರಂಡ್

ವಿಕಿಸೋರ್ಸ್ದಿಂದ

ರಸಲ್, ಬರ್ಟ್‍ರಂಡ್ 1872 - 1970. ಇಂಗ್ಲಿಷ್ ಗಣಿತಶಾಸ್ತ್ರಜ್ಞ, ತತ್ತ್ವಶಾಸ್ತ್ರಜ್ಞ, ವಿಚಾರಸಾಹಿತ್ಯ ಬರೆಹಗಾರ ಹಾಗೂ ಸಮಾಜ ಸುಧಾರಕ. 1872 ಮೇ 18 ರಂದು ಇಂಗ್ಲೆಂಡಿನ ಟ್ರಿಲೆಕ್ ಎಂಬಲ್ಲಿ ಜನಿಸಿದ. ಸಾಮಾನ್ಯ ಬಾಲಕರಂತೆ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯದೆ ಮನೆಯಲ್ಲಿಯೇ ಖಾಸಗಿ ಉಪಧ್ಯಾಯರಿಂದ ಶಿಕ್ಷಣ ಪಡೆದು ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಲ್ಲಿ ಪರಿಣತನಾದ. 1890ರಲ್ಲಿ ಕೇಂಬ್ರಿಜಿನ ಟ್ರಿನಿಟಿ ಕಾಲೇಜನ್ನು ಸೇರಿದ. 1894ರಲ್ಲಿ ಪದವಿ ಪಡೆದು 1895ರಲ್ಲಿ ಅದೇ ಕಾಲೇಜಿನ ಫೆಲೋ ಆಗಿ ಆಯ್ಕೆಯಾದ. ಈತ ತತ್ತ್ವಶಾಸ್ತ್ರದ ಅಧ್ಯಾಪಕನಾಗಿ ಕೇಂಬ್ರಿಜ್, ಆಕ್ಸ್‍ಫರ್ಡ್, ಹಾರ್ವರ್ಡ್ ಹಾಗೂ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ದುಡಿದ. ಒಂದನೆಯ ಮಹಾಯುದ್ಧದ ಕಾಲದಲ್ಲಿ ತನ್ನ ಶಾಂತಿಪರ ಅಭಿಪ್ರಾಯಗಳಿಗಾಗಿ ನಾಲ್ಕು ತಿಂಗಳ ಕಾಲ ಸೆರೆಮನೆಯಲ್ಲಿದ್ದ. ಕೆಲಕಾಲ ಪೀಕಿಂಗ್‍ನಲ್ಲಿ (ಬೀಜಿಂಗ್) ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. 1950ರಲ್ಲಿ ಸಾಹಿತ್ಯಕ್ಕಾಗಿ ಇವನಿಗೆ ನೊಬೆಲ್ ಬಹುಮಾನ ಲಭಿಸಿತು. 60 ರ ದಶಕದ ಆರಂಭದಲ್ಲಿ ಪರಮಾಣು ಅಸ್ತ್ರಗಳನ್ನು ವಿರೋಧಿಸುವ ಚಳವಳಿಯ ನಾಯಕತ್ವ ವಹಿಸಿ ಮುಪ್ಪಿನಲ್ಲಿ ಕೆಲಕಾಲ ಸೆರೆವಾಸ ಅನುಭವಿಸಿದ.

ಇಪ್ಪತ್ತನೆಯ ಶತಮಾನದ ಬೌದ್ಧಿಕ ಕ್ಷೇತ್ರದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬನಾದ ರಸಲ್ ತನ್ನ ವಿಚಾರ ಸಾಹಿತ್ಯದಲ್ಲಿ ಮುಟ್ಟದ ವಿಷಯವಿಲ್ಲ. ಇವನ ಜ್ಞಾನದ ವಿಸ್ತಾರ ಆಶ್ಚರ್ಯಕರವಾದುದು. ಗಣಿತಶಾಸ್ತ್ರ, ತರ್ಕಶಾಸ್ತ್ರ, ತತ್ತ್ವಶಾಸ್ತ್ರಗಳ ಅಧ್ಯಯನದ ಬೌದ್ಧಿಕ ಶಿಸ್ತನ್ನು ಅರಗಿಸಿಕೊಂಡ ಈತನ ವಿಷಯ ಸಂಗ್ರಹ, ಜೋಡಣೆ, ಹರಿತವಾಗ ತರ್ಕಶಕ್ತಿ, ಯಾವ ವಿಷಯವನ್ನೇ ಆರಿಸಿಕೊಳ್ಳಲಿ ಅದರ ನಿರೂಪಣೆಗೆ ಪರಿಣಾಮ ನೀಡುತ್ತವೆ. ವಿಶಾಲವಾದ ಹಿನ್ನೆಲೆಯಲ್ಲಿ ಪ್ರತಿ ವಿಷಯದ ಮೌಲ್ಯ ನಿರ್ಧರಿಸುವುದು ಈತನ ಮಾರ್ಗ. ಪೂರ್ವನಿಶ್ಚಿತ ಅಭಿಪ್ರಾಯಗಳ ಸಂಕೋಲೆ ಇಲ್ಲದೆ ಯಾವ ಒಂದು ರಾಷ್ಟ್ರ ಅಥವಾ ಪಂಥ ಅಥವಾ ಮತದ ಪ್ರತಿಪಾದನೆಗೆ ಕಟ್ಟುಬೀಳದೆ ನಿರ್ಭಯವಾಗಿ ತನ್ನ ವಿಚಾರ ವಾಹಿನಿಯನ್ನು ಮುಂದಿಟ್ಟ. ರಾಷ್ಟ್ರ ಪ್ರೇಮ, ಸಮಾಜನೀತಿ, ಮೊದಲಾದ ವಿಷಯಗಳನ್ನು ಕುರಿತು ಈತ ವ್ಯಕ್ತಪಡಿಸಿದ ಅಭಿಪ್ರಾಯಗಳು ಹಲವರನ್ನು ಅಸಮಾಧಾನಗೊಳಿಸಿವೆ. ರಸಲ್ ಬುದ್ಧಿಗೆ ಹೆಚ್ಚಿನ ಪ್ರಾಧಾನ್ಯ ಕೊಡುತ್ತಾನೆ; ಹೃದಯದ ಪ್ರಭಾವವನ್ನು ಸಂಪೂರ್ಣವಾಗಿ ಅರಿತಿಲ್ಲ ಎನ್ನುವುದು ಇವನ ಬರೆಹಗಳನ್ನು ಕುರಿತ ಒಂದು ಆಕ್ಷೇಪಣೆ. ಪ್ರಿನ್ಸಿಪಲ್ಸ್ ಆಫ್ ಮ್ಯಾಥಮ್ಯಾಟಿಕ್ಸ್ (1903), ಅವರ್ ನಾಲೆಡ್ಜ್ ಆಫ್ ದಿ ಎಕ್ಸ್‍ಟರ್‍ನಲ್ ವಲ್ರ್ಡ್ (1914), ಪ್ರಿನ್ಸಿಪಿಯಾ ಮ್ಯಾಥಮ್ಯಾಟಿಕಾ (ಪ್ರೊಫೆಸರ್ ಎ. ಎನ್. ವೈಟ್‍ಹೆಡ್ ಇವರೊಂದಿಗೆ, 1910 - 130, ಮಿಸ್ಟಿಸಿಸಮ್ ಅಂಡ್ ಲಾಜಿಕ್ (1918), ಅನಾಲಿಸಿಸ್ ಆಫ್ ಮೈಂಡ್ (1921), ದಿ ಎಬಿಸಿ ಆಫ್ ಆಟಮ್ಸ್ (1923), ದಿ ಎಬಿಸಿ ಆಫ್ ರಿಲೆಟಿವಿಟಿ (1925), ಎಜುಕೇಷನ್ ಅಂಡ್ ದಿ ಗುಡ್ ಲೈಫ್ (1926), ಸ್ಕೆಪ್ಟಿಕಲ್ ಎಸ್ಸೆಸ್ (1928), ಮ್ಯಾರೇಜ್ ಅಂಡ್ ಮಾರಲ್ಸ್ 91929), ದಿ ಕಾನ್‍ಕ್ವೆಸ್ಟ್ ಆಫ್ ಹೆಪಿನೆಸ್ (1930), ಎಜುಕೇಷನ್ ಅಂಡ್ ದಿ ಸೋಷಿಯಲ್ ಆರ್ಡರ್ (1932), ಎ ಹಿಸ್ಟರಿ ಆಫ್ ವೆಸ್ಟ್ರರ್ನ್ ಫಿಲಾಸಫಿ (1946). ಅಥಾರಿಟಿ ಅಂಡ್ ದಿ ಇಂಡಿವಿಜ್ಯುಯಲ್ (1949), ನ್ಯೂ ಹೋಪ್ಸ್ ಫಾರ್ ಎ ಚೇಂಜೀಂಗ್ ವಲ್ರ್ಡ್ (1951), ದಿ ಇಂಪ್ಯಾಕ್ಟ್ ಆಫ್ ಸೈನ್ಸ್ ಆನ್ ಸೊಸೈಟಿ (1952), ಹ್ಯಾಸ್ ಮ್ಯಾನ್ ಎ ಫ್ಯೂಚರ್ (1962) - ಇವು ಇವನ ಮುಖ್ಯ ಕೃತಿಗಳು.

ತತ್ತ್ವಶಾಸ್ತ್ರ : ತರ್ಕ ತತ್ತ್ವಶಾಸ್ತ್ರಕ್ಕೆ ಮೂಲಭೂತವಾದುದೆಂದು ರಸಲ್ಲನ ಅಭಿಪ್ರಾಯ. ತತ್ತ್ವಶಾಸ್ತ್ರದ ವಿವಿಧ ಸಿದ್ಧಾಂತಗಳ ಪ್ರಾಮಾಣ್ಯ ನಿರ್ಧರಿಸುವಾಗ ಅವುಗಳಲ್ಲಿಯ ತರ್ಕವನ್ನೇ ತಳಹದಿಯಾಗಿಟ್ಟುಕೊಳ್ಳಬೇಕು. ತನ್ನ ತರ್ಕದ ಮೂಲಾಂಶಗಳು ಭೌತಪರಮಾಣು ತತ್ತ್ವದಂತೆ ಅಣುರೂಪಗಳೆಂದೂ ಆದ್ದರಿಂದಲೇ ತನ್ನ ಸಿದ್ಧಾಂತ ತರ್ಕಪರಮಾಣುವಾದವೆಂದೂ ಈತ ಕರೆದಿದ್ದಾನೆ. ತರ್ಕಶಾಸ್ತ್ರದಲ್ಲಿ ಇವನದು ಕೇವಲ ವಿಶ್ಲೇಷಣ ವಿಧಾನ. ಇವನ ತತ್ತ್ವಕ್ಕೂ ಇದೇ ತಳಪಾಯ. ಗಣಿತ ಮತ್ತು ಗಣಿತತರ್ಕಶಾಸ್ತ್ರಗಳ ಮೂಲಕ ರಸಲ್ ತತ್ತ್ವಶಾಸ್ತ್ರದ ಕ್ಷೇತ್ರಪ್ರವೇಶಿಸಿದ. ಆದ್ದರಿಂದಲೇ ಇವನ ಸಿದ್ಧಾಂತಕ್ಕೆ ಅತ್ಯವಶ್ಯವಾದ ಕೆಲವು ಅಂಶಗಳು ಹೊರಬಿದ್ದವು. ಅರಿಸ್ಟಾಟಲನ ಪಂಥದವರು `ಎ' ಯು `ಬಿ ಯ ತಂದೆ ಎಂಬ ಸಂಬಂಧಾತ್ಮಕ ಪ್ರತಿಜ್ಞಾ ವಾಕ್ಯಗಳನ್ನು ಕೂಡ ವಿಶೇಷ ರೂಪದ ಪ್ರತಿಜ್ಞೆಗಳಾಗಿ ಮಾರ್ಪಡಿಸಲು ಪ್ರಯತ್ನಿಸುತ್ತಿದ್ದರು. ಈ ಪ್ರಯತ್ನ ಕೃತಕವಾದುದೆಂಬುದು ರಸಲ್ಲನ ಅಭಿಪ್ರಾಯ. ಇವನ ತತ್ತ್ವಶಾಸ್ತ್ರದಲ್ಲಿ ಇದೊಂದು ಮುಖ್ಯ ಅಂಶ. ವ್ಯಾಕರಣ ವಾಕ್ಯ ತರ್ಕವಾಕ್ಯದಿಂದ ಭಿನ್ನವಾದದ್ದು; ತರ್ಕವಾಕ್ಯದ ವ್ಯಾಕರಣ ವಿಶ್ಲೇಷಣೆ ತರ್ಕವಿಶ್ಲೇಷಣೆಯಿಂದ ಭಿನ್ನವಾಗಿದೆ.

ನಾವು ಬಳಸುವ ಪದಗಳು ಸಂಕೇತಗಳಾಗಿದ್ದು ಅರ್ಥಯುಕ್ತವಾಗಿದೆ. ಕೆಲವು ಪದಗಳು ವಸ್ತುಸೂಚಕಗಳು. ಪದಗಳಲ್ಲಿ ಎರಡು ಪ್ರಕಾರಗಳು : ವಿಶಿಷ್ಟಪದ, ಸಾಮಾನ್ಯ ಪದ. ಪದಸಮೂಹಗಳು ವಾಕ್ಯಾಂಶಗಳಾಗುತ್ತವೆ. ವಾಕ್ಯದ ಕರ್ತೃವಾಗಿ ನಿಲ್ಲುವ ವರ್ಣನಾತ್ಮಕ ಪದಸಮೂಹ ಕೂಡ ವಸ್ತುಸಂಕೇತವೆಂದು ರಸಲ್ ಮೊದಲು ತಿಳಿದಿದ್ದ. ಆದರೆ ತನ್ನ ವರ್ಣನಾ ಸಿದ್ಧಾಂತದಲ್ಲಿ ಅವೆಲ್ಲವೂ ವಸ್ತುಸೂಚಕಗಳಲ್ಲವೆಂದು ತೋರಿಸಿದ್ದಾನೆ. ವರ್ಣನೆ (ಅಥವಾ ನಿರ್ದಿಷ್ಟವಾದ ವರ್ಣನೆ) ಇಂಥಿಂಥ ಎಂಬ ರೂಪದ ಪದಸಮೂಹವಾಗಿದ್ದು ಒಂದು ಅಂಕಿತನಾಮದಂತೆ ಒಂದೇ ಪದವಾಗಿ ಬಳಸಲ್ಪಡುತ್ತವೆ. ಅಂಕಿತನಾಮದಂತೆಯೇ ಇಂಥ ಪದ ಒಂದು ವ್ಯಕ್ತಿಯನ್ನು ಸೂಚಿಸುತ್ತದೆಂದು ತೋರುತ್ತದೆ. ಉದಾಹರಣೆಗಾಗಿ ಕೆನಡಿ ಮತ್ತು ಅಮೆರಿಕದ ಅಧ್ಯಕ್ಷ ಒಂದೇ ವ್ಯಕ್ತಿಯನ್ನು ಹೆಸರಿಸುವ ಎರಡು ರೀತಿಗಳೆಂದು ಕಾಣುತ್ತವೆ. ಕೆಲವು ತಾರ್ಕಿಕರು ನಿರ್ದಿಷ್ಟ ವರ್ಣನೆಗಳು ಹೆಸರುಗಳು; ಆದರೆ ಕ್ಲಿಷ್ಟವಾದ ಹೆಸರುಗಳೆಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ರಸಲ್ಲನ ವರ್ಣನಾ ಸಿದ್ಧಾಂತದ ಪ್ರಕಾರ ನಿರ್ದಿಷ್ಟ ವರ್ಣನೆಗಳು ಹೆಸರುಗಳಲ್ಲ. ಉದಾಹರಣೆಗೆ ಫ್ರಾನ್ಸಿನ ಸದ್ಯದ ರಾಜ ಎಂಬುದು ಅಸ್ತಿತ್ವದಲ್ಲಿಲ್ಲದ ಒಂದು ವ್ಯಕ್ತಿಯ ಹೆಸರಲ್ಲ. ಇದು ಸಂದರ್ಭದಲ್ಲಿ ಅರ್ಥಕೊಡುವ ಅಪೂರ್ಣ ಸಂಕೇತ. ಆದ್ದರಿಂದ ಫ್ರಾನ್ಸಿನ ಸದ್ಯದ ರಾಜ ಎಂಬುದು ಅರ್ಥಪೂರ್ಣವಾದ ಪದಸಮೂಹವಾದರೂ ಯಾವ ವ್ಯಕ್ತಿಯನ್ನೂ ವರ್ಣಿಸುವುದಿಲ್ಲ. ಯಾವ ವಸ್ತುವನ್ನೂ ಸೂಚಿಸದ ವರ್ಣನೆಗಳನ್ನು ಬಳಸುವುದು ತತತ್ತ್ವಜ್ಞಾನಿಗಳಿಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ಆದರೆ ರಸಲ್‍ನ ವರ್ಣನಾ ಸಿದ್ಧಾಂತ ಇಂಥವನ್ನು ಬಳಸುವ ರೀತಿಯನ್ನೂ ವಿವರಿಸುತ್ತದೆ. ಭಾಷೆಯಲ್ಲಿಯ ಕೆಲವು ನಾಮಪದಗಳನ್ನೂ ಪದಸಮೂಹಗಳಾದ ನಾಮಗಳನ್ನೂ ತೆಗೆದುಹಾಕಿಯೂ ಅವುಗಳ ಬಗ್ಗೆ ಹೇಳಬೇಕಾದುದನ್ನು ಹೇಳಬಹುದು ಎಂಬ ನಿರ್ಣಯಕ್ಕೆ ಈತ ಬಂದ. ಇಂಥ ತೆಗೆದುಹಾಕಬಹುದಾದ ಮತ್ತು ವಸ್ತುಸೂಚಕಗಳಲ್ಲದ ನಾಮಪದಗಳು ಹಾಗೂ ಪದಸಮೂಹಗಳು ವರ್ಣನೆಗಳೆಂದು ರಸಲ್ ತಿಳಿಸುತ್ತಾನೆ. ವಿಶ್ಲೇಷಣೆಯಲ್ಲಿ ವರ್ಣನೆ ಮಾಯವಾಗುತ್ತದೆ ಮತ್ತು ಅವರಿಂದ ಸೂಚಿತವಾದ ಯಾವ ವಸ್ತುವೂ ಇಲ್ಲವೆಂದು ತಿಳಿಯುತ್ತದೆ. ಇಂಥಿಂಥ ಎಂಬ ವರ್ಣನಾತ್ಮಕ ಪದಸಮೂಹ ಕರ್ತೃವಾಗಿ ಉಳ್ಳ ವಾಕ್ಯ ಒಂದು ವ್ಯಕ್ತಿಗೆ ಸಂಬಂಧಿಸಿದ ವಾಕ್ಯವೆಂದು ಕಂಡರೂ ಅದು ಸಾಮಾನ್ಯ ವಾಕ್ಯವೆಂದೂ ಈ ತರ್ಕವಿಶ್ಲೇಷಣೆಯಿಂದ ರಸಲ್ ತೋರಿಸಿದ. ಈ ತರ್ಕವಿಶ್ಲೇಷಣಾಪದ್ಧತಿ ಹಲವು ತತ್ತ್ವಸಿದ್ಧಾಂತಗಳ ಮೇಲೆ ವಿಧ್ವಂಸಕ ಪರಿಣಾಮವನ್ನುಂಟುಮಾಡಿದೆ. ವಾಕ್ಯಗಳಿಗೆ, ವರ್ಗಗಳಿಗೆ ಮತ್ತು ಸಂಖ್ಯೆಗಳಿಗೆ ಈ ಪದ್ಧತಿಯನ್ನು ಬಳಸಿ ಈ ಎಲ್ಲ ಪದಾರ್ಥಗಳು ತರ್ಕರಚನೆಗಳೆಂದು ವಾದಿಸಿದ. ಅವು ತರ್ಕರಚನೆಗಳಾದ್ದರಿಂದ ನಿಜವಾದ ವಸ್ತುಗಳಲ್ಲವೆಂದು ಅಭಿಪ್ರಾಯಪಟ್ಟ.

ರಸಲ್ಲನ ಅಭಿಪ್ರಾಯದಲ್ಲಿ ಭೌತವಸ್ತುಗಳೆಲ್ಲವೂ ತರ್ಕರಚನೆಗಳು. ವಿಜ್ಞಾನ ಭೌತವಸ್ತುಗಳ ವಿವರಣೆ ಮಾಡುವಾಗ ಅವುಗಳಲ್ಲಿಯ ಇಂದ್ರಿಯಗೋಚರವಾಗುವ ಗುಣಗಳನ್ನು ಎತ್ತಿ ಹೇಳುತ್ತದೆ. ಆದ್ದರಿಂದ ಭೌತವಸ್ತುಗಳು ಇಂದ್ರಿಯಗೋಚರವಾಗುವ ಗುಣಗಳೇ ಎಂದು ಹೇಳಬಹುದು. ಬೇರೆ ವಿಧವಾಗಿ ಹೇಳುವುದಾದರೆ ಭೌತವಸ್ತುಗಳು ತರ್ಕರಚನೆಗಳು. ಭೌತವಸ್ತುಗಳಿಗೆ ಬಳಸುವ ಪದ್ಧತಿಯನ್ನೇ ರಸಲ್ ಮನಸ್ಸಿನ ವಿಶ್ಲೇಷಣೆಗೆ ಬಳಸಿದ್ದಾನೆ. ಇದರ ಪರಿಣಾಮವಾಗಿ ಮನಸ್ಸಿನ ಗುಣವಿಶೇಷವಾದ ಚೈತನ್ಯ ಮಾಯವಾಗುತ್ತದೆ. ಚೈತನ್ಯವೆಂಬುದು ವಿಶಿಷ್ಟ ಸಂಬಂಧಗಳನ್ನೊಳಗೊಂಡ ಇಂದ್ರಿಯಾನುಭವಗಳ ಹಾಗೂ ಕಾಲ್ಪನಿಕ ಪ್ರತಿಮೆಗಳ ಗುಂಪು ಮಾತ್ರ. ಆತ್ಮವೆಂಬುದೂ ಚೈತನ್ಯದಂತೆಯೇ ಇಂದ್ರಿಯಾನುಭವಗಳ ಹಾಗೂ ಕಾಲ್ಪನಿಕ ಪ್ರತಿಮೆಗಳ ಗುಂಪು.

ಸ್ಥೂಲವಾಗಿ ಹೇಳುವುದಾದರೆ ಚಿಂತನಾತ್ಮಕ ದರ್ಶನಗಳ ಬಗ್ಗೆ ರಸಲ್ ವೈರಮನೋಭಾವ ತಾಳಿದ್ದಾನೆ. ಆದ್ದರಿಂದ ತತ್ತ್ವಜ್ಞಾನದ ಬಗ್ಗೆ ಈತನ ಅಭಿಪ್ರಾಯ ಈ ರೀತಿಯಿದೆ; ಬುದ್ಧಿಗೆ ತೋರುವ ಕಠಿಣ ಸಮಸ್ಯೆಗಳಿಗೆ ಧೈರ್ಯಯುಕ್ತ ಪರಿಹಾರ ನೀಡುವುದರಲ್ಲಿ ತತ್ತ್ವಜ್ಞಾನ ತಪ್ಪುಮಾಡಿದೆ. ತತ್ತ್ವಜ್ಞಾನವೆಂಬುದು ದೇವತಾಶಾಸ್ತ್ರದ ದುರದೃಷ್ಟದಿಂದ ಕೂಡಿದ ಆಸ್ತಿ. ವಿಜ್ಞಾನದಿಂದ ಬೇರೆಯಾದ ಹಾಗೂ ತನ್ನದೇ ಆದ ವಿಶಿಷ್ಟ ಪದ್ಧತಿಯುಳ್ಳ ವಿಷಯ ಅದೆಂದು ಹೇಳಲು ಸಂಶಯ ಬರುತ್ತದೆ. ಮತಧರ್ಮ ಹಾಗೂ ಧರ್ಮಶಾಸ್ತ್ರಗಳಿಮದ ಸ್ಫೂರ್ತಿಪಡೆಯದೆ ವಿಜ್ಞಾನದಿಂದ ತತ್ತ್ವಜ್ಞಾನ ಸ್ಫೂರ್ತಿಪಡೆಯಬೇಕು. ಗಣಿತಶಾಸ್ತ್ರ ಹಾಗೂ ಭೌತಶಾಸ್ತ್ರಗಳ ವಿಜಯ ರಸಲ್ ತತ್ತ್ವಜ್ಞಾನದ ಬಗ್ಗೆ ತಳೆದ ಧೋರಣೆಗೆ ಕಾರಣವಾಗಿದೆ. ಅಂತೆಯೇ ಅಧ್ಯಾತ್ಮವಾದಿಗಳ ಮಸಕಾದ ಹಾಗೂ ಅಸ್ಪಷ್ಟವಾದ ವಿಚಾರವನ್ನು ಬಿಟ್ಟುಕೊಟ್ಟು ತತ್ತ್ವಜ್ಞಾನ ವಿಜ್ಞಾನದ ಮಾರ್ಗವನ್ನು ಅನುಸರಿಸಬೇಕು ಎಂದು ಹೇಳುತ್ತಾನೆ. ಮನೋಭಾವ ಹಾಗೂ ಸಂವೇದನೆಗಳನ್ನು ತೊರೆದು ತತ್ತ್ವಜ್ಞಾನ ಬುದ್ಧಿಯ ಶಿಸ್ತಿನ ಕ್ರಮವಾಗಬೇಕು. ಈತನ ಅಭಿಪ್ರಾಯದಲ್ಲಿ ತತ್ತ್ವಶಾಸ್ತ್ರ ವಿಜ್ಞಾನದ ಮೂಲಭೂತ ವಿಚಾರಗಳ ತಾರ್ಕಿಕ ವಿಶ್ಲೇಷನೆ ಮಾಡುವ ಒಂದು ಶಾಸ್ತ್ರ; ಅದು ದಿಕ್ಕು, ಕಾಲ, ದ್ರವ್ಯ, ಕಾರ್ಯಕಾರಣ ಸಂಬಂಧ, ಆತ್ಮ ಮೊದಲಾದ ಭಾವನೆಗಳ ನಿಜ ಸ್ವರೂಪವನ್ನು ಸ್ಪಷ್ಟಪಡಿಸುವ ಒಂದು ಮಾರ್ಗ; ನಿಜವಾಗಿ ಹೇಳಬೇಕಾದರೆ ಸಾಮಾನ್ಯ ಪರಿಜ್ಞಾನ ಮತ್ತು ವಿಜ್ಞಾನಗಳನ್ನು ಬಿಟ್ಟು ತತ್ತ್ವಶಾಸ್ತ್ರವೆಂಬುದು ಪ್ರತ್ಯೇಕ ಜ್ಞಾನವಲ್ಲ. ಪ್ಲೇಟೋ, ಸ್ಪಿನೋಜ, ಹೆಗಲ್-ಮುಂತಾದವರ ಮಹಾದರ್ಶನಗಳು ನೈತಿಕ ಹಾಗೂ ಧಾರ್ಮಿಕ ಉದ್ದೇಶಗಳಿಂದ ಹುಟ್ಟಿದಂಥವು; ಅವು ವಾಸ್ತವಿಕ ಸತ್ಯಗಳಲ್ಲ-ವೈಯಕ್ತಿಕ ಅಭಿಪ್ರಾಯಗಳ ಸಂಕಲನಗಳು ಮಾತ್ರ. ಹೀಗೆ ತಿಳಿದಿದ್ದರಿಂದ ಈತ ಮೌಲ್ಯವಾಕ್ಯಗಳನ್ನು ತತ್ತ್ವಶಾಸ್ತ್ರದಿಂದ ದೂರವಿರಿಸಿದ್ದಾನೆ.

ಗಣಿತಶಾಸ್ತ್ರವೂ ತರ್ಕಶಾಸ್ತ್ರವೂ ಒಂದೇ ಎಂದು ಹೇಳಿ ಶುದ್ಧ ಗಣಿತಶಾಸ್ತ್ರವೆಲ್ಲವನ್ನೂ ತರ್ಕಶಾಸ್ತ್ರದ ಕೆಲವೇ ಆಧಾರ ಸೂತ್ರಗಳಿಂದ ಅನುಮಾನಿಸಬಹುದೆಂದು ರಸಲ್ ತಿಳಿದಿದ್ದ. ಈ ಮಾತನ್ನು ತನ್ನ ಪ್ರಿನ್ಸಿಪಲ್ಸ್ ಆಫ್ ಮ್ಯಾಥಮ್ಯಾಟಿಕ್ಸ್ ಹಾಗೂ ಪ್ರಿನ್ಸಿಪಿಯಾ ಮ್ಯಾಥಮ್ಯಾಟಿಕಾ ಎಂಬ ಗ್ರಂಥದಲ್ಲಿ ವಿವರವಾಗಿ ಕಾಣಿಸಿದ್ದಾನೆ. ಪ್ರಿನ್ಸಿಪಿಯಾ ಮ್ಯಾಥಮ್ಯಾಟಿಕಾ ಎಂಬ ಬೃಹತ್ ಕೃತಿಯಲ್ಲಿ ಮಾಡಿದ ಇಂಥ ಪ್ರಯತ್ನದಲ್ಲಿ ಗಣಿತಶಾಸ್ತ್ರದ ಸಮಷ್ಟಿಸಿದ್ಧಾಂತ ಮತ್ತು ಸಂಖ್ಯಾಸಿದ್ಧಾಂತಗಳು ತರ್ಕಶಾಸ್ತ್ರದ ಸಾಂಕೇತಿಕ ತತ್ತ್ವಗಳ ಮೇಲೆ ಆಧಾರಿತವಾಗಿವೆಯೆಂಬುದನ್ನು ತೋರಿಸಿದ್ದಾನೆ ವಿಧಗಳ ಸಿದ್ಧಾಂತದ (ಥಿಯರಿ ಆಫ್ ಟೈಪ್ಸ್) ಸಹಾಯದಿಂದ ಸಮಷ್ಟಿ ಸಿದ್ಧಾಂತ ಸುಪ್ರಸಿದ್ಧ ವಿರೋಧಾಭಾಸಗಳನ್ನು ಬಿಡಿಸುವುದರಲ್ಲಿ ರಸಲ್ ಜಯಶಾಲಿಯಾದ. ವಿಧಗಳ ಸಿದ್ಧಾಂತದ ಭಾಗವೊಂದೆಂದು `ಆಕ್ಸಿಯಮ್ ಆಫ್ ರಿಡ್ಯೂಸಿಬಿಲಿಟಿ' ಎಂಬುದನ್ನು ಪ್ರಾರಂಭಿಸುವುದು ಅವಶ್ಯವೆಂದು ತಿಳಿದ. ಆಕ್ಸಿಯಮ್ ಆಫ್ ರಿಡ್ಯೂಸಿಬಿಲಿಟಿಯನ್ನು ಎಲ್ಲರೂ ಮಾನ್ಯಮಾಡಿಲ್ಲ. ಆದ್ದರಿಂದ ರಸಲ್ ಈ ಸಮಸ್ಯೆಯನ್ನು ಕೊನೆಯದಾಗಿ ಬಿಡಿಸಿದನೆಂದು ಹೇಳಲು ಸಾಧ್ಯವಿಲ್ಲ. ಹೀಗಿದ್ದರೂ ಪ್ರಿನ್ಸಿಪಿಯಾ ಮ್ಯಾಥಮ್ಯಾಟಿಕಾದ ಎರಡನೆಯ ಆವೃತ್ತಿಯಲ್ಲಿ ಗಣಿತಾನುಮಿತಿಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುವ ಚಮತ್ಕಾರಿಕ ದಾರಿಯೊಂದನ್ನು ಈತ ಹುಡುಕಿದ್ದಾನೆ. (ಎಲ್.ವಿ.ಆರ್.ಜಿ.;ಎಲ್.ಎಸ್.ಎಸ್.)